Skip to content

ಯೋಗ ಬೇಡವೆನ್ನುವ ರೋಗಗ್ರಸ್ಥ ಮನಸ್ಸುಗಳು…

December 3, 2011

 

                 ಇತ್ತೀಚೆಗೆ ಮತ್ತೊಮ್ಮೆ ಅಂತಹ ಹೇಳಿಕೆಯನ್ನು ಕ್ರೈಸ್ತ ಪಾದ್ರಿಯೊಬ್ಬರು ನೀಡಿದ್ದಾರೆ. ವ್ಯಾಟಿಕನ್ ನ ಪಾದ್ರಿಯಾಗಿರುವ ಫಾದರ್ ಗೇಬ್ರಿಯಲ್ ಅಮರ್ಥ್ ಯಾವತ್ತಿನ ತಮ್ಮ ಹಿಡಿತವಿಲ್ಲದ ಮಾತಿಗೆ ಹೆಸರಾದವರು. ಹಿಂದೆ ಕೂಡ ಇಂತಹ ಹೇಳಿಕೆ ನೀಡಿ, ಸ್ವತಃ ಕ್ರೈಸ್ತರ ಅಸಡ್ಡೆ ನೋಟಕ್ಕೆ ಕಾರಣರಾದವರು. ಮೊನ್ನೆ ಕೂಡ ಅವರು ಮಾತನಾಡುತ್ತಾ ಯೋಗ ಎಂಬುದು ದೆವ್ವದ ಕೆಲಸ. ಯೋಗ ಮಾಡುವುದರಿಂದ ನಿಮ್ಮ ದೈನಂದಿನ ಜಂಜಾಟದಿಂದ ದೂರ ಉಳಿದು ಮನಸ್ಸನ್ನು ನಿರಾಳವಾಗಿಟ್ಟುಕೊಳ್ಳಬಹುದು, ದೇಹವನ್ನು ಆರೋಗ್ಯ ಪೂರ್ಣವಾಗಿ ಕಾಯ್ದುಕೊಳ್ಳಬಹುದು ಎಂದುಕೊಂಡಿದ್ದೀರಿ. ಆದರೆ ನಿಮಗೇ ಗೊತ್ತಿಲ್ಲದೆ ಯೋಗ ನಿಮ್ಮನ್ನು ಹಿಂದೂ ಧರ್ಮದತ್ತ ಸೆಳೆಯುತ್ತದೆ. ಆದ್ದರಿಂದ ಯೋಗ ಮಾಡುವುದು ಪಾಪ. ಕ್ರೈಸ್ತ ಧರ್ಮಕ್ಕೆ ವಿರುದ್ದ ಎಂದು ಇಟಲಿಯಲ್ಲಿ ಬಡಬಡಾಯಿಸಿದ್ದಾರೆ. ಇಷ್ಠೇ ಅಲ್ಲದೆ ಮಾತು ಮುಂದುವರಿಸಿದ ಪಾದ್ರಿ ಅಮರ್ಥ್, ಯೋಗ ಮಾಡುವುದಕ್ಕಿಂತ ನೈಟ್ ಕ್ಲಬ್ ಗಳಿಗೆ ಹೋಗಿ ಕುಡಿಯುವುದು, ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು, ಮಾದಕ ವಸ್ತುವನ್ನು ಸೇವಿಸುವುದು ಮೇಲು ಎಂದು ಯುವಕರಿಗೆ ಕರೆ ನೀಡಿದ್ದಾರೆ. ಆ ಹೇಳಿಕೆಯಿಂದಲೇ ಅವರ ರೋಗಗ್ರಸ್ತ ಮನಸ್ಸಿನ ದರ್ಶನವಾಗಿದೆ.

                ಇದು ಮೊದಲೇನಲ್ಲ. ಹೀಗೆ ಯೋಗದ ಬಗ್ಗೆ ಅಪಸ್ವರವೆತ್ತಿದ ಕ್ರೈಸ್ತ ಪಾದ್ರಿಗಳ, ಮುಲ್ಲಾಗಳ ದೊಡ್ಡ ಪಟ್ಟಿಯೇ ಇದೆ. ೧೯೬೨ ರಲ್ಲೇ ವ್ಯಾಟಿಕನ್, ಕ್ರೈಸ್ತರು ಯೋಗ ಮಾಡುವುದು ತರವಲ್ಲ ಎಂದು ಆದೇಶ ಹೊರಡಿಸಿತ್ತು. ಸುಮಾರು ೫೦೦೦ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಭಾರತದ ಸಂಜೀವಿನಿ ವಿದ್ಯೆ ಯೋಗ, ಬಾಬಾರಾಮದೇವ್, ಬಿ.ಕೆ. ಎಸ್ ಅಯ್ಯಂಗಾರ್, ರವಿಶಂಕರ ಗುರೂಜಿ ಇತ್ಯಾದಿ ಮಹನೀಯರಿಂದ ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ವಿವಿಧ ದೇಶಗಳಿಗೆ ಪಸರಿಸಿ ವಿದೇಶಿಗರನ್ನು ಯೋಗದತ್ತ ತನ್ಮೂಲಕ ಭಾರತದತ್ತ ಆಕರ್ಶಿಸಿತೋ ಆಗಲೇ ಕ್ರೈಸ್ಥ ಪಾದ್ರಿಗಳು ಮತ್ತು ಮತಾಂಧ ಮುಲ್ಲಾಗಳು ಕಳವಳಕ್ಕೀಡಾದರು. ವ್ಯಾಟಿಕನ್ ಸೇರಿದಂತೆ ಹಲವು ದೇಶದ ಚರ್ಚಿನ ಪಾದ್ರಿಗಳು ಯೋಗವನ್ನು ಕ್ರೈಸ್ತ ಧರ್ಮ ವಿರೋಧಿ ಆಚರಣೆ ಎಂದು ಪುಕಾರು ಹಬ್ಬಿಸಿದರು. ಇನ್ನು ಕೆಲವು ಮುಸಲ್ಮಾನ ಧರ್ಮಗುರುಗಳು ಬಿಡಿ, ಮಾತೆತ್ತಿದರೆ ಫತ್ವಾ ಜಾರಿಗೊಳಿಸುವ ಸಣ್ಣ ಮನಸ್ಸಿನವರು, ಆಸನಗಳ ಕೆಲವು ಭಂಗಿಗಳು, ಧ್ಯಾನದಲ್ಲಿ ಉಚ್ಚರಿಸಲ್ಪಡುವ ಓಂಕಾರ, ಕೆಲವು ಮಂತ್ರಗಳು ಹಿಂದೂ ಧರ್ಮ ಮೂಲದ್ದೂ ಆದ್ದರಿಂದ ಇದು ಇಸ್ಲಾಂಗೆ ವಿರುದ್ಧ, ಯೋಗಮಾಡುವುದು ಪಾಪಕರ ಎಂದು ಫತ್ವಾ ಹೊರಡಿಸಿದರು. ಭಾರತದಲ್ಲೇ ಇಂತಹ ಫತ್ವಾಗಳು ಜಾರಿಯಾದವು. ಶಾಲೆಗಳಲ್ಲಿ ಮಕ್ಕಳಿಗೆ ಯೋಗ ಕಲಿಸುವುದನ್ನೂ ವಿರೋಧಿಸಿ, ಮುಸಲ್ಮಾನ ವಿಧ್ಯಾರ್ಥಿಗಳಿರುತ್ತಾರಾದ್ದರಿಂದ ಯೋಗ ಕಲಿಕೆ ಶಾಲೆಯಲ್ಲಿ ಬೇಡವೆಂಬ ವರಾತ ತೆಗೆದರು.

                 ಇದು ಆಯಾ ಧರ್ಮದ ಸರ್ವೋಚ್ಚ ಸ್ಥಾನದಲ್ಲಿರುವ ಧರ್ಮಗುರುಗಳು ತೋರುತ್ತಿರುವ ಸಣ್ಣತನವಲ್ಲದೇ ಮತ್ತೇನು? ಜನರೇ ಸ್ವಇಚ್ಚೆಯಿಂದ ಯೋಗದ ಅನುಕೂಲಗಳನ್ನು ಅರಿತು, ಆರೋಗ್ಯ ಪೂರ್ಣ ಜೀವನಕ್ಕೆ ಇದು ಪೂರಕ ಎಂದು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡರೆ ಇವರಿಗೇಕೆ ಅಳುಕು. ಅಷ್ಟಕ್ಕೂ ಟೆಹರೇನ್, ಬಾಗ್ದಾದ್, ಕೈರೋಗಳಲ್ಲಿ ಯೋಗ ತರಗತಿಗಳು ಅನೇಕ ದಶಕಗಳಿಂದಲೇ ನಡೆಯುತ್ತಿವೆ. ಇರಾನಿನಲ್ಲೂ ಯೋಗದ ಸಾವಿರಾರು ಕೇಂದ್ರಗಳು ಪ್ರತಿದಿನ ತರಗತಿ ನಡೆಸುತ್ತಿವೆ. ಮಷ್ಹಾದ್ ನಗರದಲ್ಲೇ ಪ್ರತಿವಾರ ಸಾವಿರಾರು ಯೋಗದ ತರಗತಿಗಳು ನಡೆಯುತ್ತವೆ. ಇಲ್ಲೆಲ್ಲೂ ಯೋಗ ಇಸ್ಲಾಂನ ವಿರೋಧಿ ಎಂಬ ಭಾವನೆಗಳಿಲ್ಲ. ಜನರು ಆತಂಕ, ಕೆಲಸದ ಒತ್ತಡ ಕಡಿಮೆ ಮಾಡಿಕೊಂಡು ಮನಃಶಾಂತಿ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಗವನ್ನು ಅಪ್ಪಿಕೊಂಡಿದ್ದಾರೆ.

                ಅರಬ್ ರಾಷ್ಟ್ರಗಳಲ್ಲಿ ಯೋಗದ ಮಹತ್ವ ಅರಿತು ತಮ್ಮ ನಿತ್ಯದ ಆಚರಣೆಯಲ್ಲಿ ಯೋಗವನ್ನು ಅಳವಡಿಸಿಕೊಂಡ ಸಾವಿರಾರು ಯೋಗಾಭ್ಯಾಸಿಗಳಿದ್ದಾರೆ. ಬೈರತ್ ನಗರದಲ್ಲಿ ಯೋಗದ ದೊಡ್ಡ ಕಲಿಕಾ ಶಾಲೆಯೇ ಇದೆ. ಅಲ್ಲಿ ಕ್ರಿಶ್ಚಿಯನ್ನರು ಮತ್ತು ಮುಸಲ್ಮಾನರು ಒಟ್ಟಿಗೆ ಸೇರಿಯೇ ಆಸನಗಳ ಅಭ್ಯಾಸ ಮಾಡುತ್ತಾರೆ. ಲೆಬನಾನ್ ನಂತಹ ಕಡೆ ಯೋಗಕ್ಕೆ ಮುಗಿಬೀಳುವವರ ಸಂಖ್ಯೆ ದೊಡ್ಡದಿದೆ. ಜಿಮ್ ನೊಂದಿಗೆ ಯೋಗವನ್ನು ಕಲಿಸುವ ಶಾಲೆಗಳಿವೆ. ಪ್ರಸಿದ್ದ ನಟ ನಟಿಯರು, ಶ್ರೀಮಂತರ ಆದಿಯಾಗಿ ಎಲ್ಲರದೂ ಯೋಗ ಕಲಿಯುವ ಉತ್ಸಾಹ. ಅವರ್ಯಾರಿಗೂ ಇದು ತಮ್ಮ ತಮ್ಮ ಧರ್ಮಕ್ಕೆ ವಿರೋಧಿಯಾದುದು ಎನ್ನಿಸಿಲ್ಲ. ಬದಲಾಗಿ ಸ್ವಸ್ಥ ಆರೋಗ್ಯಕ್ಕೆ, ಉತ್ತಮ ಜೀವನ ಶೈಲಿಗೆ ಯೋಗ ಕೀಲೀಕೈ ಎಂಬುದು ಅವರ ಅರಿವಿಗೆ ಬಂದಿದೆ. ಆದರೆ ತಕರಾರಿರುವುದು ಧರ್ಮಗುರುಗಳಿಗೆ ಮಾತ್ರ.

                 ಕ್ರಿಶ್ಚಿಯನ್ ಯೋಗ, ಇದು ಯೋಗವನ್ನು ಕ್ರೈಸ್ತರು ಮರುಸೃಷ್ಠಿಸಿಕೊಂಡ ವಿಧಾನ. ಯಾವಾಗ ಪಾದ್ರಿಗಳು ಯೋಗ ಮಾಡುವುದು ಕ್ರೈಸ್ತ ಧರ್ಮಕ್ಕೆ ವಿರುದ್ದ ಎಂದರೋ, ಆವಾಗ ಯೋಗ ತರಗತಿಗಳು, ವಿದೇಶದಲ್ಲಿನ ಯೋಗ ಶಿಕ್ಷಕರು, ಅದಾಗಲೇ ಯೋಗಕ್ಕೆ ಮನಸೋತಿದ್ದ ಕ್ರೈಸ್ತರು, ಯೋಗದ ಅದೇ ಆಸನಗಳನ್ನ, ಧ್ಯಾನ, ಪ್ರಾಣಾಯಾಮದ ನಿಯಮಗಳನ್ನ ಸ್ವಲ್ಪ ಮಟ್ಟಿಗೆ ಮಾರ್ಪಾಟು ಮಾಡಿಕೊಂಡು ಮಂತ್ರಗಳ ಬದಲಿಗೆ ಏಸುವಿನ ಸ್ಮರಣೆಯನ್ನು ಅದರಲ್ಲಿ ಅಳವಡಿಸಿ ಅದಕ್ಕೆ ಕ್ರಿಶ್ಚಿಯನ್ ಯೋಗವೆಂದು ಕರೆದು ತರಗತಿ ನಡೆಸಲು ಶುರುಮಾಡಿದರು. ಇಂತಹ ತರಗತಿಗಳು ಅಮೆರಿಕದ ಅನೇಕ ನಗರಗಳಲ್ಲಿ ನಡೆಯುತ್ತದೆ. ಶಿಕಾಗೋ, ಫಿಡ್ಸ್ ಬರ್ಗ್, ನ್ಯೂಯಾರ್ಕ್ ಇತ್ಯಾದಿನಗರಗಳಲ್ಲಿ ಕ್ರಿಶ್ಚಿಯನ್ ಯೋಗ ಹೇಳಿಕೊಡುವ ಶಾಲೆಗಳು ಹುಟ್ಟಿಕೊಂಡಿವೆ.

                  ಕಳೆದ ೧೫ ವರ್ಷಗಳಿಂದ ಶಿಕಾಗೋದ ಟ್ರಿನಿಟಿ ಯುನೈಟೆಡ್ ಚರ್ಚನಲ್ಲಿ ಪ್ರತಿ ಶನಿವಾರ ೭:೩೦ ಕ್ಕೆ ಯೋಗ ತರಗತಿಗಳು ನಡೆಯುತ್ತವೆ. ಅನೇಕ ರೋಮನ್ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಚರ್ಚುಗಳಲ್ಲೂ ಯೋಗ ಕಲಿಸುವಿಕೆ ೧೯೭೦ ರಿಂದಲೇ ಜಾರಿಯಲ್ಲಿದೆ. ಕ್ಯಾಥೋಲಿಕ್ ಆಧ್ಯಾತ್ಮ ಚಿಂತನೆಗಳ ಬಗ್ಗೆ ಅನೇಕ ಪುಸ್ತಕ ಬರೆದಿರುವ ಜಾರ್ಜ್ ಎ ಮೋನೆ “ ಯಾವುದೇ ಆಚರಣೆ ಅಥವಾ ಕ್ರಿಯೆಯ ಫಲಿತಾಂಶ ಮಾನವನ ಜೀವನವನ್ನು ಮತ್ತಷ್ಟು ಸುಂದರವಾಗಿಸುತ್ತದೆ ಎಂದಾದರೆ  ಅದನ್ನು ಒಪ್ಪಿಕೊಳ್ಳಿ. ಸುಳ್ಳೇ ಧರ್ಮದ ನೆಪ ಹೇಳಬೇಡಿ “ ಎಂದದ್ದು ಇನ್ನೂ ಕ್ರೈಸ್ಥ ಪಾದ್ರಿಗಳಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಿಲ್ಲವೇನೋ.

                 ಚರ್ಚುಗಳು ಯೋಗದ ಬಗ್ಗೆ ಇಷ್ಠೆಲ್ಲಾ ಬೊಬ್ಬೆಹೊಡೆದರೂ, ಯೋಗದತ್ತ ಮುಖಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೇ. ಯೋಗ, ಪ್ರಾರ್ಥನೆಯ ಇನ್ನೊಂದು ವಿಧ ಎಂಬುದು ಅನೇಕರ ಅಭಿಪ್ರಾಯ. ಚರ್ಚಿಗೆ ಹೋಗಿ ಪ್ರಾರ್ಥಿಸಿದಾಗ ಸಿಕ್ಕುವ ನೆಮ್ಮದಿ ಸಮಾಧಾನಗಳಿಗಿಂತ ಹೆಚ್ಚಿನ ಮನಃಶಾಂತಿ ಯೋಗ ಮತ್ತು ಧ್ಯಾನಗಳ ಆಚರಣೆಯಲ್ಲಿ ಸಿಗುತ್ತಿದೆ ಎಂದು ಅನೇಕರು ಒಪ್ಪಿಕೊಳ್ಳುತ್ತಾರೆ. ಕೆಲವು ಪಾದ್ರಿಗಳು ಯೋಗ ಆಚರಿಸಿ ಅಡ್ಡಿಯಿಲ್ಲ. ಆದರೆ ಕ್ರಿಶ್ಚಿಯನ್ ಯೋಗವಾಗಿರಲಿ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ. ಯೋಗದ ಲಾಭಬೇಕು ಆದರೆ ಅದನ್ನು ಹಿಂದೂ ಮೂಲದ್ದು ಎಂದು ಒಪ್ಪಿಕೊಳ್ಳದ  ಮತ್ತು ಅದನ್ನು ಭಾರತೀಯ ಯೋಗವಾಗಿಯೇ ಅಪ್ಪಿಕೊಳ್ಳಲು ಸಿದ್ದವಿರದ ಚರ್ಚಿನ ಪಾದ್ರಿಗಳ ದ್ವಂದ್ವಗಳು ಮಾತ್ರ ವಿಪರ್ಯಾಸ. ಇದನ್ನು ಅನೇಕರು ಖಂಡಿಸಿದ್ದಾರೆ. ಒರ್ಲಾಂಡೋವಿನ ಅಮೆರಿಕಾ ಹಿಂದೂ ಯೂನಿವರ್ಸಿಟಿಯ ಯೋಗ ಮತ್ತು ಫಿಲಾಸಫಿ ವಿಭಾಗದ ಪ್ರೊಫೆಸರ್ ಸುಭಾಷ್ ತಿವಾರಿ, ಯೋಗ ಮತ್ತು ಹಿಂದೂ ಧರ್ಮ ಒಂದೇ  ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಒತ್ತಿ ಹೇಳಿದ್ದಾರೆ. ಯೋಗದ ವಿರುದ್ದ ಮಾತನಾಡುವ ಪಾದ್ರಿಗಳ, ಮುಲ್ಲಾಗಳ ಹೇಳಿಕೆ ಗಮನಿಸಿದರೆ, ಅವರ ಕಳವಳವಿರುವುದು ತಮ್ಮ ಮತಸ್ಥರು ಯೋಗ ಮಾಡುತ್ತಾರೆ ಎಂದಲ್ಲ. ಎಲ್ಲಿ ಯೋಗ ಹಿಂದೂ ಧರ್ಮವನ್ನು ಅವರು ಅಪ್ಪಿಕೊಳ್ಳುಲು ಹೆದ್ದಾರಿಯಾಗಿಬಿಡುತ್ತದೋ ಎಂಬ ಸಂಶಯದಲ್ಲಿ. ಇಂತವರ ಸಂಕುಚಿತ, ರೋಗಗ್ರಸ್ತ ಮನಸ್ಸಿಗೆ ಏನನ್ನೋಣ?

No comments yet

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.