ಸಾವರ್ಕರ್ ನಲ್ಲದೇ ಇನ್ಯಾರನ್ನು ತಾನೇ ’ವೀರ’ ಎನ್ನೋಣ?
ಆ ನಾಲ್ಕೂವರೆ ಅಕ್ಷರಕ್ಕೆ ಅದೆಂತಹ ಅದ್ಭುತ ಶಕ್ತಿಯಿದೆಯೋ ಗೊತ್ತಿಲ್ಲ. ಕೆಲವೊಮ್ಮೆ ಸೋಮಾರಿತನ ಆವರಿಸಿಕೊಂಡಾಗ, ಸೋತೆನೆಂಬ ಭಾವ ಕಾಡಿದಾಗ, ಕಷ್ಠ ಕೈ ಜಗ್ಗಿದಾಗ, ಪ್ರಯತ್ನ ವಿಫ಼ಲವಾದಾಗ, ದೈಹಿಕ ಶ್ರಮದಿಂದ ಆಯಾಸಗೊಂಡಾಗ, ಮಾನಸಿಕವಾಗಿ ಜರ್ಜರಿತನಾದಾಗ ಕೂಡ ಸಾಂತ್ವಾನ ಹೇಳಿ, ಚೈತನ್ಯ ತುಂಬುವುದೇ ‘ಸಾವರ್ಕರ್’ ಎಂಬ ನಾಲ್ಕೂವರೆ ಅಕ್ಷರ.
ಆತ ಸೋಮಾರಿತನಕ್ಕೆ ವಿರುದ್ದ ಪದದಂತಿದ್ದ, ಕರಿನೀರ ಶಿಕ್ಷೆಯಂತಹ ಘನ ಘೋರ ಶಿಕ್ಷೆಯನ್ನು ಎಲ್ಲರಿಗಿಂತ ತುಸು ಹೆಚ್ಚೇ ಅನುಭವಿಸಿದ, ಮೈ ಚರ್ಮ ಹರಿಯುತ್ತಿದೆ ಎಂಬ ಅರಿವಿಲ್ಲದೆಯೇ ‘ಭಾರತ ಮಾತೆಗೆ ಜೈ’ ಎಂದು ಹಡಗಿನ ಕಿರಿದಾದ ಕಿಟಕಿಯಲ್ಲಿ ಮೈತೂರಿಸಿ ಹೊರಗೆ ಹಾರಿದ, ಉಪ್ಪುನೀರಿನ ಸಮೃದ್ದ ಸಮುದ್ರದ ಎದುರು ಗೆಲ್ಲುವೆನೆಂದು ಈಜಿ ದಡ ಸೇರಿದ, ನಮ್ಮವರಿಂದಲೇ ಚಿತ್ರ ಹಿಂಸೆಗೆ ಒಳಗಾದರೂ ಮಾನಸಿಕವಾಗಿ ಗಟ್ಟಿತನ ಮೆರೆದ. ಆದ್ದರಿಂದಲೇ ಸಾವರ್ಕರ್ ಎಂದೊಡನೆ ಧೈರ್ಯ, ಜೀವನಸ್ಪೂರ್ತಿ, ಕಷ್ಠಸಹಿಷ್ಣುತೆ, ದೇಶಭಕ್ತಿ ಪಡೆದ ಅನುಭವವಾಗುತ್ತದೆ.
ಸಾವರ್ಕರ್ ಒರ್ವ ದೇಶಭಕ್ತನೆ, ಸಾಹಸಿಯೆ, ವಾಗ್ಮಿಯೇ, ಮನಮುಟ್ಟುವ ಲೇಖಕನೆ, ಕವಿಯೇ, ಅನೇಕರಿಗೆ ಮಾರ್ಗ ತೋರಿದ ಗುರುವೇ, ಬ್ರೀಟೀಷರಿಗೆ ಬೆಂಬಿಡದೆ ಕಾಡಿದ ಶತ್ರುವೆ, ಸಾವಿನ ಕದ ತಟ್ಟಿ ಬಂದ ಮೃತ್ಯುಂಜಯನೇ? ಊಹುಂ.. ಆತನನ್ನು ಕೇವಲ ಒಂದು ವಿಶೇಷಣದಿಂದ ಕಟ್ಟಿ ಹಾಕಲು ಸಾಧ್ಯವೇ ಇಲ್ಲ. ಆತ ಇವೆಲ್ಲದರ ಒಟ್ಟು ಮೊತ್ತದಂತಿದ್ದ ‘ವೀರ’.
ಇತಿಹಾಸದ ಪುಟಗಳನ್ನು ತಿರುವಿಹಾಕುತ್ತಾ ಹೋದರೆ ಅವು ಸುಮ್ಮನೆ ಕಣ್ಮುಂದೆ ಹಾದು ಹೋಗುವುದಿಲ್ಲ. ಕೆಣಕುತ್ತವೆ, ಕಾಡುತ್ತವೆ, ನಮ್ಮ ಪೂರ್ವಜರು ಮೆರೆದ ಶೌರ್ಯ, ತ್ಯಾಗ, ಬಲಿದಾನ ಎಲ್ಲವನ್ನೂ ನೆನಪಿಸುತ್ತಲೇ, ಇತಿಹಾಸವನ್ನೇ ತಿರುಚಿದವರ ಒಳತಂತ್ರ, ಕೆಲವರನ್ನು ಇತಿಹಾಸದ ಪುಟಗಳಿಂದ ದೂರವಿಡಲು ಮಾಡಿದ ಕುತಂತ್ರ ಎಲ್ಲವನ್ನೂ ದರ್ಶನ ಮಾಡಿಸುತ್ತದೆ. ಅಲ್ಲಿಗೆ ನರನಾಡಿಗಳಲ್ಲಿ ತಣ್ಣಗೆ ಹರಿಯುತ್ತಿದ್ದ ನೆತ್ತರು ಕುದಿಯಲಾರಂಭಿಸುತ್ತದೆ.
ಸಾವರ್ಕರ್ ಬದುಕಿನ ಪ್ರತಿ ಘಟನೆಯೂ ರೋಮಾಂಚಕಾರಿ. ಅದರಲ್ಲೂ ಅವರು ಹಡಗಿನಲ್ಲಿ ಬಂದಿತರಾದಾಗ ಅಲ್ಲಿಂದ ಹೊರಬರಲು ಸಮುದ್ರಕ್ಕೆ ದುಮುಕಿದರಲ್ಲ,ಆ ಘಟನೆಯೊಂದೇ ಸಾಕು ಸಾವರ್ಕರ್‌ರ ಶೌರ್ಯವನ್ನು ಸಾರಲಿಕ್ಕೆ. ಆ ಘಟನೆಯ ವಿವರ ಓದುತ್ತಿದ್ದರೆ ರೋಮಗಳೆಲ್ಲಾ ಸೆಟೆದು ನಿಲ್ಲುತ್ತವೆ, ನಯನಾಂತರಂಗ ತೇವ. ಸಾವರ್ಕರ್ ಅದಾಗಲೇ ಇಂಗ್ಲೇಂಡಿಗೆ ತೆರಳಿ, ಅಲ್ಲಿ ಕ್ರಾಂತಿಕಾರಿಗಳ ಪಡೆಯನ್ನು ಕಟ್ಟಿದ್ದರು. ಆ ಎಲ್ಲ ಕ್ರಾಂತಿಕಾರಿಗಳ ಹಿಂದೆ ಸಾವರ್ಕರ್ ಎಂಬ ಸಿಂಹವೊಂದು ಕೆಲಸ ಮಾಡುತ್ತಿದೆ ಎಂದು ಯಾವಾಗ ತಿಳಿಯಿತೋ ಬ್ರೀಟೀಷರು ಸಾವರ್ಕರ್‌ರನ್ನು ಬಂಧಿಸಿ ಕರಿನೀರ ಶಿಕ್ಷೆ ವಿಧಿಸಿ, ಅಂಡಮಾನಿನ ಕಾರಾಗೃಹಕ್ಕೆ ಕೊಂಡೊಯ್ಯಲು ಆದೇಶಿಸಿದರು. ಸಾವರ್ಕರ್‌ರನ್ನು ಹೊತ್ತ ಹಡುಗು ಎಸ್.ಎನ್ ಮೋರಿಯಾ ಫ್ರಾನ್ಸ್ ಮಾರ್ಗವಾಗಿ ಭಾರತಕ್ಕೆ ತಲುಪಬೇಕೆಂದೂ, ಸಾವರ್ಕರ್‌ರಂತಹ ಚಾಣಾಕ್ಷ ಕ್ರಾಂತಿಕಾರಿಯನ್ನು ಕರೆದೊಯ್ಯುವಾಗ ವಿಶೇಷ ಕಾಳಜಿ ವಹಿಸಬೇಕೆಂದೂ ಬ್ರೀಟೀಷರ ಆಜ್ನೆಯಾಗಿತ್ತು. ಆದರೆ ಇವೆಲ್ಲದರ ಮಾಹಿತಿ ತಿಳಿದಿದ್ದ ಸಾವರ್ಕರ್ ತಮ್ಮ ಸ್ನೇಹಿತರಿಗಾಗಲೇ ತಾವು ಫ್ರಾನ್ಸ್ ನ ಮಾರ್ಸೆಲ್ಸ್‌ನಲ್ಲಿ ಹಡಗಿನಿಂದ ತಪ್ಪಿಸಿಕೊಳ್ಳುವ ಮುನ್ಸೂಚನೆ ನೀಡಿದ್ದರು. ಹಡಗಿನಲ್ಲಂತೂ ಪಹರೆಯೋ ಪಹರೆ. ಶೌಚಾಲಯಕ್ಕೆ ಮಾತ್ರ ಸಾವರ್ಕರ್ ಒಂಟಿಯಾಗಿ ಹೋಗಬಹುದಾಗಿತ್ತಾದರೂ ಕಾವಲುಗಾರನೊಬ್ಬ ಬಾಗಿಲ ಬಳಿ ಕಾದಿರುತ್ತಿದ್ದ. ಹಡಗಿನಿಂದ ತಪ್ಪಿಸಿಕೊಳ್ಳಲು ಸಾವರ್ಕರ್‌ರಿಗೆ ಕಂಡ ಏಕೈಕ ಮಾರ್ಗವೆಂದರೆ ಅದು ಶೌಚಾಲಯದಲ್ಲಿದ್ದ ಕಿರಿದಾದ ಕಿಟಕಿ ಮಾತ್ರ. ಸರಿ ಶೌಚಲಯಕ್ಕೆ ಹೋದ ಸಾವರ್ಕರ್ ಆ ಕಿರಿದಾದ ಕಿಟಕಿಯಿಂದ ಹೊರದುಮುಕುವ ಸಾಹಸಕ್ಕೆ ಅಣಿಯಾಗಿಯೇ ಬಿಟ್ಟರು. ತಮ್ಮ ದೇಹದ ಸುತ್ತಳತೆಗಿಂತ ಕಿರಿದಾದ ಕಿಟಕಿಯಲ್ಲಿ ನುಗ್ಗುವುದೆಂದರೆ ಸಾಮಾನ್ಯದ ಮಾತಲ್ಲ. ಚರ್ಮ ಹರಿದು ಬಂತು, ತಾಳಿಕೊಂಡರು. ತಾಯಿ ಭಾರತಿಗೆ ಜೈಕಾರ ಹಾಕಿ ದುಮುಕಿಯೇ ಬಿಟ್ಟರು. ಹರಿದ ಚರ್ಮಕ್ಕೆ ಸಮುದ್ರದ ಉಪ್ಪು ನೀರು ಸೋಕಿದರೆ ಹೇಗಾಗಿರಬೇಡ? ಈಜುವುದರಲ್ಲಿ ಪ್ರಾವಿಣ್ಯತೆ ಪಡೆದಿದ್ದ ಸಾವರ್ಕರ್ ಈಜಿಯೇ ಈಜಿದರು, ದಡ ಸೇರಿದರು. ಆದರೆ ದುರಾದೃಷ್ಠವಶಾತ್ ಅಲ್ಲಿದ್ದ ಫ್ರಾನ್ಸ್ ಕಾವಲು ಪಡೆಯವರಿಗೆ ಸಿಕ್ಕಿ ಬಿದ್ದರು. ಆ ಕಾವಲು ಪಡೆಯವರು ಸಾವರ್ಕರ್‌ರನ್ನು ಬ್ರಿಟೀಷ್ ಕಾವಲುಗಾರರಿಗೆ ಒಪ್ಪಿಸಿದರು. ಸಾವರ್ಕರ್ ಪುನಃ ಬಂದಿತರಾದರೂ ಈ ಘಟನೆ ಬ್ರಿಟೀಷರಿಗೊಂದು ಸಂದೇಶ ರವಾನಿಸಿತ್ತು. ಭಾರತದ ಕ್ರಾಂತಿಕಾರಿಗಳ ದೇಶಪ್ರೇಮ, ಶೌರ್ಯವನ್ನು ಬ್ರಿಟೀಷರೂ ಕಣ್ಣರಳಿಸಿ ನೋಡತೊಡಗಿದರು. ಅದಾಗಲೇ ತಾವು ಭಾರತವನ್ನು ಬಿಟ್ಟುಕೊಡಬೇಕಾಗಿ ಬರುವ ಕಾಲ ಸನ್ನಿಹಿತವಾಗಿದೆ ಎಂದು ಅವರಿಗನ್ನಿಸಿತ್ತು.
ಬಿಡಿ, ಆತನ ಜೀವನದ ಪುಟ ತಿರುವಿಹಾಕಿದ ಯಾರಿಗಾದರೂ ಸಾವರ್ಕರ್ ಕಾಡದೇ ಬಿಡುವುದಿಲ್ಲ. ಆತನಿಗಿದ್ದ ಕನಸು ಒಂದೇ ‘ಭಾರತ ಬ್ರೀಟೀಷರ ಆಳ್ವಿಕೆಯಿಂದ ಮುಕ್ತವಾಗಬೇಕು. ಅಖಂಡ ಭಾರತ ವಿಶ್ವ ಮಾತೆಯಾಗಿ ಮೆರೆಯಬೇಕು’. ಆ ಕನಸನ್ನು ನನಸಾಗಿಸಲು ಬಾಲ್ಯ, ಯೌವನ, ಸಂಸಾರ ಎಲ್ಲದರ ತ್ಯಾಗಕ್ಕೆ ಅಣಿಯಾದವರು ಸಾವರ್ಕರ್. ಚಿಕ್ಕಂದಿನಲ್ಲೆ ಮೋಡಿಮಾಡುವ ಮಾತುಗಾರಿಕೆ, ಆಕರ್ಷಕ ಬರಹ ಶೈಲಿ ಆತನಿಗೆ ಸಿದ್ದಿಸಿತ್ತು. ಯಾವುದೇ ವಿಷಯವಾಗಿ ತರ್ಕ ಬದ್ದವಾಗಿ ಮಾತನಾಡಬಲ್ಲ, ಮನಕಲುಕುವಂತೆ ಬರೆಯಬಲ್ಲ, ಪಾಂಡಿತ್ಯ ಗಳಿಸಿಕೊಂಡಿದ್ದ. ಪ್ರೌಡಶಾಲೆಯ ದಿನದಲ್ಲೇ ಅನೇಕ ಪ್ರಮುಖ ಪತ್ರಿಕೆಗಳಿಗೆ ಬರೆದ. ಗೆಳೆಯರನ್ನು ಸೇರಿಸಿ ರಾಷ್ಟ್ರ ಭಕ್ತ ಸಮಾಜ ಎಂಬ ಸಂಘ ಕಟ್ಟಿದ. ನಂತರ ‘ಮಿತ್ರ ಮೇಳ’ ಹುಟ್ಟು ಹಾಕಿದ. ಅಲ್ಲಿಗೆ ಒಂದು ದೊಡ್ಡ ಕ್ರಾಂತಿಕಾರಿಗಳ ಪಡೆಯೇ ಸಿದ್ದವಾಯಿತು. ಬ್ರೀಟಿಷರ ನಿದ್ದೆ ಕಸಿಯಿತು.
ಇನ್ನು ಸಾವರ್ಕರ್ ಅನುಭವಿಸಿದ ಕರಿನೀರ ಶಿಕ್ಷೆಯನ್ನು ನೆನಸಿಕೊಂಡರೇ ದಿಗಿಲಾಗುತ್ತದೆ.ಕರಿನೀರ ಶಿಕ್ಷೆ ಗೆ ಗುರಿಯಾದರೆಂದರೆ ಸಾವಿಗೆ ಶರಣಾಗುವುದೆಂದೇ ಭಾವಿಸಿದ್ದ ಕಾಲವದು. ಕೇವಲ ಸಾವರ್ಕರ್ ರಂತಹ ‘ವೀರ’ರಿಗೆ ಮಾತ್ರ ಆ ಶಿಕ್ಷೆ ಅನುಭವಿಸಿ ಬದುಕಿಬರಲು ಸಾಧ್ಯವಾಗುತ್ತಿತ್ತು. ಸಾವರ್ಕರರೇನೋ ಶಿಕ್ಷೆಯನ್ನು ಅಳುಕಿಲ್ಲದೆ ಅನುಭವಿಸತೊಡಗಿದರು, ವಿಪರ್ಯಾಸವೆಂದರೆ ಸಾವರ್ಕರ್ ಅಂಡಮಾನಿನ ಜೈಲಿನಲ್ಲಿ ಕಾಲಿಗೆ ಸರಪಳಿ ಕಟ್ಟಿಕೊಂಡು, ಕೊಬ್ಬರಿಯ ಗಾಣವನ್ನು ಎತ್ತಿನಂತೆ ದಿನಕ್ಕೆ ಹತ್ತು ತಾಸು ಎಳೆಯುತ್ತಾ ಶಿಕ್ಷೆ ಅನುಭವಿಸುತ್ತಿದ್ದರೆ, ಆ ವೇಳೆಗೆ ಬಂಧಿಯಾಗಿ ಸೆರೆವಾಸ ಅನುಭವಿಸಿದ್ದ ನೆಹರು ಎರಡು ಸೋಫಾ , ನಾಲ್ಕು ಕುರ್ಚಿ, ಒಂದು ಮಂಚವಿರಿಸಿಕೊಂಡ ಕಾರಗೃಹದಲ್ಲಿ ಶಿಕ್ಷೆ(?) ‘ಅನುಭವಿಸುತ್ತಿದ್ದರು’.
ಬಿಡಿ, ಸಾವರ್ಕರ್ ಅನುಭವಿಸಿದ ಯಾತನೆ ಅಷ್ಠಿಷ್ಠಲ್ಲ. ಒಂದೆಡೆ ಪರಕೀಯರು ನೀಡುತ್ತಿದ್ದ ಘನಘೋರ ಶಿಕ್ಷೆಯಾದರೆ ಇನ್ನೊಂದೆಡೆ ನಮ್ಮವರೆ ಅಮಾನವೀಯವಾಗಿ ಅವರನ್ನು ನಡೆಸಿಕೊಂಡರು. ಸಾವರ್ಕರ್ ಬಂಧನದಲ್ಲಿದ್ದ ಸಂದರ್ಭವದು, ಸಾವರ್ಕರ್‌ರನ್ನು ವಿಮುಕ್ತಿಗೊಳಿಸಬೇಕೆಂಬ ಬೇಡಿಕೆಯಿರಿಸಿ ನಡೆದಿದ್ದ ಸಹಿಸಂಗ್ರಹದ ಅಭಿಯಾನದಲ್ಲಿ ಮನವಿಗೆ ಗಾಂಧಿ ಸಹಿ ಮಾಡಲು ನಿರಾಕರಿಸಿದರು. ಸಾವರ್ಕರ್ ವಿರುದ್ದ ಬ್ರಿಟೀಷ್ ಸರ್ಕಾರ ಖಟ್ಲೆ ಹೂಡಿದಾಗ ಅವರ ಪರವಾಗಿ ಮೊಕದ್ದಮೆಗೆ ಹಣ ಸಂಗ್ರಹ ನಡೆದಿತ್ತು. ಚಂದಾ ನೀಡಲು ನೆಹರು ಬಿಲ್ ಕುಲ್ ನಿರಾಕರಿಸಿದ್ದಷ್ಠೆ ಅಲ್ಲ ಆ ಮನವಿ ಪತ್ರವನ್ನು ಬಂದವರೆದುರಿನಲ್ಲೇ ನಿಂದನಾ ಪೂರ್ವಕವಾಗಿ ಎಸೆದರು. ಗಾಂಧೀ ಹತ್ಯೆ ಸಂಧರ್ಭದಲ್ಲಿ ಸಾವರ್ಕರ್ ಮೇಲೆ ಹತ್ಯೆಯ ಆರೋಪ ಬರುವಂತೆ ನೋಡಿಕೊಂಡ ನಮ್ಮ ಪಂಡಿತ ಪ್ರಧಾನಿಗಳು ಯಾವುದೇ ಆಧಾರವಿಲ್ಲವೆಂದು ಕಾನೂನು ಸಚಿವರಾಗಿದ್ದ ಅಂಬೇಡ್ಕರ್ ಹೇಳಿದರೂ ತಮ್ಮ ಛಲದಿಂದ ಸಾವರ್ಕರ್‌ರಿಗೆ ದೋಷಿಯ ಪಟ್ಟಕಟ್ಟಿ ಜೈಲಿಗಟ್ಟಿದರು. ಆದರೆ ನ್ಯಾಯಾಲಯ ಸಾವರ್ಕರ್ ದೋಷ ಮುಕ್ತರೆಂದು ಘೋಷಿಸಿತು. ನಮ್ಮ ಮೊದಲ ಪ್ರಧಾನಿಗಳ ಸಿಟ್ಟು ನೆತ್ತಿಗೇರಿತು. ಸೇಡು ತೀರಿಸಿಕೊಳ್ಳಲೋ ಎಂಬಂತೆ ೧೯೫೦ ರಲ್ಲಿ ಲಿಯಾಖತ್ ಅಲಿಯ ಭಾರತ ಭೇಟಿಯ ಸಂಧರ್ಭ ಮುಂದಿಟ್ಟುಕೊಂಡು ೬೭ ವರ್ಷದ ವೃದ್ದ, ಅನಾರೋಗ್ಯ ಪೀಡಿತ ಸಾವರ್ಕರ್ ರನ್ನು ಬಂಧಿಸಿ ಅಮಾನವೀಯವಾಗಿ ವರ್ತಿಸಿ, ಸೇಡು ತೀರಿಸಿಕೊಂಡರು. ಅಷ್ಠೇ ಅಲ್ಲ, ಕ್ರಾಂತಿಕಾರಿಗಳ ನೆನಪೇ ಉಳಿಯಬಾರದೆಂದು ಸ್ವಾತಂತ್ರ್ಯ ಸೇನಾನಿಗಳ ಕಾಶಿ ಅಂಡಮಾನ್ ಜೈಲನ್ನೇ ಕೆಡವಲು ನಮ್ಮ ಮೊದಲ ಪ್ರಧಾನಿಗಳು ಹುನ್ನಾರ ನೆಡೆಸಿ ವಿರೋಧ ವ್ಯಕ್ತವಾದಾಗ ತೆಪ್ಪಗಾದರು.
ಭಾರತ ಸ್ವತಂತ್ರ್ಯವಾಗಿತ್ತು. ನಮ್ಮವರೇ ಅಧಿಕಾರ ಹಿಡಿದಿದ್ದರು.ಆದರೂ ಸಾವರ್ಕರ್ ರಿಗೆ ನೆಮ್ಮದಿಯಾಗಿ ಬದುಕಲು ಅವಕಾಶ ದೊರೆಯಲಿಲ್ಲ. ಹಾಗೆ ನೋಡಿದರೆ ಬ್ರೀಟಿಷರು ಕೊಟ್ಟ ಕಿರುಕುಳಕ್ಕಿಂತ ಕಾಂಗ್ರೇಸ್ಸಿಗರು ಕೊಟ್ಟ ಕಿರುಕುಳವೇ ಹೆಚ್ಚು. ಸಾವರ್ಕರ್ ಬಿಡುಗಡೆಯಾದ ಸಂದರ್ಭದಲ್ಲಿ ಏರ್ಪಡಿಸಿದ್ದ ಮೆರವಣಿಗೆಯ ಮೇಲೆ ಕಾಂಗ್ರೆಸ್ಸಿಗರು ಕಲ್ಲುತೂರಿದರು. ಬ್ರೀಟೀಷರು ಮುಟ್ಟುಗೋಲು ಹಾಕಿಕೊಂಡಿದ್ದ ಸಾವರ್ಕರ್‌ರ ಮನೆಯನ್ನು ಹಿಂದಿರುಗಿಸುವುದಕ್ಕೂ ಒಲ್ಲೆ ಎಂದರು. ಸಾವಿನಲ್ಲೂ ಸಾವರ್ಕರ್ ಮೇಲೆ ದ್ವೇಷಸಾಧಿಸಿದ ನಮ್ಮ ಚೊಚ್ಚಲ ಪ್ರಧಾನಿಗಳು, ಈ ದೇಶದವನೇ ಅಲ್ಲದ ಸ್ಟ್ಯಾಲಿನ್ ಗೆ ಸಂಸತ್ತಿನಲ್ಲಿ ಮರಣಾನಂತರ ಗೌರವ ಸೂಚಿಸುವುದನ್ನು ಮರೆಯಲಿಲ್ಲ ಆದರೆ ಸಾವರ್ಕರ್ ನಿಧನರಾದಾಗ ಗೌರಾವಾರ್ಪಣೆ ಮಾಡದೆ ‘ಅವರು ಸಂಸತ್ ಸದಸ್ಯರಲ್ಲ’ ಎಂದು ನೆಪ ಹೇಳಿದರು. ಬಿಡಿ, ಇಡೀ ದೇಶವೇ ಸಾವರ್ಕರ್ ಸಾವಿಗೆ ಕಣ್ಣೀರ ಕೋಡಿ ಹರಿಸಿತ್ತು. ಮನೆಮನೆಯಲ್ಲೂ ಸೂತಕದ ವಾತಾವರಣ ನಿರ್ಮಾಣವಾಗಿತ್ತು.
ತೀರಾ ಪಿಚ್ಚೆನಿಸುವುದು, ಈ ದೇಶ ಆಳಿದವರು ಸಾವರ್ಕರ್ ಬದುಕಿದ್ದಾಗ ಮಾತ್ರವಲ್ಲ, ತೀರಿಕೊಂಡ ನಂತರವೂ ಒಂದಿಲ್ಲೊಂದು ರೀತಿ ಅವರ ಮೇಲೆ ದ್ವೇಶ ಕಾರುವುದನ್ನು ಬಿಡಲಿಲ್ಲವಲ್ಲ ಎಂದು. ಎನ್.ಡಿ.ಎ ಸರ್ಕಾರ ಸಾವರ್ಕರ್ ಮೂರ್ತಿಯನ್ನು ಸಂಸತ್ ಭವನದಲ್ಲಿ ಸ್ಥಾಪಿಸಲು ಮುಂದಾದಾಗ ಕಾಂಗ್ರೆಸ್ಸಿಗರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದರು. ಸಾವರ್ಕರ್ ಜನ್ಮದಿನವಾಗಲಿ, ಪುಣ್ಯತಿಥಿಯಾಗಲಿ ಕಾಂಗ್ರೆಸ್ಸಿಗರಿಗೆ ವರ್ಜ್ಯ. ಆದರೆ ಇದೇ ಸರ್ಕಾರಗಳು ಅಪ್ಪ ಮಗಳು, ಮೊಮ್ಮಕ್ಕಳ ಹುಟ್ಟು ಹಬ್ಬಕ್ಕೆ, ಪುಣ್ಯತಿಥಿಗೆ ಕೋಟಿ ಕೋಟಿ ರೂಗಳನ್ನು ಜಾಹಿರಾತಿಗೇ ತೆಗೆದಿಡುತ್ತವೆ. ಉಳಿದಂತೆ ಪಠ್ಯ ಪುಸ್ತಕಗಳಲ್ಲಿ ಸಾವರ್ಕರ್ ಪ್ರಸ್ಥಾಪವಾದರೆ ನಮ್ಮ ಬುದ್ದಿಜೀವಿಗಳು ಕೇಸರಿಕರಣ ಎಂದು ಬೊಬ್ಬೆಹೊಡೆಯುತ್ತಾರೆ, ಕೆಲವು ಪತ್ರಿಕೆಗಳು ಪುಟಗಟ್ಟಲೇ ಆ ಸುಳ್ಳೇ ಬೊಬ್ಬೆಹೊಡೆಯುವವರ ಲೇಖನ ಪ್ರಕಟಿಸುತ್ತವೆ. ಮಕ್ಕಳು ಧೈರ್ಯಶಾಲಿಗಳಾಗಲೂ, ಅವರ ಮನದಲ್ಲಿ ದೇಶ ಪ್ರೇಮ ಟಿಸಿಲೊಡೆಯಲು ಸಾವರ್ಕರ್ ರನ್ನಲ್ಲದೇ ಇನ್ನ್ಯಾರನ್ನು ತಾನೇ ಪರಿಚಯಿಸಬೇಕು? ಅಷ್ಠಕ್ಕೂ ಮತಾಂಧತೆಯ ಉತ್ತುಂಗದಲ್ಲಿದ್ದ, ಕುತಂತ್ರಿ ಟಿಪ್ಪುವನ್ನೋ, ಷೋಕಿಲಾಲ ನೆಹರೂರನ್ನೋ ವೀರ ಎನ್ನಲು ಸಾಧ್ಯವೆ? ಫೆಬ್ರವರಿ ೨೬ ಸಾವರ್ಕರ್ ಪುಣ್ಯತಿಥಿ, ಭಾರತವನ್ನು ಗಸ್ತುತಿರುಗುತ್ತಿರುವ ಅವರ ಆತ್ಮ ತಣ್ಣಗಿರಲಿ.

