ಮದಿರೆಯ ಮತ್ತಿನಲಿ ಕಳೆದುಹೋಗದಿರಲಿ ಹೊಸವರ್ಷದ ಉತ್ಸಾಹ
ಡಿಸೆಂಬರ್ ೩೧ರ ಕತ್ತಲ ರಾತ್ರಿಯಲ್ಲಿ ಅರೆ ಬೆತ್ತಲಾಗುವವರು, ಮದಿರೆಯ ಮಬ್ಬಿನಲಿ ಅನಾಹುತ ಮಾಡಿಕೊಳ್ಳುವವರು, ’ಪರಮಾತ್ಮ ಆಡಿಸಿದಂತೆ ಆಡುವೆನಾನು’ ಎಂದು ಬೀದಿಗಿಳಿದು ದಾಂದಲೆ ಮಾಡುವವರು, ಹಾಗೆ ಕುಡಿದು, ಕುಣಿದು ಕುಪ್ಪಳಿಸುವುದನ್ನೇ ಹೊಸವರ್ಷದ ಬರಮಾಡಿಕೊಳ್ಳುವಿಕೆಯೆಂದು ಸಂಭ್ರಮಿಸುವವರು ಅನೇಕರಿದ್ದಾರೆ. ’ಕುರುಡು ಕಾಂಚಾಣ ಕುಣಿಯುವ’ ಸಾಫ್ಟ್ ವೇರಿಗರಿಗಂತೂ ಈ ವಿಷಯದಲ್ಲಿ ಎಲ್ಲಿಲ್ಲದ ಉತ್ಸಾಹ. ಡಿಸೆಂಬರ್ ಪ್ರಾರಂಭವಾಗುತ್ತಿದ್ದಂತೆಯೇ ನಾನಾ ರೆಸಾರ್ಟುಗಳ, ಸ್ಟಾರ್ ಹೋಟೆಲುಗಳ ಇ-ಮೇಲ್ ಗಳು ಐಟಿಗರ ಇನ್ ಬಾಕ್ಸ್ ತುಂಬಿ ಕುಳಿತು ಬಿಡುತ್ತವೆ. ಕೇವಲ ೧೦೦೦ ರೂ ಒಬ್ಬರಿಗೆ ಪಾವತಿಸಿ ಕಾಕ್ ಟೈಲ್ ಪಾರ್ಟಿಯಲ್ಲಿ ಪಾಲ್ಗೊಳ್ಳಿ’ ಎಂಬ ಇ-ಮೇಲು ಗಳಿಗೇನು ಕಮ್ಮಿ ಇಲ್ಲ.
ಐಟಿ ವಲಯದಲ್ಲಿರುವ ಎಲ್ಲರೂ ಹೊಸವರ್ಷಾಚರಣೆಗೆ ಮೋಜಿಗೆ,ಜೂಜಿಗೆ ಸಿದ್ದವಾಗುತ್ತಾರೆ ಎಂದಲ್ಲ. ಆದರೆ ಹೀಗೆ ಮೋಜು ಮಾಡದೆ ಹೊಸವರ್ಷಾಚರಣೆ ಮಾಡಲು ಸಾಧ್ಯವೇ ಇಲ್ಲ ಎನ್ನುವ ದೊಡ್ಡಗುಂಪೇ ಐಟಿ ವಲಯದಲ್ಲಿದೆ. ಒಂದು ವೇಳೆ ಇದಕ್ಕೆಲ್ಲಾ ಒಪ್ಪದ, ತನಗೆ ಈ ಪಾರ್ಟಿ, ಡಿಸ್ಕೋ, ಮದಿರೆ ಇಷ್ಠವಿಲ್ಲವೆನ್ನುವವನು ಈ ಮಂದಿಯ ಮಟ್ಟಿಗೆ ’ದೊಡ್ಡ ಗುಗ್ಗು’ ಆಗಿಬಿಡುತ್ತಾನೆ, ಬಿಡಿ, ಈಗ ಐಟಿಗರಲ್ಲದ ಅನೇಕರ ಪಾಲಿಗೂ ಇದೇ ವರ್ಷಾಚರಣೆಯ ರೀತಿ. ಆದರೆ ಇನ್ನೂ ಹೇಗೆಲ್ಲಾ ಹೊಸವರ್ಷವನ್ನು ಬರಮಾಡಿಕೊಳ್ಳಬಹುದು ಎಂದು ನಾವೇಕೆ ಯೋಚಿಸುವುದಿಲ್ಲ? ಕ್ಲಬ್ಬಿನಲ್ಲಿ, ಪಬ್ಬಿನಲ್ಲಿ, ಮದಿರೆಯ ಮತ್ತಿನಲ್ಲಿ ಕಳೆದು ಹೋಗಿ ಹೊಸವರ್ಷದ ಸೂರ್ಯೋದಯವನ್ನೇ ತಪ್ಪಿಸಿಕೊಳ್ಳುವುದು ಸಂಭ್ರಮವೇಗಾಗುತ್ತದೆ? ಭಾರತೀಯರಿಗೆ ಸೂರ್ಯೋದಯ ಮಹತ್ವದ್ದು. ನಾವು ಆಚರಿಸುವ ಯಾವುದೇ ಹಬ್ಬ, ಹರಿದಿನಗಳನ್ನು ತೆಗೆದುಕೊಳ್ಳಿ ಅದರಲ್ಲಿ ಆಧ್ಯಾತ್ಮದ ಸ್ಪರ್ಶ, ವಿವೇಕದ ಸಿಂಚನ, ಸಂಸ್ಕೃತಿಯ ಸೊಗಡು ಎದ್ದು ಕಾಣುತ್ತದೆ. ಬೆಳಗ್ಗೆ ಸೂರ್ಯೋದಯದ ಹೊತ್ತಿಗೇ ಎದ್ದು ಮನೆಯ ಮುಂದೆ ರಂಗೋಲಿ ಇಡುವುದರಿಂದ ಹಿಡಿದು, ತಳಿರುತೋರಣ ಕಟ್ಟುವುದು, ಸ್ನಾನ ಇತ್ಯಾದಿಗಳನ್ನು ಮಾಡಿ ಶುಚಿಯಾಗುವುದು, ದೇವರ ಪೂಜೆ, ಸಿಹಿ ಹಂಚಿಕೆ, ಬಂಧುಬಳಗದವರೊಂದಿಗೆ, ಸ್ನೇಹಿತರೊಂದಿಗೆ ಮಾತು, ಒಳ್ಳೆಯ ಆಹಾರ ಸೇವನೆ ಇತ್ಯಾದಿ ಅದರ ಭಾಗವಾಗಿರುತ್ತದೆ. ಹಾಗಾದರೆ ಹೊಸವರುಷವನ್ನೂ ಹೀಗೆ ಅರ್ಥಪೂರ್ಣವಾಗಿ ಹಬ್ಬದ ರೀತಿ ಬರಮಾಡಿಕೊಳ್ಳಬಹುದಲ್ಲವೆ?
ಕೊಂಚ ಸೃಜನಾತ್ಮಕವಾಗಿ ಯೋಚಿಸಿದರೆ ಹೇಗೆಲ್ಲಾ ನೂತನ ವರ್ಷದ ಮೊದಲ ದಿನವನ್ನು ಕಳೆಯಬಹುದು ಎಂಬುದು ನಮಗೇ ಗೊತ್ತಾಗುತ್ತದೆ. ಮೊದಲ ದಿನದ ಕೆಲವು ಘಂಟೆಗಳನ್ನು ಸಿಂಹಾವಲೋಕನಕ್ಕೆ ಉಪಯೋಗಿಸಿ ೨೦೧೧ ರಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಯಿತು, ಸಿಕ್ಕಿದ ಯಶಸ್ಸು ಎಷ್ಟು, ಸೋಲಿಗೆ ಕಾರಣಗಳಾವುವು. ಸಮಯದ ಅಭಾವದಿಂದ ಮಾಡಲಾಗದ ಕೆಲಸಗಳ ಪಟ್ಟಿ ಏನು? ಯಾವೆಲ್ಲಾ ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು, ಎಷ್ಟು ಉತ್ತಮ ಪುಸ್ತಕಗಳನ್ನು ಓದಿದೆ. ಗಮನ ಸೆಳೆದ ಸೂಕ್ತಿ, ಯಶಸ್ಸಿನ ಸೂತ್ರಗಳನ್ನು ಬರೆದಿಟ್ಟುಕೊಂಡೆನಾ, ಎಷ್ಟು ಜನ ಹೊಸಗೆಳೆಯರಾದರು, ಹಳೆ ಗೆಳೆಯರಲ್ಲಿ ಎಷ್ಟು ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಾಯಿತು. ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಯಿತೆ, ಹಣಕಾಸಿನ ವಿಷಯದಲ್ಲಿ ಶಿಸ್ತು ಬದ್ದವಾಗಿ ನಡೆದುಕೊಂಡೆನಾ?, ವೃತ್ತಿಯಲ್ಲಿ ಅಂದುಕೊಡಷ್ಟು ಯಶಸ್ಸು ಸಾಧ್ಯವಾಗದಿದ್ದದ್ದು ಏಕೆ? ಹೀಗೆ ವರ್ಷವಿಡೀ ನಮ್ಮ ಬೆಳವಣಿಗೆಗೆ ಪೂರಕವಾದ, ಮಾರಕವಾದ ವಿಷಯಗಳ ಬಗ್ಗೆ ಗಮನ ಹರಿಸಬಹುದು.
ಹೀಗೆ ಕಳೆದ ವರ್ಷದ ಸಿಂಹಾವಲೋಕನ ಮಾಡುವಾಗ, ಈ ವರ್ಷದಲ್ಲಿ ತಲುಪಬೇಕಾದ ಗುರಿ ಸ್ಪಷ್ಠವಾಗುತ್ತಾ ಹೋಗುತ್ತದೆ. ಹಿಂದೆ ಎಡವಿದ ಕಲ್ಲನ್ನು ಪಕ್ಕಕ್ಕಿಟ್ಟು ಬದುಕಿನ ದಾರಿಯಲ್ಲಿ ಸ್ಪಷ್ಠ ಹೆಚ್ಚೆ ಗುರುತು ಮೂಡಿಸಲು ನೆರವಾಗುತ್ತದೆ. ಕಾರ್ಪೊರೇಟ್ ವಲಯದಲ್ಲಿ ’ಗೋಲ್ ಸೆಟ್ಟಿಂಗ್’ ಎಂಬ ಪ್ರಕ್ರಿಯೆ ನಡೆಯುತ್ತದೆ. ಅದು ಸಾಮನ್ಯ ನೌಕರನಿಂದ ಹಿಡಿದು, ಕಂಪನಿಗಳ ಮುಖ್ಯಸ್ಥರವರೆಗೆ ಕಡ್ಡಾಯ. ಆರ್ಥಿಕ ವರ್ಷಾರಂಭದಲ್ಲಿ ಎಲ್ಲರೂ ಪ್ರಸಕ್ತ ವರ್ಷದ ತಮ್ಮ ಗುರಿಗಳನ್ನು ದಾಖಲಿಸಬೇಕಾಗುತ್ತದೆ. ಯಾರೊಬ್ಬರೂ ಸಬೂಬು ಹೇಳುವಂತಿಲ್ಲ. ಸಾಮಾನ್ಯ ನೌಕರನಾದರೆ ತನ್ನ ದಿನನಿತ್ಯದ ಕೆಲಸದಲ್ಲಿ ಸಾಧಿಸಬಹುದಾದ ಪ್ರಗತಿಯನ್ನ, ಉನ್ನತ ಅಧಿಕಾರದಲ್ಲಿರುವವರಾದರೆ ವ್ಯವಹಾರವನ್ನು ಎಷ್ಟು, ಹೇಗೆ, ಯಾವ ಸಮಯದಲ್ಲಿ ವಿಸ್ತರಿಸಬೇಕು, ತಮ್ಮ ಒಟ್ಟು ಗಳಿಕೆಯನ್ನು ಹೆಚ್ಚು ಮಾಡಿಕೊಳ್ಳುವ ಬಗೆ ಹೇಗೆ ಎಂಬುದನ್ನು ಬರೆದಿಟ್ಟುಕೊಳ್ಳುತ್ತಾರೆ. ಹೀಗೆ ಬರೆದಿಟ್ಟುಕೊಂಡದ್ದನ್ನು ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಪರಿಶೀಲಿಸಿ ನಾವು ಹಾಕಿಕೊಂಡ ಗುರಿ ತಲುಪುವತ್ತ ಹೆಜ್ಜೆ ಇಟ್ಟಿದ್ದೇವಾ? ತಡವಾಗಿದ್ದರೆ ಯಾಕಾಯಿತು, ಮುಂದೆ ನಿಗದಿತ ಸಮಯದಲ್ಲಿ ಹೇಗೆ ಕೆಲಸವನ್ನು ತ್ವರಿತಗೊಳಿಸಿ ಆ ಗುರಿಯನ್ನು ತಲುಪಬಹುದು ಎಂಬುದನ್ನು ಯೋಚಿಸಲೆಂದೇ ಒಂದಿಷ್ಟು ಸಮಯವನ್ನು ವ್ಯಯಿಸುತ್ತಾರೆ. ಇದು ಕಾರ್ಪೋರೇಟ್ ವಲಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಹೀಗೆಯೇ ನಮ್ಮ ಬದುಕಿನ ಗುರಿಗಳನ್ನೂ ಕೂಡ ಕಟ್ಟಿಕೊಳ್ಳುವುದು, ಇಟ್ಟ ಹೆಜ್ಜೆಗಳನ್ನು ಪರಿಶೀಲಿಸುವುದು ಕೂಡ ಅತ್ಯವಶ್ಯಕ. ಈ ಕೆಲಸಕ್ಕೆ ಹೊಸವರ್ಷ ಒಂದು ನೆಪವಾದರೆ ಎಷ್ಟು ಚೆಂದ ಅಲ್ಲವೇ? ಇದು ತೀರಾ ಸುಲಭ, ನೀವು ಈ ವರ್ಷ ಮಾಡಬೇಕಾದ ಕೆಲಸ ಕಾರ್ಯಗಳನ್ನು ಒಂದೆಡೆ ಬರೆಯುತ್ತಾ ಹೋಗಿ, ವಿಧ್ಯಾರ್ಥಿಗಳಾದರೆ ಹೇಗೆ ಓದಿನ ವಿಸ್ತಾರವನ್ನು ಹೆಚ್ಚಿಸಿಕೊಂಡು, ಹೇಗೆ ಉತ್ತಮ ಫಲಿತಾಂಶಗಳಿಸಬಹುದೂ ಎಂದೂ, ನೌಕರರಾಗಿದ್ದರೆ ಹೇಗೆ ಕೆಲಸದಲ್ಲಿ ನೈಪುಣ್ಯ ಸಾಧಿಸಿ ಮೇಲಧಿಕಾರಿಯಿಂದ ಪ್ರಶಂಸೆಗಳಿಸಬಹುದು, ಗಳಿಕೆಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂದೂ, ವ್ಯಾಪಾರಸ್ತರಾದರೆ ಹೇಗೆ ವ್ಯಾಪಾರದ ಪರಿಧಿಯನ್ನು ವಿಸ್ತರಿಸಬಹುದು ಎಂದೂ ಚಿಂತಿಸಿ ಬರೆದಿಟ್ಟುಕೊಳ್ಳಿ. ಇನ್ನುಳಿದಂತೆ ಎಲ್ಲರಿಗೂ ಇರಬಹುದಾದ ಸಾಮಾನ್ಯ ಕನಸುಗಳ ಬಗ್ಗೆ ಕೂಡ ಆಲೋಚಿಸಿ, ಸ್ವಂತಕ್ಕೊಂದು ಮನೆ, ಕಾರು, ಒಳ್ಳೆಯ ನೌಕರಿ, ಆರ್ಥಿಕ ಭದ್ರತೆ ಇತ್ಯಾದಿ ಇತ್ಯಾದಿ ಪಡೆದುಕೊಳ್ಳಲು ೨೦೧೨ ರಲ್ಲಿ ಏನೆಲ್ಲಾ ಮಾಡಬೇಕೆಂಬ ರೂಟ್ ಮ್ಯಾಪ್ ಸಿದ್ದಮಾಡಿಕೊಳ್ಳಿ. ಪ್ರತಿ ಕೆಲಸಕ್ಕೆ ನಿಗದಿತ ಸಮಯವನ್ನು ನಮೂದಿಸಿಕೊಳ್ಳಿ. ದಾಖಲಿಸಿದ ಗುರಿಗಳ ಪರಿಶೀಲನೆಗೆ ೩-೪ ತಿಂಗಳಿಗೊಮ್ಮೆ ಸಮಯ ತೆಗೆದಿಟ್ಟುಕೊಳ್ಳಿ.
ಇವಿಷ್ಟು ನಿಮ್ಮ ವ್ಯವಹಾರ, ಆರ್ಥಿಕ ಪರಿಸ್ಥಿತಿಯ ಸುಧಾರಣಾ ಕ್ರಮದ ಬಗ್ಗೆ ಆಯಿತು. ಆದರೆ ಬದುಕೆಂದರೆ ಕೇವಲ ವ್ಯವಹಾರ, ವೃತ್ತಿ, ಹಣಗಳಿಕೆ ಮಾತ್ರವಲ್ಲವಲ್ಲ. ಒಂದಷ್ಟು ಸಮಾಜ ಸೇವೆ, ಆಧ್ಯಾತ್ಮದೆಡೆಗಿನ ಆಸಕ್ತಿ, ಬದುಕಿಗೊಂದು ಮೌಲ್ಯ ಎಲ್ಲವೂ ಒಳಗೊಂಡಿರಬೇಕು. ಆದ್ದರಿಂದ ಈ ನಿಟ್ಟಿನಲ್ಲೂ ಆಲೋಚನೆಗಳು ಸಾಗಲಿ, ಒಳ್ಳೆಯ ಪುಸ್ತಕ ಓದುವುದಕ್ಕೆ, ಸದ್ಗುಣ ಸಂಪನ್ನರನ್ನ ಭೇಟಿಯಾಗುವುದಕ್ಕೆ, ಹೊಸ ಹೊಸ ವಿಷಯ ತಿಳಿಯುವುದಕ್ಕೆ, ಕಲಿಯುವುದಕ್ಕೆ ಕೂಡ ಸಮಯ ಎತ್ತಿಡಿ. ನಿಮ್ಮ ಗಳಿಕೆಯಲ್ಲಿ ಕನಿಷ್ಠ ೫ ರಷ್ಠನ್ನಾದರೂ ಯಾರೋ ನಿರ್ಗತಿಕರಿಗೆ, ಹಣದ ತೊಂದರೆಯಿರುವ ವಿಧ್ಯಾರ್ಥಿಗಳ ಓದಿಗೆ ತೆಗೆದಿಡುವ ಸಂಕಲ್ಪ ಮಾಡಿ. ತೀರಾ ದಿನನಿತ್ಯದ ಸಣ್ಣ ಸಣ್ಣ ಸಂಗತಿಗಳೂ ನಿಮ್ಮ ಹೊಸವರ್ಷದ ನಿರ್ಣಯಗಳಲ್ಲಿ ಸೇರಿರಲಿ, ಬಿಡುವಿದ್ದಾಗ ಹೆಂಡತಿಗೆ ಅಡಿಗೆ ಕೆಲಸದಲ್ಲಿ ನೆರವಾಗುವುದು, ಅಪ್ಪ ಅಮ್ಮನೊಡನೆ ಸಮಯ ಕಳೆಯುವುದು, ಮಕ್ಕಳನ್ನು ಕೂರಿಸಿಕೊಂಡು ಕಥೆ ಹೇಳುವುದು, ಮನೆಯವರೆಲ್ಲಾ ಜೊತೆಯಾಗಿ ಹಳೆಯ ಪೋಟೋ ಆಲ್ಬಮ್ ತಿರುವಿಹಾಕುವುದು ಕೂಡ ನಿಮ್ಮ ಸಂತೋಷ ಹೆಚ್ಚಿಸುತ್ತಾದ್ದರಿಂದ ಅವೂ ನಿರ್ಣಯದ ಪರಿದಿಗೆ ಸೇರಲಿ.
ಒಟ್ತಿನಲ್ಲಿ ಹೊಸವರ್ಷಾಚರಣೆಯನ್ನು ಯಾವುದೋ ಬಾರಿನಲ್ಲೋ, ರೆಸಾರ್ಟಿನಲ್ಲೋ, ಕಂಠ ಪೂರ್ತಿ ಕುಡಿದು, ಮದಿರೆಯ ನಶೆಯಲ್ಲಿ ಸಭ್ಯತನವನ್ನು ಬದಿಗಿಟ್ಟು, ರಂಪ ರಾದ್ದಾಂತಗಳಿಗೆ ಎಡೆ ಮಾಡಿಕೊಟ್ಟು ಕಳೆಯುವುದಕ್ಕಿಂತ, ಹೊಸವರ್ಷದ ಸಂದರ್ಭವನ್ನು ಬದುಕಿಗೊಂದು ಕನಸು ಕಟ್ಟಲು, ಆ ಕನಸನ್ನು ನನಸಾಗಿಸಿಕೊಳ್ಳುವ ಮಾರ್ಗ ಹುಡುಕಲು, ವ್ಯಕ್ತಿತ್ವಕ್ಕೆ ಮತ್ತೊಂದಿಷ್ಟು ಮೌಲ್ಯ ತುಂಬಿಕೊಳ್ಳಲು ಬಳಸಿಕೊಳ್ಳಿ. ನವವರುಷಕ್ಕೆ ನಿರ್ಣಯಗಳನ್ನು ಮಾಡುವುದೇನೋ ಸುಲಭ, ಆದರೆ ಅದರ ಪಾಲನೆ ಮಾಡಬೇಕಾದವರು ನೀವೇ ಎಂಬುದು ಗಮನದಲ್ಲಿರಲಿ. ಹಾಗೊಮ್ಮೆ ಪಟ್ಟಿ ಮಾಡಿಟ್ಟುಕೊಂಡ ನಿರ್ಣಯಗಳನ್ನು ನೀವು ಪಾಲಿಸಿದ್ದೇ ಆದರೆ ೨೦೧೨ ರಲ್ಲಿ ನಿಮ್ಮ ಬದುಕು ಹೊಸದಿಕ್ಕಿಗೆ ಮಗ್ಗಲು ಬದಲಿಸುತ್ತದೆ. ೨೦೧೨ ನಿಮಗೆ ಅಂಥಹ ಸಾರ್ಥಕ ವರ್ಷವಾಗಲಿ. ಇತಿಹಾಸದ ಪುಟ ಸೇರುತ್ತಿರುವ ೨೦೧೧, ನಿಮ್ಮ ಬದುಕಿನ ಖುಷಿಯನ್ನು ಹೇಗೆ ಹೆಚ್ಚುಮಾಡಿತು ಎಂದು ನೆನಪಿಸಿಕೊಂಡು ಅದಕ್ಕೊಂದು ಥ್ಯಾಕ್ಸ್ ಹೇಳಿ, ೨೦೧೨ ರನ್ನು ಸ್ವಾಗತಿಸಿ, ನಿಮ್ಮೆಲ್ಲರಿಗೂ ಹೊಸವರ್ಷದ ಶುಭಾಷಯಗಳು.





Nice