ಅಮ್ಮನ ಮಾತು ಅವರನ್ನು ವೈದ್ಯರನ್ನಾಗಿಸಿತ್ತು..!
ಸರ್ಕಾರ ಕೊಡುವ ಪ್ರಶಸ್ತಿಗಳ ಬಗ್ಗೆ ಗೌರವವೇ ಹೊರಟು ಹೋಗಿದೆ. ಅದು ಕೇಂದ್ರ ಸರ್ಕಾರ ನೀಡುವ ಪದ್ಮ ಪ್ರಶಸ್ತಿಗಳಿರಲಿ ಅಥವಾ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯಿರಲಿ ಅದು ಅದರ ಪಾವಿತ್ರ್ಯ ಕಳೆದುಕೊಂಡು ಬಹಳ ವರುಷಗಳೇ ಆಗಿದೆ. ಕಾರಣವಿಷ್ಠೇ, ಆ ಪ್ರಶಸ್ತಿಗೆ ಭಾಜನರಾದವರಲ್ಲಿ ಕೇವಲ ಅನರ್ಹರೇ ಇರುತ್ತಾರೆ ಎಂದಲ್ಲ. ಬಹುಪಾಲು ಅರ್ಹರಿಗೇ ಅದು ದಕ್ಕಿರುತ್ತದಾದರೂ, ಕೆಲವರು ಅದನ್ನು ಗಿಟ್ಟಿಸಿಕೊಂಡಿರುತ್ತಾರೆ. ರಾಜಕಾರಣಿಗಳ ಮೇಲೆ ವಿವಿಧ ಮೂಲಗಳಿಂದ ಒತ್ತಡ ಹೇರಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ತೂರಿಕೊಂಡಿರುತ್ತಾರೆ. ಅಂತವರಿಂದಲೇ ಅರ್ಹತೆಯುಳ್ಳ ಅನೇಕರು, ಪ್ರಶಸ್ತಿಯಿಂದ ವಂಚಿತರಾಗಿರುವುದಂತೂ ಸತ್ಯ.
ಈ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾದಾಗ ಖುಷಿಯಾಗಲು ಕಾರಣವಿತ್ತು. ಅದರಲ್ಲಿ ಈ ಮೊದಲೇ ಈ ಪ್ರಶಸ್ತಿಗೆ ಭಾಜನರಾಗಬೇಕಿದ್ದ ಡಾ||ದೇವಿ ಪ್ರಸಾದ್ ಶೆಟ್ಟಿಯಿದ್ದರು. ಶಿವರಾಮಕಾರಂತರ ಮಗ ಉಲ್ಲಾಸ ಕಾರಂತರಿಗೆ ಪಟ್ಟಿಯಲ್ಲಿ ಜಾಗ ದೊರಕಿದ್ದೂ ಸಂತಸದ ವಿಷಯವೇ. ಈ ಹಿಂದೆಯೇ ಈ ಪ್ರಶಸ್ತಿ ಡಾ|| ದೇವಿ ಪ್ರಸಾದರಿಗೆ ಸಲ್ಲಬೇಕಿತ್ತು. ಅವರ ಸಾಧನೆಗಳು ನಿಜಕ್ಕೂ ಬೆರಗುಹುಟ್ಟಿಸುವಂತಹದು. ಅವರು ಕಟ್ಟಿದ ನಾರಾಯಣ ಹೃದಯಾಲಯ,ರೂಪಿಸಿದ ಆರೋಗ್ಯ ಯೋಜನೆಗಳು ಎಲ್ಲವೂ ಅಭಿನಂದನಾರ್ಹವೇ. ಮುಖ್ಯವಾಗಿ ಅವರಲ್ಲಿರುವ ಮಾನವೀಯ ತುಡಿತ ಪ್ರತಿ ವೈದ್ಯನಿಗೂ ಅನುಕರಣೀಯ. ಅವರ ಸಂವೇದನಾಶೀಲತೆಗೆ ಉದಾಹರಣೆ ಎಂದರೆ, ಈ ಹಿಂದೆ ಅವರು ತಮ್ಮಿಂದ ಶಸ್ತ್ರ ಚಿಕಿತ್ಸೆಗೊಳಗಾದ ಪುಟ್ಟ ಕಂದಮ್ಮಗಳಿಗೊಂದು ಪತ್ರ ಬರೆದಿದ್ದರು. ಬಹುಶಃ ಆ ಪತ್ರವನ್ನು ಪದೇ ಪದೇ ಐದಾರು ಬಾರಿ ಓದಿದ್ದೆ. ಪ್ರತಿ ಬಾರಿ ಓದಿದಾಗಲೂ ಹೃದಯದ ನಾಲ್ಕು ಕವಾಟಗಳಲ್ಲೂ ಏನೋ ಒಂದು ವಿಚಿತ್ರ ಸಂವೇದನೆ, ಭಾವ ತೀವ್ರತೆಯ ಅನುಭವ. ಪತ್ರದ ಒಕ್ಕಣೆಯಿಂದ ಹಿಡಿದು ಇನ್ನೊಂದು ತುದಿಯ ಇಂತಿ ನಿಮ್ಮ ವಿಶ್ವಾಸಿ ವರೆಗಿನ ಪ್ರತಿ ಅಕ್ಷರವೂ ಹೃದಯಸ್ಪರ್ಶಿ. ಪತ್ರ ಓದಿ ಮುಗಿಸುವ ಹೊತ್ತಿಗೇ ಗೊತ್ತೇ ಆಗದಂತೆ ಕಣ್ಣು ತೇವವಾಗಿಬಿಟ್ಟಿತ್ತು. ಮನಸ್ಸು ಭಾರ. ಬಾಯಿಯಿಂದ ಇಂತಹ ವೈದ್ಯರೂ ಇರುತ್ತಾರ ಎಂಬ ಉದ್ಗಾರ.
ಡಾ|| ದೇವಿ ಶೆಟ್ಟಿ ಅನ್ನುವ ಹೆಸರು ಅನೇಕ ಹೃದ್ರೋಗಿಗಳ ಪಾಲಿಗೆ ಆಶಾಕಿರಣ. ಇಡೀ ಜಗತ್ತಿನಲ್ಲಿ ಇಂದು ಹೃದಯದ ಖಾಯಿಲೆಯಿಂದ ಬಳಲುವ ಅಸಂಖ್ಯಾತ ರೋಗಿಗಳು ಒಮ್ಮೆ ನಾರಾಯಣ ಹೃದಯಾಲಯದತ್ತ ನೋಡಲೇಬೇಕು. ಜಗತ್ ಪ್ರಸಿದ್ದ ವೈದ್ಯರು, ಹೊಸ ಹೊಸ ತಂತ್ರಜ್ನಾನ, ಶಸ್ತ್ರ ಚಿಕಿತ್ಸಕರ ನೈಪುಣ್ಯತೆ, ಮೇಲಾಗಿ ಹೃದಯವಂತಿಕೆ ಇವು ನಾರಾಯಣ ಹೃದಯಾಲಯಕ್ಕೆ ವಿಶ್ವ ಭೂಪಟದಲ್ಲಿ ಸ್ಥಾನ ಒದಗಿಸಿದೆ. ವಿಶ್ವದ ಪ್ರಸಿದ್ದ ಹೃದ್ರೋಗ ಚಿಕಿತ್ಸಾ ಕೇಂದ್ರಗಳ ಪಟ್ಟಿ ಮಾಡಿದರೆ ನಾರಾಯಣ ಹೃದಯಾಲಯ ಆ ಪಟ್ಟಿಯಲ್ಲಿ ಮೊದಲ ಹತ್ತು ಕೇಂದ್ರದಲ್ಲಿ ಒಂದಾಗಿ ನಿಲ್ಲುತ್ತದೆ. ಇದೆಲ್ಲದರ ಕೀರ್ತಿ ಸಲ್ಲಬೇಕಾದ್ದು ನಾರಾಯಣ ಹೃದಯಾಲಯದ ಸಾರಥಿಯಾಗಿ ನಿಂತಿರುವ ಡಾ||ದೇವಿ ಶೆಟ್ಟರಿಗೆ.
ಡಾ|| ಶೆಟ್ಟಿಯವರ ಬಗ್ಗೆ ಕೊಂಚ ಹೆಚ್ಚು ಅಭಿಮಾನ ಮೂಡುವುದಕ್ಕೆ ಕಾರಣ ಅವರು ಕನ್ನಡದವರು ಎನ್ನುವುದು. ಮೂಲತಹ ದಕ್ಷಿಣ ಕನ್ನಡದ ಕಿನ್ನಿಮುಲ್ಕಿಯ ದೇವಿ ಪ್ರಸಾದ್ ಶೆಟ್ಟಿ, ಮಂಗಳೂರಿನ ಕಸ್ತೂರಿ ಬಾ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ 1982 ರಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದವರು. ನಂತರ ವೆಸ್ಟ್ ಮಿಡ್‌ಲ್ಯಾಂಡಿನ ಸಿ.ಆರ್.ಪಿ ಕಾರ್ಯಕ್ರಮದ ಅಡಿಯಲ್ಲಿ ಹೃದಯದ ಶಸ್ತ್ರಚಿಕಿತ್ಸೆಯ ತರಬೇತಿ ಪಡೆದವರು. ಮುಂದುವರಿದು ಹೃದಯ ಶಸ್ತ್ರ ಚಿಕಿತ್ಸೆಯಲ್ಲಿ ನೈಪುಣ್ಯತೆ ಸಾಧಿಸಲು ವಿದೇಶದತ್ತ ಮುಖಮಾಡಿದ ಶೆಟ್ಟರು ಲಂಡನ್ ತಲುಪಿಕೊಂಡು ಅಲ್ಲಿನ ಗೈಸ್ ಹಾಸ್ಪಿಟಲ್‌ನಲ್ಲಿ ಶಸ್ತ್ರ ಚಿಕಿತ್ಸಕನಾಗಿ 83 ರಿಂದ ಸುಮಾರು ಆರು ವರ್ಷಗಳ ಕಾಲ ಅಂದರೆ 1989 ರವರೆಗೆ ಸೇವೆ ಸಲ್ಲಿಸಿ ಯಶಸ್ವಿ ಹೃದ್ರೋಗ ತಜ್ನರಾಗಿ ಹೊರಹೊಮ್ಮಿದವರು.
1989 ರಲ್ಲಿ ಡಾ|| ಶೆಟ್ಟಿ ಮತ್ತು ಅವರ ತಂಡ ಸುಮಾರು 140 ಹಾಸಿಗೆಯ ಒಂದು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಭಾರತದ ಕೊಲ್ಕತ್ತಾ ನಗರದಲ್ಲಿ ತೆರೆದರು.ಕೊಲ್ಕತ್ತಾದಲ್ಲಿ ದೇವಿ ಶೆಟ್ಟರ ಪ್ರತಿಭೆ, ಹೃದಯ ಶಸ್ತ್ರ ಚಿಕೆತ್ಸೆಯ ನೈಪುಣ್ಯತೆ, ಮಾನವೀಯ ಕಾಳಜಿ ಎಲ್ಲವೂ ಇಡೀ ಕೊಲ್ಕತ್ತದ ನಗರದ ಜನರನ್ನಷ್ಠೇ ಅಲ್ಲದೆ ಇಡೀ ಭಾರತದ ಜನರ ಗಮನ ಸೆಳೆಯಿತು. ಮದರ್ ತೆರೆಸಾರಿಗೆ ಶೆಟ್ಟರು ಕೊನೆಯವರೆಗೂ ವೈದ್ಯಕೀಯ ಸಲಹೆಗಾರರಾಗಿ ಅವರ ಆರೋಗ್ಯ ನೋಡಿಕೊಂಡರು.
ನಂತರ ಈ ಕನ್ನಡದ ಕುವರನಿಗೆ ತನ್ನ ತವರಾದ ಕರ್ನಾಟಕದಲ್ಲೇ ಜನೋಪಕಾರಿಯಾಗಿ ಮುಂದಿನ ಜೀವನ ರೂಪಿಸಿಕೊಳ್ಳಬೇಕೆಂಬ ಆಸ್ಥೆ ಮೂಡಿತು. ಅದರ ಫಲವಾಗಿ ರೂಪುಗೊಂಡಿದ್ದೇ ನಾರಾಯಣ ಹೃದಯಾಲಯ.ಇವಿಷ್ಟು ಡಾ|| ದೇವಿ ಶೆಟ್ಟರು ಬದುಕು ಕಟ್ಟಿಕೊಂಡ ಬಗೆ. ಹಾಗಾದರೆ ಅವರಿಗೆ ವೈದ್ಯಕೀಯ ಕ್ಷೇತ್ರಕ್ಕೆ ಬರಬೇಕೆನ್ನಿಸಿದ್ದಾದರೂ ಯಾಕೆ? ಚಿಕ್ಕಂದಿನಿಂದಲೇ ವೈದ್ಯರಾಗುವ ಕನಸು ಕಂಡಿದ್ದರಾ? ಎನ್ನುವುದಕ್ಕೆ ಅವರು ಹೇಳುವ ಉತ್ತರ ಹೀಗೆ “ಅದೊಂದು ಶನಿವಾರ ಮಧ್ಯಾಹ್ನ ಎನ್ನುವುದು ನನ್ನ ನೆನಪು. ಬೆಂಕಿಪೊಟ್ಟಣಗಳು ಹಾಗೂ ಕಡ್ಡಿಗಳಿಂದ ನಾನು ಕಾರು ತಯಾರಿಸಲು ಪ್ರಯತ್ನಿಸುತ್ತಿದ್ದೆ. ಹಳ್ಳಿಯಲ್ಲಿನ ಉಳಿದ ಮಕ್ಕಳೂ ಇಂಥ ಆಟವನ್ನೇ ಆಡುತ್ತಿದ್ದರು. ಬಾಂಬೆಯಲ್ಲಿದ್ದ ದೂರದ ಸಂಬಂಧಿಯೊಬ್ಬರೊಂದಿಗೆ ನನ್ನ ತಾಯಿ ಮಾತನಾಡುತ್ತಿದ್ದರು. ತನ್ನ ಮಗುವನ್ನು ಉಳಿಸಿಕೊಟ್ಟ, ತಾನು ನೀಡುವ ಯಾವುದೇ ಚಿಕಿತ್ಸೆಗೆ ಶುಲ್ಕ ಪಡೆಯದ ಸರ್ಜನ್ ಒಬ್ಬರ ಬಗ್ಗೆ ಆಕೆ ನನ್ನ ತಾಯಿಗೆ ಹೇಳುತ್ತಿದ್ದಳು. ಅಂಥ ಅದ್ಭುತ ವ್ಯಕ್ತಿಗೆ ಜನ್ಮ ಕೊಟ್ಟ ತಾಯಿಯ ಹೊಟ್ಟೆ ತಣ್ಣಗಿರಲೆಂದು ನನ್ನ ತಾಯಿ ಹಾರೈಸಿದ್ದು ನನ್ನ ಕಿವಿಗೆ ಬಿತ್ತು. ಅಂಥ ವ್ಯಕ್ತಿಗಳ ಕಾರಣದಿಂದಲೇ ಈ ಜಗತ್ತು ಇನ್ನೂ ಸುಂದರವಾಗಿದೆ ಎಂದು ಅಮ್ಮ ಹೇಳಿದಳು. ಆ ಸಮಯದಲ್ಲೇ ನನ್ನ ಬದುಕಿನ ಅರ್ಥ ಏನೆನ್ನುವುದನ್ನು ಕಂಡುಕೊಂಡೆ. ನಾನು ಅದೃಷ್ಟವಂತನಾಗಿದ್ದೆ. ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿರುವ ಅದೃಷ್ಟ ನನ್ನದಾಗಿತ್ತು. ಲಂಡನ್‌ನ ಗೈಸ್ ಹಾಸ್ಪಿಟಲ್ ನಲ್ಲಿ ಹೃದಯ ಶಸ್ತ್ರಚಿಕಿತ್ಸಕನಾಗಿ ತರಬೇತಿ ಪಡೆದೆ. ಎಷ್ಟರ ಮಟ್ಟಿಗೆ ಈ ಚಿಕಿತ್ಸೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೆನೆಂದರೆ, ಅಲ್ಲಿನ ಸಹೋದ್ಯೋಗಿಗಳು ನನ್ನನ್ನು ಆಪರೇಟಿಂಗ್ ಮೆಷಿನ್ ಎಂದು ನನ್ನನ್ನು ಕರೆಯುತ್ತಿದ್ದರು. ಹೀಗೆ ಬಾಲ್ಯದಲ್ಲಿ ಕಿವಿಗೆ ಬಿದ್ದಮಾತು, ವೈದ್ಯನಾಗಬೇಕೆಂದುಕೊಂಡ ಸಂಕಲ್ಪ, ನನ್ನನ್ನು ಹೃದ್ರೋಗ ತಜ್ನನನ್ನಾಗಿಸಿತು.”
ಇನ್ನು ತಮ್ಮ ಮತ್ತು ಮದರ್ ತೆರೆಸಾ ನಡುವಿನ ಸಂಭಾಷಣೆ ಹೇಗೆ ತನ್ನ ಗುರಿಯನ್ನು ಬದಲಿಸಿತು ಎನ್ನುವ ಬಗ್ಗೆ ಕೂಡ ಡಾ|| ದೇವಿ ಶೆಟ್ಟಿ ತುಂಬಾ ಮನಮುಟ್ಟುವಂತೆ ಹೇಳುತ್ತಾರೆ. ಹಾಗಾದರೆ ಅವರ ಮಾತಲ್ಲೇ ಕೇಳಿ. “ಕೆಲವು ವರ್ಷಗಳ ಹಿಂದೆ ಮದರ್ ತೆರೆಸಾ ಅವರು ಹೃದಯಾಘಾತಕ್ಕೆ ಒಳಗಾದಾಗ ಆಕೆಯ ಶುಶ್ರುಶೆಯ ಮೇಲ್ವಿಚಾರಣೆ ನನಗೊದಗಿತ್ತು.ತುರ್ತು ಚಿಕಿತ್ಸಾ ಘಟಕದಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದರು. ಒಂದು ದಿನ ನೀಲಿ ಬಣ್ಣಕ್ಕೆ ತಿರುಗುತ್ತಿದ್ದ ಹಸುಳೆಯೊಂದನ್ನು ಪರೀಕ್ಷಿಸುತ್ತಿದ್ದ ನನ್ನನ್ನು ಅವರು ನೋಡಿದರು. ಕೆಲವು ಕ್ಷಣಗಳ ಯೋಚನೆಯ ನಂತರ ಮದರ್ ಹೇಳಿದರು: “ನೀನು ಯಾಕಿಲ್ಲಿ ಈಗ ಇರುವೆ ಎಂಬುದು ನನಗೀಗ ಅರ್ಥವಾಯಿತು. ಹೃದಯದ ಸಮಸ್ಯೆಯಿಂದ ನರಳುತ್ತಿರುವ ಮಕ್ಕಳ ನೋವನ್ನು ಪರಿಹರಿಸಲಿಕ್ಕಾಗಿ ದೇವರು ನಿನ್ನನ್ನಿಲ್ಲಿ ಕಳುಹಿಸಿದ್ದಾನೆ” ಮದರ್ ಅವರ ಮಾತು ಪೀಡಿಯಾಟ್ರಿಕ್ ಹಾರ್ಟ್ ಸರ್ಜನ್ ಎನ್ನುವುದಕ್ಕೆ ನೀಡಬಹುದಾದ ಅತ್ಯಂತ ಸೂಕ್ಷ್ಮವಾದ ವಿಶ್ಲೇಷಣೆ ಎಂದು ನನಗನ್ನಿಸಿತು. ಇದು ನನ್ನ ಜೀವನದಲ್ಲಿ ನನಗೆ ಸಿಕ್ಕ ಅತ್ತ್ಯುತ್ತಮ ಪ್ರಶಂಸೆಯೂ ಹೌದು.”
ಡಾ|| ದೇವಿ ಶೆಟ್ಟರು ಕೇವಲ ಉತ್ತಮ ಹೃದಯ ಶಸ್ತ್ರ ಚಿಕಿತ್ಸಕರಷ್ಟೇ ಅಲ್ಲ. ಒಬ್ಬ ಮಾನವತಾವಾದಿ, ಸಂವೇದನ ಶೀಲರೂ ಹೌದು. ಹಲವು ಪ್ರಥಮಗಳ ಕೀರ್ತಿಗೆ ಕೂಡ ಶೆಟ್ಟರು ಭಾಜನರಾಗಿದ್ದಾರೆ.ಹೃದಯ ಶಸ್ತ್ರ ಚಿಕಿತ್ಸೆಯಲ್ಲೇ ಅಪರೂಪದ ತಂತ್ರವಾದ ನಿಯೋ ನಾಟಲ್ ಓಪನ್ ಹಾರ್ಟ್ ಸರ್ಜರಿಯನ್ನು ಭಾರತದಲ್ಲಿ ಪ್ರಥಮವಾಗಿ ಮಾಡಿದವರು ಡಾ||ದೇವಿ ಪ್ರಸಾದ್ ಶೆಟ್ಟಿ. ಮೈಕ್ರೋಚಿಪ್ ಕ್ಯಾಮೆರವನ್ನು ಉಪಯೋಗಿಸಿಕೊಂಡು ತೆರೆದ ಹೃದಯ ಶಸ್ತ್ರ ಚಿಕಿತ್ಸೆಯ ಮೂಲಕ ಹೃದಯದ ರಂದ್ರಕ್ಕೆ ತೇಪೆ ಹಾಕುವ ಶಸ್ತ್ರ ಚಿಕಿತ್ಸೆ ಮಾಡಿದ ಪೈಕಿ ಪ್ರಪಂಚದಲ್ಲೇ ಮೊದಲಿಗರು. ಸಾಮಾನ್ಯವಾಗಿ ತೊಡೆಯ ಭಾಗದಿಂದ ರಕ್ತನಾಳವನ್ನು ತೆಗೆದುಕೊಂಡು ಬೈಪಾಸ್ ಸರ್ಜರಿಯನ್ನು ಮಾಡುತ್ತಾರೆ. ಆದರೆ ಮೊದಲ ಬಾರಿಗೆ ಕೃತಕ ಹೃದಯದ ಯಂತ್ರವನ್ನಿಟ್ಟುಕೊಂಡು ಹೊಟ್ಟೆಯ ಭಾಗದ ರಕ್ತನಾಳವನ್ನೇ ಉಪಯೋಗಿಸಿ ಬೈಪಾಸ್ ಶಸ್ತ್ರ ಚಿಕಿತ್ಸೆಮಾಡಿ ಯಶಕಂಡವರು ಶೆಟ್ಟರು. ಇಡೀ ಏಷ್ಯಾ ಖಂಡದಲ್ಲೇ ಪ್ರಥಮ ಬಾರಿಗೆ ಕಾರ್ಡಿಯೋ ಮಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಮಾಡಿದವರೂ ಇವರೇ.
ಡಾ|| ದೇವಿ ಪ್ರಸಾದ್ ಶೆಟ್ಟರು ಕೇವಲ ಯಶಸ್ವಿ ವೈದ್ಯರೆಂದು ಇಷ್ಟವಾಗುವುದಿಲ್ಲ. ಅವರ ಸಾಧನೆ, ಅವರ ಶಸ್ತ್ರ ಚಿಕಿತ್ಸೆಯ ನೈಪುಣ್ಯತೆ ಎಲ್ಲವೂ ಫೈನ್. ಆದರೆ ಅದೆಲ್ಲಕ್ಕಿಂತ ದೊಡ್ಡದೆನಿಸುವುದು ಅವರಿಗಿರುವ ಅಂತಕರಣ. ಹೆಚ್ಚು ಕಡಿಮೆ ಐದು ಸಾವಿರ ಕಂದಮ್ಮಗಳ ಎಳೆ ಹೃದಯಕ್ಕೆ ಶಸ್ತ್ರ ಚಿಕಿತ್ಸೆಯ ಮೂಲಕ ಶಕ್ತಿ ತುಂಬಿರುವ ಶೆಟ್ಟರು. ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ಅವರ ಮನದಲ್ಲೇಳುವ ಭಾವನೆಯನ್ನು ಪದಗಳಲ್ಲಿ ಅವರು ಸೆರೆ ಹಿಡಿಯುವುದು ಹೀಗೆ. “ಆಪರೇಷನ್ ಥಿಯೇಟರ್‌ನ ದಾದಿಯ ಕೈಗೆ ನಿನ್ನನ್ನು ಒಪ್ಪಿಸುವ ಸಂದರ್ಭದಲ್ಲಿ ಕಾಣಿಸಿದ ನಿನ್ನ ಅಮ್ಮನ ಮುಖ ನನಗೆ ಸ್ಪಷ್ಟವಾಗಿ ನೆನಪಿದೆ. ನಿನ್ನನ್ನು ಮುದ್ದಿಸುವಾಗ ಆಕೆ ನನ್ನ ಮುಖ ನೋಡಿದಳು. ಬಹು ಅಮೂಲ್ಯವಾದ ಒಡವೆಯನ್ನು ನನಗೆ ಒಪ್ಪಿಸುತ್ತಿರುವ ಭಾವನೆ ಹಾಗೂ ನಿನ್ನ ಕಾಳಜಿಯನ್ನು ನಾನು ಸಮರ್ಥವಾಗಿ ನಿರ್ವಹಿಸುವ ನಂಬಿಕೆಯ ಭಾವ ಆಕೆಯ ಮುಖದಲ್ಲಿ ಇದ್ದಂತಿತ್ತು. ಆ ಕ್ಷಣ, ಭಿನ್ನವಾದ ಪ್ರೇಮ ತ್ರಿಕೋನವೊಂದು ರೂಪುಗೊಂಡಿತ್ತು. ನಿನ್ನ ತಂದೆ ತಾಯಿ ಹಾಗೂ ನನ್ನ ನಡುವಣ ಕೇಂದ್ರದಲ್ಲಿ ನೀನಿದ್ದೆ. ನಿನ್ನನ್ನು ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಲಿಕ್ಕೆ ನಾವು ಸಿದ್ದರಿದ್ದೆವು.ಅನೇಕ ನಿದ್ದೆರಹಿತ ರಾತ್ರಿಗಳನ್ನು ಕಳೆದಿದ್ದ ನಿನ್ನ ಮುಖದಲ್ಲಿ ನಗು ಅರಳಿಸಲಿಕ್ಕಾಗಿ- ನಿನ್ನ ಹೃದಯ ಶಸ್ತ್ರ ಚಿಕಿತ್ಸೆಗೆ- ನನಗೆ ಕಡು ಏಕಾಗ್ರತೆಯ ಆರು ತಾಸುಗಳು ಹಿಡಿದವು. ಆ ಸಮಯದಲ್ಲಿ ದೇವರು ನಿನ್ನ ಪರವಾಗಿದ್ದ. ನೀನು ಅದ್ಭುತವಾಗಿ ಚೇತರಿಸಿಕೊಂಡೆ. ಆಸ್ಪತ್ರೆಯಿಂದ ನೀನು ಮನೆಗೆ ಮರಳುವ ದಿನ ಕಣ್ಣುಗಳು ಒದ್ದೆಯಾಗಿರುವಾಗಲೇ ವಾರೆಗಣ್ಣಿನಿಂದ ನಿನ್ನನ್ನು ಮತ್ತೊಂದು ಸಲ ನೋಡಿದೆ. ಮತ್ತೊಬ್ಬ ಗೆಳೆಯ ದೊರಕಿರುವುದು ನನಗೆ ಗೊತ್ತಾಯಿತು. ನಿನ್ನ ಸ್ನೇಹ ಹಾಗೂ ಪ್ರಿತಿಯಷ್ಟೇ ನಾನು ನಿನಗೆ ನೀಡಿದ ಚಿಕಿತ್ಸೆಗಾಗಿ ಪಡೆಯಬಯಸುವ ಏಕಮಾತ್ರ ಶುಲ್ಕ.” ಹೀಗೆ ದೇವಿ ಶೆಟ್ಟರು ತಮ್ಮ ಅಂತರಂಗದ ಭಾವನೆಗಳನ್ನು ಬಿಚ್ಚಿಡುತ್ತಾರೆ.
ದಿನಕ್ಕೆ ಹತ್ತಾರು ಶಸ್ತ್ರ ಚಿಕಿತ್ಸೆ ಮಾಡುತ್ತಾ,ಆಪರೇಟಿಂಗ್ ಮೆಷೀನ್ ಎನ್ನಿಸಿಕೊಳ್ಳುವ ಶೆಟ್ಟರ ಮನಸ್ಸಲ್ಲೂ ಎಷ್ಟೇಲ್ಲಾ ತಳಮಳ, ಭಾವೋದ್ವೇಗ. ಸಾವಿರ ಸಾವಿರ ಹೃದಯಕ್ಕೆ ಶಕ್ತಿ ತುಂಬುತ್ತಾ, ಬದುಕುವ ಅವಕಾಶ ನೀಡುತ್ತಿರುವ ಡಾ|| ದೇವಿ ಶೆಟ್ಟರ ಸಾಧನೆ ಗುರುತಿಸಿ ಅವರಿಗೆ ಪದ್ಮ ಪ್ರಶಸ್ತಿ ನೀಡಿರುವುದರಿಂದ ಆ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ. ಪ್ರಶಸ್ತಿಗಳು ಸಲ್ಲಬೇಕಾದು ಇಂಥವರಿಗೇ.


nice article sir…thank u very much for giving this information.
Doctor Devi Prasad is great, I fall short of words to tell more than this.