Skip to content

ಮನೋಬಲದ ಮುಂದೆ ಕ್ಯಾನ್ಸರ್ರೇನು ಮಹಾ?

February 10, 2012

          ಆತನಿಂದ ಸ್ಪೂರ್ತಿ ಪಡೆಯದವರಾರು? ಅವನ ಬಗ್ಗೆ ಓದಿದಾಗಲೆಲ್ಲಾ ಮನೋಬಲವಿದ್ದರೆ ಕ್ಯಾನ್ಸರ್ ತಾನೇ ಏನು ಮಾಡೀತು ಎನ್ನಿಸುತ್ತದೆ. ಕ್ಯಾನ್ಸರ್ ಪೀಡಿತರು ಅವನ ಬಗ್ಗೆ ತಿಳಿದುಕೊಂಡರೆ ಹತಾಶೆಯ ನಡುವೆಯೇ ಆತ್ಮವಿಶ್ವಾಸ ಟಿಸಿಲೊಡೆಯುತ್ತದೆ. ಬದುಕುವ ಹಂಬಲ ಗಟ್ಟಿಯಾಗುತ್ತದೆ. ಪ್ರಸ್ತುತ ಅಮೇರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಆತನ ಪುಸ್ತಕವನ್ನು ಹಿಡಿದು ಕುಳಿತಿದ್ದಾರೆ. “It’s not about the Bike: My Journey back to Life” ಓದುತ್ತಾ ಆತನಿಂದ ಪ್ರೇರೇಪಿತನಾಗಿದ್ದೇನೆ ಎಂದು ಕಿಮೋಥೆರಪಿಗೆ ಒಳಗಾಗಿರುವ ಯುವರಾಜ್ ಹೇಳಿದ್ದಾರೆ. 

          ಹೌದು ಆರ್ಮ್‌ಸ್ಟ್ರಾಂಗ್ ಕ್ಯಾನ್ಸರ್ ರೋಗಿಗಳಿಗೆ ಪ್ರೇರಕ ಶಕ್ತಿ. ಆತ ಕ್ಯಾನ್ಸರ್ ಗೆದ್ದ ರೋಚಕ ಕಥೆಯನ್ನ ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಬ್ಯಾಲ್ಯದಿಂದಲೂ ಅವನದು ಸ್ಪರ್ಧಾತ್ಮಕ ಮನೋಭಾವ. ಯಾರಾದರು ’ನಿನ್ನಿಂದ ಇದು ಸಾಧ್ಯವಿಲ್ಲ’  ಎಂದರೆ ಅವನಿಗೆ ಕೋಪ ಬರುತ್ತಿತ್ತು. “ನನ್ನಿಂದ ಎಲ್ಲವೂ ಸಾಧ್ಯ” ಎಂದು ತನ್ನಲ್ಲಿ ತಾನೇ ಹೇಳಿಕೊಂಡು ಅಲ್ಲಿಂದ ಹೊರಟುಬಿಡುತ್ತಿದ್ದ. ಆದ್ದರಿಂದಲೇ ಮಹತ್ತರವಾದ್ದನ್ನು ಸಾಧಿಸಿದ, ಸಾವಿನ ಮನೆಯ ಕದ ತಟ್ಟಿ ಬಂದ, ಕೊನೆಗೆ ಸಾವಿನೊಂದಿಗೆ ಹೋರಾಡುವ ಎಷ್ಟೊ ಮಂದಿಗೆ ಆಶಾಕಿರಣವಾದ, ಆತ್ಮವಿಶ್ವಾಸ ಮೂಡಿಸಿದ. 

             ಟೂರ್ ದಿ ಫ್ರಾನ್ಸ್  ಎನ್ನುವುದು ಫ್ರಾನ್ಸ್ ನಲ್ಲಿ,  22 ದಿನಗಳು, 20 ಹಂತಗಳಲ್ಲಿ ನಡೆಯುವ ಒಂದು ಸ್ಪರ್ಧೆ, ಅದರಲ್ಲಿ ಸ್ಪರ್ಧಿಸುವಾತ 4000KM ರನ್ನು ಕ್ರಮಿಸಬೇಕಾಗುತ್ತದೆ. ಆ ಸ್ಪರ್ಧೆಯು ಫ಼್ರಾನ್ಸ್ ದೇಶ ಮತ್ತು ಅದರ ಸುತ್ತಲಿನ ದೇಶಗಳಲ್ಲಿ ನಡೆಯುವುದರಿಂದ ಅದಕ್ಕೆ ಆ ಹೆಸರು ಬಂದಿದೆ. ಒಂದೊಂದು ಹಂತವು ಒಂದೊಂದು ಪಟ್ಟಣದಲ್ಲಿ ನಡೆದು ಸ್ಪರ್ಧಾರ್ಥಿಯು ಎಲ್ಲಾ ಹಂತದಲ್ಲಿ ತೆಗೆದುಕೊಳ್ಳುವ ಒಟ್ಟು ಸಮಯವನ್ನು ಕ್ರೂಢೀಕರಿಸಿ ಆ ಪ್ರವಾಸದ ವಿಜಯಿ ಅಭ್ಯರ್ಥಿಯನ್ನು ಆರಿಸುವುದು ನಡೆದುಕೊಂಡು ಬಂದಿರುವ ಪದ್ದತಿ. ಇಂತಹ ಪ್ರವಾಸವನ್ನು ಸತತ ಏಳು ಬಾರಿ ಗೆದ್ದು ( 1999, 2000, 2001, 2002, 2003, 2004 & 2005) ದಾಖಲೆ ತನ್ನದಾಗಿಸಿಕೊಂಡವನೇ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್. ಕೇವಲ ಅವನು ಸ್ಪರ್ಧೆಗಳಲ್ಲಿ ಜಯಿಸಿ ದಾಖಲೆ ನಿರ್ಮಿಸಿದ್ದರೆ, ಎಲ್ಲ ಆಟಗಾರರಂತೆ ಜಾಹಿರಾತಿನಲ್ಲಿ ಹಣ ಮಾಡಿಕೊಂಡು, ರೆಸ್ಟೋರೆಂಟ್ ಗಳನ್ನ ಕಟ್ಟಿಸಿಕೊಂಡು ಉಳಿದು ಬಿಡುತ್ತಿದ್ದನೇನೋ. ಆದರೆ ಎಲ್ಲಕ್ಕಿಂತ ಮಿಗಿಲಾಗಿ ಅವನು ಸಾವಿನೊಂದಿಗೆ ಸ್ಪರ್ಧೆಗೆ ಬಿದ್ದು ಗೆದ್ದು ಬಂದ . ಸಾವಿನೊಡನೆ ಹೋರಾಡುತ್ತಿರುವ ಎಷ್ಟೋ ಜನರ ಸಹಾಯಕ್ಕೆ ನಿಂತ. ಎಲ್ಲರಿಗೂ ಧೈರ್ಯ ತುಂಬುವ ಕೆಲಸ ಮಾಡಿದ. ಅದಕ್ಕೆ ಅವನು ಮನಸ್ಸಿಗೆ ಹತ್ತಿರವಾಗುತ್ತಾನೆ.          

           ಚಿಕ್ಕ ವಯಸ್ಸಿನಲ್ಲೇ ಸೈಕಲ್ ನೆಡೆಗೆ ಆಕರ್ಷಿತನಾದ ಲ್ಯಾನ್ಸ್, ಸದಾ ಸೈಕಲ್ ಸವಾರಿಯ ಹುಚ್ಚು ಬೆಳೆಸಿಕೊಂಡವನು, ದಿನಕ್ಕೆ 20-30 ಮೈಲುಗಳನ್ನ ಕ್ರಮಿಸುವುದು ಅವನಿಗೆ ಅಸಾಧ್ಯದ ಕೆಲಸವಾಗಿರಲಿಲ್ಲ. ಪ್ರತಿದಿನ 4 ರಿಂದ 5 ತಾಸುಗಳು ಸೈಕಲ್ ಸವಾರಿ ಅವನ ನಿತ್ಯ ಕಾಯಕ. ಇದ್ದಕ್ಕಿದ್ದಂತೆ ಒಂದು ದಿನ, ಅವನಿಗೆ ಟೆಸ್ಟಿಕಲ್(ವೃಷಣ) ನಲ್ಲಿ ಊತ ಕಾಣಿಸಿಕೊಂಡಿತು, ತೀವ್ರ ನೋವು ಅನುಭವಿಸಬೇಕಾಯಿತು. ವೈದ್ಯರಿಂದ ಪರೀಕ್ಷಿಸಿಕೊಂಡ ಲ್ಯಾನ್ಸ್ ಗೆ ವೈದ್ಯರು ಟೆಸ್ಟಿಕ್ಯೂಲಾರ್ ಕ್ಯಾನ್ಸರ್(ವೃಷಣದ ಕ್ಯಾನ್ಸರ್) ಎಂಬುದನ್ನು ಖಚಿತಪಡಿಸಿದರು. ವೈದ್ಯರ ಸಲಹೆ ಮೇರೆಗೆ ಎದೆಯ ಎಕ್ಸರೇ ಕೂಡ ಮಾಡಿಸಿದಾಗ ಲ್ಯಾನ್ಸ್ ಗೆ ಆ ಕ್ಯಾನ್ಸರ್ ಎಂಬ ವಿಷಜಂತು ತನ್ನ ಎದೆಗೂಡುಗಳಿಗೂ ಪಸರಿಸಿದೆ ಎಂಬುದು ದಿಗಿಲು ಮೂಡಿಸಿತು. ಯಾವುದರಲ್ಲೂ ತಡ ಮಾಡಲು ಸಿದ್ದನಿರದ ಲ್ಯಾನ್ಸ್ ಮಾರನೇ ದಿನವೇ ಚಿಕೆತ್ಸೆಗೆ ಅಣಿಯಾದ. ಕೊನೆಗೆ ಕ್ಯಾನ್ಸರ್ ನಿಂದ ಹಾನಿಗೊಳಗಾದ ಅವನ ಟೆಸ್ಟಿಕಲ್ ತೆಗೆಯುವ ಸಂದರ್ಭದಲ್ಲಿ ತೀರಾ ಭಾವುಕನಾದ. ತನ್ನೆಲ್ಲಾ ಕಷ್ಟವನ್ನೂ ತಾಯಿಯೊಂದಿಗೆ ಮುಕ್ತವಾಗಿ ಚರ್ಚಿಸಿದ. ಆಗ ಭುಜದ ಮೇಲೆ ಕೈಯಿಟ್ಟ ಅವನ ತಾಯಿ ಹೇಳಿದ್ದು ಒಂದೇ. ’ಮಗೂ ನಿರಾಶನಾಗಬೇಡ. ಬಂದದ್ದು ಬರಲಿ. ನಿನ್ನೊಂದಿಗೆ ನಾನಿದ್ದೇನೆ. ಇಬ್ಬರೂ ಕೂಡಿ ಬಂದದ್ದೆಲ್ಲವನ್ನೂ ಎದುರಿಸೋಣ. ತಾಯಿಯ ಈ ಮಾತು ಅವನ ಆತ್ಮಸ್ಥೈರ್ಯವನ್ನ ನೂರ್ಮಡಿಗೊಳಿಸಿತು.

            ಬೇರೆ ಯಾವ ತಾಯಿಯಾಗಿದ್ದರೂ ಮಗನಿಗೆ ಕ್ಯಾನ್ಸರ್ ಎಂದು ತಿಳಿದೊಡನೆ ದುಃಖಿತಳಾಗಿ ಅವನ ಮುಂದೆ ಅಳುತ್ತಾ ನಾನಾ ದೇವರಿಗೆ ಹರಕೆ ಹೊರುತ್ತಾ ಕುಳಿತು ಬಿಡುತ್ತಿದ್ದಳೋ ಏನೋ. ಆದರೆ ಲಿಂಡ ಮ್ಯೊಮಿಹಾಮ್ ಅವನಿಗೆ ಸಾಂತ್ವಾನ ಹೇಳಿದಳು. ಎಲ್ಲದಕ್ಕೂ ಪರಿಹಾರವಿದೆ ಎಂದು ಮನವರಿಕೆ ಮಾಡಿಕೊಟ್ಟಳು.ಮಗನೊಂದಿಗೆ ಕೂತು ಚರ್ಚಿಸಿದಳು. ಇಬ್ಬರೂ ಸೇರಿಕೊಂಡು ಹಲವು ಮೂಲಗಳಿಂದ ಕ್ಯಾನ್ಸರ್ ಬಗೆಗಿನ ವಿಷಯ ತಿಳಿದುಕೊಳ್ಳುತ್ತಾ ಹೋದರು. ಹಲವು ವೈದ್ಯರಿಂದ ಅಭಿಪ್ರಾಯ ಸಂಗ್ರಹಿಸಿದರು. ಪ್ರತಿಷ್ಠಿತ ಗ್ರಂಥಾಲಯಗಳಿಂದ ಪುಸ್ತಕಗಳು, ಯೋಗ ಪತ್ರಿಕೆಗಳು ಎಲ್ಲವನ್ನೂ ತಂದು ಹರಡಿಕೊಂಡು ಕ್ಯಾನ್ಸರ್  ವಿಧ್ಯಾರ್ಥಿಯಾಗಿ ಓದುತ್ತಾ ಕುಳಿತರು. ಅಂತರ್ಜಾಲದಲ್ಲಿ ಸಿಗುವ ಎಲ್ಲ ಮಾಹಿತಿಯನ್ನೂ ಜಾಲಾಡಿದರು. ನೋಟ್ಸ್ ಮಾಡಿಟ್ಟುಕೊಂಡರು. ಇಷ್ಟೇಲ್ಲಾ ಮಾಡುವ ಹೊತ್ತಿಗೆ ಕ್ಯಾನ್ಸರ್ ರೋಗ ಎಂತಹದು? ಅದಕ್ಕೆ ಚಿಕಿತ್ಸೆ ಏನು? ಎಲ್ಲಿ ಆ ಚಿಕಿತ್ಸೆಯ ಸೌಲಭ್ಯವಿದೆ? ತಗಲುವ ವೆಚ್ಚವೇನಿರಬಹುದು? ಮಾನಸಿಕವಾಗಿ ಹೇಗೆ ಸಿದ್ದರಾಗಬೇಕು? ಎಂಬ ಅಷ್ಠೂ ಪ್ರಶ್ನೆಗೆ ಉತ್ತರ ಸಿದ್ದವಾಗಿಬಿಟ್ಟಿತ್ತು. 

           ಚಿಕಿತ್ಸೆಯ ಮುಂದಿನ ಹಂತವಾಗಿ ವೈದ್ಯರ ಸಲಹೆ ಮೇರೆಗೆ ಮೆದುಳಿನ MRI Scan ಗೂ ಲ್ಯಾನ್ಸ್ ಒಳಗಾದ. ಕ್ಯಾನ್ಸರ್ ಮೆದುಳಿಗೂ ಪಸರಿಸಿದೆ ಎಂಬುದು ಆ ಪರೀಕ್ಷೆಯ ಫಲಿತಾಂಶದಿಂದ ತಿಳಿದುಬಂತು. ಕೂಡಲೇ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಅಣಿಯಾದ. ಹಲವು ಸುತ್ತುಗಳ ಕಿಮೋಥೆರಪಿ ಮಾಡಲಾಯಿತು.  ಅವನು ಅದರಿಂದ ಎಷ್ಟು ಜರ್ಜರಿತನಾಗಿದ್ದನೆಂದರೆ ಯಾರೊಡನೆಯೂ ಮಾತನಾಡದ, ಏನನ್ನೂ ತಿನ್ನಲಾಗದ ಅರೆ ನಿದ್ರಾವಸ್ಥೆ ತಲುಪಿಬಿಟ್ಟಿದ್ದ. ಹಗಲೋ ರಾತ್ರಿಯೋ ಎಂದು ತಿಳಿಯುವುದೂ ಕಷ್ಟಸಾಧ್ಯವಾಗುತ್ತಿತ್ತು. ಕೀಮೋಥೆರಪಿಯ ತೀವ್ರತೆಯಿಂದ ಅವನ ತಲೆಯ, ಹುಬ್ಬಿನ ಕೂದಲುಗಳೂ ಉದುರಲಾರಂಭಿಸಿತು. ಕೊನೆ ಕೊನೆಗೆ ಅವನು ಜೀವಂತ ಶವದ ಸ್ಥಿತಿಗೆ ತಲುಪಿಬಿಟ್ಟ.ಇಷ್ಟೆಲ್ಲಾ ಆದರೂ ಅವನ ಗೆಲುವಿನ ಹುಮ್ಮಸ್ಸು ಮಾತ್ರ ಕಮ್ಮಿಯಾಗಲಿಲ್ಲ. ತನಗೆ ತಾನೇ ಈ ಕ್ಯಾನ್ಸರ್ ತಪ್ಪು ವೈಕ್ತಿಯನ್ನು ಆಯ್ಕೆ ಮಾಡಿಕೊಂಡಿದೆ. ನಾನದನ್ನು ಸೋಲಿಸಿಯೇ ಸಿದ್ದ ಎಂದು ಹೇಳಿಕೊಂಡ. 

           ಕಿಮೋಥೆರಪಿಯ ಕೊನೆಯ ದಿನ ಅದೀಗ ತಾನೆ ಕ್ಯಾನ್ಸರ್ ಚಿಕೆತ್ಸೆಯ ಪ್ರಾರಂಭ ಸ್ಥಿತಿಯಲ್ಲಿದ್ದ ಯುವಕನೊಂದಿಗೆ ಲ್ಯಾನ್ಸ್ ಮಾತನಾಡಲು ಕುಳಿತ.’Whats look like a wall, may really just be an obstacle in mind’ ಎಂದು ಅವನಿಗೆ ಧೈರ್ಯ ಕೊಡುವ ಕೆಲಸವನ್ನು ಮಾಡಿದ. ಇವನೇ ಇನ್ನು ಪೂರ್ತಿಯಾಗಿ  ಗುಣಮುಖನಾಗಿರಲಿಲ್ಲ ಆಗಲೇ ಮತ್ತೊಬ್ಬನಿಗೆ ಸಾಂತ್ವಾನ ಹೇಳುತ್ತಿದ್ದ. ಕೊನೆಗೂ ಲ್ಯಾನ್ಸ್ ಆರ್ಮಸ್ಟ್ರಾಂಗ್ ನ ಮನೋಭಲಕ್ಕೆ ಸೋತು ಕ್ಯಾನ್ಸರ್ ಕಾಲು ಕಿತ್ತಿತು. ಕೊನೆಗೆ ಎಲ್ಲ ಚಿಕಿತ್ಸೆ ಮುಗಿದು ತಾನು ಗುಣವಾಗುತ್ತಿರುವ ಸೂಚನೆ ಕಂಡುಬಂದೊಡನೆಯೇ ಆಸ್ಪತ್ರೆಯಲ್ಲಿಯೇ ತಾನು ಮಾಡಬೇಕಾದ ಮುಂದಿನ ಕೆಲಸದ ಬಗ್ಗೆ ಯೋಚಿಸತೊಡಗಿದ. ಆಗ ಅವನಿಗೆ ಸೈಕಲ್ ರೇಸಿಗಿಂತ ಕ್ಯಾನ್ಸರ್ ನೊಂದಿಗಿನ ರೇಸ್ ಇಷ್ಟವಾಗುತ್ತಾ ಹೋಯಿತು. ಅಲ್ಲಿಯೇ ಕ್ಯಾನ್ಸರ್ ನೊಂದಿಗೆ ಹೋರಾಡುತ್ತಿರುವವರ ಸಹಾಯಕ್ಕೆ ನಿಲ್ಲುವ ನಿರ್ಧಾರ ಮಾಡಿದ. ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಫೌಂಡೇಶನ್ನಿನ ಮೂಲಕ ಮಾಡಬೇಕಾದ ಕೆಲಸಗಳ ಬಗ್ಗೆ ತನ್ನ ತಾಯಿ, ಮತ್ತು ಸ್ನೇಹಿತರೊಂದಿಗೂ ಚರ್ಚಿಸಿದ. ಎಲ್ಲರೂ ಇವನ ಯೋಜನೆಗಳಿಗೆ ಬೆನ್ನು ಚಪ್ಪರಿಸಿದರು. 

         ಗುಣಮುಖನಾಗಿ ಹಿಂದಿರುಗಿದ ದಿನದಿಂದಲೇ ಮತ್ತೆ ಸೈಕಲ್ಲಿನತ್ತ ಆಕರ್ಷಿತನಾದ. ಇನ್ನೇನು ಲ್ಯಾನ್ಸ್ ಆರ್ಮ್‌ಸ್ರಾಂಗ್ ಸತ್ತಂತೆ ಅವನು ಸೈಕಲ್ ಏರಲಾರ. ಸ್ಪರ್ಧೆಯಲ್ಲಿ ಭಾಗವಹಿಸುವುದು ದೂರದ ಮಾತು ಎನ್ನುತ್ತಿದ್ದವರಿಗೆ ಅವನು ಉತ್ತರ ಕೊಡಬೇಕಿತ್ತು.ಒಂದು ತಿಂಗಳಿನಲ್ಲೇ ಅವನು ದಿನಕ್ಕೆ ನಾಲ್ಕು ಗಂಟೆಗಳ ಕಾಲ 100 ಮೈಲುಗಳನ್ನ ಸೈಕಲ್ ನಿಂದ ಕ್ರಮಿಸುವ ಶಕ್ತಿ ಮತ್ತು ಸಾಮರ್ಥ್ಯ ಪಡೆದುಕೊಂಡ. ಮದುವೆಯಾಗಿ, IVF ನಿಂದ ಮಗುವನ್ನೂ ಪಡೆದುಕೊಂಡ.ಮತ್ತೆ ಟೂರ್ ದಿ ಫ್ರಾನ್ಸ್ ನಲ್ಲಿ ಭಾಗವಹಿಸುವಂತೆ ಸ್ನೇಹಿತರು ಹುರಿದುಂಭಿಸಿದರು. ಲ್ಯಾನ್ಸ್ ತಾಯಿಯೊಡನೆ ಚರ್ಚಿಸಿದ. ಅವಳು ಎಂದಿನಂತೆ ಮತ್ತಷ್ಟು ಉತ್ತೇಜನ ನೀಡಿದಳು, ಯಾರಿಗೂ ಕ್ಸಾನ್ಸರ್ ನಿಂದ ಬಳಲಿದ ಇವನು ಗೆಲ್ಲುತ್ತಾನೆ ಎಂಬ ಭರವಸೆಗಳಿರಲಿಲ್ಲ. ಎಲ್ಲರೂ ನಿರ್ಲಕ್ಷ ನೋಟ ಬೀರಿದರು. ಆದರೆ ಎಲ್ಲರೂ ಹುಬ್ಬೇರಿಸುವಂತೆ ಆರ್ಮಸ್ಟ್ರಾಂಗ್ ಆ ಪಂದ್ಯದಲ್ಲಿ ವಿಜಯಿಯಾಗಿದ್ದ. 

          ಅದಕ್ಕೇ ಹೇಳಿದ್ದು ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಕ್ಯಾನ್ಸರ್ ಮಣಿಸಿದ ಕಥೆ ಎಂಥವರಿಗಾದರೂ ಬದುಕಿನ ಬಗ್ಗೆ ಪ್ರೀತಿ ಮೂಡಿಸುತ್ತದೆ. ಎಷ್ಠೋ ರೋಗಿಗಳ ವಿಷಯದಲ್ಲಿ ಕ್ಯಾನ್ಸರ್ ರೋಗಿಯನ್ನು ಕೊಲ್ಲುವುದಕ್ಕಿಂತ, ಆ ರೋಗದೆಡೆಗಿನ ಭಯ, ಚಿಕಿತ್ಸೆಗೆ ಬಳಸುವ ರಾಸಾಯನಿಕಗಳು ಅವರನ್ನು ಜರ್ಜರಿತರನ್ನಾಗಿ ಮಾಡಿ ಬದುಕು ಕಸಿದುಕೊಂಡಿರುತ್ತದೆ. ಆದರೆ ಚಿಕಿತ್ಸೆಯೊಂದಿಗೆ ಮನೋಬಲವಿದ್ದರೆ ಅದನ್ನು ಜಯಿಸುವುದು ಕಷ್ಠವೇನಲ್ಲ. ಅದಕ್ಕೆ ಜೀವಂತ ಉದಾಹರಣೆಯೇ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್, ಅವನನ್ನು ಓದಿ, ಕ್ಯಾನ್ಸರನ್ನು ಆತ್ಮವಿಶ್ವಾಸದಿಂದ ಎದುರಿಸಿದ ಅನೇಕ ಉದಾಹರಣೆಗಳು ಇಂದು ಜಗತ್ತಿನಾದ್ಯಂತ ಸಿಗುತ್ತವೆ. 

          ಯುವರಾಜ್ ಕೂಡ ಈತನ ಬದುಕಿನ ಪುಟ ಸರಿಸುತ್ತಾ ಚಿಕಿತ್ಸೆಗೊಳಗಾಗಿದ್ದಾರೆ. ಭಾರತ ಕ್ರಿಕೆಟ್ ಆಡುವಾಗ ಯುವಿ ತಂಡದಲ್ಲಿದ್ದರೇ ತಂಡಕ್ಕೆ ಒಂದು ಬಲ, ಯುವರಾಜ್ ಬ್ಯಾಟು ಬೀಸುತ್ತಾ ಬಾಲನ್ನು ಬೌಂಡರಿಗಟ್ಟುವುದನ್ನು ನೋಡುವುದೇ ಚೆಂದ. ಎಂಥೆಂತಾ ಕಠಿಣ ಪಂದ್ಯಗಳಲ್ಲೂ ಭಾರತಕ್ಕೆ ಜಯವನ್ನು ದೊರಕಿಸಿಕೊಟ್ಟ ಯುವರಾಜ್ ಕ್ಯಾನ್ಸರನ್ನು ಕೂಡ ಗೆಲ್ಲಲಿ.ಯುವಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದಾಗಲೆಲ್ಲಾ ’ವಿ ವಾಂಟ್ ಸಿಕ್ಸರ್’ ಎಂದು ಕೂಗಿದ್ದೇವೆ. ಇಂದು ಅವರು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಹೊತ್ತಿನಲ್ಲೂ ನಮ್ಮದೊಂದು ಶುಭ ಹಾರೈಕೆಯಿರಲಿ. ’We Miss You Yuvraj, Get well soon

No comments yet

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.