Skip to content

ಕನ್ನಡ ಪ್ರೇಮವೆಂದರೆ ಬರೀ ’ವೇದಿಕೆ’ಯ ಹೋರಾಟ ಹಾರಾಟಗಳಲ್ಲ…

October 27, 2011

 

               ಕನ್ನಡದ ಹಬ್ಬ ಎದುರಿಗಿದೆ.ಕರ್ನಾಟಕದಲ್ಲಿ ಕನ್ನಡ ಹಬ್ಬ ಬಿಡಿ, ನಿಮಗೆ ಗೊತ್ತಿರುವುದೇ. ಕನ್ನಡ ಘೋಷಣೆ, ಧ್ವಜಾರೋಹಣ, ಹೆಚ್ಚು ಜ್ನಾನಪೀಠ ಪ್ರಶಸ್ತಿ ಪಡೆದ ಭಾಷೆ ಎಂಬ ಹಿಗ್ಗು. ಕನ್ನಡದ ಹೋರಾಟ ಅನಿವಾರ್ಯ, ಕನ್ನಡಿಗರು ನಾವೆಲ್ಲರೂ ಒಂದಾಗಬೇಕು, ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂಬ ಭಾವಾವೇಶದ ಮಾತು.ಆದರೆ ಹೊರನಾಡಿನಲ್ಲಿರುವ ಕನ್ನಡಿಗರಿಗೆ ಕನ್ನಡ ಹಬ್ಬವೇ ಬೇರೆ. ಕನ್ನಡದ ಬಗೆಗಿನ ಚಿಕ್ಕ ಪುಟ್ಟ ಸಂಗತಿಗಳು ಇಲ್ಲಿ ಕನ್ನಡ ಹಬ್ಬದ ಸಂತಸ ತರುತ್ತವೆ. ಅಚಾನಕ್ಕಾಗಿ ಯಾರೋ ಕನ್ನಡಿಗರು ಮಾತಿಗೆ ಸಿಕ್ಕರೆ, ಕನ್ನಡದ ಭಾವಗೀತೆ ದೂರದಿಂದೆಲ್ಲೋ ತೇಲಿಬಂದರೆ, ಕನ್ನಡದ ಅಕ್ಷರಗಳು ಮಸುಕುಮಸುಕಾಗಿ ಕಣ್ಣಳತೆಯಾಚೆ ಕಂಡರೂ ಅಂದು ಕನ್ನಡ ಹಬ್ಬವೇ. 

              ಈಗ ಬಿಡಿ, ಅಮೆರಿಕ, ಇಂಗ್ಲೇಂಡ್, ಆಸ್ಟ್ರೇಲಿಯ, ದುಬೈ ಇತ್ಯಾದಿ ದೇಶಗಳಲ್ಲಿ ಹೆಚ್ಚು ಸಂಖ್ಯೆಯಲ್ಲೇ ಉದ್ಯೋಗ ಹರಸಿ ಬಂದ ಕನ್ನಡಿಗರಿದ್ದಾರೆ. ಹೀಗೆ ಉದ್ಯೋಗ ಹರಸಿಬಂದ ಕನ್ನಡಿಗರು ಇಲ್ಲಿ ನೆಲೆಸಿ ಸಂಸಾರ ಹೂಡಿದ್ದಾರೆ. ಕನ್ನಡ ಕುಟುಂಬಗಳು ಪರಸ್ಪರ ಬೆರೆಯುವುದಕ್ಕೆ, ಕನ್ನಡದ ಸಂಸ್ಕೃತಿ, ಕನ್ನಡತನ ತಮ್ಮ ಮುಂದಿನ ಪೀಳಿಗೆಗೂ ಪರಿಚಯಿಸುವುದಕ್ಕೆ ತಾವುಗಳೇ ಒಗ್ಗೂಡಿ ಕನ್ನಡ ಸಂಘಗಳನ್ನ ಕಟ್ಟಿಕೊಂಡಿದ್ದಾರೆ. ಅಮೇರಿಕಾದಲ್ಲೇ ಬರೋಬ್ಬರಿ 50 ಕ್ಕಿಂತ ಹೆಚ್ಚು ಕನ್ನಡ ಸಂಘಗಳಿವೆ. ಎರಡು ವರ್ಷಕ್ಕೊಮ್ಮೆ ’ಅಕ್ಕ’ ನಡೆಸುವ ದೊಡ್ಡ ಸಮ್ಮೇಳನವಷ್ಠೇ ಅಲ್ಲ. ಪ್ರತಿವರ್ಷ ಕೂಡ ಅನೇಕ ನಗರಗಳಲ್ಲಿ ಸಮ್ಮೇಳನ, ಸಾಹಿತ್ಯ ಗೋಷ್ಠಿ, ಪುಸ್ತಕ ಬಿಡುಗಡೆ, ಸಂಗೀತ ಕಛೇರಿ, ವಿಚಾರ ಗೋಷ್ಠಿ, ಹಬ್ಬಗಳ ಆಚರಣೆ ಎಲ್ಲವೂ ನಡೆಯುತ್ತವೆ. ಕನ್ನಡನಾಡಿನಿಂದಲೂ ಸಾಹಿತಿಗಳನ್ನ, ಕಲಾವಿದರನ್ನ, ಸಿನಿಮಾ ನಟರನ್ನ ಇಲ್ಲಿಗೆ ಕರೆಸಿಕೊಂಡು ಸಂಭ್ರಮಿಸುವುದೂ ಉಂಟು. ಅಷ್ಠರ ಮಟ್ಟಿಗೆ ಇಲ್ಲಿ ಕನ್ನಡತನ ಸದಾ ಜಾಗ್ರ‍ತ.

 

                  ಕರ್ನಾಟಕದಿಂದ ಸಾವಿರಾರು ಮೈಲಿಗಳಾಚೆಯಿರುವವರಿಗೆ ಕನ್ನಡದ ಬಗ್ಗೆ ಒಂದು ಚಡಪಡಿಕೆ ಇದ್ದೇ ಇರುತ್ತದೆ. ಸದಾ ಆಂಗ್ಲಾ ಭಾಷೆಯಲ್ಲೇ ವ್ಯವಹರಿಸುವ ಜನರೊಂದಿಗಿದ್ದಾಗ ಆಗೀಗ ಸಿಗುವ ಕನ್ನಡ ವಾತಾವರಣ ರೋಮಾಂಚನಗೊಳಿಸುತ್ತದೆ. ಸಿಕ್ಕ ಒಂದೇ ಕನ್ನಡ ಪುಸ್ತಕದ ಪುಟ ಪುಟ ತಿರುವಿಹಾಕುವಾಗ ಸಿಕ್ಕುವ ಸಂತಸ ವರ್ಣನಾತೀತ. ಇತ್ತೀಚೆಗೆ ಅಮೇರಿಕಾದಲ್ಲಿ ನೆಲೆಸಿದ್ದ ಮತ್ತು ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಕಾದಂಬರಿಕಾರ ಎಂ.ಆರ್ ದತ್ತಾತ್ರಿ, ತಮ್ಮ ’ದ್ವೀಪವ ಬಯಸಿ’ ಕಾದಂಬರಿಯನ್ನು ಕಳುಹಿಸಿಕೊಟ್ಟಿದ್ದರು. ತುಂಬಾ ಇಷ್ಠವಾದ ಮತ್ತು ಸರಾಗವಾಗಿ ಓದಿಸಿಕೊಂಡು ಹೋದ ಕಾದಂಬರಿ ಅದು. ಹೀಗೆ ಒಮ್ಮೆ ಅದೇ ಕಾದಂಬರಿಯ ಪುಟಗಳನ್ನು ಸಿಸ್ಸಿನಾಟಿಯಲ್ಲಿನ ಮೆಟ್ರೋ ಬಸ್ಸಿನಲ್ಲಿ ಕೂತು ತಿರುವಿಹಾಕುತ್ತಿದ್ದೆ. ಪಕ್ಕದಲ್ಲಿ ಕೂತವನು ಗಮನಿಸುತ್ತಿದ್ದ. ಆತನಿಗೆ ಬಹುಶಃ ಈ ಭಾಷೆಯ ಪರಿಚಯವಿರಲಿಲ್ಲ. ಕೇಳಲೋ ಬೇಡವೋ ಎಂಬ ಸಂಕೋಚದಲ್ಲೇ ನಾನೊಮ್ಮೆ ನೋಡಲೆ ಎಂದು ತೆಗೆದುಕೊಂಡ, ಒಂದಷ್ಟು ಪುಟ ಸರಿಸಿದ. ಯಾವುದೀ ಭಾಷೇ ನೋಡಲು ಸುಂದರವಾಗಿದೆ. ಹಿಂದೊಮ್ಮೆ ಈ ಭಾಷೆಯ ಪುಸ್ತಕವನ್ನ ನ್ಯೂಯಾರ್ಕಿನ ಗ್ರಂಥಾಲಯದಲ್ಲಿ ನೋಡಿದ್ದೆ ಎಂದ. ಖುಷಿಯಾಯಿತು. ಇದು ನನ್ನ ಕನ್ನಡ ಭಾಷೆ, ಅಕ್ಷರಗಳಷ್ಟೇ ಸುಂದರವಲ್ಲ. ಭಾಷೇ ಕೂಡ ಎಂದು ಹೆಮ್ಮೆ ಯಿಂದ ಹೇಳಿದ್ದೆ. ಅಂದು ಆದ ಸಂತೋಷಕ್ಕೆ ಪಾರವೇ ಇಲ್ಲ.

                 ಸಿನ್ಸಿನಾಟಿಯಲ್ಲಿನ ಲೈಬ್ರರಿ ಕೂಡ ತುಂಬಾ ವಿಶಾಲವಾದದ್ದು. ಮೂರು ಮಹಡಿಯ ಎರಡು ಕಟ್ಟಡಗಳ ತುಂಬಾ ಪುಸ್ತಕಗಳು. ನಾನಾ ದೇಶದ ಇತಿಹಾಸ, ಅನೇಕ ರಾಷ್ಟ್ರನಾಯಕರ ಜೀವನ ಚರಿತ್ರೆ, ವಿಜ್ನಾನ, ತಂತ್ರಜ್ನಾನ, ವೈದ್ಯಕೀಯ ಇನ್ನಿತರ ಸಾವಿರಾರು ಪುಸ್ತಕಗಳ ಖಣಜ ಆ ಗ್ರಂಥಾಲಯ. ಅಲ್ಲಿನ ಪುಸ್ತಕದ ಕಪಾಟುಗಳಲ್ಲಿ ಮೊದಲು ಹುಡುಕಲು ಹೊರಟಿದ್ದೂ ಕನ್ನಡದ ಯಾವುದಾದರು ಪುಸ್ತಕ ಇದೆಯಾ ಎಂದು. ನಂತರ ಛೇ! ಒಂದೂ ಕನ್ನಡ ಪುಸ್ತಕಗಳೇ ಇಲ್ಲವಲ್ಲ! ಎಂದು ಗೊಣಗಿಕೊಂಡಿದ್ದೆ. ಇಲ್ಲಿ ಅನೇಕ ಭಾಷೆಗಳ ಪುಸ್ತಕಗಳಿವೆ. ಅಂತರಾಷ್ಟ್ರಿಯ ಪುಸ್ತಕ ವಿಭಾಗದಲ್ಲಿ ಆಯಾ ದೇಶದ ಉತ್ತಮ ಪುಸ್ತಕಗಳ ಸಂಗ್ರಹವಿದೆ. ಆದರೆ ಕನ್ನಡ ಮಾತ್ರ ಇಲ್ಲಿ ಕಣ್ಮರೆ. ಇನ್ನು ಸಿ.ಡಿಗಳ ವಿಭಾಗಕ್ಕೆ ಹೋದರೂ, ಜಗತ್ತಿನ ಅಷ್ಟೂ ಭಾಷೆಗಳ ಉತ್ತಮ ಚಿತ್ರಗಳ ಸಿ.ಡಿ ಇಲ್ಲಿ ಲಭ್ಯ. ಭಾರತದ ಹಿಂದಿ, ತಮಿಳು, ತೆಲುಗು ಭಾಷೆಯ ಚಲನ ಚಿತ್ರಗಳು ಇಲ್ಲಿ ಕಾಣಸಿಗುತ್ತವೆ. ಆ ಸಾಲಿನಲ್ಲೂ ನಾನು ಹುಡುಕಿದ್ದು ಕನ್ನಡ ಚಿತ್ರಗಳು ಯಾವುದಾದರೂ ಇದೆಯಾ? ಕೊನೆಗೂ ನನ್ನ ಭಾಷೆಯ ಚಿತ್ರದ ಸಿ.ಡಿ ಅಲ್ಲಿ ಕಂಡು ಸಂತಸವಾಯಿತು. ಪಿ.ಶೇಷಾದ್ರಿಯವರ ’ಮುನ್ನುಡಿ’ ಕಂಡು ಖುಷಿಯೋ ಖುಷಿ, ಬೇರೆ ಯಾವುದಾದರೂ ಕನ್ನಡ ಸಿನಿಮಾ ಇದೆಯಾ ನೋಡಿದರೆ ಯಾವುದೂ ಸಿಕ್ಕಲಿಲ್ಲ. ಆದರೂ ಅಷ್ಠೂ ಸಿನಿಮಾಗಳ ಮಧ್ಯೆದಲ್ಲಿ ’ಮುನ್ನುಡಿ’ ತಂದ ಸಂತೋಷ ಅಷ್ಠಿಷ್ಠಲ್ಲ.

                ಹೀಗೆ ಕನ್ನಡದ ಬಗೆಗಿನ ಸಣ್ಣ ಸಣ್ಣ ಸಂಗತಿಗಳು ಹೊರನಾಡಿನಲ್ಲಿದ್ದು ಕನ್ನಡ ಪ್ರೀತಿಸುವವರಿಗೆ ಸಂತಸ ನೀಡುತ್ತವೆ, ಪುಳಕ ಗೊಳಿಸುತ್ತವೆ.ಒಮ್ಮೆ ಜಯಂತ ಕಾಯ್ಕಿಣಿ ಈ ಬಗ್ಗೆ ಹೇಳುತ್ತಿದ್ದರು ’ಈ ಕನ್ನಡ ನಾಡು, ಹೊರನಾಡು ಎಂದು ಮಾತನಾಡುವವರಿಗೆಲ್ಲಾ ಒಂದು ಪ್ರಶ್ನೆ. ನಾವು ಬಾಂಬೆಯಲ್ಲೋ, ಅಸ್ಸಾಮಿನಲ್ಲೋ, ಅಮೇರಿಕದಲ್ಲೋ ,ಇಂಗ್ಲೇಂಡಿನಲ್ಲೋ ಇದ್ದುಕೊಂಡು, ಒಳ್ಳೆಯ ಕೆಲಸಗಾರರಾಗಿ, ಒಳ್ಳೆಯ ಪ್ರಜೆಯಾಗಿ, ಒಳ್ಳೆಯ ತಂದೆಯಾಗಿ, ಒಳ್ಳೆಯ ಸ್ನೇಹಿತನಾಗಿ, ಒಳ್ಳೆಯ ಅಣ್ಣ ನಾಗಿ, ತಮ್ಮನಾಗಿ ಇರೋದು ಕನ್ನಡತನವೋ? ಅಥವಾ ವಿಧಾನ ಸೌಧದ ಮುಂಬಾಗದಲ್ಲೇ ಇದ್ಕೊಂಡು, ಕೈಗಳ ಹತ್ತೂ ಬೆರೆಳಿಗೆ ಉಂಗುರಗಳನ್ನ ಹಾಕ್ಕೊಂಡು, ಕತ್ತಿಗೆ ದಪ್ಪದ ಚಿನ್ನದ ಚೈನು ಹಾಕ್ಕೊಂಡು, ಭ್ರಷ್ಠಾಚಾರ, ಮೋಸ ವಂಚನೆ ಮಾಡ್ಕೊಂಡು, ಮೈಗಳ್ಳತನ ಮಾಡ್ಕೊಂಡು, ಅತ್ಯಂತ ಹೀನವಾಗಿ ಬದುಕಿ, ಕೇವಲ ರಾಜ್ಯೋತ್ಸವದ ದಿನ ಧ್ವಜ ಹಾರಿಸಿಬಿಟ್ಟರೆ ಅದು ಕನ್ನಡತನವೋ? ಕನ್ನಡತನ ಅಂದರೆ ಅದೊಂದು ಮೌಲ್ಯ. ಎಲ್ಲಿದ್ದರೂ ಕೂಡ ಚೆನ್ನಾಗಿ ಕೆಲಸಮಾಡಿ, ಒಳ್ಳೆಯತನದಿಂದ ಇದ್ದರೆ ಅದು ಕನ್ನಡತನ.’

                  ಜಯಂತರ ಮಾತು ಸತ್ಯ. ಕೇವಲ ಕೆಂಪು ಹಳದಿ ಬಣ್ಣದ ಟವಲ್ ಭುಜದ ಮೇಲೇರಿಸಿಕೊಂಡು, ಊರಿಗೊಂದು ಕೇರಿಗೊಂದು ಕನ್ನಡ ವೇದಿಕೆ ಕಟ್ಟಿಕೊಂಡು, ಬೀದಿಯುದ್ದಕ್ಕೂ ಕಟೌಟ್ ನಿಲ್ಲಿಸಿಕೊಂಡು, ನವಂಬರ್ ನಲ್ಲಿ ಕನ್ನಡ ಪ್ರೇಮ ಪ್ರದರ್ಶಿಸುವುದು ಕನ್ನಡತನವಲ್ಲ. ಕನ್ನಡಿಗನ ಮನಸಲ್ಲಿ ಕನ್ನಡದ ಬಗ್ಗೆ ಒಲವಿದ್ದರೆ, ಮನೆ ಮನೆಗಳಲ್ಲಿ ಕನ್ನಡದ ವಾತಾವರಣವಿದ್ದರೆ, ಇತರರಿಗೂ ಕನ್ನಡ ಕಲಿಸಬೇಕೆಂಬ ಮನಸ್ಸಿದ್ದರೆ, ಮೊಸರನ್ನ ಕರ್ಡ್ ರೈಸ್ ಆಗದಿದ್ದರೆ, ತಿಳಿಸಾರು ರಸಂ ಆಗದೆ ತಿಳಿಸಾರಾಗೇ ಉಳಿದರೆ, ಅಮ್ಮ ಮಮ್ಮಿಯಾಗದಿದ್ದರೆ, ಕಂಗ್ಲೀಷ್ ಪ್ರಯೋಗ ಕಮ್ಮಿಯಾದರೆ,ಮಕ್ಕಳಿಗೆ ಚಿಕ್ಕವಯಸ್ಸಲ್ಲೇ ಬೇಂದ್ರೆ, ಕಾರಂತ, ಭೈರಪ್ಪ, ತೇಜಸ್ವಿ ಪರಿಚಯವಾದರೆ. ಕನ್ನಡ ಅಷ್ಠರ ಮಟ್ಟಿಗೆ ಜೀವಂತ. ಇದರ ಹೊರತು ಹೋರಾಟ ಎಂಬುದು ವ್ಯರ್ಥ. ಅಲ್ಲವೇ?

One Comment leave one →
  1. November 8, 2011 3:29 am

    nima ಕನ್ನಡ ಪ್ರೇಮ ……..nirantaravagirali…..abinandanegalu…..muthuraju.t

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.