ಪ್ರತೀ ಯುವಮನದಲ್ಲೂ ಮೂಡಲಿ ’ವಿವೇಕ’..!
ಆಕೆ ಬರೆದಿದ್ದನ್ನು ಓದಿದಾಗ ಕೊಂಚ ಹೊಟ್ಟೆಕಿಚ್ಚೆನಿಸಿದ್ದು ನಿಜ. ಅರೆರೆ ಎಂತಹ ಪುಣ್ಯವಂತೆ ಈಕೆ ಎಂದು ಕರುಬಿದ್ದು ಸತ್ಯ. ಎಷ್ಟು ಜನರಿಗೆ ತಾನೇ ಅಂತಹ ಅವಕಾಶ ಸಿಗಲು ಸಾಧ್ಯ ಹೇಳಿ? ನಮ್ಮ ನಡುವಿನ ಯಾರೋ ಸಜ್ಜನರು, ಆದರ್ಶವಾಗಿ ಬದುಕಿದವರು, ಬದುಕಿನಲ್ಲಿ ಮೌಲ್ಯವನ್ನು ಕಾಪಿಟ್ಟುಕೊಂಡವರು, ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದವರು, ವೇದ ಉಪನಿಷತ್ತುಗಳಲ್ಲಿ ಪಾಂಡಿತ್ಯಗಳಿಸಿಕೊಂಡವರು ಸಿಕ್ಕರೆ ಸಾಕು, ಅವರೊಂದಿಗೆ ಒಂದಿಷ್ಟು ಮಾತು, ಕೆಲಗಂಟೆಗಳ ಒಡನಾಟ, ಪ್ರೀತಿಯ ಹಸ್ತಲಾಘವ ದೊರಕಿದರೆ ಪುಣ್ಯ ಎಂದು ಅನಿಸುತ್ತಿರುತ್ತದೆ. ಅಂತವರು ಬೆನ್ನುತಟ್ಟಿ ಪ್ರೋತ್ಸಾಹಿಸಿದರಂತೂ ನಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ ಅಂತದ್ದರಲ್ಲಿ ಅಂತಹ ಮಹಾಮೇಧಾವಿ, ಜಗತ್ತಿಗೇ ಭಾರತದ ಹಿರಿಮೆ ಸಾರಿದ ಸತ್ಪುರುಷನ ಜೊತೆ ಒಡನಾಟ ದೊರಕಿತು, ಅವರೊಂದಿಗೆ ಕೆಲವು ದಿನ ಒಟ್ಟಿಗೇ ಇರಲು, ವಾರವಿಡೀ ಅವರ ದಿವ್ಯವಾಣಿಗೆ ಕಿವಿಯಾಗಲು ಅವಕಾಶ ಸಿಕ್ಕಿತು ಎಂದು ಸಾರಾ ಎಲೆನ್ ವಾಲ್ಡೋ ಬರೆದಿದ್ದನ್ನು ಓದಿದರೆ ಯಾರಿಗೆ ತಾನೇ ಈರ್ಷೆಯಾಗುವುದಿಲ್ಲ.
ಸಾರಾ ಎಲೆನ್ ವಾಲ್ಡೋ ವಿವೇಕಾನಂದರ ಪ್ರಖರ ಪಾಂಡಿತ್ಯಕ್ಕೆ, ವಾಕ್ಚಾತುರ್ಯಕ್ಕೆ ಮನಸೋತು ಅವರ ಶಿಷ್ಯೆಯಾದವರು. ಸಾರಾ, ವಿವೇಕಾನಂದರ ಶಿಷ್ಯೆಯಾದ ಮೇಲೆ ’ಹರಿದಾಸಿ’ಯಾಗಿ ಬದಲಾದರು. ವಿವೇಕಾನಂದರೇ ಅವರಿಗೆ ಈ ಹೆಸರನ್ನು ಸೂಚಿಸಿದ್ದಂತೆ. ಸ್ವಾಮಿ ವಿವೇಕಾನಂದರು ಅಮೇರಿಕೆಗೆ ಬಂದು ಇಲ್ಲಿನ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾರತವನ್ನ, ತನ್ಮೂಲಕ ಹಿಂದೂಧರ್ಮವನ್ನ ಪ್ರತಿನಿಧಿಸಿ, ಜನಮನ್ನಣೆಗಳಿಸಿ ತಮ್ಮ ವಿಚಾರಧಾರೆಯನ್ನು ಅಮೆರಿಕದಾದ್ಯಂತ ಪ್ರಚುರ ಪಡಿಸಲು ಹೊರಟಾಗ ಅನೇಕ ಅಮೆರಿಕನ್ನರು ವಿವೇಕಾನಂದರ ಶಿಷ್ಯವೃತ್ತಿ ಸ್ವೀಕರಿಸಿ ವೇದಾಂತದ ಅಭ್ಯಾಸಿಗಳಾದರು. ಹಾಗೆ ವಿವೇಕಾನಂದರ ಆಪ್ತ ಬಳಗಕ್ಕೆ ಬಂದ ಮೊದಲ 8 ಜನರಲ್ಲಿ ಸಾರಾ ಎಲೆನ್ ವಾಲ್ಡೋ ಕೂಡ ಒಬ್ಬರು.
ಹೀಗೆ ವಿವೇಕಾನಂದರೊಂದಿಗೆ ಆತ್ಮೀಯ ಒಡನಾಟವಿಟ್ಟುಕೊಂಡ ವಾಲ್ಡೋ ಅಮೆರಿಕದಲ್ಲಿ ವಿವೇಕಾನಂದರ ಪ್ರವಾಸ, ಅಲ್ಲಿ ಅವರು ಗಳಿಸಿಕೊಂಡ ಮನ್ನಣೆ, ಎದುರಿಸಿದ ಸವಾಲುಗಳು, ಅವರ ಅಮೆರಿಕೆಯ ದಿನಚರಿ ಎಲ್ಲವನ್ನೂ ಹೆಚ್ಚು ಪರಿಣಾಮಕಾರಿಯಾಗಿ ವಿವಸುತ್ತಾ ಹೋಗುತ್ತಾರೆ. ಅವರು ಸ್ವಾಮೀಜಿಯ ಬಗ್ಗೆ ಬರೆಯುವುದನ್ನು ಓದಿದಾಗ ರೋಮಾಂಚನವಾಗುವುದಂತೂ ದಿಟ. ಮದರಾಸಿನ ಕೆಲವು ಗೆಳೆಯರ ಒತ್ತಡಕ್ಕೆ ಮಣಿದು ಅಮೇರಿಕೆಗೆ ಬರುವ ಮನಸ್ಸು ಮಾಡಿದವರು ವಿವೇಕಾನಂದ. ಅಷ್ಟು ದೂರದ ದೇಶಕ್ಕೆ ಹೋಗಲು ಹಣದ ಕೊರತೆಯುಂಟಾದಾಗ ಗೆಳೆಯರೇ ಮನೆಮನೆಗೆ ಹೋಗಿ, ಆಪ್ತರಿಂದ ಹಣ ಪಡೆದು ಭಾರತವನ್ನು ಪ್ರತಿನಿಧಿಸಲು ನೀನೇ ಸರಿಯಾದ ವ್ಯಕ್ತಿಯೆಂದು ಭುಜತಟ್ಟಿ ವಿವೇಕಾನಂದರನ್ನು ಬಿಳ್ಕೊಟ್ಟರು. ಆದರೆ ಸಾಗಬೇಕಾದ ಗಾವುದ ಗಾವುದ ದಾರಿಯ ಅರಿವಿದ್ದದ್ದು ವಿವೇಕಾನಂದರಿಗೆ ಮಾತ್ರ.
ದಾರಿಯುದ್ದಕ್ಕೂ ಆದ ತೊಂದರೆಗಳು, ಕಳ್ಳಕಾಕರ ಉಪಟಳ ಎಲ್ಲವನ್ನೂ ಸಹಿಸಿಕೊಂಡು ಅಮೇರಿಕದ ನೆಲಕ್ಕೆ ಕಾಲಿಟ್ಟ ವಿವೇಕಾನಂದರ ಬಳಿ ಉಳಿದದ್ದು ಮಾತ್ರ ಪುಡಿಗಾಸು. ಅದರಲ್ಲಿ ಅಲ್ಲಿ ಜೀವನ ಸಾಗಿಸುವುದಾದರೂ ಹೇಗೆ? ಪರಿಚಯಕ್ಕಾದರೂ ಅಲ್ಲಿ ಯಾರೂ ಇರಲಿಲ್ಲ. ವಿಶ್ವ ಧರ್ಮ ಸಮ್ಮೇಳನಕ್ಕೆ ಇನ್ನೂ ಅನೇಕ ತಿಂಗಳುಗಳೇ ಇದ್ದವು. ಇವೆಲ್ಲದರಿಂದ ಮನನೊಂದ ವಿವೇಕಾನಂದರು ಒಂದು ಹಂತದಲ್ಲಿ ಭಾರತಕ್ಕೆ ಮರಳಿ ಬಿಡುವ ನಿರ್ಧಾರಕ್ಕೂ ಬಂದಿದ್ದರಂತೆ. ಆದರೆ ಅವರ ನಿರ್ಧಾರ ಬದಲಾದದ್ದು ಶಿಕಾಗೋನಿಂದ ಬಾಸ್ಟನ್ ಗೆ ಪ್ರಾಯಾಣಿಸುವಾಗ ಸಿಕ್ಕ ಒಬ್ಬ ಸಜ್ಜನ ಮಹಿಳೆಯಿಂದ. ಆಕೆ ವಿವೇಕಾನಂದರಿಗೆ ಆಶ್ರಯ ನೀಡುತ್ತಾರೆ. ನಂತರ ಹಾರ್ವಡ್ ನ ಪ್ರೊಫೇಸರ್ ಪರಿಚಯವಾಗುತ್ತದೆ. ವಿಶ್ವ ಧರ್ಮ ಸಮ್ಮೇಳನಕ್ಕೆ ಪ್ರವೇಶ ಸಾಧ್ಯವಾಗುತ್ತದೆ. ತಮ್ಮ ಹೆಸರು ಭಾಷಣಕ್ಕೆ ಕರೆದಾಗಲೆಲ್ಲಾ ’ಬೇರೆಯಾರಾದರೂ ಮಾತನಾಡಲಿ’ ಎಂದು ಮುಂದೆ ಹಾಕುತ್ತಿದ್ದರಂತೆ ಸ್ವಾಮೀಜಿ. ಕೊನೆಗೂ ತಮ್ಮ ಸರದಿಯಲ್ಲಿ ಭಾಷಣಕ್ಕೆ ನಿಂತಾಗ ವಿವೇಕರ ಸಿಂಹವಾಣಿ ಇಡೀ ಅಮೇರಿಕವನ್ನೇ ನಡುಗಿಸುತ್ತದೆ. ಚಪ್ಪಾಳೆ ಮುಗಿಲು ಮುಟ್ಟುತ್ತದೆ. ಹಿಂದೂ ಧರ್ಮದ ಶ್ರೇಷ್ಠತೆ ವಿಶ್ವಕ್ಕೇ ಮನದಟ್ಟಾಗುತ್ತದೆ.
ನಂತರ ಬಿಡಿ, ವಿವೇಕಾನಂದರ ವೇದಾಂತ ಪ್ರಚಾರಕಾರ್ಯ ಅಮೆರಿಕೆಯಲ್ಲಿ ಭರದಿಂದ ಸಾಗುತ್ತದೆ. ನ್ಯೂಯಾರ್ಕ್, ಶಿಕಾಗೋ,ಬಾಸ್ಟನ್, ಡೆಟ್ರ್ಯಾಟ್ ಇತ್ಯಾದಿ ನಗರಗಳಲ್ಲಿ ಪ್ರವಚನದ ಏರ್ಪಾಡಾಗುತ್ತದೆ. ಭಗವದ್ಗೀತೆ, ಉಪನಿಷತ್ತು, ಭಾರತ ರಾಮಾಯಣಗಳ ಬಗ್ಗೆ ನಿರರ್ಗಳ ಭಾಷಣಕ್ಕೆ ಜನತೆರೆದುಕೊಳ್ಳುತ್ತಾರೆ. ಭಾರತವೆಂದರೆ ಮೂಗು ಮುರಿಯುತ್ತಿದ್ದವರ ಮನ ಪರಿವರ್ತನೆಯಾಗುತ್ತದೆ. ಅಷ್ಠೇ ಅಲ್ಲದೇ ವೇದಾಂತ ಅಧ್ಯಯನ ತರಗತಿಗಳು ಪ್ರಾರಂಭವಾಗುತ್ತವೆ. ಥೌಸಂಡ್ ಐಲ್ಯಾಂಡ್ ನಲ್ಲಿ ಏಳು ದಿನಗಳ ಕಾಲ ವಿವೇಕಾನಂದರು ಶಿಷ್ಯರಿಗೆ ಪಾಠ ಹೇಳುತ್ತಾರೆ. ಶಂಕರ, ರಾಮಾನುಜ, ಮಧ್ವರ ಸಿದ್ದಾಂತಗಳು, ವೇದಾಂತ ಸೂತ್ರ, ನಾರದರ ಭಕ್ತಿ ಸೂತ್ರ ಎಲ್ಲದರ ಬಗ್ಗೆ ವಿವೇಕಾನಂದರು ತಮ್ಮ ಶಿಷ್ಯರೊಂದಿಗೆ ಚರ್ಚಿಸುತ್ತಾರೆ. ಅಷ್ಠೂ ದಿನದ ವಿವೇಕಾನಂದರ ಪ್ರವಚನವನ್ನು ಸಾರಾ ಎಲೆನ್ ವಾಲ್ಡೋ Inspired Talks ಎನ್ನುವ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಮದರಾಸಿನ ರಾಮಕೃಷ್ಣಾಶ್ರಮ ಅದನ್ನು 1908 ರಲ್ಲಿ ಪ್ರಕಟಿಸಿದೆ. ಅದರಲ್ಲಿ ಸಾರ ನಮಗೆ ಪರಿಚಯವಿಲ್ಲದ ವಿವೇಕಾನಂದರ ಕೆಲವು ಗುಣಗಳನ್ನ ವಿವರಿಸುತ್ತಾರೆ . ಅನೇಕ ಬಾರಿ ವಿವೇಕಾನಂದರೇ ತಮ್ಮ ಶಿಷ್ಯರಿಗೆ ಅಡುಗೆ ಮಾಡಿ ಬಡಿಸುತ್ತಿದ್ದರಂತೆ. ಭಾರತದಲ್ಲಿ ಗುರು ಪರಂಪರೆ ಎಂದರೆ ಕೇವಲ ಪಾಠ ಹೇಳುವುದಲ್ಲ. ಕಲಿಸುವಷ್ಟುದಿನ ಶಿಷ್ಯರ ಯೋಗಕ್ಷೇಮವೂ ಗುರುವಿನ ಜವಾಬ್ದಾರಿ ಎಂದಿದ್ದರಂತೆ ಸ್ವಾಮೀಜಿ. ಅಮೆರಿಕನ್ನರ ಅಡುಗೆ ಪದ್ದತಿಯನ್ನು ಕಲಿಯುತ್ತಲೇ ಭಾರತೀಯ ತಿನಿಸುಗಳನ್ನು ಶಿಷ್ಯರಿಗೆ ಮಾಡಿ ಕೊಡುತ್ತಿದ್ದರಂತೆ.
ಬಹುಶಃ ವಿವೇಕಾನಂದರು ಅಮೇರಿಕನ್ನರಿಗೆ ಹೆಚ್ಚು ಇಷ್ಠವಾಗಿದ್ದೇ ಪಾಂಡಿತ್ಯದೊಂದಿಗೆ ಅವರಲ್ಲಿದ್ದ ಸರಳತೆ ಮತ್ತು ಎಲ್ಲರೊಂದಿಗೂ ಹೊಂದಿಕೊಂಡು ಹೋಗುವ, ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವ ಗುಣಸ್ವಭಾವದಿಂದ ಎಂದರೆ ತಪ್ಪಲ್ಲವೇನೊ. ಹಿಂದೂ ಧರ್ಮದ ಸಂದೇಶಗಳನ್ನು ಅಮೇರಿಕನ್ ಶಿಷ್ಯವೃಂದಕ್ಕೆ ತಿಳಿಸಿಕೊಡುವಾಗ ಕೂಡ ಅವರು ಕ್ರೈಸ್ಥಧರ್ಮದಲ್ಲಿ ಭೋದಿಸಲ್ಪಟ್ಟ ಮೌಲ್ಯಗಳನ್ನು ಪ್ರಸ್ತಾಪಿಸಿಯೇ ಹಿಂದೂ ಧರ್ಮ ಹೇಗೆ ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ ಎಂಬುದನ್ನು ವಿವರಿಸುತ್ತಿದ್ದರಂತೆ. ಮೊದಲ ತರಗತಿಯಲ್ಲಿ ಹಿಂದೂ ಸನ್ಯಾಸಿಯ ಕೈಯಲ್ಲಿ ಬೈಬಲ್ ನೋಡಿ ಅಷ್ಠೂ ಜನ ಶಿಷ್ಯಂದಿರು ಆಶ್ಚರ್ಯ ಚಕಿತರಾಗಿದ್ದು ನಿಜ. ನಂತರ ವಿವೇಕರು ಹಿಂದೂ ಧರ್ಮಗ್ರಂಥಗಳ ವ್ಯಾಖ್ಯಾನ ಪ್ರಾರಂಭಿಸಿದಾಗ ಅದೇ ಶಿಷ್ಯವೃಂದ ಹಿಂದೂ ಧರ್ಮದ ಶ್ರೇಷ್ಠತೆ ಅರಿತು ಅವರ ಮುಂದೆ ತಲೆಬಾಗಿತ್ತು.
ವಿವೇಕಾನಂದರು ಇತರ ಸಾಧು ಸಂತರಿಗಿಂತ ಭಿನ್ನವಾಗಿ ನಿಲ್ಲುವುದು ಮತ್ತು ಮನಸ್ಸಿಗೆ ಹತ್ತಿರವಾಗುವುದು ಅವರ ನೇರ ನಿಷ್ಠೂರ ಮಾತುಗಳಿಂದ. ನನ್ನ ದೇಶದ ಬಗ್ಗೆ, ನನ್ನ ಪೂರ್ವಜರ ಬಗ್ಗೆ ನನಗೆ ಹೆಮ್ಮೆಯಿದೆ. ಎಲ್ಲಧರ್ಮೀಯರನ್ನ, ಎಲ್ಲ ದೇಶಗಳ ನಿರ್ಗತಿಕರನ್ನ ಸಹಿಸಿಕೊಂಡು ಆಶ್ರಯನೀಡಿದ ದೇಶ ನನ್ನದು. My religion is one of which Christianity is an offshoot and Buddhism a rebel child ಎಂದು ಹಿಂದೂ ಧರ್ಮವನ್ನು ವ್ಯಾಖ್ಯಾನಿಸಿದವರು ಸ್ವಾಮೀಜಿ. ನೀವು ಕ್ರೈಸ್ಥ ಮಿಷನರಿಗಳನ್ನು ಭಾರತಕ್ಕೆ ಕಳುಹಿಸುತ್ತೀರಿ, ಅವುಗಳ ಉದ್ದೇಶ ಕೇವಲ ಧರ್ಮಪ್ರಸಾರ ಮತ್ತು ಮತಾಂತರವಾಗಿರುತ್ತದೆ ನಿಜಕ್ಕೂ ನಮ್ಮ ಜನಕ್ಕೆ ನಿಮ್ಮ ಧರ್ಮ ಬೇಕಿಲ್ಲ ಅವರಿಗೆ ಬೇಕಿರುವುದು ಹಸಿವಿಗೆ ಆಹಾರ ಎಂದು ನಿಷ್ಠೂರ ಮಾತಿನಲ್ಲಿ ಹೇಳಿದವರು ವಿವೇಕಾನಂದರು. ತಮ್ಮನ್ನು ಹಿಂಬಾಲಿಸಿ ಬಂದ ಶಿಷ್ಯರಿಗೆ ಹೇಳುತ್ತಿದ್ದರಂತೆ ನೀವು ನನ್ನನ್ನು ಗುರುವೆಂದು ಕೇವಲ ಅಂದಾನುಕರಣೆ ಮಾಡಬೇಡಿ. ಯಾವುದನ್ನಾದರೂ ಪರೀಕ್ಷಿಸದೆ ಒಪ್ಪಿಕೊಳ್ಳಬೇಡಿ ಎಂದು. ಸ್ವತಃ ವಿವೇಕರೇ ರಾಮಕೃಷ್ಣರನ್ನು ಪರೀಕ್ಷಿಸದೆ ಒಪ್ಪಿಕೊಂಡವರಲ್ಲ. ಕಾಮಕಾಂಚನದ ಬಗ್ಗೆ ಮೋಹವಿರಬಾರದು, ನಾನು ಹಣವನ್ನು ಸ್ಪರ್ಶಿಸುವುದೂ ಇಲ್ಲ ಎಂದ ಗುರುಗಳ ಹಾಸಿಗೆಯ ಕೆಳಗೇ ನಾಣ್ಯವಿಟ್ಟು ಪರೀಕ್ಷಿಸಿದವರು ವಿವೇಕಾನಂದ.
ವಿವೇಕಾನಂದರ ಸಂದೇಶಗಳೆಂದರೇ ಸಿಡಿಗುಂಡಿನಂತಹವು. ಅವು ಇನ್ನೂ ನೂರಾರು ವರ್ಷಕಳೆದರೂ ಶಾಶ್ವತವಾಗಿ ನಿಲ್ಲುವಂತವು. ಇತಿಹಾಸದ ಅರಿವು ಇದ್ದರೆ ಮಾತ್ರ ಭವಿಷ್ಯ ರೂಪಿಸಲು ಸಾಧ್ಯ, ಮೊದಲು ನಿಮ್ಮ ಪೂರ್ವಜರ ಬಗ್ಗೆ ತಿಳಿದುಕೊಳ್ಳಿ ನಂತರ ನಿಮ್ಮಲ್ಲಿ ಆತ್ಮವಿಶ್ವಾಸ ಮೊಳೆಯದಿದ್ದರೆ ಕೇಳಿ ಎಂದವರು ಸ್ವಾಮೀಜಿ. ಮೊದಲು ನಮ್ಮ ಯುವಕರು ಬಲಿಷ್ಠರಾಗಬೇಕು. ಅನಂತರ ಧರ್ಮ. ಮೊದಲು ಬಲಿಷ್ಠರಾಗಿ. ಗೀತಾಧ್ಯಾಯನಕ್ಕಿಂತ ಪುಟ್ ಬಾಲ್ ಆಟದಿಂದ ಮುಕ್ತಿಗೆ ಹತ್ತಿರ ಹೋಗುವಿರಿ. ನಿಮ್ಮ ಬಾಹುಗಳ ಮಾಂಸಖಂಡಗಳಲ್ಲಿ ಶಕ್ತಿಯಿದ್ದರೆ, ಗೀತೆ ಚೆನ್ನಾಗಿ ತಿಳಿಯಬಲ್ಲಿರಿ. ನೀವು ಸಶಕ್ತರಾಗಿ ನಿಂತು ಪುರುಷರೆಂದು ಪರಿಗಣಿಸಿದಾಗ ಮಾತ್ರ ನಿಮಗೆ ಉಪನಿಷತ್ತಿನ ಮಹಿಮೆ ಚೆನ್ನಾಗಿ ಅರ್ಥವಾಗುತ್ತದೆ ಎಂದು ಯುವಕರಿಗೆ ಚಾಟಿ ಬೀಸಿದವರು ಸ್ವಾಮೀಜಿ. ಭಾರತವನ್ನು ಬದಲಾಯಿಸಲು ಭಾರತಕ್ಕಾಗಿ ಮಿಡಿಯುವ ಹೃದಯ, ಭಾರತದ ಏಳಿಗೆಗೆ ಚಿಂತಿಸುವ ಮೆದುಳಿನಷ್ಠೇ, ಭಾರತಕ್ಕಾಗಿ ದುಡಿಯುವ ಕೈಗಳು ಮುಖ್ಯ ಎಂಬುದಾಗಿ ಹೇಳಿ. ಮಾತನಾಡಿದ್ದು ಸಾಕು, ಕಾರ್ಯಪ್ರವೃತ್ತರಾಗಿ ಎಂದು ಬಿಸಿಮುಟ್ಟಿಸಿದವರು ವಿವೇಕಾನಂದ. ಯುವಕರೆಂದರೆ ವಿವೇಕರಿಗೆ ಎಲ್ಲಿಲ್ಲದ ಮಮಕಾರ, ಭರವಸೆ. ಉಕ್ಕಿನಂತಹ ನರಗಳಿರುವ, ಕಬ್ಬಿಣದಷ್ಟು ಗಟ್ಟಿಯಾದ ಮಾಂಸಖಂಡಗಳಿರುವ ಯುವಕರು ಮಾತ್ರ ಈ ದೇಶದ ವೈಭವವನ್ನು ಮರುಕಳಿಸಬಲ್ಲರು ಎಂದವರು ಸ್ವಾಮೀಜಿ. ಬಿಡಿ, ಭಾರತದಲ್ಲಿ ಯುವಜನತೆಗೇನೂ ಕಮ್ಮಿಇಲ್ಲ, ಇತ್ತೀಚಿನ ಜನಗಣತಿಯ ಪ್ರಕಾರ ಭಾರತದಲ್ಲಿ ಶೇಕಡ 50 ಕ್ಕಿಂತ ಹೆಚ್ಚು ಯುವಕರಿದ್ದಾರೆ. ಆದರೆ ನಿಜಕ್ಕೂ ಈ ಯುವಪಡೆ ವಿವೇಕಾನಂದರ ಕನಸಿನಂತೆ ರೂಪುಗೊಳ್ಳುತ್ತಿದೆಯಾ? ಭಾರತ ಪ್ರಜ್ವಲಿಸಬೇಕಾದರೆ ಮುಖ್ಯವಾಗಿ ಪ್ರತಿ ಯುವಕನ ಮನದಲ್ಲಿ ’ವಿವೇಕ ಪ್ರಜ್ನೆ’ ಜಾಗೃತವಾಗಬೇಕಿದೆ. ಅದು ಇಂದಿನ ಭಾರತದ ಅವಶ್ಯ.


