Skip to content

ನೋಬಲ್ ಜಾಬ್, ನೋಟುಗಳಿಸುವ ಜಾಬ್ ಆಗಿರುವಾಗ!

December 9, 2011

                ಅಂತಹದೊಂದು ಅನುಮಾನವಿದ್ದೇ ಇದೆ. ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿವೆಯಾ? ಪತ್ರಕರ್ತರು ಪಾವಿತ್ರ್ಯ ಉಳಿಸಿಕೊಂಡಿದ್ದಾರಾ? ಮಾಧ್ಯಮಗಳು ಉದ್ಯಮಿಗಳ ಕೈಗೊಂಬೆಯಾಗುತ್ತಿದೆಯಾ? ರಾಜಕಾರಣಿಗಳು ಲೇಖನಿ ಹಿಡಿದವರನ್ನು ನಿಯಂತ್ರಿಸುತ್ತಿದ್ದಾರಾ? ಸಮಾಜದ ಒಳಿತಿಗಾಗಿ ದುಡಿಯುವ ಪ್ರತಿಜ್ನೆ ಮಾಡಿ ಲೇಖನಿ ಹಿಡಿದವರು, ಅದನ್ನೇ ಬ್ಲಾಕ್ಲ್ ಮೈಲ್ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರಾ? ಸಂವಿಧಾನದ ನಾಲ್ಕನೇ ಆಧಾರ ಸ್ತಂಭ ತುಕ್ಕುಹಿಡಿದು ಶಿಥಿಲಗೊಳ್ಳುವತ್ತ ಸಾಗಿದೆಯಾ? ದಶಕಗಳ ಹಿಂದೆ ಪತ್ರಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದ ಓದುಗ, ಈಗಲೂ ಅಷ್ಠೇ ಆಸ್ಥೆಯಿಂದ ಪತ್ರಿಕೆಯನ್ನು ಕೈಗೆತ್ತಿಕೊಳ್ಳುತ್ತಾನಾ? ಪತ್ರಿಕೆಗಳು ಓದುಗರಲ್ಲಿ ಒಂದು ಚಿಂತನೆಯನ್ನ ಹುಟ್ಟುಹಾಕುವಲ್ಲಿ ವಿಫಲವಾಗುತ್ತಿದೆಯಾ? ಪ್ಯಾಕೇಜ್ ಜರ್ನಲಿಸಂ ಕನ್ನಡ ಮಾಧ್ಯಮಗಳಿಗೆ ಇಷ್ಟು ಬೇಗ ಅಂಟಿಕೊಂಡುಬಿಟ್ಟಿತಾ? ಮೌಲ್ಯಗಳು, ಪ್ರಾಮಾಣಿಕತೆ ಲೇಖನದಲ್ಲಷ್ಠೇ ಉಳಿದು, ಸುದ್ದಿಮನೆಯಿಂದ ಕಾಲ್ಕಿತ್ತಿವೆಯಾ?

                 ಇದಿಷ್ಟು ಅನುಮಾನಗಳು ಅನೇಕ ಪತ್ರಿಕಾ ಓದುಗರನ್ನ, ದೃಶ್ಯ ಮಾಧ್ಯಮಗಳ ನೋಡುಗರನ್ನ ಪದೇ ಪದೇ ಕಾಡುತ್ತಲೇ ಇರುತ್ತವೆ. ಅದರಲ್ಲೂ ಕಳೆದ ಕೆಲವರ್ಷಗಳಿಂದ ಮಾಧ್ಯಮಗಳು ತುಳಿಯುತ್ತಿರುವ ಹಾದಿಯನ್ನು ಗಮನಿಸಿದರೆ ಇಂತಹ ಅನುಮಾನಗಳು ಮೂಡುವುದು ಸಹಜವೇ. ಇತ್ತೀಚೆಗೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮುಖ್ಯಸ್ಥರಾಗಿರುವ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು  ಒಂದು ಸುದ್ದಿವಾಹಿನಿಗೆ ಸಂದರ್ಶನ ಕೊಡುತ್ತಾ ಪತ್ರಕರ್ತರ ಮತ್ತು ಮಾಧ್ಯಮಗಳ ವಿಶ್ವಾಸರ್ಹತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ತಮ್ಮ ಖಾರವಾದ ಉತ್ತರಗಳಿಂದ ಸ್ವತಃ ಸಂದರ್ಶಕನಿಗೇ ಅಚ್ಚರಿಯಾಗುವಂತೆ ಮನಬಿಚ್ಚಿಮಾತನಾಡಿದ್ದರು. ಹಾಗೆ ನೋಡಿದರೆ ಈ ಬಗ್ಗೆ ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ ಪತ್ರಿಕೆ ಮತ್ತು ಇಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಗಂಭೀರ ಚರ್ಚೆ ಆಗಬೇಕಿತ್ತು. ಆದರೆ ಅಂತಹ ಮಹತ್ವದ ಚರ್ಚೆಗಳು ನಡೆಯಲಿಲ್ಲ, ಕೆಲವು ಪತ್ರಕರ್ತರು ಖಟ್ಜು ನಿಲುವನ್ನು ಟೀಕಿಸಿದರು. ಖಟ್ಜು ಹೇಳಿದ್ದರಲ್ಲಿ ಎಲ್ಲವೂ ಒಪ್ಪಿಕೊಳ್ಳಲು ಸಾಧ್ಯವಾಗದೇ ಇದ್ದರೂ ಕೆಲವೊಂದು ಮಾತುಗಳಾದರೂ ಕನಿಷ್ಠ ಪಕ್ಷ ಪತ್ರಕರ್ತರನ್ನ ಆತ್ಮಾವಲೋಕನಕ್ಕೆ ಹಚ್ಚಿದ್ದರೂ ಸಾಕಿತ್ತು. ಅದು ಕೂಡ ಆದಂತೆ ತೋರುತ್ತಿಲ್ಲ.

                   ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮ ಕ್ಷೇತ್ರದ ವಿಶ್ವಾಸಾರ್ಹತೆಗೆ ಮೊದಲು ಪೆಟ್ಟು ಕೊಟ್ಟದ್ದು  ’ಪೇಯ್ಡ್ ನ್ಯೂಸ್’  ಕಳಂಕ. ಈ ಹಿಂದೆ ೨೦೦೯ ರಲ್ಲಿ ಮಾಧ್ಯಮಗಳ ಗೋಸುಂಬೆತನ ಮತ್ತು ಕೆಲವು ಪತ್ರಿಕೆಗಳು, ಸುದ್ದಿವಾಹಿನಿಗಳು ಹೇಗೆ ಪೇಯ್ಡ್ ನ್ಯೂಸ್ ನ ಲಾಭಿಗಿಳಿದಿವೆ ಎಂಬುದನ್ನು ಪತ್ರಕರ್ತ ಪಿ.ಸಾಯಿನಾಥ್ ಹಿಂದೂ ಪತ್ರಿಕೆಯ ತಮ್ಮ ಲೇಖನದಲ್ಲಿ ಎಳೆ ಎಳೆಯಾಗಿ ವಿವರಿಸಿದ್ದರು. ಅದೇ ವರ್ಷ ಲೋಕಸಭಾ ಚುನಾವಣೆ ನಡೆದ ಸಂದರ್ಭದಲ್ಲಿ ಹೇಗೆ ಕೆಲವು ಪತ್ರಿಕೆಗಳು ರಾಜಕಾರಣಿಗಳ ಹಿಂದೆ ಬಿದ್ದವು. ಕಾಸು ಪಡೆದು ಪುಟಗಟ್ಟಲೆ ಅವರ ಸಾಧನೆಯ ಬಗ್ಗೆ ಬರೆದವು, ಸಂಪಾದಕೀಯವನ್ನೂ ಲಾಭಿಗೆ ಹೇಗೆ ಬಳಸಿಕೊಂಡವು ಎಂಬುದನ್ನು ಸಾಯಿನಾಥ್ ಅಂಜಿಕೆಯಿಲ್ಲದೆ ಹೇಳಿದ್ದರು. ನಂತರ ಜೌಟ್ ಲುಕ್ ಪತ್ರಿಕೆ ಆ ವಿಷಯದ ಬಗ್ಗೆಯೇ ’ಪೆಯ್ಡ್ ನ್ಯೂಸ್ ಆಫ್ ಇಂಡಿಯಾ’ ಎಂಬ ಮುಖಪುಟದ ಸಂಚಿಕೆ ತಂದಿತು. ಅನೇಕ ರಾಜಕಾರಣಿಗಳು ಯಾರ್ಯಾರು ತಮ್ಮನ್ನು ಹಣಕ್ಕಾಗಿ ಚುನಾವಣಾ ಸಮಯದಲ್ಲಿ ಸಂಪರ್ಕಿಸಿದರು ಎಂಬ ಮಾಹಿತಿ ಬಹಿರಂಗ ಪಡಿಸಿದರು. ಅನೇಕ ಪತ್ರಿಕೆಗಳಲ್ಲಿ ೨-೩ ಲಕ್ಷಕ್ಕೆಲ್ಲಾ ಅರ್ಧ ಪುಟ ಬಿಕರಿಯಾಗಿತ್ತು. ಮಾಧ್ಯಮಗಳ ಈ ನಾಚಿಕೆಗೇಡಿನ ಸಂಗತಿಯ ಬಗ್ಗೆ ಒಂದಷ್ಟು ಚರ್ಚೆಗಳಾಗಿದ್ದು ನಿಜ. ಆದರೆ ಅದರಿಂದ ಬದಲಾವಣೆಯೇನೂ ಕಾಣಲಿಲ್ಲ. ಪ್ರೆಸ್ ಕೌನ್ಸಿಲ್ ಒಂದು ತಂಡ ರಚಿಸಿ ಆ ಬಗ್ಗೆ ತನಿಖೆ ನೆಡೆಸಿ ಒಂದು ವರದಿಯನ್ನೂ ಸಿದ್ದಪಡಿಸಿತು. ಯಾವೆಲ್ಲಾ ಭಾಷೆಯ ಪತ್ರಿಕೆ ಮತ್ತು ಸುದ್ದಿವಾಹಿನಿಗಳು ಪೇಯ್ಡ್ ನ್ಯೂಸ್ ಲಾಭಿಯಲ್ಲಿ ಭಾಗಿಯಾಗಿದ್ದವು ಎಂಬ ವಿವರಣೆ ಕೂಡ ವರದಿಯಲ್ಲಿ ಕಾಣಿಸಿತು. ಆದರೆ ಆ ವರದಿಯನ್ನು ಕೂಡ ಮಾಧ್ಯಮಗಳು ಮುಟ್ಟಿ ನೋಡಲಿಲ್ಲ. ಆದ್ದರಿಂದ ಆ ವರದಿಯಲ್ಲಿನ ಸತ್ಯಗಳು ಜನರಿಗೆ ತಲುಪಲಿಲ್ಲ.

                  ’ಮಾಧ್ಯಮಗಳಲ್ಲಿ ಮೂಲಭೂತವಾಗಿ ಇರಬೇಕಿದ್ದ ನಿಸ್ಪಕ್ಷಪಾತ, ಸಮಗ್ರತೆ ಮತ್ತು ವಿಶ್ವಾಸಾರ್ಹತೆಗಳು ಇಂದು ಬಿಕರಿಗಿವೆ. ಕೇವಲ ಪ್ರಸರಣ ಸಂಖ್ಯೆ ಮತ್ತು ಟಿ.ಆರ್.ಪಿ ಯ ಬಾಲ ಹಿಡಿದು ಓಡುತ್ತಿರುವ ಮಾಧ್ಯಮಗಳಿಗೆ ಮೌಲ್ಯಗಳು ತೊಡಕಾಗಿ ಕಾಣುತ್ತದೆ. ಪತ್ರಿಕೋದ್ಯಮ ಕ್ಷೇತ್ರ ಒಂದು ಉದ್ಯಮವಾಗಿ ಕಂಡವರಿಗೆ ಮೌಲ್ಯಗಳನ್ನು ನೆಚ್ಚಿಕೊಂಡು ಆಗಬೇಕಾಗಿದ್ದೇನಿದೆ. ಅಲ್ಲೇನಿದ್ದರೂ ಟಿ.ಆರ್. ಪಿ, ಪ್ರಸರಣಸಂಖ್ಯೆ ಇವುಗಳಲ್ಲೇ ಮೌಲ್ಯಮಾಪನ. ಹಾಗಾಗುತ್ತಿರುವುದು ದುರಂತ’ ಎನ್ನುತ್ತಾರೆ ರಿಚರ್ಡ್ ಬೆನೆಡೆಟ್ಟೊ. ಅವರ ’ಪೊಲಿಟೀಷಿಯನ್ಸ್ ಆರ್ ಪೀಪಲ್ ಟೂ’ ಪುಸ್ತಕವನ್ನು ತಿರುವಿಹಾಕುವಾಗ ಸುದ್ದಿಮನೆಯಲ್ಲಿನ ಅನೇಕ ಒಳಗುಟ್ಟುಗಳು ರಟ್ಟಾಗುತ್ತಾ ಹೋಯಿತು. ರಿಚರ್ಡ್, ’ಬಫೆಲೋ ನ್ಯೂಸ್’, ’ದಿ ನ್ಯೂಸ್’ ಮತ್ತು ’ಯು.ಎಸ್.ಎ ಟುಡೆ” ಪತ್ರಿಕೆಗಳಲ್ಲಿ ವರದಿಗಾರರಾಗಿ ದುಡಿದವರು. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿದವರು. ಅಮೇರಿಕದ ಅಧ್ಯಕ್ಷರಾಗಿದ್ದ ಹಲವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರು. ಅಧ್ಯಕ್ಷರು ಪಯಣಿಸುವ ’ಏರ್ಪೋರ್ಸ್ ಒನ್’ನಲ್ಲಿ ಅನೇಕ ವೇಳೆ ಅಧ್ಯಕ್ಷರಿಗೆ ಜತೆಯಾದವರು. ಪ್ರಸರಣ ಸಂಖ್ಯೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪತ್ರಿಕೆಗಳು ಏನೆಲ್ಲಾ ಮಾಡುತ್ತವೆ ಎಂಬುದರ ಬಗ್ಗೆ ಅವರು ಬರೆಯುತ್ತಾರೆ. ಅತಿಯಾದ ಸುದ್ದಿಯ ವೈಭವೀಕರಣ, ಗಾಳಿ ಸುದ್ದಿಗಳಿಗೆ ಪ್ರಾಶಸ್ತ್ಯ, ಸಿನಿಮಾನಟರ, ರಾಜಕಾರಣಿಗಳ ವಯುಕ್ತಿಕ ಬದುಕಿನ ಗುಟ್ಟುಗಳತ್ತಲೇ ಗಮನ, ಸಂಘರ್ಷ ಉಂಟುಮಾಡಬಲ್ಲ ಸಂಗತಿಗಳಿಗೆ ಮೊದಲ ಆದ್ಯತೆ ಕೊಡುವುದು, ಯಾವುದೋ ವಿವಾದಾಸ್ಪದ ವಿಷಯ ಎಳೆದು ತಂದು ಸಂವಾದಕ್ಕೆ ನಿಲ್ಲುವುದು, ಇವೆಲ್ಲಾ ಪ್ರಸರಣ ಸಂಖ್ಯೆ ಹೆಚ್ಚಿಸಿಕೊಳ್ಳುವ ತಂತ್ರಗಳು ಎನ್ನುತ್ತಾರೆ ರಿಚರ್ಡ್. ಇದನ್ನು ಓದುವಾಗ ಕನ್ನಡದ ಕೆಲ ಪತ್ರಿಕೆಗಳು ನೆಚ್ಚಿಕೊಂಡಿರುವುದು ಈ ಅಂಶಗಳನ್ನೇ ಅಲ್ಲವೆ ಅನ್ನಿಸಿದ್ದು ಸುಳ್ಳಲ್ಲ.

                  ಇನ್ನು ನಮ್ಮ ದೃಶ್ಯ ಮಾಧ್ಯಮಗಳನ್ನೇ ತೆಗೆದುಕೊಳ್ಳಿ. ಅವು ಕೇವಲ ಭವಿಷ್ಯ,ವಾಸ್ತು, ಪುನರ್ಜನ್ಮ, ರಿಯಾಲಿಟಿ ಷೋ ಇತ್ಯಾದಿಗಳಿಗೆ ಜೋತು ಬಿದ್ದಿವೆ. ಮೌಡ್ಯತೆ ಬಿತ್ತುವಲ್ಲಿ ಸ್ಪರ್ಧೆಗೆ ನಿಂತಿವೆ. ಇತ್ತೀಚೆಗೆ ಐಶ್ವರ್ಯ ರೈಗೆ ಮಗುವಾಗುವವರೆಗೆ ಆ ಕುಟುಂಬದ ಸುತ್ತ ಸುತ್ತಿದ ಮಾಧ್ಯಮಗಳನ್ನು ನೋಡಿದ್ದೇವೆ. ರಾಜಕೀಯ ಚರ್ಚೆಗಳಲ್ಲಿ ಅವರವರ ಗುಂಪುಗಳನ್ನೇ ಒಂದೆಡೆ ಸೇರಿಸಿ, ವಾಗ್ವಾದ, ಕೆಸರೆರಚಾಟ, ಒಮ್ಮೊಮ್ಮೆ ಬೆಂಬಲಿಗರು ಕೈ ಕೈ ಮಿಲಾಯಿಸುವುದನ್ನು, ಅದಕ್ಕೇ ಕಾಯುತ್ತಿದ್ದವರಂತೆ ಚಿತ್ರೀಕರಿಸಿಕೊಂಡು ದಿನವಿಡಿ ಬಿತ್ತರಿಸುವ ಮಾಧ್ಯಮ ಒಂದು ಘನ ಚರ್ಚೆಗೆ ನಿಜಕ್ಕೂ ವೇದಿಕೆ ಕಲ್ಪಿಸುತ್ತದಾ? ಹೇಗೆ ಸಾಧ್ಯ, ಸಾವಿನ ಮನೆಯೊಳಗಿನ ಸಂಕಟ, ಐಶ್ವರ್ಯ ಹಡೆದಿದ್ದು, ಪವಾರ್ ಕೆನ್ನೆಗೆ ಏಟುಕೊಟ್ಟದ್ದು, ಮಾನಭಂಗದ ತುಣುಕುಗಳು ನೇರಪ್ರಸಾರವಾದಾಗಲೇ ಟಿ.ಆರ್.ಪಿ ಹೆಚ್ಚುವುದು. ಇನ್ನು ಬ್ರೇಕಿಂಗ್ ನ್ಯೂಸ್ ನೆಪದಲ್ಲಿ ಊಹಾಪೋಹ ಸುದ್ದಿಯೂ ಖಚಿತ ಸುದ್ದಿಯಂತೆ ಬಿತ್ತರವಾಗುತ್ತದೆ. ಇತ್ತೀಚೆಗೆ ಒಂದು ಸುದ್ದಿವಾಹಿನಿ, ಬ್ರೇಕಿಂಗ್ ನ್ಯೂಸ್ ನೀಡುವ ಬರದಲ್ಲೋ ಅಥವಾ ಉದ್ದೇಶಪೂರ್ವಕವಾಗಿಯೋ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಒಂದು ಸಂಘಟನೆ ಭೂ ಅಕ್ರಮದಲ್ಲಿ ಭಾಗಿಯಾಗಿದೆ ಎಂದು ಸುದ್ದಿ ಪ್ರಸಾರ ಮಾಡಿ, ನಂತರ ಜನರಿಂದ ಚೀಮಾರಿ ಹಾಕಿಸಿಕೊಂಡು, ತಪ್ಪಾಯ್ತು ಎಂದು ಕ್ಷಮೆ ಕೇಳಬೇಕಾಗಿ ಬಂದದ್ದು ನಿಮಗೆ ಗೊತ್ತೇ ಇದೆ. ಹೀಗೆ ನಡೆದುಕೊಳ್ಳುವ ಮಾಧ್ಯಮಗಳು ಸಾಮಾಜಿಕ ಕಳಕಳಿಯಿಂದ ಯಾವುದೋ ಸಮಸ್ಯೆಯ ವಿಷಯ ಎತ್ತಿಕೊಂಡು, ತಜ್ನರೊಂದಿಗೆ ಚರ್ಚಿಸಿ, ಪರಿಹಾರ ಹುಡುಕುವ ವೇದಿಕೆಯಾಗಿ ರೂಪುಗೊಳ್ಳಲು ಹೇಗೆ ಸಾಧ್ಯವಾಗುತ್ತದೆ? ಮಾಧ್ಯಮಗಳ ಇಂತಹ ಅತಿರೇಕಗಳನ್ನೇ ನ್ಯಾ||ಖಟ್ಜು ತರಾಟೆಗೆ ತೆಗೆದುಕೊಂಡಿದ್ದು.

                ಭಾರತದಲ್ಲಿ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳು ಕಮ್ಮಿ ಏನಿಲ್ಲ. ದಿನೇ ದಿನೇ ಇವುಗಳ ಸಂಖ್ಯೆಯಲ್ಲಿ ಹೆಚ್ಚಾಗುತ್ತಲೇ ಇದೆ. ಕನ್ನಡದಲ್ಲೂ ಹೊಸ ಹೊಸ ಪತ್ರಿಕೆಗಳು, ಟಿವಿ ಚಾನಲ್ ಗಳು ಬರಲಾರಂಭಿಸಿದೆ. ಪತ್ರಿಕೋದ್ಯಮವನ್ನು ಆಯ್ದುಕೊಳ್ಳುವತ್ತ ಯುವ ಪೀಳಿಗೆ ಒಲವು ತೋರುತ್ತಿದೆ. ಅದು ಸ್ವಾಗತಾರ್ಹ ಕೂಡ. ಪತ್ರಿಕೋದ್ಯಮದ ಬಗ್ಗೆ ಒಲವಿಟ್ಟುಕೊಂಡು, ಆದರ್ಶಗಳನ್ನಿಟ್ಟುಕೊಂಡು ಬಂದರೆ ಅಡ್ಡಿಯಿಲ್ಲ. ಆದರೆ ಈ ಕ್ಷೇತ್ರಕ್ಕೆ ಬರುವವರು ’ನೋಬಲ್ ಜಾಬ್’ ಎಂದು ಬರದೆ ’ನೋಟುಗಳಿಸುವ ಜಾಬ್’ ಎಂದು ಬಂದರೆ ಅದು ಅಪಾಯ. ಪತ್ರಿಕೆಯ ವಿಶ್ವಾಸಾರ್ಹತೆ ಎಂದರೆ ಹೆಂಗಸಿನ ಪಾತಿವ್ರತ್ಯವಿದ್ದಂತೆ ಎಂಬ ಮಾತಿದೆ. ಒಮ್ಮೆ ವಿಶ್ವಾಸಾರ್ಹತೆ ಕಳೆದುಕೊಂಡರೆ ಗಳಿಸುವುದು ಕಷ್ಟಸಾಧ್ಯ. ಆದರೂ ನಮ್ಮ ಮಾಧ್ಯಮಗಳು ಲಾಭಿಗೆ ಬಿದ್ದು, ಪೀತ ಪತ್ರಿಕೆಗಳಾಗಿ ರೂಪುಗೊಳ್ಳುತ್ತಾ, ರಾಜಕೀಯ ಮೇಲಾಟಕ್ಕೆ ವೇದಿಕೆಯಾಗುತ್ತಾ, ಪೈಪೋಟಿಯ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗುತ್ತಾ ಬೆಳೆಯುತ್ತಿರುವುದು, ಏನೆಲ್ಲಾ ಮಾಡಿಯೂ ನಾವೇ ನಂ ೧ ಎಂದು ಬೀಗುತ್ತಿರುವುದು ಆತಂಕಕಾರಿ. ಹಾಗೇ ನೋಡಿದರೆ ಅನೇಕ ಪತ್ರಿಕೆಗಳು ಪ್ರಸರಣ ಸಂಖ್ಯೆಯಲ್ಲಿ ಮುಂದಿವೆ, ಆದರೆ ವಿಶ್ವಾಸಾರ್ಹತೆ ಕಳೆದುಕೊಂಡು ಬಹಳ ದಿನಗಳೇ ಆಗಿವೆ, ಪತ್ರಕರ್ತರೂ ಕೂಡ!

No comments yet

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.