ಮೌಂಟ್ ಬ್ಯಾಟನ್ನಿನ ವಿವಾಹ ವಾರ್ಷಿಕೋತ್ಸವವನ್ನು ಇಡೀ ದೇಶ ಆಚರಿಸಲು ಸಿದ್ದವಾಗುತ್ತದೆ ಎಂದರೆ…!
ಮತ್ತೊಂದು ಸ್ವಾತಂತ್ರ್ಯೋತ್ಸವ, ಮತ್ತೊಂದು ರಜೆ, ಅಲ್ಲೆಲ್ಲೋ ಧ್ವಜಾರೋಹಣ, ಶಾಲೆಗಳಲ್ಲಿ ಬಾಪು, ನೆಹರು ಭಾವಚಿತ್ರಕ್ಕೆ ಮಾಲಾರ್ಪಣೆ, ನಗರಸಭೆ ಟ್ರ್ಯಾಕ್ಟರ್ ಗಳಲ್ಲಿ ಭಾರತ ಮಾತೆಯ ದೊಡ್ಡದೊಂದು ಪೋಟೋ ಅದಕ್ಕೆ ಅಷ್ಠೇ ದೊಡ್ಡದಾದ ಸೇವಂತಿಕೆಯ ಗೊಂಡೆಯಿರುವ ಹಾರ, ಭಾರತ ಮಾತೆಗೆ ಜೈಕಾರ, ರಾಜಕಾರಣಿಗಳ ಉದ್ದುದ್ದ ಭಾಷಣ, ಭಾರತದ ಅಭಿವೃದ್ದಿಗೆ ಶ್ರಮಿಸೋಣ ಎಂಬ ಸುಳ್ಳೇಸುಳ್ಳು ವಾಕ್ಯಗಳು, ಕೊನೆಯಲ್ಲಿ ಸಿಹಿ ವಿತರಣೆ, ಹೊರಡುವ ಮುನ್ನ ಮತ್ತೊಮ್ಮೆ ವಂದೇ ಮಾತರಂ, ಭಾರತ ಮಾತಾ ಕೀ ಜೈ..! ಇಷ್ಠೇ ನಮ್ಮ ಸ್ವಾತಂತ್ರ್ಯೋತ್ಸವದ ಆಚರಣೆ. ಈಗಲ್ಲ ಕಳೆದ ಅರವತ್ತೈದು ವರ್ಷ ನಾವು ಆಚರಿಸಿದ್ದೂ ಹೀಗೆಯೇ. ಇಷ್ಠಾದರೆ ಅಲ್ಲಿಗೆ ಈ ವರ್ಷದ ಸ್ವಾತಂತ್ರ್ಯೋತ್ಸವ ಮುಗಿಯಿತು. ಮರು ವರ್ಷ ಮತ್ತದೇ ರಜೆ, ಧ್ವಜಾರೋಹಣ, ಸುಳ್ಳೇ ಸುಳ್ಳು ಘೋಷಣೆಗಳು.ಭಾರತ ಮಾತೆಗೆ ಜೈ.
ಕೆಲವೊಮ್ಮೆ ನಗು ಬರುತ್ತದೆ. ಸ್ವಾತಂತ್ರ್ಯದ ಕಲ್ಪನೆ ನಮಗಿದೆಯಾ? ಸ್ವಾತಂತ್ರ್ಯ ಹೋರಾಟದ ಬಗ್ಗೆ ನಮಗೆ ಗೊತ್ತಿರುವ ಸತ್ಯಗಳೇನು? ಕನಿಷ್ಠ ಹತ್ತು ಸ್ವಾತಂತ್ರ್ಯ ಯೋಧರ ಹೆಸರನ್ನು ತಡವರಿಸದೇ ಹೇಳಬಲ್ಲೆವಾ? ಊಹುಃ ಆಗಸ್ಟ್ ೧೫ ೧೯೪೭ ರಂದು ನಮಗೆ ಸ್ವಾತಂತ್ರ್ಯ ಸಿಕ್ಕಿತು. ಮಹಾತ್ಮ ಗಾಂಧಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟರು ಎಂದು ಶಾಲೆಯಲ್ಲಿ ಉರುಹೊಡೆದದ್ದು ಬಿಟ್ಟು ಕುತೂಹಲಕ್ಕಾದರೂ ಆ ಹೋರಾಟದ ಅಧ್ಯಯನ ಮಾಡಿದ್ದೇವಾ? ಕನಿಷ್ಠ ನಮ್ಮ ನಮ್ಮ ಊರಿನಲ್ಲಿ ಸ್ವಾತಂತ್ರ್ಯ ಹೋರಾಟ ಹೇಗೆ ನಡೆದಿತ್ತು? ಯಾರ್ಯಾರು ಆ ಚಳುವಳಿಗೆ ಕೊಡುಗೆ ಕೊಟ್ಟರು? ಮಹತ್ವದ ಘಟನೆಗಳಿಗೇನಾದರು ನನ್ನೂರು ಸಾಕ್ಷಿಯಾಯಿತಾ ಎಂದು ತಿಳಿಯಬೇಕೆನಿಸಿತ? ಈ ಪ್ರಶ್ನೆಗಳಿಗೆ “ಇಲ್ಲ” ಎಂಬುದೇ ಉತ್ತರವಾದರೆ ಇನ್ನು ೬೫ ವರ್ಷದ ನಂತರವೂ ಹೀಗೊಂದು ಸಂಭ್ರಮಾಚರಣೆ ಮಾಡುವ ಉದ್ದೇಶದ ಸಾರ್ಥಕತೆಯೇನು?
ಬಿಡಿ, ಹಾಗೆ ನೋಡಿದರೆ ನಮಗೆ ನಮ್ಮ ಇತಿಹಾಸದ ಅನೇಕ ಸತ್ಯಗಳ ಅರಿವಿಲ್ಲ. ಯಾವುದನ್ನು ಪಠ್ಯ ಪುಸ್ತಕ ಇತಿಹಾಸವೆಂದು ಸಾರಿತೋ, ಅದನ್ನೇ ಕೇವಲ ಅಂಕಗಳಿಕೆಗಾಗಿ ಓದಿದ ನಮಗೆ ಸತ್ಯ ಶೋಧನೆಯ ಹಸಿವು ಬರಲು ಹೇಗೆ ಸಾಧ್ಯ. ಗಾಂಧೀ,ನೆಹರು,ಬೋಸ್, ತಿಲಕ್, ಸರ್ದಾರ ಪಟೇಲ್, ಭಗತ್ ಸಿಂಗ್, ರಾಜಗುರು, ಸುಖದೇವ್, ಮದನ ಲಾಲ್ ಧೀಂಗ್ರಾ, ಅಜಾದ್, ಸಾವರ್ಕರ್, ರಾಮ್ ಪ್ರಸಾದ್ ಬಿಸ್ಮಿಲ್ ಮುಂತಾದವರ ಕೊಡುಗೆ ಸ್ವಾತಂತ್ರ್ಯ ಚಳುವಳಿಗೆ ಹೇಗೆ ಪುಷ್ಠಿ ನೀಡಿತು ಎಂದು ಅರಿಯದೆ ಹೋದರೆ ಹೇಗೆ? ಇವರುಗಳ ಕೊಡುಗೆಯೇ ಗೊತ್ತಿಲ್ಲದಿದ್ದ ಮೇಲೆ, ಯಾರು ಅಹಿಂಸೆಯ ನೆರಳಲ್ಲಿ ಕೂತು, ಬ್ರಿಟೀಷರ ಲಾಠಿಗೆ ಮೈ ಒಡ್ಡದೆ, ನೇಣಿಗೆ ಕೊರಳು ನೀಡದೆ, ಮಹಾತ್ಮರೆನಿಸಿದರು, ಸ್ವಾತಂತ್ರ್ಯೋತ್ತರ ಭಾರತದ ಅಧಿಕಾರದ ಚುಕ್ಕಾಣಿ ಹಿಡಿದು, ಭಾರತದ ಅದೆಷ್ಠೋ ಸಮಸ್ಯೆಗೆ ಕಾರಣರಾದರು ಎಂದು ಗೊತ್ತಾಗುವುದು ಹೇಗೆ?
ಗಾಂಧೀಜಿಯ ಬಗ್ಗೆ ಗೌರವವಿದೆ, ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಮಹತ್ತರ ತಿರುವು ಸಿಕ್ಕಿದ್ದು ಗಾಂಧೀಜಿಯವರ ಪ್ರವೇಶದಿಂದ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಗಾಂಧೀಜಿ ತಮ್ಮ ಜೀವಿತಾವಧಿಯಲ್ಲಿ ೫ ಮಹತ್ತರ ಹೋರಾಟವನ್ನು ಮಾಡಿದರು. ಅದರಲ್ಲಿ ಎರಡು, ಸೌತ್ ಆಫ್ರೀಕಾ ನೆಲದಲ್ಲಿ ಮಾಡಿದ್ದು. ಮತ್ತೆ ಮೂರು ಭಾರತದಲ್ಲಿ. ೧೯೨೦-೨೧ ರ ಅಸಹಕಾರ ಸತ್ಯಾಗ್ರಹ, ೧೯೩೦-೩೧ ರ ದಂಡಿ ಮಾರ್ಚ್(ಉಪ್ಪಿನ ಸತ್ಯಾಗ್ರಹ), ೧೯೪೨ ರ ಆಗಸ್ಟ್ ನಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಇವೆಲ್ಲಾ ಒಂದು ತಿಂಗಳು, ಎರಡು ತಿಂಗಳು, ಹೆಚ್ಚೆಂದರೆ ಆರು ತಿಂಗಳು ನೆಡೆದ ಚಳುವಳಿಗಳು. ಇವೆಲ್ಲವೂ ನಮಗೆ ಪಠ್ಯದಲ್ಲಿ ಓದ ಸಿಗುತ್ತವೆ. ಆದರೆ ಬಹುದೊಡ್ಡ ಚಳುವಳಿಯೊಂದು ಕೂಡ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಈ ನೆಲದಲ್ಲಿ ನಡೆಯಿತು. ಅದೂ ಒಂದೆರಡು ತಿಂಗಳಲ್ಲ ಸುಮಾರು ೬ ವರ್ಷ! ಅದು ವಂಗ-ಭಂಗ ಚಳುವಳಿ. ಆ ಚಳುವಳಿಯ ಬಗ್ಗೆ ನಮ್ಮ ಪಠ್ಯ ವಿವರಿಸುವುದೇ ಇಲ್ಲ. ಗಾಂಧಿಜಿಯವರ ಅಹಿಂಸೆಯ ಹೋರಾಟ ಸುತ್ಯಾರ್ಹವೇ. ಆದರೆ ನಾವು ನೆನಪಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ ’ಯಾವ ದೇಶದ ಪ್ರಜೆಗಳು ನಪುಂಸಕರಾಗಿರುತ್ತಾರೋ ಆ ದೇಶ ಸ್ವಾತಂತ್ರ್ಯ ಪಡೆದುಕೊಳ್ಳುವುದಕ್ಕೆ ಅರ್ಹವಲ್ಲ!’ ಕ್ರಾಂತಿ ಪ್ರತಿ ದೇಶಕ್ಕೆ ಅನಿವಾರ್ಯ. ಕ್ರಾಂತಿಯ ಹೊರತಾಗಿ ದೇಶ ಇತರ ದೇಶಗಳೆದುರು ತಲೆಯೆತ್ತಲಾರದು.
ಗಾಂಧೀಜಿಯವರ ಅಹಿಂಸೆಯ ಚಳುವಳಿಯನ್ನ ಮಕ್ಕಳಿಗೆ ಕಲಿಸೋಣ. ಗಾಂಧೀಜಿಯವರ ಜೀವನ ಮಕ್ಕಳಿಗೆ ಮಾದರಿಯಾಗಲಿ, ಆದರೆ ಮಕ್ಕಳಲ್ಲಿ ಧೈರ್ಯ, ದೇಶಾಭಿಮಾನ, ದೇಶಕ್ಕಾಗಿ ಪ್ರಾಣ ನೀಡಲೂ ಸಿದ್ದರಾಗಬೇಕೆಂಬ ಮನೋಭಾವ ಮೂಡಬೇಕಾದರೆ ಖಂಡಿತ ಭಗತ್ ಸಿಂಗ್, ರಾಜಗುರು, ಸುಖದೇವ್ ಮುಖ್ಯವಾಗಿ ಸಾವರ್ಕರ್ ರನ್ನು ಮಕ್ಕಳಿಗೆ ಪರಿಚಯಿಸಲೇ ಬೇಕು. ವಿದ್ಯಾನಂದ ಶೆಣೈ ಒಮ್ಮೆ ಭಾಷಣ ಮಾಡುತ್ತಾ ಹೇಳುತ್ತಿದ್ದರು “ನಾಳೆ ಪರೀಕ್ಷೇ ಅಂದರೆ ವಿಧ್ಯಾರ್ಥಿಗಳಿಗೆ ಇವತ್ತು ನಿದ್ದೆ ಬಂದಿರಲ್ಲ, ಆದರೆ ನಾಳೆ ಗಲ್ಲಿಗೆ ಏರಿಸುತ್ತಾರೆ ಅಂದರೆ ಇವತ್ತು ಭಗತ್ ಸಿಂಗ್ ಒಳ್ಳೆಯನಿದ್ದೆಯಲ್ಲಿದ್ರು, ಬೆಳಿಗ್ಗೆ ಹೋಗಿ ಅವರನ್ನ ಎಬ್ಬಿಸಿದ್ದು. ಸ್ನಾನ ಮಾಡಿ, ಗೆಳೆಯರ ಜೊತೆ ಗಲ್ಲು ಗಂಬದ ಕಡೆಗೆ ನಗುಮೊಗದಿಂದ ನಡೆಯುತ್ತಿದ್ದರೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಜೊತೆ ೫ ಮಂದಿ ಅಧಿಕಾರಿಗಳು ಮಾತ್ರ ಅಲ್ಲಿದ್ದರು. ಆ ೫ ಮಂದಿಗೆ ಆಶ್ಚರ್ಯ, ಕೇಳಿದ್ರು ’ಇಷ್ಟು ಸಂತೋಷದಿಂದ ಹೆಜ್ಜೆ ಹಾಕ್ತಿದ್ದೀರಲ್ಲ ಇದಕ್ಕೆ ಕಾರಣ ಏನು? ಭಗತ್ ಸಿಂಗ್ ಉತ್ತರ ಕೊಟ್ಟ ’ ನಾವು ಮೂರು ಮಂದಿ ಗಲ್ಲಿಗೇರುವಾಗ ನೀವುಗಳಿದ್ದೀರಲ್ಲಾ, ನೀವು ಅದೃಷ್ಟವಂತರು, ನಾಡ ಮುಕ್ತಿಗಾಗಿ ಈ ದೇಶದ ಯುವಕ ಹೇಗೆ ನಗ್ತಾ ನಗ್ತಾ ಗಲ್ಲಿನ ಉರುಳಿಗೆ ಕೊರಳು ಕೊಡ್ತಾನೇ ಅನ್ನೋದನ್ನ ನೋಡೋ ಭಾಗ್ಯ ಭಾರತದ ಮೂವತ್ತು ಕೋಟಿ ಜನರಿಗಲ್ಲದೆ ನಿಮಗೆ ಸಿಕ್ಕಿದೆ, ನೀವುಗಳೂ ಖುಷಿ ಪಡಿ ಎಂದನಂತೆ’ ಅದು ಭಾರತದ ಯುವಕನ ಗಂಡೆದೆ. ಮಕ್ಕಳಿಗೆ ಪರಿಚಯವಾಗಬೇಕಾದ್ದು ಇಂತಹ ಘಟನೆಗಳು.
ಇನ್ನು ನಾವು ಎದೆಯುಬ್ಬಿಸಿ ಹೇಳುವ ರಾಷ್ಟ್ರಗೀತೆ ’ಜನ ಗಣ ಮನ’ ದ ಕತೆಯೂ ದೊಡ್ಡದೇ. ಅಸಲಿಗೆ ಅದಕ್ಕೆ ರಾಷ್ಟ್ರ ಗೀತೆಯಾಗಬೇಕಾದ ಅರ್ಹತೆಗಳೇ ಇಲ್ಲ. ಬ್ರಿಟೀಷ್ ಅಧಿಕಾರಿಯನ್ನು ಸಂಪ್ರೀತಗೊಳಿಸಲು ಬರೆದ ಪದ್ಯ ನಂತರ ರಾಷ್ಟ್ರ ಗೀತೆಯಾದದ್ದು ದುರಂತ. ಹಾಗೆ ನೋಡಿದರೆ ಭಾರತದ ರಾಷ್ಟ್ರ ಗೀತೆಯಾಗಲು ಎಲ್ಲಾ ಅರ್ಹತೆ ಪಡೆದುಕೊಂಡದ್ದು ’ವಂದೇ ಮಾತರಂ’. ವಂದೇ ಮಾತರಂ ಹುಟ್ಟು ಹಾಕಿದ ಹೋರಾಟ, ಪ್ರತಿ ದೇಶವಾಸಿಯ ಎದೆಯಲ್ಲೂ ಅದು ಉದ್ದೀಪನಗೊಳಿಸಿದ ಸ್ವಾತಂತ್ರ್ಯದ ಕಿಚ್ಚು ದೊಡ್ಡದೇ. ಲಕ್ಷ ಲಕ್ಷ ಯುವಕರನ್ನು ಸ್ವಾತಂತ್ರ್ಯ ಚಳುವಳಿಗೆ ಧುಮುಕುವಂತೆ ಮಾಡಿದ್ದು ವಂದೇ ಮಾತರಂ. ಬಿಡಿ, ಇತಿಹಾಸದ ಸತ್ಯ ಕೆದಕುತ್ತಾ ಹೋದರೆ ನಮ್ಮ ಮತಿಹೀನ ನಾಯಕರ ಬಗ್ಗೆ ರೇಜಿಗೆ ಹುಟ್ಟುತ್ತದೆ. ಆದ್ದರಿಂದಲೇ ಆ ಸತ್ಯಗಳನ್ನು ಪಠ್ಯ ಪುಸ್ತಕದ ಪರಿದಿಗೆ ಬರದಂತೆ ನೋಡಿಕೊಳ್ಳಲಾಯಿತು.
ಅದಿರಲಿ, ಅನೇಕರಿಗೆ ಗೊತ್ತಿರಲಕ್ಕಿಲ್ಲ. ಇಂದು ನಾವು ಆಚರಿಸುತ್ತಿರುವುದು ಕೇವಲ ಭಾರತದ ಸ್ವಾತಂತ್ರ್ಯೋತ್ಸವವನ್ನಲ್ಲ. ಬದಲಿಗೆ ಮೌಂಟ್ ಬ್ಯಾಟನಿನ್ನ ವಿವಾಹ ವಾರ್ಷಿಕೋತ್ಸವವನ್ನ..! ಹಾಗೆ ನೋಡಿದರೆ ನಮಗೆ ಸ್ವಾತಂತ್ರ್ಯ ಘೋಷಣೆಯಾಗಬೇಕಿದ್ದು, ನಾವುಗಳು ಸ್ವಾತಂತ್ರ್ಯ ದಿನಾಚರಣೆಯೆಂದು ಆಚರಿಸಬೇಕಿದ್ದದ್ದು ಆಗಸ್ಟ್ ೯ ನ್ನು. ಆಗಸ್ಟ್ ೯ ಸ್ವಾತಂತ್ರ್ಯ ಯೋಧರಿಗೆ ಅತ್ಯಂತ ಪವಿತ್ರ್ಯವಾದ ದಿನ. ಅದನ್ನ ಆಗಸ್ಟ್ ಕ್ರಾಂತಿಯ ದಿನ ಅಂತ ಕರೆಯುತ್ತಿದ್ದರು. ಗಾಂಧಿಜಿಯವರು ’ಮಾಡು ಇಲ್ಲವೇ ಮಡಿ’ ಎಂಬ ಶಂಖನಾದ ಮೊಳಗಿಸಿದ್ದು ಆಗಸ್ಟ್ ೯ ರಂದು. ’ಭಾರತ ಬಿಟ್ಟು ತೊಲಗಿ’ – ’ಕ್ವಿಟ್ ಇಂಡಿಯಾ’ ಚಳುವಳಿ ಪ್ರಾರಂಭವಾದದ್ದೂ ಆಗಸ್ಟ್ ೯ ರಂದೇ. ಆದ್ದರಿಂದಲೇ ಆಗಸ್ಟ್ ೯ ರಂದು ನಮಗೆ ಸ್ವಾತಂತ್ರ್ಯ ಸಿಗಬೇಕೆಂದು ಅನೇಕರ ಆಶಯವಾಗಿತ್ತು. ಆಗಿನ ಭಾರತದ ಗವರ್ನರ್ ಜನರಲ್ ಮೌಂಟ್ ಬ್ಯಾಟನ್ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ನೀಡುತ್ತೇನೆ ಎಂದಾಗ ನೆಹರು ಒಪ್ಪಿಕೊಂಡರು. ಆದರೆ ಇದಕ್ಕೆ ಬಹುಸಂಖ್ಯಾತ ಸ್ವಾತಂತ್ರ್ಯ ಸೇನಾನಿಗಳ ಅಸಮ್ಮತಿಯಿತ್ತು. ಮೌಂಟ್ ಬ್ಯಾಟನ್ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ದಿನವೆಂದು ಘೋಷಿಸಲು ಒಂದು ಮಹತ್ವದ ಕಾರಣವೂ ಇತ್ತು. ಮೌಂಟ್ ಬ್ಯಾಟನ್ ಮದುವೆಯಾಗಿದ್ದು ೧೯೩೦ ರ ಆಗಸ್ಟ್ ೧೫ ರಂದು. ತಮ್ಮ ಮದುವೆಯ ದಿನವೇ ಭಾರತದ ಸ್ವಾತಂತ್ರ್ಯ ದಿನವಾಗಬೇಕೆಂಬುದು ಅವರ ಹಠವಾಗಿತ್ತು. ಒಂದು ವೇಳೆ ನೆಹರು ಅಷ್ಟೇ ಹಠದಿಂದ ಮತ್ತು ಧೃಡವಾಗಿ ಆಗಸ್ಟ್ ೯ ರಂದೇ ಸ್ವಾತಂತ್ರ್ಯ ಬೇಕೆಂದು ಪಟ್ಟು ಹಿಡಿದಿದ್ದರೆ ಆಗಸ್ಟ್ ೯ ರಂದೇ ಸ್ವಾತಂತ್ರ್ಯ ಸಿಕ್ಕಿ ಹೋಗುತ್ತಿತ್ತು. ಆದರೆ ನೆಹರು ಮೌಂಟ್ ಬ್ಯಾಟನ್ ರಿಗೆ ಎದುರಾಡಲಿಲ್ಲ. ಸ್ವಾತಂತ್ರ್ಯ ತಡವಾಗಿ ಬಂದರೇನು, ಸ್ವತಂತ್ರ್ಯ ಭಾರತದ ಅಧಿಕಾರದ ಚುಕ್ಕಾಣಿ ಧಕ್ಕಿದರೆ ಸಾಕು ಎಂದು ನೆಹರು ಯೋಚಿಸುತ್ತಿದ್ದರು. ಕೊನೆಗೂ ಮೌಂಟ್ ಬ್ಯಾಟನ್ ಆಗಸ್ಟ್ ೧೫ ರಂದೇ ಸ್ವಾತಂತ್ರ್ಯ ಘೋಷಿಸಿದ, ಭಾರತವಿರುವಷ್ಟು ದಿನ ತನ್ನ ಮದುವೆಯ ವಾರ್ಷಿಕೋತ್ಸವದ ಆಚರಣೆ ಭಾರತದ ಸ್ವಾತಂತ್ರ್ಯೋತ್ಸವದ ನೆಪದಲ್ಲಿ ನಡೆಯಲಿ ಎಂಬುದು ಅವನ ತರ್ಕ. ಇಂದಾಗುತ್ತಿರುವುದೂ ಅದೇ..!
ಛೇ! ಅವನ್ಯಾರದ್ದೋ ವಿವಾಹ ವಾರ್ಷಿಕೋತ್ಸವದ ದಿನ ನಮಗೆ ಸ್ವಾತಂತ್ರ್ಯ ಭಿಕ್ಷೆಯಾಗಿ ಸಿಗಬೇಕಿತ್ತಾ? ನೆಹರೂ ಬಗ್ಗೆ ಅಸಹ್ಯ ಮೂಡಲು ಇರುವ ಅನೇಕ ಕಾರಣಗಳಲ್ಲಿ ಇದೂ ಒಂದು. ಶೇಮ್…!



ಇಂತ ವಿಷಯವನ್ನು ಬರೆಯುವುದೂ ಸರಿಯಲ್ಲ ಅನ್ನಿಸುತ್ತದೆ. ಯಾಕೆ ಗೊತ್ತಾ? ಈಗ ನೋಡಿ ಅವನ್ಯಾರೋ ಮೌಂಟ್ ಬ್ಯಾಟನ್ ಎಂಬುವನ ವಿವಾಹ ವಾರ್ಷಿಕೋತ್ಸವದ ದಿನ ಅದು ಎಂದು ಯಾರಿಗೂ ಗೊತ್ತಿಲ್ಲ , ನನಗೂ ಗೊತ್ತಿರಲಿಲ್ಲ. ಈಗ ನೀವು ಅದನ್ನು ಬರೆದು ಎಲ್ಲರಿಗೂ ತಿಳಿಸಿದಂತಾಗುತ್ತಿದೆ. ಯಾರಿಗೆ ಆದರೂ ಆ ದಿನ ಏನು ಎಂದು ಗೊತ್ತಿರದೇ ಇದ್ದಾಗ ಅದು ಆ ಆಚರಣೆ ಆಗುವುದಿಲ್ಲ . ನೆಹರೂ ಬಗ್ಗೆ ಅಸಮಾಧಾನವಿದೆ. ಆದರೆ ೬೦ ವರ್ಷದ ಹಿಂದೆ ಆಗಿ ಹೋದ ಅದರ ಬಗ್ಗೆ ಧಿಕ್ಕಾರ ಹೇಳುವುದರಿಂದ ಆಗಸ್ಟ್ ೧೫ ಕ್ಕೆ ಯಾವ ವ್ಯತ್ಯಾಸವಾಗಲಾರದು.