Skip to content

ಮೋದಿ ಮೋಡಿ, ತ್ರಿಮೂರ್ತಿಗಳೇ ನೋಡಿ..!

January 19, 2012

          ಡಿಸೆಂಬರ್ ೩೦ ರಂದು ಹೊಸವರ್ಷಕ್ಕೆ ಶುಭಕೋರುತ್ತ ತಮ್ಮ ರಾಜ್ಯದ ಜನತೆಯನ್ನುದ್ದೇಶಿಸಿ ನರೇಂದ್ರ ಮೋದಿ ಒಂದು ಲೇಖನ ಬರೆದಿದ್ದರು. “ಸ್ನೇಹಿತರೆ, ಬಹುಶಃ 2011 ರಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದ ಪದ ಅಂದರೆ ಅದು ’ಪ್ರತಿಭಟನೆ’, ಪ್ರಪಂಚದ ಅನೇಕ ದೇಶಗಳಲ್ಲಿ ಪ್ರಜೆಗಳು ವ್ಯವಸ್ಥೆಯ ವಿರುದ್ದ, ಆಡಳಿತದ ವಿರುದ್ದ, ಭ್ರಷ್ಠಾಚಾರದ ವಿರುದ್ದ, ಅಮಾನವೀಯತೆಯ ವಿರುದ್ದ ತಮ್ಮ ಧ್ವನಿಯೆತ್ತಿದರು. ಪ್ರತಿಭಟಿಸಿದರು, ಆಳುವವರಿಗೆ ಧಿಕ್ಕಾರ ಕೂಗಿದರು. ಭಾರತದಲ್ಲೂ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ಇಡೀ ದೇಶ, ಸಮಸ್ತ ಯುವ ಸಮೂಹ ಒಟ್ಟಾಗಿ ಭ್ರಷ್ಠಾಚಾರದ ವಿರುದ್ದ ಧ್ವನಿಯೆತ್ತಿತು. ದುಭಾರಿ ಆಹಾರ ಪದಾರ್ಥಗಳು, ಹೆಚ್ಚುತ್ತಿರುವ ಬಡವ ಧನಿಕನ ನಡುವಿನ ಅಂತರ, ಭ್ರಷ್ಠ ಆಡಳಿತ, ಭಯೋತ್ಪಾದನೆ ಎಲ್ಲವುಗಳಿಂದ ಮಡುಗಟ್ಟಿದ್ದ ಆಕ್ರೋಶ ಒಮ್ಮೆಲೇ ಪ್ರಕಟಗೊಂಡಿತು. ಹೆಚ್ಚಾಗಿ ಯುವ ಸಮೂಹ ಬೀದಿಗಿಳಿದು ಪ್ರತಿಭಟಿಸಿದರು. ಆದರೆ ಮೆಚ್ಚಾಬೇಕಾದ ಅಂಶವೆಂದರೆ ಯುವ ಸಮೂಹ ಅಹಿಂಸಾತ್ಮಕ ಪ್ರತಿಭಟನೆಯನ್ನೇ ಆಯ್ದುಕೊಂಡಿತು.

           ಅದು ಸ್ವಾತಂತ್ರ್ಯ ಹೋರಾಟವಿರಲಿ, ನಂತರದ ಗುಜರಾತಿನ ನವನಿರ್ಮಾಣ ಚಳುವಳಿ, ತುರ್ತು ಪರಿಸ್ಥಿತಿ ಎಲ್ಲಾ ವಿಷಯದಲ್ಲೂ ನಾವು ಪಾಲಿಸಿದ್ದು ಅಹಿಂಸೆಯನ್ನೇ ಅಲ್ಲವೇ. ಈ ಎಲ್ಲ ಆಕ್ರೋಶ, ದುರಾಡಳಿತದ ನಡುವೆಯೂ ನಮಗೆ ಒಂದು ಆಶಾಭಾವವಿರಬೇಕಾದ ಅಗತ್ಯವಿದೆ. ಅವಕಾಶಗಳನ್ನು ಹುಡುಕಬೇಕಿದೆ. ನಾನು ಇತ್ತೀಚೆಗೆ ಚೀನಾ ಪ್ರವಾಸಕ್ಕೆ ಹೋದಾಗ ಈ ವಿಷಯ ಪ್ರಸ್ತಾಪಿಸಿದ್ದೆ. ಅನೇಕ ದೇಶಗಳಲ್ಲಿ ಆರ್ಥಿಕತೆಯ ಅಲ್ಲೋಲಕಲ್ಲೋಲ ಪರಿಸ್ಥಿತಿಯಿರುವಾಗ ಏಷಿಯಾ ಹೇಗೇ ಪ್ರಪಂಚಕ್ಕೆ ಆಶಾಕಿರಣದಂತೆ ಅಭಿವೃದ್ದಿ ಸಾಧಿಸುತ್ತಾ ಬೆಳವಣಿಯ ಯಂತ್ರದಂತೆ ಕಾರ್ಯನಿರ್ವಹಿಸುತ್ತಿದೆ ಎಂದು. ಪಾಶ್ಚಾತ್ಯ ದೇಶಗಳು ಆರ್ಥಿಕ ಸಂಕಷ್ಠದಲ್ಲಿ ನಲುಗುತ್ತಿರುವ ಈ ಸಂಧರ್ಭ ಭಾರತಕ್ಕೆ ನಿಜಕ್ಕೂ ತಾನು ಮತ್ತಷ್ಠು ಬೆಳೆಯಲು, ಹೆಮ್ಮರವಾಗಿ ಹರಡಿಕೊಳ್ಳಲು, ಅಭಿವೃದ್ದಿ ಯಂತ್ರದ ವೇಗ ಹೆಚ್ಚಿಸಲು ಸಕಾಲ. ಸಾಮೂಹಿಕವಾಗಿ ನಾವು ಒಟ್ಟುಗೂಡಬೇಕಿರುವುದು ಕೇವಲ ಪ್ರತಿಭಟನೆಗಲ್ಲ. ಎಲ್ಲರೂ ಒಟ್ಟಾಗಿ ಸೇರೋಣ, ಎಲ್ಲರೂ ಒಟ್ಟಾಗಿ ಅಭಿವೃದ್ದಿಯತ್ತ ಹೆಜ್ಜೆಹಾಕೋಣ. ಕೇವಲ ಜನಶಕ್ತಿಯೊಂದೇ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಒಳ್ಳೆಯ ಆಡಳಿತವೂ ಜನಶಕ್ತಿಯೊಂದಿಗೆ ಕೈ ಜೋಡಿಸಿದಾಗ ದೇಶ ಪ್ರಗತಿಯತ್ತ ಸಾಗುತ್ತದೆ. ಗುಜರಾತಿನಲ್ಲಿ ಒಳ್ಳೆಯ ಆಡಳಿತ, ಪ್ರಗತಿಯ ಚಿಂತನೆ ಮತ್ತು ಸಾಮರಸ್ಯ, ಆರು ಕೋಟಿ ಗುಜರಾತಿಗರ ಶಕ್ತಿಯನ್ನು ಹಿಗ್ಗಿಸಿದೆ. ಅದು 2012 ರಲ್ಲಿ ನಿರಂತರವಾಗಿ ಮುಂದುವರಿಯಲಿ ಎನ್ನುವ ಆಶಯ ನನ್ನದು”. ಹೀಗೆ ಸಾಗುತ್ತದೆ ಭಾರತದ ಅತ್ಯಂತ ಜನಪ್ರಿಯ ಮತ್ತು ಆದರ್ಶ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಲೇಖನ.

            ಹೀಗೆ ಮೋದಿ ಹೊಸವರ್ಷದ ಹೊಸ್ತಿಲಲ್ಲಿ ಹೊಸ ಚಿಂತನೆಗಳನ್ನ ತನ್ನ ಜನಕ್ಕೆ ಕೊಡುತ್ತಾ, ರಾಜ್ಯದ, ದೇಶದ ಮುಂದಿರುವ ಸವಾಲು, ಆರ್ಥಿಕ ಪ್ರಗತಿಯ ಅವಕಾಶಗಳ ಬಗ್ಗೆ ಮಾತನಾಡುತ್ತಿದ್ದರೆ ನಮ್ಮ ಕರ್ನಾಟಕದಲ್ಲಿ ಸಂಕ್ರಾಂತಿಯ ಗಡುವು, ಅವರು ನನ್ನನ್ನು ಜೈಲಿಗೆ ಕಳುಹಿಸಿದರು, ಇವರು ಪಕ್ಷ ಒಡೆಯುವ ಸಂಚು ಮಾಡುತ್ತಿದ್ದಾರೆ. ಅವರಿಬ್ಬರ ನಡುವಿನ ಮನಸ್ತಾಪ ಶೀಘ್ರವೇ ಬಗೆಹರಿಸುತ್ತೇವೆ ಎಂಬ ಸಣ್ಣತನದ ಮಾತುಗಳನ್ನು ನಮ್ಮ ನಾಯಕರುಗಳು ಆಡುತ್ತಿದ್ದರು. ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ, ಸದಾನಂದ ಗೌಡರಿಂದ ಮೋದಿಯವರ ಪ್ರಬುದ್ದ ಮಾತುಗಳನ್ನ ನಿರೀಕ್ಷಿಸಲು ಸಾಧ್ಯವೇ? ಸಿಟ್ಟು, ಸೆಡವು, ಆರೋಪ-ಪ್ರತ್ಯಾರೋಪ ಇವೆಲ್ಲದರ ಹೊರತಾಗಿ ಪ್ರಗತಿಯ ಚಿಂತನೆ, ವಿವೇಕದ ನಡೆ, ಸ್ಪೂರ್ತಿದಾಯಕ ಮಾತು ಇವರುಗಳಿಂದ ಆಪೇಕ್ಷಿಸುವುದು ಮೂರ್ಖತನವಾದೀತೇನೋ.

         ಒಮ್ಮೆ ಇವರುಗಳು ಮೋದಿ ಇಟ್ಟ ಹೆಚ್ಚೆಗಳತ್ತ ನೋಡಬೇಕು. ಯಾವುದೇ ರಾಜಕೀಯದ ಅನುಭವವಿಲ್ಲದ ಕುಟುಂಬದಿಂದ, ಪದವೀಧರರೂ ಯಾರೊಬ್ಬರಿಲ್ಲದ ಮನೆಯಿಂದ ಬಂದ ನರೇಂದ್ರ ಮೋದಿ, ರಾಷ್ಟ್ರ‍ೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದವರು. ನಂತರ ಭಾಜಪದ ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡರು. ಮೋದಿಯವರ ನಿಷ್ಠೇ, ಘನಾತ್ಮಕ ಚಿಂತನೆ, ನಾಯಕತ್ವ ಗುಣ ವಾಜಪೇಯಿಯವರ ಗಮನಕ್ಕೆ ಬಿತ್ತು. ಅದು ಅವರನ್ನು ದೆಹಲಿಯಿಂದ ಗುಜರಾತಿನೆಡೆಗೆ ಕೊಂಡೊಯ್ದಿತು. ಗುಜರಾತಿನ ಬಗ್ಗೆ ಅಷ್ಟೇನೂ ಮಾಹಿತಿಯಿರದ ಮೋದಿ, ಮುಖ್ಯಮಂತ್ರಿಯೂ ಆದರೂ, ಬೆನ್ನಲ್ಲೇ ಗೋಧ್ರಾದ ಮನಕಲಕುವ ಸನ್ನಿವೇಷ ಸೃಷ್ಠಿಯಾಯಿತು. ಅದೇ ವಿಷಯವನ್ನಿಟ್ಟುಕೊಂಡು ಎಡಪಂಥೀಯ ಹಿನ್ನಲೆಯ ಇಂಗ್ಲೀಷ್ ಮಾಧ್ಯಮಗಳು ಮೋದಿಯವರ ಮುಖಕ್ಕೆ ಮಸಿ ಬಳಿಯಲು ಪ್ರಯತ್ನಿಸಿದವು. ಮೋದಿ ಅದರ ಬಗ್ಗೆ ಗಮನವನ್ನೂ ಕೊಡಲಿಲ್ಲ. ನಾನು ಏನೆಂಬುದನ್ನು ನನ್ನ ಕೆಲಸಗಳ ಮೂಲಕ ಮಾಡಿತೋರಿಸುತ್ತೇನೆ ಎಂದು ಹೆಚ್ಚು ಮಾತಿಲ್ಲದೆ ಕೃತಿಯಲ್ಲಿ ಮಾಡಿತೋರಿಸುವ ಸಂಕಲ್ಪ ಮಾಡಿದರು. ಆದರೂ ಕಾಂಗ್ರೇಸ್ ಕೃಪಾಪೋಷಿತ ಮಾಧ್ಯಮಗಳು ಬೊಬ್ಬಿರಿಯುತ್ತಲೇ ಇದ್ದವು. ಆದರೆ ಮೋದಿಯವರ ನಡೆ ನುಡಿಗಳಲ್ಲಿ, ಕನಸಿನಲ್ಲಿ ಇದ್ದದ್ದು ಒಂದೇ, ಗುಜರಾತಿನ ಅಭಿವೃದ್ದಿ. ತನ್ಮೂಲಕ ಭಾರತದ ಅಭಿವೃದ್ದಿಗೆ ಕೊಡುಗೆ.

          ವರ್ಷಗಳು ಉರುಳುವಷ್ಟರಲ್ಲಿ ಹದಗೆಟ್ಟ ರಸ್ತೆಗಳು ದುರಸ್ಥಿಗೊಂಡವು, ಕುಡಿಯುವ ನೀರಿಗೆ, ವಿದ್ಯುತ್ ಅಭಾವಕ್ಕೆ ನಾನಾ ಯೋಜನೆಗಳು ತಯಾರಾದವು. ಆಡಳಿತದಲ್ಲಿದ್ದ ಆಲಸ್ಯ ತೊಲಗಿತು. ಮುಖ್ಯಮಂತ್ರಿಯೊಬ್ಬರು ಚುರುಕಾಗಿ ಕೆಲಸ ಮಾಡುವಾಗ ಅಧಿಕಾರಿಗಳೂ ಆ ಚುರುಕಿಗೆ ತಮ್ಮನ್ನು ಒಡ್ಡಿಕೊಂಡರು. ಎಲ್ಲಾ ಯೋಜನೆಗಳು ತ್ವರಿತವಾಗಿ ಅನುಷ್ಠಾನಕ್ಕೆ ಬಂದವು. ಕೃಷಿ, ಆರೋಗ್ಯ, ಶಿಕ್ಷಣ ಎಲ್ಲ ರಂಗದಲ್ಲೂ ಅಭಿವೃದ್ದಿಯ ದಾಪುಗಾಲು. ಆರೋಪ ಮಾಡುತ್ತಿರುವವರು ಮಾಡುತ್ತಿರಲಿ, ನೀವು ಕೆಲಸ ಮಾಡಿ ಜನ ನಿಮ್ಮೊಂದಿಗಿರುತ್ತಾರೆ ಎಂಬ ಸಂದೇಶ ತಮ್ಮ ಸಹೋದ್ಯೋಗಿಗಳಿಗೆ ನೀಡಿದರು. ತಮ್ಮ ತಮ್ಮ ಖಾತೆಗಳಲ್ಲಿ ಪ್ರಗತಿ ತೋರಲು ಎಲ್ಲಾ ಸಚಿವರುಗಳು ಸ್ಪರ್ಧೆಗೆ ಬಿದ್ದರು.

           ಗುಜಾರಾತಿನಲ್ಲಿ ಕೃಷಿಯಿಂದ ಬರುತ್ತಿದ್ದ ಆದಾಯ ಕೇವಲ 9 ಸಾವಿರ ಕೋಟಿಯಷ್ಟಿತ್ತು. ನಾಲ್ಕುವರ್ಷದಲ್ಲಿ ಅದು 34  ಸಾವಿರಕೋಟಿಗೆ ಮುಟ್ಟಿತು. ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ಶಿಕ್ಷಣ ಖಾತೆಯ ಕಾರ್ಯದರ್ಶಿ ಗುಜರಾತ್ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವಲ್ಲಿ ಹಿಂದೆ ಬಿದ್ದಿದೆ. ಶಾಲೆಯಿಂದ ಹೊರ ಉಳಿದವರು ಶೇಕಡ 49 ರಷ್ಟಿದ್ದಾರೆ ಎಂದಾಗ ಸ್ವತಃ ಮೋದಿಯವರೊಂದಿಗೆ ಸುಮಾರು 700 ಅಧಿಕಾರಿಗಳು ಹಿಂದುಳಿದ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಮಾಡಿದರು. ಇವತ್ತು ಅದು ಶೇಕಡ 3ಕ್ಕೆ ಇಳಿದಿದೆ. ಎಂತಹ ಬದಲಾವಣೆ! ಇನ್ನು ಕೈಗಾರಿಕಾ ಕ್ಷೇತ್ರದಲ್ಲಿ ಗುಜರಾತ್ ಸಾಧಿಸಿದ ಪ್ರಗತಿ ಅಮೋಘ. ಚೆನ್ನೈ ಭಾರತದ ’ಆಟೋ ಹಬ್’ ಆಗಿತ್ತು. ಎಲ್ಲ ವಾಹನ ತಯಾರಕ ಕಂಪನಿಗಳು ಚೆನ್ನೈನಲ್ಲಿದ್ದವು. ಇದೀಗ ಎಲ್ಲ ಗುಜರಾತಿನೆಡೆಗೆ ಮುಖ ಮಾಡಿವೆ. ಟಾಟಾ ಸಮೂಹ ಸಂಸ್ಥೆಯ ಮುಖ್ಯಸ್ಥ ರತನ್ ಟಾಟ ’ಗುಜರಾತಿನಲ್ಲಿ ಯಾವ ಉದ್ಯಮಿಗಳು ತಮ್ಮ ಕಂಪನಿ ತೆರೆದಿಲ್ಲವೋ ಅವರು ಮೂರ್ಖರು’ ಎನ್ನುವಷ್ಟರ ಮಟ್ಟಿಗೆ ಗುಜರಾತ್ ಎಲ್ಲ ಸೌಲಭ್ಯಗಳನ್ನು ನೀಡಿ ಉದ್ದಿಮೆದಾರರನ್ನ ಸೆಳೆಯುತ್ತಿದೆ. ವಿದೇಶದಲ್ಲಿ ಮ್ಯಾನೇಜ್ ಮೆಂಟ್ ಪದವಿ ಪಡೆದ ನಾನು ರಿಲಯನ್ಸ್ ನಡೆಸುವುದಕ್ಕಿಂತ ಚೆನ್ನಾಗಿ ಮೋದಿ ಗುಜರಾತನ್ನು ಮುನ್ನಡೆಸುತ್ತಿದ್ದಾರೆ ಎಂದು ಮುಖೇಶ್ ಅಂಭಾನಿ ಹೇಳಿದ್ದು ಅದೇ ಕಾರಣಕ್ಕಾಗಿ.

          ಎಷ್ಟೋ ಹಳ್ಳಿಗಳಲ್ಲಿ ವಿದ್ಯುತ್ ಸೌಲಭ್ಯವಿರದಿದ್ದ ಗುಜರಾತ್, ಇಂದು ತನ್ನ ಎಲ್ಲ ಊರುಗಳಿಗೂ ಸರಾಸರಿ 18 ಘಂಟೆ ತ್ರಿಫೇಸ್ ವಿದ್ಯುತ್ ನೀಡಿ, ಇತರ ರಾಜ್ಯಗಳಿಗೂ ಸಾಲ ಕೊಡುವಷ್ಟು ವಿದ್ಯುತ್ ಉತ್ಪಾದಿಸುತ್ತಿದೆ. ಆಂತರಿಕ ಭದ್ರತಾ ಸಂಸ್ಥೆ ಸಿ.ಆರ್.ಪಿ.ಎಫ್ ನ ನಿವೃತ್ತ ಅಧಿಕಾರಿ ಆರ್.ಕೆ ಓಹ್ರಿ ಹೇಳುವಂತೆ ಭಾರತದಲ್ಲಿ ಯಾವುದಾದರೂ ರಾಜ್ಯದಲ್ಲಿ ”ಜೀರೋ ಟಾಲರೆನ್ಸ್ ಆಫ್ ಟೆರರಿಸಮ್’ ಇರುವುದಿದ್ದರೆ ಅದು ಗುಜರಾತಿನಲ್ಲಿ. ಭಾರತದ ಜಿಡಿಪಿಯಲ್ಲಿ ಗುಜಾರತಿನದೇ ಮೂರನೇ ಒಂದು ಭಾಗದಷ್ಠಿದೆ. ಮೊದಲೆಲ್ಲಾ ಭಾರತದ ಸಿಕ್ಯುಲರ್ ಮಾಧ್ಯಮದ ಸುದ್ದಿಯನ್ನೇ ಪ್ರಸಾರ ಮಾಡುತ್ತಿದ್ದ ವಿದೇಶದ ಮಾಧ್ಯಮಗಳು ಮೋದಿ ಮಾಡಿದ ಅಭಿವೃದ್ದಿಯನ್ನು ಕಂಡು ದಂಗಾಗಿವೆ. ಎಲ್ಲ ರಾಜ್ಯಗಳ ಅಧಿಕಾರಿ ನಿಯೋಗ ಗುಜರಾತಿಗೆ ಭೇಟಿ ನೀಡಿ ಅಲ್ಲಿನ ಪ್ರಗತಿಯನ್ನು ಅಭ್ಯಸಿಸುವುದಕ್ಕೆ ಮುಂದಾಗುತ್ತಿವೆ. ಸಿ ಎಂ ಎಂಬುದು ಚೀಫ್ ಮಿನಿಸ್ಟರ್ ಅಲ್ಲ ಕಾಮನ್ ಮ್ಯಾನ್ ಎಂದು ತೋರಿಸಿಕೊಟ್ಟವರು ಮೋದಿ. ಎಲ್ಲ ಮುಖ್ಯಮಂತ್ರಿಗಳಿಗೆ ಮೋದಿ ಇಂದು ರೋಲ್ ಮಾಡೆಲ್ ಆಗಿದ್ದಾರೆ.

         ಆದರೆ ನಮ್ಮಲ್ಲೇನಾಗುತ್ತಿದೆ? ಇತರ ಪಕ್ಷಗಳ ಆಡಳಿತದಿಂದ ಬೇಸತ್ತು ಭಾಜಪಕ್ಕೆ ಅಧಿಕಾರ ನೀಡಿದ ಅವಕಾಶವನ್ನು ಇಲ್ಲಿನ ನಾಯಕರೇಕೆ ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ. ತಮ್ಮದೇ ಪಕ್ಷದ ಮೋದಿಯವರಿಗಿಂತ ಬೇರೆ ರೋಲ್ ಮಾಡೆಲ್ ಬೇಕಾ? ಮೂರೂವರೇ ವರ್ಷದಲ್ಲಿ ಕೆಲವು ಒಳ್ಳೆಯ ಯೋಜನೆಗಳು ಜಾರಿಯಾಗಿವೆ ನಿಜ. ಆದರೆ ಅದೆಲ್ಲವನ್ನೂ ರೆಸಾರ್ಟ್ ರಾಜಕೀಯ, ಮುನಿಸು, ಬೈದಾಟ, ಭ್ರಷ್ಠಾಚಾರದ ಆರೋಪ ತೊಳೆದುಹಾಕಿದೆ. ನರೇಂದ್ರ ಮೋದಿ, ಈಶ್ವರಪ್ಪ, ಸದಾನಂದಗೌಡ, ಯಡಿಯೂರಪ್ಪ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ಯಾಕೆ ತೂಗಿ ನೋಡಬೇಕೆಂದರೆ ಇವರೆಲ್ಲ ಬೇರೆ ಬೇರೆ ಮೂಲಗಳಿಂದ ಬೆಳೆದು ಬಂದ ನಾಯಕರೇನೂ ಅಲ್ಲ. ಇವರೆಲ್ಲ ಒಂದೇ ಮರದ ಬೇರೆ ಬೇರೆ ಕೊಂಬೆಗಳು. ಇವರೆಲ್ಲರ ಬೇರುಗಳು ಒಂದೇ. ಹೀರಿದ ಸಾರ-ಸತ್ವ ದಲ್ಲೂ ವ್ಯತ್ಯಾಸವಿಲ್ಲ. ಎಲ್ಲರೂ ಭಾರತೀಯ ಜನತಾ ಪಕ್ಷದ ನಾಯಕರೇ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳಲ್ಲಿ ನಾಯಕತ್ವದ ಗುಣಗಳನ್ನು ಕಲಿತವರೇ. ಹಾಗೇ ನೋಡಿದರೆ ನರೇಂದ್ರ ಮೋದಿಯವರಿಗಿಂತ ಹೆಚ್ಚು ರಾಜಕೀಯ ಅನುಭವ ಹೊಂದಿರುವವರು ನಮ್ಮ ರಾಜ್ಯದ ಈ ತ್ರಿಮೂರ್ತಿಗಳು. ವಿದ್ಯಾರ್ಥಿ ಪರಿಷತ್ತು, ಪುರಸಭೆ, ಪಕ್ಷದ ನಗರ ಘಟಕ, ಪಂಚಾಯಿತಿ ಹೀಗೆ ಹಂತಹಂತವಾಗಿ ಬೆಳೆದೆವರು ಇವರು. ಮೋದಿ ರಾಜಕಾರಣಿಯಾಗಿ ಹೀಗೆ ಹಂತಹಂತವಾಗಿ ಅನುಭವ ಗಳಿಸಿಕೊಂಡವರಲ್ಲ. ಆದರೂ ಯಡಿಯೂರಪ್ಪನವರ ನಡೆಯನ್ನು ಗಮನಿಸಿದರೆ, ಈಶ್ವರಪ್ಪ ಬಳಸುವ ಪದಗಳು ಕಿವಿಗೆ ಬಿದ್ದರೆ ನಿಜಕ್ಕೂ ಈ ಎಲ್ಲ ಹಂತಗಳನ್ನು ದಾಟಿ ಬೆಳೆದ ರಾಜಕಾರಣಿಗಳಾದರೂ ಮಾತಿನಲ್ಲಿ, ಚಿಂತನೆಯಲ್ಲಿ, ನಡವಳಿಕೆಯಲ್ಲಿ ಪಕ್ವತೆ ಬಂದಿಲ್ಲವಲ್ಲ ಎಂದು ಬೇಸರವಾಗುವುದು ಸತ್ಯ. ಕಳೆದವಾರ ’ಸಂಘ’ ಕಿವಿಹಿಂಡಿದ ಮೇಲೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ, ಪಕ್ಷಕಟ್ಟುವ ಮಾತನಾಡುತ್ತಿದ್ದಾರೆ. ನಾವು ಒಗ್ಗಾಟ್ಟಾಗಿದ್ದೇವೆ ಎಂಬುದು ಕೇವಲ ಕ್ಲಿಷೆಯಾಗಬಾರದು. ಉಳಿದಿರುವುದು ಕೇವಲ ಒಂದೂ ಚಿಲ್ಲರೆ ವರ್ಷ. ಮಾತು, ಚಿಂತನೆ, ಕೃತಿ ಎಲ್ಲವೂ ಕರ್ನಾಟಕದ ಪ್ರಗತಿಯೆಡೆಗಿದ್ದರೆ, ನಡವಳಿಕೆಯಲ್ಲಿ ಸಭ್ಯತನವಿದ್ದರೆ ಜನಮಾನಸದಲ್ಲಿ ಉಳಿಯುತ್ತಾರೆ. ಇಲ್ಲದಿದ್ದರೂ ನೆನಪಿನಲ್ಲಿರುತ್ತಾರೆ ಕೆಟ್ಟಕಾರಣಗಳಿಗೆ!

No comments yet

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.