ಆತ ತನ್ನ ಜನಕ್ಕೆ ವಿದ್ಯುತ್ ನೊಂದಿಗೆ ಭರವಸೆಯನ್ನೂ ನೀಡಿದವನು..
ನಮ್ಮಲ್ಲಿ ಹೆಚ್ಚಿನವರು ಇರುವುದೇ ಹಾಗೇ. ನೂರು ಜನರಲ್ಲಿ ೯೫ ಜನ ಮಾತೆತ್ತಿದರೆ ವ್ಯವಸ್ಥೆಯನ್ನು ಬಯ್ಯುತ್ತಾ ನಿಲ್ಲುತ್ತೇವೆ. ನಮ್ಮ ಮನೆಯ ಆಯಕಟ್ಟಿನ ಹೊರಗೆ ಏನೇ ಸಮಸ್ಯೆಗಳಿದ್ದರೂ ಅದು ನಮಗೆ ಸಂಭಂದಿಸಿದ್ದಲ್ಲ ಎಂಬಂತಿರುತ್ತದೆ ನಮ್ಮ ವರ್ತನೆ. ಇನ್ಯಾರೋ ಆ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂಬುದೇ ಮಾತಿನ ದಾಟಿಯಾಗಿರುತ್ತದೆ. ರಸ್ತೆ, ನೀರು, ಶುಚಿತ್ವ, ವಿದ್ಯುತ್ ಯಾವುದರ ಸಮಸ್ಯೆ ಬಂದರೂ ಸರ್ಕಾರವನ್ನು ಶಪಿಸುತ್ತಲೇ ಮಾತು ಮುಗಿಸುತ್ತೇವೆ. ನಮ್ಮ ಪರಿದಿಯಲ್ಲಿ ನಾವು ಮಾಡಬಹುದಾದದ್ದೇನು ಎಂಬುದನ್ನೂ ಯೋಚಿಸಲು ಹೋಗುವುದಿಲ್ಲ. ಈಗ ನಮ್ಮ ಕರ್ನಾಟಕವನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಲ್ಲಿ ವಿದ್ಯುತ್ ಅಭಾವ ಕೂಡ ಒಂದು. ಕಲ್ಲಿದ್ದಲು ಶೇಖರಣೆ ಇಲ್ಲ, ಜಲವಿದ್ಯುತ್ ಉತ್ಪಾದನೆ ಬೇಡಿಕೆಯನ್ನು ಪೂರೈಸುತ್ತಿಲ್ಲ, ವಿದ್ಯುತ್ ಉತ್ಪಾದಿಸಲು ಪರ್ಯಾಯ ಮಾರ್ಗಗಳಿದ್ದರೂ ಅದರ ಉತ್ಪಾದನಾ ಘಟಕಗಳು ಲಭ್ಯವಿಲ್ಲ ಹೀಗೆ ಇಲ್ಲ ಇಲ್ಲ ಇಲ್ಲ ಎಂಬಲ್ಲಿಗೇ ನಮ್ಮ ಮಾತು ನಿಲ್ಲುತ್ತದೆ. ಕನಿಷ್ಠ ರಾಜ್ಯ ಇಂತಹ ಸಮಸ್ಯೆ ಎದುರಿಸುತ್ತಿರುವಾಗ ವಿದ್ಯುತ್ ಉತ್ಪಾದನೆಯ ಬಗ್ಗೆ ಚಿಂತಿಸುವುದಿರಲಿ ನಮ್ಮ ಮನೆಯಲ್ಲಿ, ಕಛೇರಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವಿದ್ಯುತ್ ಪೋಲಾಗುವುದನ್ನು ತಡೆಯಬಹುದು ಎಂಬುದನ್ನೂ ನಾವು ಯೋಚಿಸುವುದಿಲ್ಲ. ನಾನೊಬ್ಬ ಉಳಿಸಿದರೆ ಎಷ್ಟು ಮಹಾ ಉಳಿದೀತು ಎಂಬ ಉದಾಸೀನ ದೋರಣೆಯೇ ನಮ್ಮದು.
ಹೀಗೆ ನಾವು ವ್ಯವಸ್ಥೆಯನ್ನು ಶಪಿಸುತ್ತಾ, ಉದಾಸೀನ ತೋರುತ್ತಾ ಕುಳಿತಿರುವಾಗಲೇ ಶೇಕಡ ೫ ರಷ್ಟಾದರೂ ಜನ, ಸಮಸ್ಯೆಯ ಪರಿಹಾರಕ್ಕೆ ಪರಿತಪಿಸುತ್ತಾರೆ, ತಮ್ಮ ಕೈಲಾದ ಮಟ್ಟಿಗೆ ಸಮಸ್ಯೆಯ ನಿವಾರಣೆಗೆ ಪ್ರಯತ್ನಿಸುತ್ತಿರುತ್ತಾರೆ. ಹೀಗೆ ಹೇಳುವಾಗ ನೆನಪಾಗುವವನು ವಿಲಿಯಂ ಕ್ವಾಂಬಾ. ಈತನದು ಆಫ್ರೀಕಾದ ಮಲಾವಿ ಎಂಬ ಕಡುಬಡರಾಷ್ಟ್ರ. ಭಾರತವೆಂದರೆ ಇನ್ನೂ ಮುಂದುವರಿಯುತ್ತಿರುವ ರಾಷ್ಟ್ರ, ಬಡತನ, ಕೊಳಗೇರಿಗಳು, ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಅನೇಕರನ್ನು ಒಳಗೊಂಡ ನಾಡು ಎಂದು ನಾವು ಶಪಿಸುತ್ತೇವೆ. ಆದರೆ ಪ್ರಪಂಚದ ಎಷ್ಠೋ ರಾಷ್ಟ್ರಗಳಲ್ಲಿ ನಮಗಿರುವಷ್ಟೂ ಸೌಲಭ್ಯಗಳಿಲ್ಲ. ಮಲಾವಿ ಕೂಡ ಅಂತಹದೇ ದೇಶ. ಹೆಚ್ಚಿನವರು ವ್ಯವಸಾಯ ಮಾಡುತ್ತಾರಾದರೂ ಅನೇಕ ಊರುಗಳಲ್ಲಿ ಇಂದಿಗೂ ವಿದ್ಯುತ್ ಸೌಲಭ್ಯವಿಲ್ಲ. ಇನ್ನು ಕೆಲವು ನಗರಗಳಲ್ಲಿ ಕೆಲವು ಗಂಟೆಗಳ ವಿದ್ಯುತ್ ಸೌಲಭ್ಯ ಮಾತ್ರ. ವಿಲಿಯಂ ತನ್ನ ಬಡರಾಷ್ಟ್ರದ ಕಥೆ ವಿವರಿಸುತ್ತಿದ್ದರೆ ಕರುಳು ಹಿಂಡಿದ ಅನುಭವವಾಗುತ್ತದೆ. ಅಲ್ಲಿನ ಜನರದ್ದೇನಿದ್ದರೂ ಸೂರ್ಯ ಇರುವಷ್ಟು ಹೊತ್ತು ಮಾತ್ರ ಕೆಲಸ, ತಿರುಗಾಟ. ಮಕ್ಕಳಿಗೆ ಶಾಲೆಗಳು ದುರ್ಲಭ. ಎಲ್ಲೋ ಒಂದೆರಡು ಶಾಲೆಗಳಿದ್ದರೂ ಅಲ್ಲಿ ಸೌಲಭ್ಯಗಳಿಲ್ಲ. ಓದೇನಿದ್ದರೂ ದೀಪದ ಬೆಳಕಿನಲ್ಲಿ. ವಿದ್ಯುತ್ ಇಲ್ಲವಾದ್ದರಿಂದ ಕಾರ್ಖಾನೆಗಳು ನಡೆಯುವುದಿಲ್ಲ. ಇನ್ನು ಜನಕ್ಕೆ ಉದ್ಯೋಗ ಎಲ್ಲಿಂದ? ಆದ್ದರಿಂದ ಬಹುತೇಕರು ನೆಚ್ಚಿಕೊಂಡಿರುವುದೇ ಬೇಸಾಯ. ಇನ್ನು ಪ್ರಕೃತಿ ವಿಕೋಪ ಉಂಟಾಗಿ, ಬರ ಆವರಿಸಿದರೆ, ಬೇಸಾಯವೂ ಸಾಧ್ಯವಾಗುವುದಿಲ್ಲ.
ಆ ದೇಶದ ರಾಜಕಾರಣಿಗಳು ನಮ್ಮಲ್ಲಿನ ರಾಜಕಾರಣಿಗಳ ತರಹ ಆಶ್ವಾಸನೆ ನೀಡುವವರೆ ಹೊರತು ಜನರ ಉದ್ದಾರಕ್ಕಾಗಿ ಯಾವುದೇ ಯೋಜನೆಯನ್ನು ಅನುಷ್ಠಾನಕ್ಕೆ ತರುವವರಲ್ಲ. ಅಲ್ಲಿನ ಅಧ್ಯಕ್ಷೀಯ ಚುನಾವಣೆಗೆ ನಿಂತ ಮಹನೀಯನೊಬ್ಬ, ನನಗೆ ಮತ ನೀಡಿದರೆ ಎಲ್ಲರಿಗೂ ಉಚಿತ ಚಪ್ಪಲಿ ನೀಡುವುದಾಗಿ ಹೇಳಿ ನಂತರ ಗೆದ್ದ ಮೇಲೆ ಚಪ್ಪಲಿ ನೀಡಲು ಆಗುವುದಿಲ್ಲ, ಏಕೆಂದರೆ ನಿಮ್ಮ ಪಾದಗಳ ಅಳತೆ ಬೇರೆಬೇರೆ ಇರುತ್ತದೆ, ಅಳತೆ ಗೊತ್ತಾಗುವುದಿಲ್ಲ ಎಂದು ಸಬೂಬು ನೀಡಿದ್ದನಂತೆ. ಇದು ತಮಾಷೆಯಾಗಿ ಕಂಡರು. ಅಲ್ಲಿನ ಜನ ಕೇವಲ ಚಪ್ಪಲಿಗಾಗಿ ಮತಹಾಕುತ್ತಾರೆಂದರೆ ಅವರ ದಯನೀಯ ಸ್ಥಿತಿಯ ಬಗ್ಗೆ ಊಹಿಸಿ.
ಇಂತಹ ಬಡರಾಷ್ಟ್ರದ ಒಬ್ಬ ಸಾಧಾರಣ ಯುವಕ ವಿಲಿಯಂ ಇಂದು ತಲುಪಿರುವ ಹಂತ ನೋಡಿದರೆ ಆಶ್ಚರ್ಯವಾಗುವುದು ದಿಟ. ಇಂದು ವಿಲಿಯಂ ಅಮೇರಿಕದಲ್ಲಿ ಮಾತಿಗೆ ನಿಂತರೆ, ಡಾಕ್ಟರೇಟ್ ಮಾಡಿರುವವರು, ವಿಜ್ನಾನಿಗಳು, ತಂತ್ರಜ್ನರು ಆತನ ಮಾತನ್ನು ತದೇಕಚಿತ್ತದಿಂದ ಆಲಿಸುತ್ತಾರೆ. ಅವನ ಮಾತಿನ ಕೊನೆಗೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸುತ್ತಾರೆ. ಕನಿಷ್ಠ ೧೦ ನಿಮಿಷದ ಚಪ್ಪಾಳೆ ಮೊಳಗುತ್ತದೆ. ವಿಲಿಯಂ ಕ್ವಾಂಬಾ ಅಂತಹ ಗೌರವಕ್ಕೆ ಅರ್ಹ ಎಂಬುದರಲ್ಲಿ ಎರಡು ಮಾತಿಲ್ಲ. ಆತ ಮಾಡಿದ್ದು ಸಾಮಾನ್ಯ ಕಾರ್ಯವೇನಲ್ಲ. ತನ್ನ ಊರಿಗೆ, ತನ್ನ ಜನಗಳಿಗೆ ವಿದ್ಯುತ್ ಎಂಬ ತೀರಾ ದೈನಂದಿನ ಅವಶ್ಯವನ್ನ ಒದಗಿಸುವಲ್ಲಿ ಸಫಲನಾಗಿದ್ದಾನೆ. ತನ್ನೂರಿನ ಜನರ ಪ್ರೀತಿ, ವಿಶ್ವಾಸಗಳಿಸಿದ್ದಾನೆ. ಅವರ ಬದುಕಿಗೊಂದು ಭರವಸೆ ನೀಡಿದ್ದಾನೆ. ಕತ್ತಲಿನಿಂದ ಬೆಳಕಿನೆಡೆಗೆ ತನ್ನವರನ್ನು ಕರೆತಂದಿದ್ದಾನೆ.
ಈ ಸಫಲತೆಯಲ್ಲಿ ಆತ ಕ್ರಮಿಸಿದ ಹಾದಿಯನ್ನು ಗಮನಿಸಬೇಕು. ಬಾಲ್ಯದಿಂದಲೂ ಬಡತನವನ್ನೇ ಕಂಡುಂಡು ಬೆಳೆದ ವಿಲಿಯಂಗೆ ಮೊದಲಿನಿಂದಲೂ ಪ್ರಶ್ನಿಸುವ ಮನೋಭಾವ. ಎಲ್ಲವನ್ನೂ ಭೇಧಿಸಿ ನೋಡುವ ಕುತೂಹಲ. ರೇಡಿಯೋ ಕಾರ್ಯನಿರ್ವಹಿಸುವುದು ಹೇಗೆ? ವಿದ್ಯುತ್ ಇಲ್ಲದೇ ಕೇವಲ ಸೆಲ್ ಗಳಿಂದ ಅದು ಹೇಗೆ ಶಕ್ತಿ ಪಡೆದುಕೊಳ್ಳುತ್ತದೆ. ಸೈಕಲ್ ಮುಂಭಾಗದ ದೀಪ ಉರಿಯುವುದು ಹೇಗೆ? ಇತ್ಯಾದಿ ಕುತೂಹಲಗಳನ್ನಿಟ್ಟುಕೊಂಡ ವಿಲಿಯಂ ಕ್ವಾಂಬ ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವತ್ತ ಸಾಗಿದವನು. ಮನೆಯಲ್ಲಿನ ಬಡತನದಿಂದ ಶಾಲೆಗೆ ಶುಲ್ಕ ತುಂಬಲಾರದೆ ಶಾಲೆ ಬಿಟ್ಟರೂ, ಏನನ್ನಾದರೂ ಓದಬೇಕು ಎಂಬ ಕುತೂಹಲವಿದ್ದೇ ಇತ್ತು. ಅಷ್ಟರಲ್ಲಾಗಲೇ ರೇಡಿಯೋ ಇತ್ಯಾದಿ ಸಣ್ಣ ಪುಟ್ಟ ಎಲೆಕ್ಟ್ರಾನಿಕ್ ಉಪಕರಣಗಳ ದುರಸ್ಥಿ ಕೈಹಿಡಿದಿತ್ತು. ಬಿಡುವಿನ ಸಮಯದಲ್ಲಿ ಗ್ರಂಥಾಲಯ ಹೊಕ್ಕು ಅಲ್ಲಿದ್ದ ಪುಸ್ತಕಗಳನ್ನು ಕೈಗೆತ್ತಿಕೊಳ್ಳುತ್ತಿದ್ದ ವಿಲಿಯಂಗೆ ಒಂದು ದಿನ Using Energy ಎಂಬ ಪುಸ್ತಕ ಕೈಗೆ ಎಡತಾಕಿತು. ಆದರೆ ಅವನಿಗೆ ಇಂಗ್ಲೀಷ್ ಓದಲು ಬರುತ್ತಿರಲಿಲ್ಲ. ಅದರಲ್ಲಿನ ಚಿತ್ರಗಳನ್ನು ಗಮನಿಸುತ್ತಾ ಹೋದ, ಪ್ರಯೋಗಶೀಲ ಮನಸ್ಸಿಗೆ ಅಷ್ಟು ಸಾಕಿತ್ತು.
ತನ್ನದೇ ಆದ ಕಲ್ಪನೆಯಲ್ಲಿ ವಿಲಿಯಂ ವಿಂಡ್ ಮಿಲ್ ನ ವಿನ್ಯಾಸ ಮಾಡಲು ಪ್ರಾರಂಭಿಸಿದ. ಅದಕ್ಕೆ ಬಳಸಿದ ವಸ್ತುಗಳಾದರೂ ಎಂತಹದು, ಅಂಟು ಮರದ ಹಲಗೆಗಳು, ಪಿವಿಸಿ ಪೈಪುಗಳು, ಗುಜರಿಯಲ್ಲಿ ಸಿಕ್ಕ ಕಬ್ಬಿಣ, ಸೈಕಲ್ ನ ಡೈನಾಮೋ, ಟ್ರ್ಯಾಕ್ಟರ್ ನ ಫ್ಯಾನ್ ಇತ್ಯಾದಿ ಉಪಯೋಗಕ್ಕೆ ಬಾರದ ವಸ್ತುಗಳು. ಇವೆಲ್ಲವನ್ನೂ ತೆಗೆದುಕೊಂಡು ವಿದ್ಯುತ್ ಉತ್ಪಾದಿಸುತ್ತೇನೆ ಎಂದು ಹೇಳಿದಾಗ ಸ್ನೇಹಿತರೂ, ನೆರೆಹೊರೆಯ ಜನರು ಗಹಗಹಿಸಿ ನಕ್ಕಿದ್ದರು. ಕೆಲವರು ಅಸಡ್ಡೆ ನೋಟ ಬೀರಿದ್ದರು. ಆದರೂ ಯುವಕ ವಿಲಿಯಂ ತನ್ನ ಪ್ರಯತ್ನ ಬಿಡಲಿಲ್ಲ. ತಾನು ಮಾಡಿಟ್ಟುಕೊಂಡ ವಿನ್ಯಾಸದಂತೆ ಆ ವಸ್ತುಗಳನ್ನು ಜೋಡಿಸುತ್ತಾ ಹೋದ. ಕೆಲದಿನಗಳಲ್ಲೇ ತನ್ನ ಮನೆಯ ಮುಂದೆಯೇ ೩೯ ಅಡಿಯಷ್ಟು ದೊಡ್ಡ ಗಾಳಿ ಚಕ್ರವನ್ನು ನಿಲ್ಲಿಸಿಬಿಟ್ಟ. ಮೊದಲಿಗೆ ಅದು ಅಂದುಕೊಂಡಂತೆ ಕಾರ್ಯನಿರ್ವಹಿಸಲಿಲ್ಲ. ನಂತರ ತಪ್ಪುಗಳನ್ನು ಸರಿಪಡಿಸುತ್ತಾ ಬಂದ ವಿಲಿಯಂ, ಕೆಲದಿನಗಳಲ್ಲೇ ಅದು ಕಾರ್ಯನಿರ್ವಹಿಸುವಂತೆ ಮಾಡಿದ. ತನ್ನ ಮನೆಯ ಒಂದು ಬಲ್ಬ್ ಉರಿದು ಬೆಳಕು ಬಂದಾಗ ಕುಪ್ಪಳಿಸಿ ಸಂತಸ ಪಟ್ಟಿದ್ದ. ಆಗ ಅಲ್ಲಿನ ಜನ ಭಲೇ ವಿಲಿಯಂ ಎಂದಿದ್ದರು.
ಸಿಕ್ಕ ಚಿಕ್ಕದೊಂದು ಗೆಲುವು, ಸಣ್ಣ ಹೊಗಳಿಕೆ,ಪ್ರೋತ್ಸಾಹ ಅವನ ಆತ್ಮವಿಶ್ವಾಸವನ್ನು ಇಮ್ಮಡಿಯಾಗಿಸಿತು. ಮತ್ತೊಂದು ಪ್ರಯತ್ನದಲ್ಲಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಗಾಳಿ ಚಕ್ರವನ್ನು ನಿಲ್ಲಿಸಿದ್ದ. ಅದು ಒಂದು ಪಂಪ್ಸೆಟ್, ನಾಲ್ಕು ಬಲ್ಬ್ ಮತ್ತು ರೇಡಿಯೋಗೆ ವಿದ್ಯುತ್ ಸರಬರಾಜು ಮಾಡುವಷ್ಟು ಸಾಮರ್ಥ್ಯ ಹೊಂದಿತ್ತು. ಅಲ್ಲಿಗೆ ವಿಲಿಯಂನ ಅದೃಷ್ಠ ಕುಲಾಯಿಸಿತು. ಸ್ಥಳೀಯ ಪತ್ರಿಕೆ ಈತನ ಬಗ್ಗೆ ವರದಿಮಾಡಿತು. ನಂತರ ಅದು ಅಂತರಾಷ್ಟ್ರೀಯ ಸುದ್ದಿಯಾಯಿತು. ಅನೇಕರು ಈತನ ಓದಿಗೆ ಸಹಾಯ ಹಸ್ತ ಚಾಚಿದರು. ಜಗತ್ತಿನ ಅತ್ಯುತ್ತಮ ಶಾಲೆಗಳು ಈತನಿಗೆ ಸ್ಕಾಲರ್ಶಿಪ್ ನೊಂದಿಗೆ ಆಹ್ವಾನ ನೀಡಿದವು. ಅಮೇರಿಕ ವಿಲಿಯಂನನ್ನು ಬರಮಾಡಿಕೊಂಡು ಓದಲಿಕ್ಕೆ ಪ್ರೋತ್ಸಾಹ ನೀಡಿತು. ಇದೇವರ್ಷ ಗೂಗಲ್ ವಿಜ್ನಾನ ಮೇಳದಲ್ಲಿ ಈತನನ್ನು ಅತಿಥಿ ಉಪನ್ಯಾಸಕನಾಗಿ ಆಹ್ವಾನಿಸಲಾಗಿತ್ತು.
ಇಂಗ್ಲೀಷ್ ಬರದ ಯುವಕ ವಿಲಿಯಂ ಇಂದು ತಡವರಿಸುತ್ತ ಇಂಗ್ಲೀಷ್ ಮಾತನಾಡುತ್ತಾನಾದರೂ ಆತನ ಮಾತಿಗೆ ಕಿವಿಯಾಗಲು ಅನೇಕರು ಉತ್ಸುಕರಾಗಿರುತ್ತಾರೆ. ವಿಲಿಯಂನ ತಲೆಯಲ್ಲಿ ಇನ್ನೂ ಅನೇಕ ಯೋಜನೆಗಳು ಕಾವು ಪಡೆಯುತ್ತಿವೆ. ಸ್ಟೀಮ್ ಇಂಜಿನ್, ಕೊಳವೆ ಬಾವಿಯಂತ್ರಗಳನ್ನು ತನ್ನ ಜನರಿಗೆ ಅಲ್ಲೇ ದೊರೆಯುವ ಸಾಮಾಗ್ರಿಗಳಿಂದ ಕಡಿಮೆ ಖರ್ಚಿನಲ್ಲಿ ಮಾಡಿಕೊಡಬೇಕು ಎಂಬ ಕನಸಿದೆ. ತನ್ನ ಬಿಡುವಿನ ವೇಳೆಯಲ್ಲಿ ತನ್ನ ದೇಶದ ಮಕ್ಕಳೊಂದಿಗೆ ಸಮಯಕಳೆದು ವಿಜ್ನಾನದ ಬಗ್ಗೆ ಅವರ ಗಮನ ಸೆಳೆಯುತ್ತಿರುವ ವಿಲಿಯಂ ಹೇಳುವ ಮಾತು ಒಂದೇ, ’ಆತ್ಮವಿಶ್ವಾಸ ಬೆಳೆಸಿಕೊಳ್ಳಿ, ಕಂಡ ಕನಸನ್ನು ನನಸಾಗಿಸಿಕೊಳ್ಳುವತ್ತ ಶ್ರಮ ಪಟ್ಟು ದುಡಿಯಿರಿ, ವೈಫಲ್ಯದಿಂದ ವಿಚಲಿತರಾಗಿ ಪ್ರಯತ್ನ ಬಿಟ್ಟುಕೊಡಬೇಡಿ’ . ನನ್ನಂತಹ ಅನೇಕ ಕ್ರಿಯಾಶೀಲ, ಪ್ರಯೋಗಶೀಲ ಯುವಕರು ಎಲ್ಲದೇಶಗಳಲ್ಲೂ ಇದ್ದಾರೆ, ನಾವುಗಳು ಅದನ್ನು ಉಪಯೋಗಿಸಿಕೊಂಡು ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಿಕ್ಕೆ ಪ್ರಯತ್ನಿಸಿದರೆ, ಭ್ರಷ್ಠ ಸರ್ಕಾರಗಳನ್ನು ಅವಲಂಬಿಸಬೇಕಿಲ್ಲ, ಇನ್ನಿತರ ದೇಶಗಳತ್ತ ಸಹಾಯಕ್ಕೆ ಹಸ್ತ ಚಾಚಬೇಕಿಲ್ಲ. ಬನ್ನಿ ಬಡತನ ಮುಕ್ತ ಆಫ್ರಿಕ ಕಟ್ಟೋಣ ಅನ್ನುತ್ತಾನೆ ವಿಲಿಯಂ. ವಿಲಿಯಂ ಅವನ ಜನರಿಗೆ ವಿದ್ಯುತ್ ಮಾತ್ರ ನೀಡಲಿಲ್ಲ, ಭರವಸೆ, ಆತ್ಮವಿಶ್ವಾಸವನ್ನೂ ನೀಡಿದ. ಅವನ ಮಾತು, ಪ್ರಯೋಗಶೀಲತೆ, ಆತ್ಮವಿಶ್ವಾಸ ಭಾರತದ ಯುವಕರಿಗೆ ಆದರ್ಶವಾದರೆ, ವ್ಯವಸ್ಥೆಯನ್ನು ಜರಿಯುತ್ತಾ ಕೂರವ ವ್ಯಾಧಿ ವಾಸಿಯಾಗಬಹುದೇನೋ. ವಿಲಿಯಂನತಹ ಯುವಕರು ಭಾರತದಲ್ಲೂ ಇದ್ದಾರೆ, ಅವರ ಸಂತತಿ ಸಾವಿರ ಸಾವಿರವಾಗಬೇಕಿದೆ.



