ದೇಶವನ್ನು ಮುನ್ನಡೆಸುವುದೆಂದರೆ ಮಕ್ಕಳಾಟವೇ ಚಾಚಾ?
“ಆ ವಿಷಯವನ್ನು ನಿಜ ಅರ್ಥದಲ್ಲಿ ಉಕ್ಕಿನ ಮನುಷ್ಯರೇ ಆಗಿದ್ದ ಸರ್ದಾರ್ ಪಟೇಲರು ನಿಭಾಯಿಸಿದ್ದರೆ ಒಳ್ಳೆಯದಿತ್ತು. ಅದು ಸಮಸ್ಯೆಯಾಗಿ ಉಳಿಯುತ್ತಿರಲಿಲ್ಲ. ಹಾಗೊಮ್ಮೆ ಸಮಸ್ಯೆ ಉಂಟಾಗಿದ್ದರೂ, ಹೇಗೆ ನಿವಾರಿಸಿಕೊಳ್ಳಬೇಕೆಂಬ ಜಾಣ್ಮೆ ಪಟೇಲರಿಗಿತ್ತು, ಅವರು ರಾಜನೀತಿಯನ್ನು ಚೆನ್ನಾಗಿಯೇ ಅರಿತಿದ್ದರು. ಆದರೆ ಕಾಶ್ಮೀರದ ವಿಷಯವನ್ನು ನಾನೇ ನಿಭಾಯಿಸಬಲ್ಲೆ ಎಂಬ ಅಹಂಕಾರ ಪಂಡಿತ ನೆಹರೂಗಿತ್ತೇ ವಿನಹಃ., ದೂರದೃಷ್ಟಿತನವಾಗಲಿ, ಮುತ್ಸದ್ದಿತನವಾಗಲಿ, ಎದೆಗಾರಿಕೆಯಾಗಲಿ ಇರಲಿಲ್ಲ. ಸ್ವತಃ ಪಟೇಲರೇ, “ಕಾಶ್ಮೀರ ವಿಷಯದಲ್ಲಿ ನೆಹರೂ ಹೀಗೇಕೆ ವರ್ತಿಸುತ್ತಿದ್ದಾರೋ,ಅದನ್ನು ನಾನು ಕೆಲವೇ ದಿನಗಳಲ್ಲಿ ಬಗೆಹರಿಸಲ್ಲೆ” ಎಂದು ತಮ್ಮ ಸಂಪುಟ ಸಹೋದ್ಯೋಗಿಯೊಂದಿಗೆ ಹೇಳಿದ್ದರು. ನೆಹರೂಗೆ ತೀರಾ ಆತ್ಮೀಯರಾಗಿದ್ದ ಶೇಕಬ್ದುಲ್ಲಾಗೆ ಕೂಡ ಪಟೇಲರೆ ಈ ಬಿಕ್ಕಟ್ಟನ್ನು ನಿವಾರಿಸಲು ಸೂಕ್ತವ್ಯಕ್ತಿ ಎಂದು ಅನಿಸಿದ್ದು ಇದೆ. ಬಹುಶಃ ಪಟೇಲರಿಗೆ ಆ ಜವಾಬ್ದಾರಿ ಕೊಟ್ಟಿದ್ದರೆ, ಕಾಶ್ಮೀರ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಬಗೆಹರಿಯದ ಸಮಸ್ಯೆಯಾಗಿ ಉಳಿಯುತ್ತಿರಲಿಲ್ಲ. ಸಾವಿರಾರು ಸೈನಿಕರು, ಲಕ್ಷಾಂತರ ಕಾಶ್ಮೀರಿಗಳು ಬಲಿಯಾಗಬೇಕಾಗಿ ಬರುತ್ತಿರಲಿಲ್ಲ. ನೆಹರು ಮಾಡಿದ ಅನೇಕ ತಪ್ಪುಗಳಲ್ಲಿ ಇದು ಮಹತ್ವದ್ದು.” ಹೀಗೆ ವಿವರಿಸುತ್ತಾ ಹೋಗುತ್ತಾರೆ ವಿದೇಶಾಂಗ ಕಾರ್ಯಾಲಯದ ನಿವೃತ್ತ ಅಧಿಕಾರಿ ಜೆ.ಬಂದೋಪಾಧ್ಯಯ.
ಮೊನ್ನೆ ಬಂದೋಪಾಧ್ಯಯರ The Making of India’s Foreign policy ಪುಸ್ತಕವನ್ನು ತಿರುವಿ ಹಾಕುತ್ತಿದ್ದೆ. ಆ ಪುಸ್ತಕದಲ್ಲಿ ಲೇಖಕರು ಹೇಗೆ ಒಂದು ದೇಶದ ವಿದೇಶಾಂಗ ನೀತಿಯನ್ನು ರೂಪಿಸಲಾಗುತ್ತದೆ, ಅದು ಹೇಗೆ ಕಾಲ ಕಾಲಕ್ಕೆ ಬದಲಾಗಬೇಕು, ಯಾವೆಲ್ಲಾ ಸನ್ನಿವೇಶಗಳಲ್ಲಿ ಒಂದು ದೇಶ ತನ್ನ ವಿದೇಶಾಂಗ ನೀತಿಯನ್ನು ಮರು ಪರಿಶೀಲನೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ರಾಷ್ಟ್ರನಾಯಕರ ಸಿದ್ದಾಂತ, ನಿಲುವು, ನಾಯಕತ್ವಗುಣ, ರಾಜಕೀಯ ಕಾರ್ಯತಂತ್ರ, ಅಧಿಕಾರ ಕೇಂದ್ರೀಕರಿಸಿಕೊಳ್ಳಬೇಕೆಂಬ ಅಭಿಲಾಷೆ ಹೇಗೆ ದೇಶದ ವಿದೇಶಾಂಗ ನೀತಿಯ ಮೇಲೆ ಪರಿಣಾಮ ಬೀರಬಲ್ಲದು ಎಂಬುದನ್ನು ವಿವರಿಸುತ್ತಾ ಹೋಗುತ್ತಾರೆ. ಮುಖ್ಯವಾಗಿ ಭಾರತದ ವಿದೇಶಾಂಗನೀತಿ ನೆಹರೂ, ಇಂದಿರಾ, ಮುರಾರ್ಜಿ, ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಹೇಗೆ ದೇಶವನ್ನು ಇಕ್ಕಟ್ಟಿಗೆ ಸಿಲುಕಿಸಿತು ಎಂದು ಉದಾಹರಣೆಗಳ ಮೂಲಕ ತಿಳಿಸುತ್ತಾರೆ.
ಬಂದೋಪಾಧ್ಯಯರ ಪುಸ್ತಕದ ಪುಟ ಪುಟ ತಿರುವಿಹಾಕುವಾಗ ನಮ್ಮ ನಾಯಕರು ಹೇಗೆ ತಮ್ಮ ಅಹಂಕಾರಕ್ಕೆ, ಅಧಿಕಾರದ ವ್ಯಾಮೋಹಕ್ಕೆ, ವಯುಕ್ತಿಕ ಸ್ನೇಹಕ್ಕೆ, ಹೆಸರು ಮಾಡಬೇಕೆಂಬ ತೆವಲಿಗೆ ದೇಶದ ಹಿತರಕ್ಷಣೆಯನ್ನು ಒತ್ತೆಯಿಡುತ್ತಾರೆಂದು ಓದಿ ಹೇಸಿಗೆಯಾಯಿತು. ಅದರಲ್ಲೂ ಸ್ವಾತಂತ್ರ್ಯನಂತರ ೧೭ ವರ್ಷ ಭಾರತವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ನೆಹರು ನೆಡೆದುಕೊಂಡ ರೀತಿಯಿದೆಯಲ್ಲಾ ಅದು ರೇಜಿಗೆ ಹುಟ್ಟಿಸುವಂತದ್ದು.
ಸ್ವಾತಂತ್ರ್ಯ ಪೂರ್ವ ಕಾಂಗ್ರೇಸ್ಸಿನ ವಿದೇಶಾಂಗ ಕಾರ್ಯಸೂಚಿಯನ್ನು ಸಿದ್ದಪಡಿಸಿದ್ದು ನೆಹರು, ಆದರೆ ಸ್ವಾತಂತ್ರ್ಯೋತ್ತರ ಭಾರತದ ವಿದೇಶಾಂಗನೀತಿ, ಕಾಂಗ್ರೇಸ್ಸಿನ ವಿದೇಶಾಂಗ ಕಾರ್ಯಸೂಚಿಗೆ ಭಿನ್ನವಾಗೇನು ಇರಲಿಲ್ಲ. ಪ್ರಧಾನಿ ಪಟ್ಟದಲ್ಲಿ ಕೂತ ಜವಹರಲಾಲರು, ತಮ್ಮ ಬಳಿಯೇ ವಿದೇಶಾಂಗ ಖಾತೆಯನ್ನೂ ಇಟ್ಟುಕೊಂಡರು. ವಿದೇಶಗಳಿಗೆ ಭೇಟಿ, ಅಲ್ಲಿನ ನಾಯಕರೊಂದಿಗೆ ಹಸ್ತಾಲಾಘವ, ಭಾರತದ ನಿರ್ಮಾತೃ ಎಂದೆನ್ನಿಸಿಕೊಳ್ಳುವುದರ ಜೊತೆಗೆ ವಿಶ್ವನಾಯಕನಾಗಿ ಬೆಳೆಯಬೇಕೆಂಬ ಮಹದಾಸೆ ಎಲ್ಲಕ್ಕೂ ವಿದೇಶಾಂಗಖಾತೆ ಅನುಕೂಲಕರವಾಗಿತ್ತು. ನೆಹರೂರ ಆತ್ಮಕಥೆ ಬರೆದ ಇತಿಹಾಸಕಾರ ಬರೆದಿದ್ದ. “ಯಾವ ದೇಶದಲ್ಲೂ ಹೀಗೆ ನಡೆಯಲು ಸಾಧ್ಯವಿಲ್ಲ. ಒಂದು ದೇಶದ ವಿದೇಶಾಂಗ ನೀತಿ ಒಬ್ಬ ವ್ಯಕ್ತಿಯಿಂದ ರೂಪಿತವಾಗುವುದು ಮತ್ತು ಅದು ಅವರ ವಯಕ್ತಿಕ ಕಾರ್ಯಸೂಚಿಯಂತೆ ಇರುವುದು ಸಾಧ್ಯವಾಗಿದ್ದು ಭಾರತದಲ್ಲಿ ಮಾತ್ರ. ಸಾಧ್ಯವಾಗಿಸಿದವರು ನೆಹರು” ಆತನ ಮಾತಿನಲ್ಲಿ ಸತ್ಯವಿತ್ತು. ಭಾರತದ ವಿದೇಶಾಂಗ ನೀತಿ ನೆಹರೂರ ಮೂಗಿನ ನೇರಕ್ಕೆ ರೂಪಿತವಾಗಿತ್ತು.
ಹಾಗೇ ನೋಡಿದರೆ ನೆಹರೂರಲ್ಲಿ ಖಚಿತ ನಿಲುವುಗಳಿರಲಿಲ್ಲ. ಪ್ರಧಾನಿ ಪಟ್ಟಕ್ಕೆ ಏರಲು ಇದ್ದ ಏಕೈಕ ಅರ್ಹತೆಯೆಂದರೆ ಅದು ಗಾಂಧಿಜೀಯೊಂದಿಗಿನ ಆತ್ಮೀಯ ಒಡನಾಟ. ವಿದೇಶದಲ್ಲಿನ ಓದು, ಪ್ರಪಂಚ ಜ್ನಾನ, ಮಾತುಗಾರಿಕೆ ನೆಹರೂರಲ್ಲಿ ಇದ್ದಿದ್ದು ನಿಜ. ಆದರೆ ಬುದ್ದಿವಂತಿಕೆ, ವಿವೇಕ, ಸಮಯಪ್ರಜ್ನೆ, ಎದೆಗಾರಿಕೆ ಊಹುಃ ಕೇಳಬೇಡಿ. ನೆಹರು ಪಟೇಲರ ಕೆಳಗೆ ಕೆಲಸ ಮಾಡಲಾರರು ಎಂಬುದು ಗಾಂಧೀಜಿಗೆ ಮನವರಿಕೆಯಾಗಿತ್ತು. ಆದ್ದರಿಂದಲೇ 16 ರಾಜ್ಯಗಳಲ್ಲಿ 13 ರಾಜ್ಯಗಳ ಪ್ರತಿನಿಧಿಗಳು ಪಟೇಲರನ್ನು ಬೆಂಬಲಿಸಿದ್ದರೂ, ಗಾಂಧೀಜಿ ಪಟೇಲರ ಮನವೊಲಿಸಿ ನೆಹರೂಗೆ ಅಧ್ಯಕ್ಷ ಸ್ಥಾನ ಸಿಗುವಂತೆ ನೋಡಿಕೊಂಡರು. ಅಲ್ಲಿಗೆ ನೆಹರು ಪ್ರಧಾನಿಯಾದರು, ಪ್ರಧಾನಿಯಾಗಲು ಎಲ್ಲ ಅರ್ಹತೆಯಿದ್ದ ಪಟೇಲರು ಗೃಹಮಂತ್ರಿಸ್ಥಾನದಲ್ಲಿ ಕೂರಬೇಕಾಯಿತು.
ಬಂದೋಪಾಧ್ಯಯರು ಖಾರವಾಗಿಯೇ ಬರೆಯುತ್ತಾರೆ. “ಕಾಶ್ಮೀರ ದೇಶದ ಅವಿಭಾಜ್ಯ ಅಂಗವೆಂದು ಪರಿಗಣಿಸಿ ಆ ಸಮಸ್ಯೆಯನ್ನು ಬಗೆಹರಿಸಲು ಗೃಹ ಕಛೇರಿಗೆ ವಹಿಸಬೇಕಿತ್ತು. ಆದರೆ ಅವಿವೇಕಿ ಪ್ರಧಾನಿಗಳು ಅದನ್ನು ವಿದೇಶಾಂಗ ಖಾತೆಯಡಿ ತಂದು , ತಾವೇ ಅದನ್ನು ಅಂತರಾಷ್ಟ್ರೀಯ ಬಿಕ್ಕಟ್ಟೆಂದು ಬಿಂಬಿಸಿದರು. ಆ ಮೂರ್ಖತನದಿಂದ ಇವತ್ತೀಗೂ ಪಾಕಿಸ್ತಾನ ಆ ಒಂದು ನಿರ್ಧಾರವನ್ನೇ ವಿಶ್ವಸಂಸ್ಥೆಯ ಮುಂದಿಟ್ಟು ಕಾಶ್ಮೀರ ಭಾರತದ ಅಂಗವಾಗಿರಲಿಲ್ಲ ಎಂದು ತಗಾದೆ ತೆಗೆಯುತ್ತದೆ. ಭಾರತ ಆ ವಿಷಯದಲ್ಲಿ ಇಂದಿಗೂ ಮೂಕವಾಗಬೇಕಾದ್ದು ಪ್ರಥಮ ಪ್ರಧಾನಿಗಳ ಮೂರ್ಖತನದಿಂದ.”
ಇನ್ನು ಕಾಶ್ಮೀರದ ರಾಜ ಹರಿಸಿಂಗ್ ಎಲ್ಲಿ ಕಾಶ್ಮೀರ ಪಾಕಿಸ್ತಾನಕ್ಕೆ ಸೇರ್ಪಡೆಗೊಂಡು, ಅಲ್ಲಿನ ಮತಾಂದರ ದಾಳಿಗೆ ಕಾಶ್ಮೀರದ ಪುರಾತನ ದೇವಾಲಯಗಳು ಬಲಿಯಾಗುತ್ತವೋ ಎಂದು ಹೆದರಿ ಭಾರತದೊಂದಿಗೆ ಯಾವುದೇ ಕರಾರುಗಳಿಲ್ಲದೆ ವಿಲೀನಗೊಳ್ಳಲು ಸಿದ್ದ ಎಂದಾಗಲೂ, ನೆಹರೂ ಮಧ್ಯೆಪ್ರವೇಶಿಸಿದರು, ಗೌರ್ನರ್ ಜನರಲ್ ಮೌಂಟ್ ಬ್ಯಾಟನ್ ಒಂದು ಪತ್ರ ಬರೆದ, “ಯಾವುದೇ ರಾಜ್ಯ ಭಾರತದೊಂದಿಗೆ ವಿಲೀನವಾದರೂ, ಅಲ್ಲಿ ಶಾಂತಿ ಸುವ್ಯವಸ್ತೆ ನೆಲೆಸಿದ ನಂತರ, ಆ ಭಾಗದ ಜನರ ಆಶಯದಂತೆ ಆ ರಾಜ್ಯದ ಒಡೆತನದ ತೀರ್ಮಾನವಾಗಬೇಕು” ಹೀಗೆ ಗೌರ್ನರ್ ಜನರಲ್ ನಿಂದ ಆದೇಶ ಹೊರಡಿಸಿದ್ದು ಸ್ವತಃ ನೆಹರೂರೇ ಆಗಿದ್ದರು. ಇವತ್ತು ಮುಖ್ಯ ಪ್ರಶ್ನೆ ಎದ್ದಿರುವುದೇ ಈ ಒಂದು ವಿಷಯದಲ್ಲಿ. ಇವತ್ತಿಗೂ ಕಾಶ್ಮೀರ ವಿಮೋಚನೆಗಾಗಿ ಹೋರಾಡುತ್ತಿರುವವರು ಎತ್ತುವ ತಕರಾರೇ ಇದು. ಮೊನ್ನೆ ಪ್ರಶಾಂತ್ ಭೂಷಣ್ ಆಡಿದ ಪರಮ ಮೂರ್ಖತನದ ಮಾತಿಗೂ ಇದೇ ಕಾರಣ. ಇದಕ್ಕೆಲ್ಲಾ ಮುನ್ನುಡಿ ಬರೆದಿದ್ದೆ ಪಂಡಿತ ಪ್ರಧಾನಿಗಳು.
ನೆಹರೂರ ಸುತ್ತ ಇದ್ದವರೂ ಅಂಥವರೇ, ಕೃಷ್ಣ ಮೆನನ್, ಎಂ. ಒ ಮಥಾಯ್, ಭಾರತದ ರಾಯಭಾರಿಯಾಗಿದ್ದ ಕೆ. ಎಮ್ ಫಣೀಕರ್ ಕೂಡ ಮೂರ್ಖತನ ಪ್ರದರ್ಶಿಸುವಲ್ಲಿ ಸ್ಪರ್ಧೆಗೆ ನಿಂತವರೆ. ಶೇಕ್ ಅಬ್ದುಲ್ಲಾ ಮತ್ತು ನೆಹರೂರ ಸ್ನೇಹ ಹೇಗಿತ್ತೆಂದರೆ, ಒಂದು ಉದಾಹರಣೆ ಇಲ್ಲಿದೆ. 1953 ರಲ್ಲಿ ಐದು ದಿನದ ನ್ಯಾಷನಲ್ ಕಾನ್ಪರೆನ್ಸ್ ಕಾಶ್ಮೀರದಲ್ಲಿ ಆಯೋಜನೆಯಾಗಿತ್ತು. ಆ ವೇಳೆಗಾಗಲೇ ತನ್ನ ಬೇಳೆ ಬೇಯಿಸಿಕೊಳ್ಳಲು ಶುರುವಿಟ್ಟಿದ್ದ ಶೇಕ್ ಅಬ್ದುಲ್ಲಾ ಮತಾಂದತೆಗೆ ತುಪ್ಪಸುರಿದು, ಕೋಮು ಸೌಹಾರ್ದವನ್ನು ಕಾಶ್ಮೀರದಲ್ಲಿ ಹಾಳುಗೆಡವಿದ್ದರು. ಬರಬರುತ್ತಾ ಹಿಂದೂಗಳ ಹತ್ಯೆ, ಮಾನಭಂಗದಂತಹ ಪ್ರಸಂಗಗಳು ಹೆಚ್ಚಾದವು. ಇದನ್ನು ಅರಿತ ನೆಹರು ಇಂಟೆಲಿಜೆನ್ಸ್ ಬ್ಯೂರೋದ ಡರೆಕ್ಟರ್ ಆಗಿದ್ದ ಜಿ.ಕೆ ಹಂಡೂ ಅವರನ್ನು ಶೇಕ್ ಸಾಹೇಬನ ಬಗ್ಗೆ ಮಾಹಿತಿ ಕಲೆಹಾಕಲು ಕೇಳಿಕೊಂಡರು. ಶೇಕ್ ಅಬ್ದುಲ್ಲಾರ ಕುತಂತ್ರದ ಬಗ್ಗೆ ಮಾಹಿತಿಯನ್ನು ದಾಖಲೆ ಸಹಿತ ಆ ಅಧಿಕಾರಿ ಮತ್ತು ಮಂತ್ರಿ ಕೈಲಾಶನಾಥ್ ಕಾಜು ತಂದಿಟ್ಟಾಗ, ನೆಹರು ಎಚ್ಚೆತ್ತುಕೊಂಡರು. ಶೇಕ್ ಸಾಹೇಬನನ್ನು ಕರೆಸಿ “ ಇದುವರೆಗೆ ನಾನು ನಿನ್ನ ಸ್ನೇಹಿತನಂತೆ ನಡೆದುಕೊಂಡಿದ್ದೇನೆ, ಇನ್ನೂ ನಿಮ್ಮ ವರ್ತನೆ ಹೀಗೆ ಮುಂದುವರಿದರೆ ದೇಶದ ಪ್ರಧಾನಿಯಾಗಿ ಅಧಿಕಾರ ಚಲಾಯಿಸುತ್ತೇನೆ ಎಂದು ಗದರಿದರು.” ಅಲ್ಲಿಯವರೆಗೆ ದೇಶಕ್ಕಿಂತ ನೆಹರೂರಿಗೆ ಸ್ನೇಹವೇ ಮುಖ್ಯವಾಗಿತ್ತು.
ಜವರಹರಲಾಲರಿಗೆ ಅಧಿಕಾರದ ವ್ಯಾಮೋಹ ಎಷ್ಠಿತ್ತೆಂದರೆ, ಎಲ್ಲರನ್ನೂ ಸಂಶಯದ ದೃಷ್ಠಿಯಲ್ಲೇ ನೋಡುತ್ತಿದ್ದರು.ಯಾರಾದರೂ ತಮ್ಮಿಂದ ಅಧಿಕಾರ ಕಸಿದುಕೊಂಡರೆ ಎಂಬ ಗುಮಾನಿ ನೆಹರುರ ತಲೆಯಲ್ಲಿ ಕೊರೆಯುತ್ತಿದ್ದದ್ದು ನಿಜ. ಜನರಲ್ ಕಾರ್ಯಪ್ಪನವರ ಬಗ್ಗೆ ಅಂತಹದೊಂದು ಗುಮಾನಿ ಅವರಿಗಿತ್ತು. ಕಾರ್ಯಪ್ಪನವರೇ ನೆಹರೂರ ಬಗ್ಗೆ ಹೀಗೆ ಹೇಳುತ್ತಾರೆ. “ ಆ ಮನುಷ್ಯನ ಬಗ್ಗೆ ನನಗೆ ಕನಿಕರ ಎನಿಸುತ್ತದೆ. ನಾನು ದೇಶದ ಅಧಿಕಾರವನ್ನು ಅವರಿಂದ ಕಿತ್ತುಕೊಳ್ಳುಬಹುದೆಂದು ಆತ ಹೆದರಿದ್ದರು. ದೇಶ ಸ್ವತಂತ್ರ್ಯವಾದಾಗ ದೇಶದ ರಾಜಧಾನಿ ಯಾರ ಕೈಯಲ್ಲಿತ್ತು? ನಮ್ಮ ಸೈನ್ಯದ ಕೈಯಲ್ಲಿತ್ತು ಅಲ್ಲವೇ? ನಾನು ಮನಸ್ಸು ಮಾಡಿದ್ದರೆ ಒಂದೇ ಒಂದು ಗುಂಡು ಹಾರಿಸದೇ, ದೇಶದ ಸಿಂಹಾಸನವನ್ನು ಹಿಡಿದುಕೊಳ್ಳಬಹುದಿತ್ತು. ಆದರೆ ನಾನು ಪ್ರಜಾಪ್ರಭುತ್ವವಾದಿ ಇದನ್ನು ನೆಹರೂ ಎಂದೂ ಅರ್ಥಮಾಡಿಕೊಳ್ಳಲಿಲ್ಲ”
ಬಿಡಿ, ನೆಹರೂರ ಬಗ್ಗೆ ಬರೆಯುತ್ತಾ ಹೋದರೆ ಆದರ್ಶಕ್ಕಿಂತ ಅಸಹ್ಯಗಳೆ ಢಾಳಾಗಿ ಕಾಣುತ್ತವೆ. ಅವರ ವಯುಕ್ತಿಕ ಜೀವನದ ಕೆಲವು ಸಂಗತಿಗಳು ಮಕ್ಕಳಿಗೆ ಪರಿಚಯವಾಗದಿರುವುದೇ ಒಳಿತು. ನನಗೆ ಬಾಲ್ಯದಲ್ಲಿ ನೆಹರೂರ ಬಗ್ಗೆ ಹೆಚ್ಚಿನ ಆಸ್ಥೆಯೇ ಇತ್ತು. ನೆಹರೂರ ಮುಖದ ತೇಜಸ್ಸು, ಮಾತುಗಾರಿಕೆ, ಗರಿ ಗರಿ ಇಸ್ತ್ರಿಯ ಧಿರಿಸು ಎಲ್ಲವನ್ನೂ ಮೆಚ್ಚಿಕೊಂಡಿದ್ದು ನಿಜ. ಮಕ್ಕಳ ದಿನಾಚರಣೆಯಂದು ಶಾಲೆಯಲ್ಲಿ ಭಾಷಣಕ್ಕೆ ನಿಲ್ಲುತ್ತಿದ್ದೆ. “ನೆಹರೂರಿಗೆ ಮಕ್ಕಳೆಂದರೆ ಪ್ರೀತಿ, ಆದ್ದರಿಂದಲೇ ಈ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ.. “ಎಂದು ಬಾಯಿಪಾಠ ಮಾಡಿದ ಭಾಷಣವನ್ನು ಮಂಡಿಸುತ್ತಿದ್ದೆ. ಆದರೆ ಬೆಳೆದಂತೆ ನೆಹರೂರೆಡೆಗಿನ ಭಾವನೆಗಳೂ ಬದಲಾಗುತ್ತಾ ಹೋದವು. ಒಂದು ಹಂತದಲ್ಲಿ ನೆಹರೂರ ವ್ಯಕ್ತಿತ್ವ ಪೂರ್ತಿಯಾಗಿ ಅರ್ಥವಾಗುತ್ತಾ ಹೋಯಿತು. ತುಂಬ ಖುಷಿಯಿಂದ ಮೇಜಿಗೆ ತಂದುಕೊಂಡ ನೆಹರೂರ ಬರಹ ಡಿಸ್ಕವರಿ ಆಫ್ ಇಂಡಿಯಾ, ಗ್ಲಿಂಬ್ಸ್ ಆಫ್ ವರ್ಡ್ ಹಿಸ್ಟರಿ ನಂತರ ಅಸಡ್ಡೆಯ ನೋಟಕ್ಕೆ ಕಾರಣವಾಯಿತು. ಶ್ಯಾಮ್ ಪ್ರಸಾದ್ ಮುಖರ್ಜಿರವರ, ಸಂಸತ್ತಿನ ಭಾಷಣದ ಪ್ರತಿ ಓದಿದ ನಂತರ ನೆಹರೂ ಬಗ್ಗೆ ಅಸಹನೆಯ ಕಟ್ಟೆ ಒಡೆಯಿತು. ದಳವಿಯವರ ’ಹಿಮಾಲಯನ್ ಬ್ಲಂಡರ್’ ನೆಹರೂರ ವ್ಯಕ್ತಿತ್ವವನ್ನು ಬೆತ್ತಲೆ ಮಾಡಿತು. ಎಂತೆಂಥವರನ್ನೆಲ್ಲಾ ನಾವು ಆರಾಧಿಸಿದೆವು ಎಂದು ಅಸಹ್ಯವಾಯಿತು. ಪ್ರಥಮ ಪ್ರಧಾನಿಯಾಗಿ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ನಿರ್ಮಿಸಬೇಕಿದ್ದ ನೆಹರು, ತಮ್ಮ ತಪ್ಪುಗಳಿಂದ ಇತಿಹಾಸ ಎಂದಿಗೂ ಕ್ಷಮಿಸಲಾರದಂತಹ ಪ್ರಧಾನಿ ಎನಿಸಿಕೊಂಡರು. ಮಕ್ಕಳ ದಿನಾಚರಣೆಯ ನೆಪದಲ್ಲಿ ನೆಹರೂರನ್ನು ಇಂದಿನ ಮಕ್ಕಳು ಸ್ಮರಿಸಿದರೂ ಮುಂದೊಂದು ದಿನ ಅವರು ಕೇಳಿಯೇ ಕೇಳುತ್ತಾರೆ ’ದೇಶವನ್ನು ಮುನ್ನಡೆಸುವುದೆಂದರೆ ಮಕ್ಕಳಾಟವೇ ಚಾಚಾ?’ ಉತ್ತರ ಕೊಡುವವರಾರು?



