Skip to content

ಬೊಗಳುವ ಶ್ವಾನವೂ, ಗಾಂಭೀರ್ಯದ ಗಜವೂ…!

January 27, 2012

           ಅವರು ವಿರೋಧಿಸುವುದಕ್ಕಾಗಿಯೇ ವಿರೋಧಿಸುತ್ತಾರಾ ಗೊತ್ತಿಲ್ಲ. ವಿರೋಧಕ್ಕೆ ಅರ್ಥವೇ ಇರುವುದಿಲ್ಲ. ಆದರೂ ವಿರೋಧಿಸುವುದೇ ತಮ್ಮ ಆಜನ್ಮ ಸಿದ್ದ ಹಕ್ಕು ಎಂಬಂತೆ ಅವರ ನಿಲುವುಗಳಿರುತ್ತವೆ. ಬಹುಶಃ ನೀವೆಲ್ಲಾ ಗಮನಿಸಿಯೇ ಇದ್ದೀರಿ, ಕಳೆದ ವಾರ ಒಂದು ಪತ್ರಿಕೆ ಇಡೀ ದೇಶ ವಿವೇಕಾನಂದರನ್ನು ಕೊಂಡಾಡುತ್ತಾ ಅವರಿಂದ ಸ್ಪೂರ್ತಿ ಪಡೆಯುತ್ತಿರುವ ಹೊತ್ತಿನಲ್ಲಿ ವಿವೇಕಾನಂದರ ಆರೋಗ್ಯ, ಆಹಾರ, ಜಾತಿ ಇತ್ಯಾದಿಗಳನ್ನು ಇಟ್ಟುಕೊಂಡು  ವ್ಯಂಗ್ಯಬರಿತ ಲೇಖನವನ್ನ ಪ್ರಕಟಿಸಿತು. ನಿರೀಕ್ಷೆಯಂತೆಯೇ ಸ್ವಾಮೀಜಿಯವರನ್ನು ಆದರ್ಶವಾಗಿ ಇಟ್ಟುಕೊಂಡ, ಅವರಿಂದ ಸ್ಪೂರ್ತಿ ಪಡೆದು, ಸನ್ಮಾರ್ಗದಲ್ಲಿ ನಡೆಯುವ ಸಂಕಲ್ಪ ತೊಟ್ಟವರಿಗೆ ನೋವಾಗಿದ್ದು ನಿಜ. ಆ ನೋವನ್ನು ಪ್ರತಿಭಟನೆಯ ಮೂಲಕ, ಸಂಪಾದಕರಿಗೆ ಮತ್ತು ಲೇಖಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನಗಳು ನಡೆದವು. ಸರಿ ಲೇಖಕರು ತಮ್ಮ ಲೇಖನಕ್ಕೆ ಬಂದ ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಿ, ಕೆಲ ಪದಪ್ರಯೋಗ ತೀಕ್ಷ್ಣವಾಗಿದ್ದಿರಬಹುದು ಎಂಬ ಸಮಜಾಯಿಷಿಯನ್ನೂ ಬರೆದರು. ಅಲ್ಲಿಗೆ ಅದು ಅಂತ್ಯವಾಗಬೇಕಿತ್ತು. ಇಲ್ಲ. ಅಷ್ಟು ನೆಪ ಸಾಕಿತ್ತು, ಪ್ರಗತಿಪರ ಮುಖವಾಡತೊಟ್ಟ ಕೆಲವರಿಗೆ. ಯಥಾಪ್ರಕಾರ ತಮ್ಮ ಪ್ರಗತಿಪರ ವೇಷತೊಟ್ಟು, ವಿವೇಕಾನಂದರನ್ನಾಗಲೀ, ಅಸಲಿಗೆ ಪತ್ರಿಕೆಯನ್ನೇ ಓದದವರನ್ನ ಒಂದೆಡೆ ಕಲೆಹಾಕಿ, ನಿರ್ಭೀತ ಪತ್ರಿಕೋದ್ಯಮವನ್ನು ಬೆಂಬಲಿಸುವ ಸೋಗಿನಲ್ಲಿ ಪ್ರತಿಭಟಿಸಲು ಸಜ್ಜಾದರು.

          ಅವರು ವಿವೇಕಾನಂದರ ಪರವಾಗಿ ನಿಂತರೇ ಅಥವಾ ಆ ಲೇಖನ ಪ್ರಕಟಿಸಿದ ಪತ್ರಿಕೆಯ ಪರ ವಕಾಲತ್ತಿಗೆ ಇಳಿದರೇ, ಒಂದೂ ತಿಳಿಯಲಿಲ್ಲ. ಘೋಷಣೆಗಳೆಲ್ಲವೂ ಅವೇ. ಸಂಘ ಪರಿವಾರ ವಿವೇಕಾನಂದರನ್ನ ಗರ್ಭಗುಡಿಯೊಳಗಿಟ್ಟಿದೆ, ತಾವೇ ಅವರ ವಾರಸುದಾರರೆಂಬಂತೆ ವಿಜೃಂಭಿಸುತ್ತಿದ್ದಾರೆ, ವಿವೇಕಾನಂದರು ಶೂದ್ರ ಸನ್ಯಾಸಿ, ಅವ ನಮ್ಮವ, ಅವರನ್ನು ಮನುವಾದಿಗಳ ಕಪಿಮುಷ್ಠಿಯಿಂದ ಬಿಡಿಸೋಣ ಎನ್ನುವ ಪೊಳ್ಳುವಾಕ್ಯಗಳು. ಅಷ್ಟೇ ಅಲ್ಲ, ಮುಂದುವರಿದು ಸಂಘ ಪರಿವಾರದವರು ಗಾಂಧಿ ಹಂತಕರು, ಗೋಡ್ಸೇ, ಮೋದಿ ವಾರಸುದಾರರು ಎಂಬ ಪ್ರಲಾಪ. ಸಿ.ಎಸ್ ದ್ವಾರಕನಾಥರನ್ನೋ, ಜಿ.ಕೆ ಗೋವಿಂದರಾಯರನ್ನೋ ವಿವೇಕಾನಂದರ ಬಗ್ಗೆ ಮಾತನಾಡಿ ಎಂದರೆ ವಿವೇಕರ ಬಗ್ಗೆ ಮಾತಿಗಿಂತ, ಸಂಘ ಪರಿವಾರವನ್ನು ಟಿಕೀಸುವುದಕ್ಕೇ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಇನ್ನು ಇವರುಗಳು ಹೇಳುವ ಹಾಗೆ ಪತ್ರಿಕಾಸ್ವಾತಂತ್ರ್ಯದ ಪರ ನಿಂತರು ಎಂದುಕೊಂಡರೆ, ಎರಡು ವರ್ಷದ ಹಿಂದೆ ಮತ್ತೊಂದು ಕೋಮಿನ ವಿಷಯವಾಗಿ ಪತ್ರಿಕೆಯೊಂದರಲ್ಲಿ ಲೇಖನ ಪ್ರಕಟವಾದಾಗ ಧಾಂದಲೆ, ಚೂರಿ ಇರಿತಗಳಾದವಲ್ಲ ಆಗ ಯಾಕೆ ಲೇಖಕರ ಪರ ನಿಂತು, ಪತ್ರಿಕಾಸ್ವಾತಂತ್ರ್ಯದ ಕಹಳೆ ಊದಲಿಲ್ಲ ಎಂದರೆ ಇವರಲ್ಲಿ ಉತ್ತರವಿರುವುದಿಲ್ಲ. ಮೊನ್ನೆ ಜೈಪುರದಲ್ಲಿ ನಡೆದ ಅಂತರಾಷ್ಟ್ರೀಯ ಸಾಹಿತ್ಯೋತ್ಸವಕ್ಕೆ ಸಲ್ಮಾನ್ ರಶ್ದೀ ಬರುವುದಕ್ಕೆ ಬಿಡದೆ ತಡೆದರಲ್ಲಾ, ಕನಿಷ್ಠ ಭಾಷಣದ ವಿಡಿಯೋ ಪ್ರಸಾರಕ್ಕೂ ಬಿಡಲಿಲ್ಲವಲ್ಲ ಅದರ ಬಗ್ಗೆ ನೀವುಗಳು ಚಕಾರವೆತ್ತಲಿಲ್ಲವಲ್ಲ ಎಂದು ಕೆಣಕಿದರೆ ಜಿ.ಕೆ.ಗೋ ಮುಖಗಂಟಿಕ್ಕಿಕೊಂಡು ಸುಮ್ಮನಾಗುತ್ತಾರೆ. ಇವರ ಆರ್ಭಟವೇನಿದ್ದರೂ ಹಿಂದೂ ಸಂಘಟನೆಗಳ ಮೇಲೆ. ಉದ್ದೇಶವಿಷ್ಟೇ, ಆರೆಸ್ಸೆಸ್ ಮತ್ತು ಪರಿವಾರವನ್ನು ಅವಕಾಶ ಸಿಕ್ಕಾಗಲೆಲ್ಲಾ ತೆಗಳಬೇಕು. ಮತ್ತು ಮಾಧ್ಯಮಗಳ ಮುಂದೆ ತಮ್ಮ ಜಾತ್ಯಾತೀತ ಪೋಷಾಕು ನವೀಕರಿಸಿಕೊಳ್ಳಬೇಕು.

          ಇದು ಹೊಸತೇನಲ್ಲ. ಸಂಘ ಪ್ರಾರಂಭವಾಗಿ ಸುಮಾರು 87 ವರ್ಷವಾಗುತ್ತಾ ಬಂತು. ಮೊದಲಿನಿಂದಲೂ ಸಂಘದ ಬಗ್ಗೆ ಚುಚ್ಚುಮಾತು, ಮೂದಲಿಕೆ ಇದ್ದದ್ದೆ. ಸಂಘವನ್ನು ವಿರೋಧಿಸುವವರಲ್ಲಿ ರಾಜಕೀಯ ಕಾರಣಗಳಿಗೆ ವಿರೋಧಿಸುವವರು ಒಂದೆಡೆಯಾದರೆ, ಹಳಸಿದ ಎಡಪಂಥೀಯ ಚಿಂತನೆಗಳ ಕೊಂಡಿಗಳಂತೆ ವರ್ತಿಸಿ, ಜಾತ್ಯಾತೀತವಾಧಿಗಳು ಎಂದು ಮೆರೆಯುವ ಮತ್ತೊಂದು ವರ್ಗ ಇನ್ನೊಂದೆಡೆ. ಕೆಲವು ಮಾಧ್ಯಮಗಳೂ ಈ ಪಟ್ಟಿಗೆ ಸೇರುವಂತಹವೇ. ಗಾಂಧೀ ಹತ್ಯೆಯಾದಾಗ ಆ ಆರೋಪವನ್ನು ಸಂಘದ ತಲೆಗೆ ಕಟ್ಟಲಾಯಿತು, ನಂತರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಂತೂ ಇಂದಿರಾಗಾಂಧಿ ಸಂಘದ ವಿರುದ್ದ ಹೆಡೆಮುರಿಕಟ್ಟಿದರು. ಅಯೋಧ್ಯಾ ವಿಷಯದಲ್ಲಿ, ಗುಜರಾತ್ ಗಲಭೆಗಳಲ್ಲಿ ಕೂಡ ಎಷ್ಟು ಸಾಧ್ಯವೋ ಅಷ್ಟು ಮಾಧ್ಯಮಗಳು ಸಂಘದ ಕಾಲೆಳೆದವು. ಇನ್ನು ಸಂಘದವರೆಂದರೆ ಮನುವಾದಿಗಳು, ಪುರೋಹಿತಶಾಹಿ ಮನಸ್ಥಿತಿಯವರು ಎಂದು ರಗಳೆತೆಗೆದದ್ದು ಲೆಕ್ಕಕ್ಕಿಲ್ಲ. ಸಂಘ ಏನೇ ಮಾಡಿದರೂ ಇವರ ಧಿಕ್ಕಾರದ ಧ್ವನಿ ಮೊಳಗುತ್ತದೆ.”ಹಿಂದೂಗಳೆಲ್ಲರೂ ಒಂದಾಗಿ, ಸಧೃಡ ಸಮಾಜ ಕಟ್ಟೊಣ’ ಎಂದರೆ ಇವರು ಸಂಘ, ಮುಸ್ಲಿಂ ವಿರೋಧಿ ಎಂದು ಬೊಬ್ಬೆ ಹೊಡೆಯುತ್ತಾರೆ. ಸಂಘ ಪ್ರಾರಂಭಿಸಿದ ರಾಷ್ಟ್ರೀಯ ಮುಸ್ಲಿಂ ಮಂಚ್ ನಲ್ಲಿ ಮುಸ್ಲಿಂರೇ ಸಂಘದೊಂದಿಗೆ ಬೆರೆತಿದ್ದಾರೆ. ಸಂಘದ ಸದೃಡ ಭಾರತ ನಿರ್ಮಾಣದ ಕಲ್ಪನೆಗೆ ಅವರೂ ಕೈ ಜೋಡಿಸಿದ್ದಾರೆ ಎಂಬುದು ನಮ್ಮ ಪ್ರಗತಿಪರ ಮುಖವಾಡ ತೊಟ್ಟವರಿಗೆ ಗೊತ್ತಿಲ್ಲವೇ?. “ಏನೇ ಹೇಳಿ, ಆರೆಸ್ಸೆಸ್ಸಿಗರ ಶಿಸ್ತು ಅಂದರೆ ಶಿಸ್ತು, ಅವರಂತೆ ನೆರೆ, ಬರ, ಭೂಕಂಪ ಇತ್ಯಾದಿ ಪ್ರಕೃತಿ ವಿಕೋಪಗಳಿಗೆ ಸ್ಪಂಧಿಸುವವರಿಲ್ಲ” ಎನ್ನುವವರೂ ಇವರಲ್ಲಿದ್ದಾರೆ. ಆದರೆ ಈ ಹೊಗಳಿಕೆ ಏನಿದ್ದರೂ ಪಿಸುಮಾತಿನಲ್ಲಿ. ಗಟ್ಟಿ ಧನಿಯ ಘೋಷಣೆಗಳೇನಿದ್ದರೂ ಅದು ಸಂಘದ ವಿರುದ್ದವೇ. ಯಾಕೆಂದರದು ಇವರ ಜಾತ್ಯಾತೀತ ಮತ್ತು ಬುದ್ದಿಜೀವಿಗಳೆಂಬ ಹಣೆಪಟ್ಟಿಯ ಅಸ್ತಿತ್ವದ ಪ್ರಶ್ನೆ.

         ವಿವೇಕಾನಂದರ ಬಗ್ಗೆ ಮಾತನಾಡುವವರಿಗೆ, ಕನ್ಯಾಕುಮಾರಿಯಲ್ಲಿ ಭವ್ಯ ವಿವೇಕಾನಂದರ ಮೂರ್ತಿ ಸ್ಥಾಪಿತವಾದ ಕತೆ ಗೊತ್ತಿಲ್ಲ. ಅದರಲ್ಲಿ ಏಕನಾಥ ರಾನಡೆಯವರ ಶ್ರಮ ಎಷ್ಟಿತ್ತು, ಆರೆಸ್ಸೆಸ್ ಪಾತ್ರ ಏನಿತ್ತು ಎಂಬ ಅರಿವಿಲ್ಲ. ಗೋಳ್ವಲ್ಕರರ ’ಬಂಚ್ ಆಫ್ ಥಾಟ್ಸ್’ ಪುಸ್ತಕ ಅರ್ಥವಾಗದವರಿಗೆ ಗೋಳ್ವಲ್ಕರರು ಕರ್ಮಠ ಕೋಮುವಾದಿಯಾಗೇ ಕಾಣುತ್ತಾರೆ. ಸಂಘದ ಬಗ್ಗೆ ಪೂರ್ವಾಗ್ರಹ ಇಟ್ಟುಕೊಂಡು ಅದನ್ನು ಹಳದಿಕಣ್ಣಿನಿಂದ ನೋಡುವವರಿಗೆ ಸಂಘ ಅಸ್ಪೃಶ್ಯತೆಯ ನಿವಾರಣೆಗೆ ಹೇಗೆ ಶ್ರಮಿಸುತ್ತಾ ಬಂದಿದೆ ಎಂಬುದು ಅರ್ಥವಾಗಲು ಹೇಗೆ ಸಾಧ್ಯ ಹೇಳಿ? ಆರೆಸ್ಸೆಸ್ಸಿನಲ್ಲಿ ವಿವಿಧ ಹುದ್ದೆಗಳಲ್ಲಿ ಜವಾಬ್ದಾರಿ ನಿರ್ವಹಿಸಿದ ರಮೇಶ ಪತಂಗೆಯವರ “Two Doctors to cure single disease” ಲೇಖನ ಓದಿದರೆ ಡಾ|| ಬಿ.ಆರ್ ಅಂಬೇಡ್ಕರ್ ರಂತೆಯೇ ಡಾ|| ಕೇಶವ ಬಲಿರಾಮ ಹೆಡೆಗೆವಾರರು ಅಸ್ಪೃಶ್ಯತೆ ನಿವಾರಿಸುವ ನಿಟ್ಟಿನಲ್ಲಿ ಶ್ರಮಿಸಿದ್ದು ತಿಳಿಯುತ್ತದೆ. ಇನ್ನೂ ಸವಿಸ್ತಾರದ ಓದಿಗೆ ಪತಂಗೆಯವರ “Manu, Sangh and I “ ಎಂಬ ಕೃತಿಯನ್ನಾದರೂ ತಿರುವಿಹಾಕಬಾರದೇ. ಬುದ್ದಿಜೀವಿಗಳೆನಿಸಿಕೊಂಡವರಿಗೆ ಪೂರ್ವಾಗ್ರಹ ಕಳಚುವ, ಸತ್ಯ ತಿಳಿಯುವ ಮನಸ್ಸಿರಬೇಕಷ್ಠೆ.

        ಸೀತಾರಾಮ ಗೋಯಲ್ ತಮ್ಮ Perversion of India’s Political Parlanceಎಂಬ ಪುಸ್ತಕದಲ್ಲಿ ಒಂದು ಘಟನೆಯನ್ನು ನೆನಪುಮಾಡಿಕೊಳ್ಳುತ್ತಾರೆ. ಗೋಯಲ್, ಜಯಪ್ರಕಾಶ ನಾರಯಣರೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರು. ಜೆ.ಪಿ ಸಮಾಜವಾದವನ್ನು ಪ್ರಚುರ ಪಡಿಸುತ್ತಾ, ನೊಂದ, ಅನ್ಯಾಯಕ್ಕೆ ಒಳಗಾದ ಜನರ ಪರ ಧ್ವನಿಯಾಗಿದ್ದವರು. ಆದರೆ ಅದೇಕೋ ಆರೆಸ್ಸೆಸ್ಸಿನ ಬಗ್ಗೆ ಜೆಪಿಯವರಿಗೆ ಕೂಡ ಮೊದಲು ಒಳ್ಳೆಯ ಅಭಿಪ್ರಾಯವಿರಲಿಲ್ಲ. ಒಮ್ಮೆ ಸಂಘದ ಪ್ರಚಾರಕರೊಬ್ಬರು ಗೋಯಲ್ ರ ಬಳಿ ಬಂದು ಜೆಪಿಯವರೊಮ್ಮೆ ಸಂಘದ ಶಿಬಿರಕ್ಕೆ ಬರುವಂತಾದರೆ ಒಳ್ಳೆಯದು ಎಂದು ವಿನಂತಿಸಿಕೊಂಡರಂತೆ. ಆದರೆ ಆ ವಿಷಯ ಪ್ರಸ್ತಾಪಿಸುತ್ತಲೇ ಜಯಪ್ರಕಾಶರು ಕೋಪಗೊಂಡು ಗೋಯಲ್ ರ ಮೇಲೆ ಕಿಡಿಕಾರಿದರಂತೆ. ’ ಜಯಪ್ರಾಕಾಶ್ ಜೀ, ನೀವು ಅಸ್ಪೃಶ್ಯತೆಯನ್ನು ವಿರೋಧಿಸುತ್ತೀರಿ, ಆ ಬಗ್ಗೆ ಹೋರಾಟ ಮಾಡುತ್ತೀರಿ. ಆದರೆ ಎಲ್ಲೋ ಒಂದು ಕಡೆ ಆರೆಸ್ಸೆಸ್ ನವರೂ ನಮ್ಮವರೆ, ಅವರನ್ನು ದೂರ ಇಡುವುದೂ ಅಸ್ಪೃಶ್ಯತೆ ಎನಿಸುವುದಿಲ್ಲವೆ. ನೀವು ಅವರ ಸಿದ್ದಾಂತ ಒಪ್ಪದಿದ್ದರೆ ಅಡ್ಡಿಯಿಲ್ಲ. ಒಮ್ಮೆ ಭೇಟಿ ನೀಡುವುದಕ್ಕೇನು? ’ ಎಂದು ಜೆಪಿಯವರನ್ನು ಮನವೊಲಿಸಿದ ಸೀತಾರಾಮ್ ಗೋಯಲ್, ಸಂಘದ ಶಿಬಿರಕ್ಕೆ ಜೆಪಿಯವರನ್ನ ಕರೆತರುತ್ತಾರೆ. ಶಿಬಿರದಲ್ಲಿ ಎಲ್ಲರೂ ಜಾತಿಗಳ ಹಂಗಿಲ್ಲದೆ, ಶಿಸ್ತಿನಿಂದ, ವಿವೇಕಯುತವಾಗಿ ನಡೆದುಕೊಂಡದ್ದು, ಅಲ್ಲಿನ ದೈಹಿಕ ವ್ಯಾಯಾಮಗಳು, ಸಾಮೂಹಿಕ ಪ್ರಾರ್ಥನೆ, ಶ್ಲೋಕಪಠಣ ಎಲ್ಲವನ್ನೂ ಗಮನಿಸಿದ ಜಯಪ್ರಕಾಶರು, ಆ ಭೇಟಿಯ ನಂತರ ಹೇಳಿದ್ದರಂತೆ “ ಇಷ್ಟು ದಿನ ಸಂಘದ ಬಗ್ಗೆ ತಪ್ಪುತಿಳಿದುಕೊಂಡಿದ್ದೆ, ನಮ್ಮ ಸಮಾಜವಾದಿ ಚಳುವಳಿಗಳಲ್ಲಿರುವವರಿಗಿಂತ ಹೆಚ್ಚು ವಿದ್ಯಾವಂತರು ಸಂಘದಲ್ಲಿದ್ದಾರೆ. ಅವರ ಶಿಸ್ತು, ಸಂಸ್ಕಾರಯುತ ನಡವಳಿಕೆ ಇಷ್ಟವಾಯಿತು, ಇಷ್ಟು ದಿನ ಪೂರ್ವಾಗ್ರಹ ಪೀಡಿತನಾಗಿದ್ದೆ ” ಎಂದು.

        ಆದರೆ ಭಾಷಣದುದ್ದಕ್ಕೂ ಜೆಪಿಯವರನ್ನು ಉದಾಹರಿಸುವ ನಮ್ಮ ಬುದ್ದಿಜೀವಿಗಳಿಗೆ, ಕನಿಷ್ಠ ಪಕ್ಷ ಸಂಘದ ಒಳಹೊಕ್ಕು ನೋಡುವ ವ್ಯವಧಾನ, ತಾಳ್ಮೆ, ಮುಖ್ಯವಾಗಿ ಉದಾರ ಮನಸ್ಸಿಲ್ಲ. ಇನ್ನು ರಾಜಕಾರಣಿಗಳು ಬಿಡಿ, ರಾಜಕೀಯವಾಗಿ ಅವರ ಬೇಳೆ ಬೇಯಿಸಿಕೊಳ್ಳಲು, ಮತ ಬ್ಯಾಂಕ್ ಹೆಚ್ಚಿಸಿಕೊಳ್ಳಲು ಸಂಘವನ್ನ ಬಯ್ಯಲೇಬೇಕು. ನಮ್ಮ ಮಾಜಿ ಪ್ರಧಾನಿಗಳು ಒಂದಿಲ್ಲೊಂದು ಕಾರಣಕ್ಕೆ ಸಂಘದ ಬಗ್ಗೆ ಅಪಸ್ವರ ಎತ್ತುವುದು ಅದೇ ಕಾರಣಕ್ಕೆ. ಮೊನ್ನೆ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿಯವರು, ಆರೆಸ್ಸೆಸ್ಸಿಗರು, ಕೋಮು ಭಾವನೆ ಕೆರಳಿಸಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹೊರಟಿದ್ದಾರೆ. ಆದ್ದರಿಂದಲೇ ಹುಬ್ಬಳ್ಳಿಯಲ್ಲಿ ಹಿಂದೂ ಶಕ್ತಿ ಸಂಗಮ ಆಯೋಜನೆಯಾಗಿದೆ. ಉಡುಪಿ ಸ್ವಾಮಿಗಳ ಆದೇಶದಂತೆ ಇವರುಗಳು ನಡೆದುಕೊಳ್ಳುತ್ತಾರೆ. ಸಮಾಜದ ಸಾಮರಸ್ಯ ಕದಡಲು ಉಡುಪಿಯ ಮಠದಿಂದಲೇ ಈ ಪ್ರಚೋದನೆ ಶುರುವಾಗುತ್ತಿದೆ ಎಂಬ ಅನುಮಾನವಿದೆ ಎಂದೆಲ್ಲಾ ಹೇಳುವುದನ್ನು ಕೇಳಿದ ಮೇಲೆ, ಪ್ರಗತಿಪರರ ಸಭೆಯಲ್ಲಿ ಖಾಲಿ ಕುರ್ಚಿಗಳೇ ಹೆಚ್ಚಿದ್ದವು ಮತ್ತು ಹಿಂದೂ ಶಕ್ತಿ ಸಂಗಮದಲ್ಲಿ ೨೫ ಸಾವಿರಕ್ಕೂ ಹೆಚ್ಚು ತರುಣರು ಪಾಲ್ಗೊಂಡರು ಎಂಬ ಸುದ್ದಿ ಓದಿದ ಮೇಲೆ. ವಚನದ ಒಂದು ಸಾಲು ನೆನಪಿಗೆ ಬಂತು. ’ಆನೆ ಬೀದೀಲಿ ಬರಲು, ಶ್ವಾನ ತಾ ಬೊಗಳುವುದು…’ ನಕ್ಕು ಸುಮ್ಮನಾದೆ

No comments yet

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.