ಬೊಗಳುವ ಶ್ವಾನವೂ, ಗಾಂಭೀರ್ಯದ ಗಜವೂ…!
ಅವರು ವಿರೋಧಿಸುವುದಕ್ಕಾಗಿಯೇ ವಿರೋಧಿಸುತ್ತಾರಾ ಗೊತ್ತಿಲ್ಲ. ವಿರೋಧಕ್ಕೆ ಅರ್ಥವೇ ಇರುವುದಿಲ್ಲ. ಆದರೂ ವಿರೋಧಿಸುವುದೇ ತಮ್ಮ ಆಜನ್ಮ ಸಿದ್ದ ಹಕ್ಕು ಎಂಬಂತೆ ಅವರ ನಿಲುವುಗಳಿರುತ್ತವೆ. ಬಹುಶಃ ನೀವೆಲ್ಲಾ ಗಮನಿಸಿಯೇ ಇದ್ದೀರಿ, ಕಳೆದ ವಾರ ಒಂದು ಪತ್ರಿಕೆ ಇಡೀ ದೇಶ ವಿವೇಕಾನಂದರನ್ನು ಕೊಂಡಾಡುತ್ತಾ ಅವರಿಂದ ಸ್ಪೂರ್ತಿ ಪಡೆಯುತ್ತಿರುವ ಹೊತ್ತಿನಲ್ಲಿ ವಿವೇಕಾನಂದರ ಆರೋಗ್ಯ, ಆಹಾರ, ಜಾತಿ ಇತ್ಯಾದಿಗಳನ್ನು ಇಟ್ಟುಕೊಂಡು ವ್ಯಂಗ್ಯಬರಿತ ಲೇಖನವನ್ನ ಪ್ರಕಟಿಸಿತು. ನಿರೀಕ್ಷೆಯಂತೆಯೇ ಸ್ವಾಮೀಜಿಯವರನ್ನು ಆದರ್ಶವಾಗಿ ಇಟ್ಟುಕೊಂಡ, ಅವರಿಂದ ಸ್ಪೂರ್ತಿ ಪಡೆದು, ಸನ್ಮಾರ್ಗದಲ್ಲಿ ನಡೆಯುವ ಸಂಕಲ್ಪ ತೊಟ್ಟವರಿಗೆ ನೋವಾಗಿದ್ದು ನಿಜ. ಆ ನೋವನ್ನು ಪ್ರತಿಭಟನೆಯ ಮೂಲಕ, ಸಂಪಾದಕರಿಗೆ ಮತ್ತು ಲೇಖಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನಗಳು ನಡೆದವು. ಸರಿ ಲೇಖಕರು ತಮ್ಮ ಲೇಖನಕ್ಕೆ ಬಂದ ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಿ, ಕೆಲ ಪದಪ್ರಯೋಗ ತೀಕ್ಷ್ಣವಾಗಿದ್ದಿರಬಹುದು ಎಂಬ ಸಮಜಾಯಿಷಿಯನ್ನೂ ಬರೆದರು. ಅಲ್ಲಿಗೆ ಅದು ಅಂತ್ಯವಾಗಬೇಕಿತ್ತು. ಇಲ್ಲ. ಅಷ್ಟು ನೆಪ ಸಾಕಿತ್ತು, ಪ್ರಗತಿಪರ ಮುಖವಾಡತೊಟ್ಟ ಕೆಲವರಿಗೆ. ಯಥಾಪ್ರಕಾರ ತಮ್ಮ ಪ್ರಗತಿಪರ ವೇಷತೊಟ್ಟು, ವಿವೇಕಾನಂದರನ್ನಾಗಲೀ, ಅಸಲಿಗೆ ಪತ್ರಿಕೆಯನ್ನೇ ಓದದವರನ್ನ ಒಂದೆಡೆ ಕಲೆಹಾಕಿ, ನಿರ್ಭೀತ ಪತ್ರಿಕೋದ್ಯಮವನ್ನು ಬೆಂಬಲಿಸುವ ಸೋಗಿನಲ್ಲಿ ಪ್ರತಿಭಟಿಸಲು ಸಜ್ಜಾದರು.
ಅವರು ವಿವೇಕಾನಂದರ ಪರವಾಗಿ ನಿಂತರೇ ಅಥವಾ ಆ ಲೇಖನ ಪ್ರಕಟಿಸಿದ ಪತ್ರಿಕೆಯ ಪರ ವಕಾಲತ್ತಿಗೆ ಇಳಿದರೇ, ಒಂದೂ ತಿಳಿಯಲಿಲ್ಲ. ಘೋಷಣೆಗಳೆಲ್ಲವೂ ಅವೇ. ಸಂಘ ಪರಿವಾರ ವಿವೇಕಾನಂದರನ್ನ ಗರ್ಭಗುಡಿಯೊಳಗಿಟ್ಟಿದೆ, ತಾವೇ ಅವರ ವಾರಸುದಾರರೆಂಬಂತೆ ವಿಜೃಂಭಿಸುತ್ತಿದ್ದಾರೆ, ವಿವೇಕಾನಂದರು ಶೂದ್ರ ಸನ್ಯಾಸಿ, ಅವ ನಮ್ಮವ, ಅವರನ್ನು ಮನುವಾದಿಗಳ ಕಪಿಮುಷ್ಠಿಯಿಂದ ಬಿಡಿಸೋಣ ಎನ್ನುವ ಪೊಳ್ಳುವಾಕ್ಯಗಳು. ಅಷ್ಟೇ ಅಲ್ಲ, ಮುಂದುವರಿದು ಸಂಘ ಪರಿವಾರದವರು ಗಾಂಧಿ ಹಂತಕರು, ಗೋಡ್ಸೇ, ಮೋದಿ ವಾರಸುದಾರರು ಎಂಬ ಪ್ರಲಾಪ. ಸಿ.ಎಸ್ ದ್ವಾರಕನಾಥರನ್ನೋ, ಜಿ.ಕೆ ಗೋವಿಂದರಾಯರನ್ನೋ ವಿವೇಕಾನಂದರ ಬಗ್ಗೆ ಮಾತನಾಡಿ ಎಂದರೆ ವಿವೇಕರ ಬಗ್ಗೆ ಮಾತಿಗಿಂತ, ಸಂಘ ಪರಿವಾರವನ್ನು ಟಿಕೀಸುವುದಕ್ಕೇ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಇನ್ನು ಇವರುಗಳು ಹೇಳುವ ಹಾಗೆ ಪತ್ರಿಕಾಸ್ವಾತಂತ್ರ್ಯದ ಪರ ನಿಂತರು ಎಂದುಕೊಂಡರೆ, ಎರಡು ವರ್ಷದ ಹಿಂದೆ ಮತ್ತೊಂದು ಕೋಮಿನ ವಿಷಯವಾಗಿ ಪತ್ರಿಕೆಯೊಂದರಲ್ಲಿ ಲೇಖನ ಪ್ರಕಟವಾದಾಗ ಧಾಂದಲೆ, ಚೂರಿ ಇರಿತಗಳಾದವಲ್ಲ ಆಗ ಯಾಕೆ ಲೇಖಕರ ಪರ ನಿಂತು, ಪತ್ರಿಕಾಸ್ವಾತಂತ್ರ್ಯದ ಕಹಳೆ ಊದಲಿಲ್ಲ ಎಂದರೆ ಇವರಲ್ಲಿ ಉತ್ತರವಿರುವುದಿಲ್ಲ. ಮೊನ್ನೆ ಜೈಪುರದಲ್ಲಿ ನಡೆದ ಅಂತರಾಷ್ಟ್ರೀಯ ಸಾಹಿತ್ಯೋತ್ಸವಕ್ಕೆ ಸಲ್ಮಾನ್ ರಶ್ದೀ ಬರುವುದಕ್ಕೆ ಬಿಡದೆ ತಡೆದರಲ್ಲಾ, ಕನಿಷ್ಠ ಭಾಷಣದ ವಿಡಿಯೋ ಪ್ರಸಾರಕ್ಕೂ ಬಿಡಲಿಲ್ಲವಲ್ಲ ಅದರ ಬಗ್ಗೆ ನೀವುಗಳು ಚಕಾರವೆತ್ತಲಿಲ್ಲವಲ್ಲ ಎಂದು ಕೆಣಕಿದರೆ ಜಿ.ಕೆ.ಗೋ ಮುಖಗಂಟಿಕ್ಕಿಕೊಂಡು ಸುಮ್ಮನಾಗುತ್ತಾರೆ. ಇವರ ಆರ್ಭಟವೇನಿದ್ದರೂ ಹಿಂದೂ ಸಂಘಟನೆಗಳ ಮೇಲೆ. ಉದ್ದೇಶವಿಷ್ಟೇ, ಆರೆಸ್ಸೆಸ್ ಮತ್ತು ಪರಿವಾರವನ್ನು ಅವಕಾಶ ಸಿಕ್ಕಾಗಲೆಲ್ಲಾ ತೆಗಳಬೇಕು. ಮತ್ತು ಮಾಧ್ಯಮಗಳ ಮುಂದೆ ತಮ್ಮ ಜಾತ್ಯಾತೀತ ಪೋಷಾಕು ನವೀಕರಿಸಿಕೊಳ್ಳಬೇಕು.
ಇದು ಹೊಸತೇನಲ್ಲ. ಸಂಘ ಪ್ರಾರಂಭವಾಗಿ ಸುಮಾರು 87 ವರ್ಷವಾಗುತ್ತಾ ಬಂತು. ಮೊದಲಿನಿಂದಲೂ ಸಂಘದ ಬಗ್ಗೆ ಚುಚ್ಚುಮಾತು, ಮೂದಲಿಕೆ ಇದ್ದದ್ದೆ. ಸಂಘವನ್ನು ವಿರೋಧಿಸುವವರಲ್ಲಿ ರಾಜಕೀಯ ಕಾರಣಗಳಿಗೆ ವಿರೋಧಿಸುವವರು ಒಂದೆಡೆಯಾದರೆ, ಹಳಸಿದ ಎಡಪಂಥೀಯ ಚಿಂತನೆಗಳ ಕೊಂಡಿಗಳಂತೆ ವರ್ತಿಸಿ, ಜಾತ್ಯಾತೀತವಾಧಿಗಳು ಎಂದು ಮೆರೆಯುವ ಮತ್ತೊಂದು ವರ್ಗ ಇನ್ನೊಂದೆಡೆ. ಕೆಲವು ಮಾಧ್ಯಮಗಳೂ ಈ ಪಟ್ಟಿಗೆ ಸೇರುವಂತಹವೇ. ಗಾಂಧೀ ಹತ್ಯೆಯಾದಾಗ ಆ ಆರೋಪವನ್ನು ಸಂಘದ ತಲೆಗೆ ಕಟ್ಟಲಾಯಿತು, ನಂತರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಂತೂ ಇಂದಿರಾಗಾಂಧಿ ಸಂಘದ ವಿರುದ್ದ ಹೆಡೆಮುರಿಕಟ್ಟಿದರು. ಅಯೋಧ್ಯಾ ವಿಷಯದಲ್ಲಿ, ಗುಜರಾತ್ ಗಲಭೆಗಳಲ್ಲಿ ಕೂಡ ಎಷ್ಟು ಸಾಧ್ಯವೋ ಅಷ್ಟು ಮಾಧ್ಯಮಗಳು ಸಂಘದ ಕಾಲೆಳೆದವು. ಇನ್ನು ಸಂಘದವರೆಂದರೆ ಮನುವಾದಿಗಳು, ಪುರೋಹಿತಶಾಹಿ ಮನಸ್ಥಿತಿಯವರು ಎಂದು ರಗಳೆತೆಗೆದದ್ದು ಲೆಕ್ಕಕ್ಕಿಲ್ಲ. ಸಂಘ ಏನೇ ಮಾಡಿದರೂ ಇವರ ಧಿಕ್ಕಾರದ ಧ್ವನಿ ಮೊಳಗುತ್ತದೆ.”ಹಿಂದೂಗಳೆಲ್ಲರೂ ಒಂದಾಗಿ, ಸಧೃಡ ಸಮಾಜ ಕಟ್ಟೊಣ’ ಎಂದರೆ ಇವರು ಸಂಘ, ಮುಸ್ಲಿಂ ವಿರೋಧಿ ಎಂದು ಬೊಬ್ಬೆ ಹೊಡೆಯುತ್ತಾರೆ. ಸಂಘ ಪ್ರಾರಂಭಿಸಿದ ರಾಷ್ಟ್ರೀಯ ಮುಸ್ಲಿಂ ಮಂಚ್ ನಲ್ಲಿ ಮುಸ್ಲಿಂರೇ ಸಂಘದೊಂದಿಗೆ ಬೆರೆತಿದ್ದಾರೆ. ಸಂಘದ ಸದೃಡ ಭಾರತ ನಿರ್ಮಾಣದ ಕಲ್ಪನೆಗೆ ಅವರೂ ಕೈ ಜೋಡಿಸಿದ್ದಾರೆ ಎಂಬುದು ನಮ್ಮ ಪ್ರಗತಿಪರ ಮುಖವಾಡ ತೊಟ್ಟವರಿಗೆ ಗೊತ್ತಿಲ್ಲವೇ?. “ಏನೇ ಹೇಳಿ, ಆರೆಸ್ಸೆಸ್ಸಿಗರ ಶಿಸ್ತು ಅಂದರೆ ಶಿಸ್ತು, ಅವರಂತೆ ನೆರೆ, ಬರ, ಭೂಕಂಪ ಇತ್ಯಾದಿ ಪ್ರಕೃತಿ ವಿಕೋಪಗಳಿಗೆ ಸ್ಪಂಧಿಸುವವರಿಲ್ಲ” ಎನ್ನುವವರೂ ಇವರಲ್ಲಿದ್ದಾರೆ. ಆದರೆ ಈ ಹೊಗಳಿಕೆ ಏನಿದ್ದರೂ ಪಿಸುಮಾತಿನಲ್ಲಿ. ಗಟ್ಟಿ ಧನಿಯ ಘೋಷಣೆಗಳೇನಿದ್ದರೂ ಅದು ಸಂಘದ ವಿರುದ್ದವೇ. ಯಾಕೆಂದರದು ಇವರ ಜಾತ್ಯಾತೀತ ಮತ್ತು ಬುದ್ದಿಜೀವಿಗಳೆಂಬ ಹಣೆಪಟ್ಟಿಯ ಅಸ್ತಿತ್ವದ ಪ್ರಶ್ನೆ.
ವಿವೇಕಾನಂದರ ಬಗ್ಗೆ ಮಾತನಾಡುವವರಿಗೆ, ಕನ್ಯಾಕುಮಾರಿಯಲ್ಲಿ ಭವ್ಯ ವಿವೇಕಾನಂದರ ಮೂರ್ತಿ ಸ್ಥಾಪಿತವಾದ ಕತೆ ಗೊತ್ತಿಲ್ಲ. ಅದರಲ್ಲಿ ಏಕನಾಥ ರಾನಡೆಯವರ ಶ್ರಮ ಎಷ್ಟಿತ್ತು, ಆರೆಸ್ಸೆಸ್ ಪಾತ್ರ ಏನಿತ್ತು ಎಂಬ ಅರಿವಿಲ್ಲ. ಗೋಳ್ವಲ್ಕರರ ’ಬಂಚ್ ಆಫ್ ಥಾಟ್ಸ್’ ಪುಸ್ತಕ ಅರ್ಥವಾಗದವರಿಗೆ ಗೋಳ್ವಲ್ಕರರು ಕರ್ಮಠ ಕೋಮುವಾದಿಯಾಗೇ ಕಾಣುತ್ತಾರೆ. ಸಂಘದ ಬಗ್ಗೆ ಪೂರ್ವಾಗ್ರಹ ಇಟ್ಟುಕೊಂಡು ಅದನ್ನು ಹಳದಿಕಣ್ಣಿನಿಂದ ನೋಡುವವರಿಗೆ ಸಂಘ ಅಸ್ಪೃಶ್ಯತೆಯ ನಿವಾರಣೆಗೆ ಹೇಗೆ ಶ್ರಮಿಸುತ್ತಾ ಬಂದಿದೆ ಎಂಬುದು ಅರ್ಥವಾಗಲು ಹೇಗೆ ಸಾಧ್ಯ ಹೇಳಿ? ಆರೆಸ್ಸೆಸ್ಸಿನಲ್ಲಿ ವಿವಿಧ ಹುದ್ದೆಗಳಲ್ಲಿ ಜವಾಬ್ದಾರಿ ನಿರ್ವಹಿಸಿದ ರಮೇಶ ಪತಂಗೆಯವರ “Two Doctors to cure single disease” ಲೇಖನ ಓದಿದರೆ ಡಾ|| ಬಿ.ಆರ್ ಅಂಬೇಡ್ಕರ್ ರಂತೆಯೇ ಡಾ|| ಕೇಶವ ಬಲಿರಾಮ ಹೆಡೆಗೆವಾರರು ಅಸ್ಪೃಶ್ಯತೆ ನಿವಾರಿಸುವ ನಿಟ್ಟಿನಲ್ಲಿ ಶ್ರಮಿಸಿದ್ದು ತಿಳಿಯುತ್ತದೆ. ಇನ್ನೂ ಸವಿಸ್ತಾರದ ಓದಿಗೆ ಪತಂಗೆಯವರ “Manu, Sangh and I “ ಎಂಬ ಕೃತಿಯನ್ನಾದರೂ ತಿರುವಿಹಾಕಬಾರದೇ. ಬುದ್ದಿಜೀವಿಗಳೆನಿಸಿಕೊಂಡವರಿಗೆ ಪೂರ್ವಾಗ್ರಹ ಕಳಚುವ, ಸತ್ಯ ತಿಳಿಯುವ ಮನಸ್ಸಿರಬೇಕಷ್ಠೆ.
ಸೀತಾರಾಮ ಗೋಯಲ್ ತಮ್ಮ “Perversion of India’s Political Parlance “ ಎಂಬ ಪುಸ್ತಕದಲ್ಲಿ ಒಂದು ಘಟನೆಯನ್ನು ನೆನಪುಮಾಡಿಕೊಳ್ಳುತ್ತಾರೆ. ಗೋಯಲ್, ಜಯಪ್ರಕಾಶ ನಾರಯಣರೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರು. ಜೆ.ಪಿ ಸಮಾಜವಾದವನ್ನು ಪ್ರಚುರ ಪಡಿಸುತ್ತಾ, ನೊಂದ, ಅನ್ಯಾಯಕ್ಕೆ ಒಳಗಾದ ಜನರ ಪರ ಧ್ವನಿಯಾಗಿದ್ದವರು. ಆದರೆ ಅದೇಕೋ ಆರೆಸ್ಸೆಸ್ಸಿನ ಬಗ್ಗೆ ಜೆಪಿಯವರಿಗೆ ಕೂಡ ಮೊದಲು ಒಳ್ಳೆಯ ಅಭಿಪ್ರಾಯವಿರಲಿಲ್ಲ. ಒಮ್ಮೆ ಸಂಘದ ಪ್ರಚಾರಕರೊಬ್ಬರು ಗೋಯಲ್ ರ ಬಳಿ ಬಂದು ಜೆಪಿಯವರೊಮ್ಮೆ ಸಂಘದ ಶಿಬಿರಕ್ಕೆ ಬರುವಂತಾದರೆ ಒಳ್ಳೆಯದು ಎಂದು ವಿನಂತಿಸಿಕೊಂಡರಂತೆ. ಆದರೆ ಆ ವಿಷಯ ಪ್ರಸ್ತಾಪಿಸುತ್ತಲೇ ಜಯಪ್ರಕಾಶರು ಕೋಪಗೊಂಡು ಗೋಯಲ್ ರ ಮೇಲೆ ಕಿಡಿಕಾರಿದರಂತೆ. ’ ಜಯಪ್ರಾಕಾಶ್ ಜೀ, ನೀವು ಅಸ್ಪೃಶ್ಯತೆಯನ್ನು ವಿರೋಧಿಸುತ್ತೀರಿ, ಆ ಬಗ್ಗೆ ಹೋರಾಟ ಮಾಡುತ್ತೀರಿ. ಆದರೆ ಎಲ್ಲೋ ಒಂದು ಕಡೆ ಆರೆಸ್ಸೆಸ್ ನವರೂ ನಮ್ಮವರೆ, ಅವರನ್ನು ದೂರ ಇಡುವುದೂ ಅಸ್ಪೃಶ್ಯತೆ ಎನಿಸುವುದಿಲ್ಲವೆ. ನೀವು ಅವರ ಸಿದ್ದಾಂತ ಒಪ್ಪದಿದ್ದರೆ ಅಡ್ಡಿಯಿಲ್ಲ. ಒಮ್ಮೆ ಭೇಟಿ ನೀಡುವುದಕ್ಕೇನು? ’ ಎಂದು ಜೆಪಿಯವರನ್ನು ಮನವೊಲಿಸಿದ ಸೀತಾರಾಮ್ ಗೋಯಲ್, ಸಂಘದ ಶಿಬಿರಕ್ಕೆ ಜೆಪಿಯವರನ್ನ ಕರೆತರುತ್ತಾರೆ. ಶಿಬಿರದಲ್ಲಿ ಎಲ್ಲರೂ ಜಾತಿಗಳ ಹಂಗಿಲ್ಲದೆ, ಶಿಸ್ತಿನಿಂದ, ವಿವೇಕಯುತವಾಗಿ ನಡೆದುಕೊಂಡದ್ದು, ಅಲ್ಲಿನ ದೈಹಿಕ ವ್ಯಾಯಾಮಗಳು, ಸಾಮೂಹಿಕ ಪ್ರಾರ್ಥನೆ, ಶ್ಲೋಕಪಠಣ ಎಲ್ಲವನ್ನೂ ಗಮನಿಸಿದ ಜಯಪ್ರಕಾಶರು, ಆ ಭೇಟಿಯ ನಂತರ ಹೇಳಿದ್ದರಂತೆ “ ಇಷ್ಟು ದಿನ ಸಂಘದ ಬಗ್ಗೆ ತಪ್ಪುತಿಳಿದುಕೊಂಡಿದ್ದೆ, ನಮ್ಮ ಸಮಾಜವಾದಿ ಚಳುವಳಿಗಳಲ್ಲಿರುವವರಿಗಿಂತ ಹೆಚ್ಚು ವಿದ್ಯಾವಂತರು ಸಂಘದಲ್ಲಿದ್ದಾರೆ. ಅವರ ಶಿಸ್ತು, ಸಂಸ್ಕಾರಯುತ ನಡವಳಿಕೆ ಇಷ್ಟವಾಯಿತು, ಇಷ್ಟು ದಿನ ಪೂರ್ವಾಗ್ರಹ ಪೀಡಿತನಾಗಿದ್ದೆ ” ಎಂದು.
ಆದರೆ ಭಾಷಣದುದ್ದಕ್ಕೂ ಜೆಪಿಯವರನ್ನು ಉದಾಹರಿಸುವ ನಮ್ಮ ಬುದ್ದಿಜೀವಿಗಳಿಗೆ, ಕನಿಷ್ಠ ಪಕ್ಷ ಸಂಘದ ಒಳಹೊಕ್ಕು ನೋಡುವ ವ್ಯವಧಾನ, ತಾಳ್ಮೆ, ಮುಖ್ಯವಾಗಿ ಉದಾರ ಮನಸ್ಸಿಲ್ಲ. ಇನ್ನು ರಾಜಕಾರಣಿಗಳು ಬಿಡಿ, ರಾಜಕೀಯವಾಗಿ ಅವರ ಬೇಳೆ ಬೇಯಿಸಿಕೊಳ್ಳಲು, ಮತ ಬ್ಯಾಂಕ್ ಹೆಚ್ಚಿಸಿಕೊಳ್ಳಲು ಸಂಘವನ್ನ ಬಯ್ಯಲೇಬೇಕು. ನಮ್ಮ ಮಾಜಿ ಪ್ರಧಾನಿಗಳು ಒಂದಿಲ್ಲೊಂದು ಕಾರಣಕ್ಕೆ ಸಂಘದ ಬಗ್ಗೆ ಅಪಸ್ವರ ಎತ್ತುವುದು ಅದೇ ಕಾರಣಕ್ಕೆ. ಮೊನ್ನೆ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿಯವರು, ಆರೆಸ್ಸೆಸ್ಸಿಗರು, ಕೋಮು ಭಾವನೆ ಕೆರಳಿಸಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹೊರಟಿದ್ದಾರೆ. ಆದ್ದರಿಂದಲೇ ಹುಬ್ಬಳ್ಳಿಯಲ್ಲಿ ಹಿಂದೂ ಶಕ್ತಿ ಸಂಗಮ ಆಯೋಜನೆಯಾಗಿದೆ. ಉಡುಪಿ ಸ್ವಾಮಿಗಳ ಆದೇಶದಂತೆ ಇವರುಗಳು ನಡೆದುಕೊಳ್ಳುತ್ತಾರೆ. ಸಮಾಜದ ಸಾಮರಸ್ಯ ಕದಡಲು ಉಡುಪಿಯ ಮಠದಿಂದಲೇ ಈ ಪ್ರಚೋದನೆ ಶುರುವಾಗುತ್ತಿದೆ ಎಂಬ ಅನುಮಾನವಿದೆ ಎಂದೆಲ್ಲಾ ಹೇಳುವುದನ್ನು ಕೇಳಿದ ಮೇಲೆ, ಪ್ರಗತಿಪರರ ಸಭೆಯಲ್ಲಿ ಖಾಲಿ ಕುರ್ಚಿಗಳೇ ಹೆಚ್ಚಿದ್ದವು ಮತ್ತು ಹಿಂದೂ ಶಕ್ತಿ ಸಂಗಮದಲ್ಲಿ ೨೫ ಸಾವಿರಕ್ಕೂ ಹೆಚ್ಚು ತರುಣರು ಪಾಲ್ಗೊಂಡರು ಎಂಬ ಸುದ್ದಿ ಓದಿದ ಮೇಲೆ. ವಚನದ ಒಂದು ಸಾಲು ನೆನಪಿಗೆ ಬಂತು. ’ಆನೆ ಬೀದೀಲಿ ಬರಲು, ಶ್ವಾನ ತಾ ಬೊಗಳುವುದು…’ ನಕ್ಕು ಸುಮ್ಮನಾದೆ
ಮೋದಿ ಮೋಡಿ, ತ್ರಿಮೂರ್ತಿಗಳೇ ನೋಡಿ..!
ಡಿಸೆಂಬರ್ ೩೦ ರಂದು ಹೊಸವರ್ಷಕ್ಕೆ ಶುಭಕೋರುತ್ತ ತಮ್ಮ ರಾಜ್ಯದ ಜನತೆಯನ್ನುದ್ದೇಶಿಸಿ ನರೇಂದ್ರ ಮೋದಿ ಒಂದು ಲೇಖನ ಬರೆದಿದ್ದರು. “ಸ್ನೇಹಿತರೆ, ಬಹುಶಃ 2011 ರಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದ ಪದ ಅಂದರೆ ಅದು ’ಪ್ರತಿಭಟನೆ’, ಪ್ರಪಂಚದ ಅನೇಕ ದೇಶಗಳಲ್ಲಿ ಪ್ರಜೆಗಳು ವ್ಯವಸ್ಥೆಯ ವಿರುದ್ದ, ಆಡಳಿತದ ವಿರುದ್ದ, ಭ್ರಷ್ಠಾಚಾರದ ವಿರುದ್ದ, ಅಮಾನವೀಯತೆಯ ವಿರುದ್ದ ತಮ್ಮ ಧ್ವನಿಯೆತ್ತಿದರು. ಪ್ರತಿಭಟಿಸಿದರು, ಆಳುವವರಿಗೆ ಧಿಕ್ಕಾರ ಕೂಗಿದರು. ಭಾರತದಲ್ಲೂ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ಇಡೀ ದೇಶ, ಸಮಸ್ತ ಯುವ ಸಮೂಹ ಒಟ್ಟಾಗಿ ಭ್ರಷ್ಠಾಚಾರದ ವಿರುದ್ದ ಧ್ವನಿಯೆತ್ತಿತು. ದುಭಾರಿ ಆಹಾರ ಪದಾರ್ಥಗಳು, ಹೆಚ್ಚುತ್ತಿರುವ ಬಡವ ಧನಿಕನ ನಡುವಿನ ಅಂತರ, ಭ್ರಷ್ಠ ಆಡಳಿತ, ಭಯೋತ್ಪಾದನೆ ಎಲ್ಲವುಗಳಿಂದ ಮಡುಗಟ್ಟಿದ್ದ ಆಕ್ರೋಶ ಒಮ್ಮೆಲೇ ಪ್ರಕಟಗೊಂಡಿತು. ಹೆಚ್ಚಾಗಿ ಯುವ ಸಮೂಹ ಬೀದಿಗಿಳಿದು ಪ್ರತಿಭಟಿಸಿದರು. ಆದರೆ ಮೆಚ್ಚಾಬೇಕಾದ ಅಂಶವೆಂದರೆ ಯುವ ಸಮೂಹ ಅಹಿಂಸಾತ್ಮಕ ಪ್ರತಿಭಟನೆಯನ್ನೇ ಆಯ್ದುಕೊಂಡಿತು.
ಅದು ಸ್ವಾತಂತ್ರ್ಯ ಹೋರಾಟವಿರಲಿ, ನಂತರದ ಗುಜರಾತಿನ ನವನಿರ್ಮಾಣ ಚಳುವಳಿ, ತುರ್ತು ಪರಿಸ್ಥಿತಿ ಎಲ್ಲಾ ವಿಷಯದಲ್ಲೂ ನಾವು ಪಾಲಿಸಿದ್ದು ಅಹಿಂಸೆಯನ್ನೇ ಅಲ್ಲವೇ. ಈ ಎಲ್ಲ ಆಕ್ರೋಶ, ದುರಾಡಳಿತದ ನಡುವೆಯೂ ನಮಗೆ ಒಂದು ಆಶಾಭಾವವಿರಬೇಕಾದ ಅಗತ್ಯವಿದೆ. ಅವಕಾಶಗಳನ್ನು ಹುಡುಕಬೇಕಿದೆ. ನಾನು ಇತ್ತೀಚೆಗೆ ಚೀನಾ ಪ್ರವಾಸಕ್ಕೆ ಹೋದಾಗ ಈ ವಿಷಯ ಪ್ರಸ್ತಾಪಿಸಿದ್ದೆ. ಅನೇಕ ದೇಶಗಳಲ್ಲಿ ಆರ್ಥಿಕತೆಯ ಅಲ್ಲೋಲಕಲ್ಲೋಲ ಪರಿಸ್ಥಿತಿಯಿರುವಾಗ ಏಷಿಯಾ ಹೇಗೇ ಪ್ರಪಂಚಕ್ಕೆ ಆಶಾಕಿರಣದಂತೆ ಅಭಿವೃದ್ದಿ ಸಾಧಿಸುತ್ತಾ ಬೆಳವಣಿಯ ಯಂತ್ರದಂತೆ ಕಾರ್ಯನಿರ್ವಹಿಸುತ್ತಿದೆ ಎಂದು. ಪಾಶ್ಚಾತ್ಯ ದೇಶಗಳು ಆರ್ಥಿಕ ಸಂಕಷ್ಠದಲ್ಲಿ ನಲುಗುತ್ತಿರುವ ಈ ಸಂಧರ್ಭ ಭಾರತಕ್ಕೆ ನಿಜಕ್ಕೂ ತಾನು ಮತ್ತಷ್ಠು ಬೆಳೆಯಲು, ಹೆಮ್ಮರವಾಗಿ ಹರಡಿಕೊಳ್ಳಲು, ಅಭಿವೃದ್ದಿ ಯಂತ್ರದ ವೇಗ ಹೆಚ್ಚಿಸಲು ಸಕಾಲ. ಸಾಮೂಹಿಕವಾಗಿ ನಾವು ಒಟ್ಟುಗೂಡಬೇಕಿರುವುದು ಕೇವಲ ಪ್ರತಿಭಟನೆಗಲ್ಲ. ಎಲ್ಲರೂ ಒಟ್ಟಾಗಿ ಸೇರೋಣ, ಎಲ್ಲರೂ ಒಟ್ಟಾಗಿ ಅಭಿವೃದ್ದಿಯತ್ತ ಹೆಜ್ಜೆಹಾಕೋಣ. ಕೇವಲ ಜನಶಕ್ತಿಯೊಂದೇ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಒಳ್ಳೆಯ ಆಡಳಿತವೂ ಜನಶಕ್ತಿಯೊಂದಿಗೆ ಕೈ ಜೋಡಿಸಿದಾಗ ದೇಶ ಪ್ರಗತಿಯತ್ತ ಸಾಗುತ್ತದೆ. ಗುಜರಾತಿನಲ್ಲಿ ಒಳ್ಳೆಯ ಆಡಳಿತ, ಪ್ರಗತಿಯ ಚಿಂತನೆ ಮತ್ತು ಸಾಮರಸ್ಯ, ಆರು ಕೋಟಿ ಗುಜರಾತಿಗರ ಶಕ್ತಿಯನ್ನು ಹಿಗ್ಗಿಸಿದೆ. ಅದು 2012 ರಲ್ಲಿ ನಿರಂತರವಾಗಿ ಮುಂದುವರಿಯಲಿ ಎನ್ನುವ ಆಶಯ ನನ್ನದು”. ಹೀಗೆ ಸಾಗುತ್ತದೆ ಭಾರತದ ಅತ್ಯಂತ ಜನಪ್ರಿಯ ಮತ್ತು ಆದರ್ಶ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಲೇಖನ.
ಹೀಗೆ ಮೋದಿ ಹೊಸವರ್ಷದ ಹೊಸ್ತಿಲಲ್ಲಿ ಹೊಸ ಚಿಂತನೆಗಳನ್ನ ತನ್ನ ಜನಕ್ಕೆ ಕೊಡುತ್ತಾ, ರಾಜ್ಯದ, ದೇಶದ ಮುಂದಿರುವ ಸವಾಲು, ಆರ್ಥಿಕ ಪ್ರಗತಿಯ ಅವಕಾಶಗಳ ಬಗ್ಗೆ ಮಾತನಾಡುತ್ತಿದ್ದರೆ ನಮ್ಮ ಕರ್ನಾಟಕದಲ್ಲಿ ಸಂಕ್ರಾಂತಿಯ ಗಡುವು, ಅವರು ನನ್ನನ್ನು ಜೈಲಿಗೆ ಕಳುಹಿಸಿದರು, ಇವರು ಪಕ್ಷ ಒಡೆಯುವ ಸಂಚು ಮಾಡುತ್ತಿದ್ದಾರೆ. ಅವರಿಬ್ಬರ ನಡುವಿನ ಮನಸ್ತಾಪ ಶೀಘ್ರವೇ ಬಗೆಹರಿಸುತ್ತೇವೆ ಎಂಬ ಸಣ್ಣತನದ ಮಾತುಗಳನ್ನು ನಮ್ಮ ನಾಯಕರುಗಳು ಆಡುತ್ತಿದ್ದರು. ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ, ಸದಾನಂದ ಗೌಡರಿಂದ ಮೋದಿಯವರ ಪ್ರಬುದ್ದ ಮಾತುಗಳನ್ನ ನಿರೀಕ್ಷಿಸಲು ಸಾಧ್ಯವೇ? ಸಿಟ್ಟು, ಸೆಡವು, ಆರೋಪ-ಪ್ರತ್ಯಾರೋಪ ಇವೆಲ್ಲದರ ಹೊರತಾಗಿ ಪ್ರಗತಿಯ ಚಿಂತನೆ, ವಿವೇಕದ ನಡೆ, ಸ್ಪೂರ್ತಿದಾಯಕ ಮಾತು ಇವರುಗಳಿಂದ ಆಪೇಕ್ಷಿಸುವುದು ಮೂರ್ಖತನವಾದೀತೇನೋ.
ಒಮ್ಮೆ ಇವರುಗಳು ಮೋದಿ ಇಟ್ಟ ಹೆಚ್ಚೆಗಳತ್ತ ನೋಡಬೇಕು. ಯಾವುದೇ ರಾಜಕೀಯದ ಅನುಭವವಿಲ್ಲದ ಕುಟುಂಬದಿಂದ, ಪದವೀಧರರೂ ಯಾರೊಬ್ಬರಿಲ್ಲದ ಮನೆಯಿಂದ ಬಂದ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದವರು. ನಂತರ ಭಾಜಪದ ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡರು. ಮೋದಿಯವರ ನಿಷ್ಠೇ, ಘನಾತ್ಮಕ ಚಿಂತನೆ, ನಾಯಕತ್ವ ಗುಣ ವಾಜಪೇಯಿಯವರ ಗಮನಕ್ಕೆ ಬಿತ್ತು. ಅದು ಅವರನ್ನು ದೆಹಲಿಯಿಂದ ಗುಜರಾತಿನೆಡೆಗೆ ಕೊಂಡೊಯ್ದಿತು. ಗುಜರಾತಿನ ಬಗ್ಗೆ ಅಷ್ಟೇನೂ ಮಾಹಿತಿಯಿರದ ಮೋದಿ, ಮುಖ್ಯಮಂತ್ರಿಯೂ ಆದರೂ, ಬೆನ್ನಲ್ಲೇ ಗೋಧ್ರಾದ ಮನಕಲಕುವ ಸನ್ನಿವೇಷ ಸೃಷ್ಠಿಯಾಯಿತು. ಅದೇ ವಿಷಯವನ್ನಿಟ್ಟುಕೊಂಡು ಎಡಪಂಥೀಯ ಹಿನ್ನಲೆಯ ಇಂಗ್ಲೀಷ್ ಮಾಧ್ಯಮಗಳು ಮೋದಿಯವರ ಮುಖಕ್ಕೆ ಮಸಿ ಬಳಿಯಲು ಪ್ರಯತ್ನಿಸಿದವು. ಮೋದಿ ಅದರ ಬಗ್ಗೆ ಗಮನವನ್ನೂ ಕೊಡಲಿಲ್ಲ. ನಾನು ಏನೆಂಬುದನ್ನು ನನ್ನ ಕೆಲಸಗಳ ಮೂಲಕ ಮಾಡಿತೋರಿಸುತ್ತೇನೆ ಎಂದು ಹೆಚ್ಚು ಮಾತಿಲ್ಲದೆ ಕೃತಿಯಲ್ಲಿ ಮಾಡಿತೋರಿಸುವ ಸಂಕಲ್ಪ ಮಾಡಿದರು. ಆದರೂ ಕಾಂಗ್ರೇಸ್ ಕೃಪಾಪೋಷಿತ ಮಾಧ್ಯಮಗಳು ಬೊಬ್ಬಿರಿಯುತ್ತಲೇ ಇದ್ದವು. ಆದರೆ ಮೋದಿಯವರ ನಡೆ ನುಡಿಗಳಲ್ಲಿ, ಕನಸಿನಲ್ಲಿ ಇದ್ದದ್ದು ಒಂದೇ, ಗುಜರಾತಿನ ಅಭಿವೃದ್ದಿ. ತನ್ಮೂಲಕ ಭಾರತದ ಅಭಿವೃದ್ದಿಗೆ ಕೊಡುಗೆ.
ವರ್ಷಗಳು ಉರುಳುವಷ್ಟರಲ್ಲಿ ಹದಗೆಟ್ಟ ರಸ್ತೆಗಳು ದುರಸ್ಥಿಗೊಂಡವು, ಕುಡಿಯುವ ನೀರಿಗೆ, ವಿದ್ಯುತ್ ಅಭಾವಕ್ಕೆ ನಾನಾ ಯೋಜನೆಗಳು ತಯಾರಾದವು. ಆಡಳಿತದಲ್ಲಿದ್ದ ಆಲಸ್ಯ ತೊಲಗಿತು. ಮುಖ್ಯಮಂತ್ರಿಯೊಬ್ಬರು ಚುರುಕಾಗಿ ಕೆಲಸ ಮಾಡುವಾಗ ಅಧಿಕಾರಿಗಳೂ ಆ ಚುರುಕಿಗೆ ತಮ್ಮನ್ನು ಒಡ್ಡಿಕೊಂಡರು. ಎಲ್ಲಾ ಯೋಜನೆಗಳು ತ್ವರಿತವಾಗಿ ಅನುಷ್ಠಾನಕ್ಕೆ ಬಂದವು. ಕೃಷಿ, ಆರೋಗ್ಯ, ಶಿಕ್ಷಣ ಎಲ್ಲ ರಂಗದಲ್ಲೂ ಅಭಿವೃದ್ದಿಯ ದಾಪುಗಾಲು. ಆರೋಪ ಮಾಡುತ್ತಿರುವವರು ಮಾಡುತ್ತಿರಲಿ, ನೀವು ಕೆಲಸ ಮಾಡಿ ಜನ ನಿಮ್ಮೊಂದಿಗಿರುತ್ತಾರೆ ಎಂಬ ಸಂದೇಶ ತಮ್ಮ ಸಹೋದ್ಯೋಗಿಗಳಿಗೆ ನೀಡಿದರು. ತಮ್ಮ ತಮ್ಮ ಖಾತೆಗಳಲ್ಲಿ ಪ್ರಗತಿ ತೋರಲು ಎಲ್ಲಾ ಸಚಿವರುಗಳು ಸ್ಪರ್ಧೆಗೆ ಬಿದ್ದರು.
ಗುಜಾರಾತಿನಲ್ಲಿ ಕೃಷಿಯಿಂದ ಬರುತ್ತಿದ್ದ ಆದಾಯ ಕೇವಲ 9 ಸಾವಿರ ಕೋಟಿಯಷ್ಟಿತ್ತು. ನಾಲ್ಕುವರ್ಷದಲ್ಲಿ ಅದು 34 ಸಾವಿರಕೋಟಿಗೆ ಮುಟ್ಟಿತು. ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ಶಿಕ್ಷಣ ಖಾತೆಯ ಕಾರ್ಯದರ್ಶಿ ಗುಜರಾತ್ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವಲ್ಲಿ ಹಿಂದೆ ಬಿದ್ದಿದೆ. ಶಾಲೆಯಿಂದ ಹೊರ ಉಳಿದವರು ಶೇಕಡ 49 ರಷ್ಟಿದ್ದಾರೆ ಎಂದಾಗ ಸ್ವತಃ ಮೋದಿಯವರೊಂದಿಗೆ ಸುಮಾರು 700 ಅಧಿಕಾರಿಗಳು ಹಿಂದುಳಿದ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಮಾಡಿದರು. ಇವತ್ತು ಅದು ಶೇಕಡ 3ಕ್ಕೆ ಇಳಿದಿದೆ. ಎಂತಹ ಬದಲಾವಣೆ! ಇನ್ನು ಕೈಗಾರಿಕಾ ಕ್ಷೇತ್ರದಲ್ಲಿ ಗುಜರಾತ್ ಸಾಧಿಸಿದ ಪ್ರಗತಿ ಅಮೋಘ. ಚೆನ್ನೈ ಭಾರತದ ’ಆಟೋ ಹಬ್’ ಆಗಿತ್ತು. ಎಲ್ಲ ವಾಹನ ತಯಾರಕ ಕಂಪನಿಗಳು ಚೆನ್ನೈನಲ್ಲಿದ್ದವು. ಇದೀಗ ಎಲ್ಲ ಗುಜರಾತಿನೆಡೆಗೆ ಮುಖ ಮಾಡಿವೆ. ಟಾಟಾ ಸಮೂಹ ಸಂಸ್ಥೆಯ ಮುಖ್ಯಸ್ಥ ರತನ್ ಟಾಟ ’ಗುಜರಾತಿನಲ್ಲಿ ಯಾವ ಉದ್ಯಮಿಗಳು ತಮ್ಮ ಕಂಪನಿ ತೆರೆದಿಲ್ಲವೋ ಅವರು ಮೂರ್ಖರು’ ಎನ್ನುವಷ್ಟರ ಮಟ್ಟಿಗೆ ಗುಜರಾತ್ ಎಲ್ಲ ಸೌಲಭ್ಯಗಳನ್ನು ನೀಡಿ ಉದ್ದಿಮೆದಾರರನ್ನ ಸೆಳೆಯುತ್ತಿದೆ. ವಿದೇಶದಲ್ಲಿ ಮ್ಯಾನೇಜ್ ಮೆಂಟ್ ಪದವಿ ಪಡೆದ ನಾನು ರಿಲಯನ್ಸ್ ನಡೆಸುವುದಕ್ಕಿಂತ ಚೆನ್ನಾಗಿ ಮೋದಿ ಗುಜರಾತನ್ನು ಮುನ್ನಡೆಸುತ್ತಿದ್ದಾರೆ ಎಂದು ಮುಖೇಶ್ ಅಂಭಾನಿ ಹೇಳಿದ್ದು ಅದೇ ಕಾರಣಕ್ಕಾಗಿ.
ಎಷ್ಟೋ ಹಳ್ಳಿಗಳಲ್ಲಿ ವಿದ್ಯುತ್ ಸೌಲಭ್ಯವಿರದಿದ್ದ ಗುಜರಾತ್, ಇಂದು ತನ್ನ ಎಲ್ಲ ಊರುಗಳಿಗೂ ಸರಾಸರಿ 18 ಘಂಟೆ ತ್ರಿಫೇಸ್ ವಿದ್ಯುತ್ ನೀಡಿ, ಇತರ ರಾಜ್ಯಗಳಿಗೂ ಸಾಲ ಕೊಡುವಷ್ಟು ವಿದ್ಯುತ್ ಉತ್ಪಾದಿಸುತ್ತಿದೆ. ಆಂತರಿಕ ಭದ್ರತಾ ಸಂಸ್ಥೆ ಸಿ.ಆರ್.ಪಿ.ಎಫ್ ನ ನಿವೃತ್ತ ಅಧಿಕಾರಿ ಆರ್.ಕೆ ಓಹ್ರಿ ಹೇಳುವಂತೆ ಭಾರತದಲ್ಲಿ ಯಾವುದಾದರೂ ರಾಜ್ಯದಲ್ಲಿ ”ಜೀರೋ ಟಾಲರೆನ್ಸ್ ಆಫ್ ಟೆರರಿಸಮ್’ ಇರುವುದಿದ್ದರೆ ಅದು ಗುಜರಾತಿನಲ್ಲಿ. ಭಾರತದ ಜಿಡಿಪಿಯಲ್ಲಿ ಗುಜಾರತಿನದೇ ಮೂರನೇ ಒಂದು ಭಾಗದಷ್ಠಿದೆ. ಮೊದಲೆಲ್ಲಾ ಭಾರತದ ಸಿಕ್ಯುಲರ್ ಮಾಧ್ಯಮದ ಸುದ್ದಿಯನ್ನೇ ಪ್ರಸಾರ ಮಾಡುತ್ತಿದ್ದ ವಿದೇಶದ ಮಾಧ್ಯಮಗಳು ಮೋದಿ ಮಾಡಿದ ಅಭಿವೃದ್ದಿಯನ್ನು ಕಂಡು ದಂಗಾಗಿವೆ. ಎಲ್ಲ ರಾಜ್ಯಗಳ ಅಧಿಕಾರಿ ನಿಯೋಗ ಗುಜರಾತಿಗೆ ಭೇಟಿ ನೀಡಿ ಅಲ್ಲಿನ ಪ್ರಗತಿಯನ್ನು ಅಭ್ಯಸಿಸುವುದಕ್ಕೆ ಮುಂದಾಗುತ್ತಿವೆ. ಸಿ ಎಂ ಎಂಬುದು ಚೀಫ್ ಮಿನಿಸ್ಟರ್ ಅಲ್ಲ ಕಾಮನ್ ಮ್ಯಾನ್ ಎಂದು ತೋರಿಸಿಕೊಟ್ಟವರು ಮೋದಿ. ಎಲ್ಲ ಮುಖ್ಯಮಂತ್ರಿಗಳಿಗೆ ಮೋದಿ ಇಂದು ರೋಲ್ ಮಾಡೆಲ್ ಆಗಿದ್ದಾರೆ.
ಆದರೆ ನಮ್ಮಲ್ಲೇನಾಗುತ್ತಿದೆ? ಇತರ ಪಕ್ಷಗಳ ಆಡಳಿತದಿಂದ ಬೇಸತ್ತು ಭಾಜಪಕ್ಕೆ ಅಧಿಕಾರ ನೀಡಿದ ಅವಕಾಶವನ್ನು ಇಲ್ಲಿನ ನಾಯಕರೇಕೆ ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ. ತಮ್ಮದೇ ಪಕ್ಷದ ಮೋದಿಯವರಿಗಿಂತ ಬೇರೆ ರೋಲ್ ಮಾಡೆಲ್ ಬೇಕಾ? ಮೂರೂವರೇ ವರ್ಷದಲ್ಲಿ ಕೆಲವು ಒಳ್ಳೆಯ ಯೋಜನೆಗಳು ಜಾರಿಯಾಗಿವೆ ನಿಜ. ಆದರೆ ಅದೆಲ್ಲವನ್ನೂ ರೆಸಾರ್ಟ್ ರಾಜಕೀಯ, ಮುನಿಸು, ಬೈದಾಟ, ಭ್ರಷ್ಠಾಚಾರದ ಆರೋಪ ತೊಳೆದುಹಾಕಿದೆ. ನರೇಂದ್ರ ಮೋದಿ, ಈಶ್ವರಪ್ಪ, ಸದಾನಂದಗೌಡ, ಯಡಿಯೂರಪ್ಪ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ಯಾಕೆ ತೂಗಿ ನೋಡಬೇಕೆಂದರೆ ಇವರೆಲ್ಲ ಬೇರೆ ಬೇರೆ ಮೂಲಗಳಿಂದ ಬೆಳೆದು ಬಂದ ನಾಯಕರೇನೂ ಅಲ್ಲ. ಇವರೆಲ್ಲ ಒಂದೇ ಮರದ ಬೇರೆ ಬೇರೆ ಕೊಂಬೆಗಳು. ಇವರೆಲ್ಲರ ಬೇರುಗಳು ಒಂದೇ. ಹೀರಿದ ಸಾರ-ಸತ್ವ ದಲ್ಲೂ ವ್ಯತ್ಯಾಸವಿಲ್ಲ. ಎಲ್ಲರೂ ಭಾರತೀಯ ಜನತಾ ಪಕ್ಷದ ನಾಯಕರೇ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳಲ್ಲಿ ನಾಯಕತ್ವದ ಗುಣಗಳನ್ನು ಕಲಿತವರೇ. ಹಾಗೇ ನೋಡಿದರೆ ನರೇಂದ್ರ ಮೋದಿಯವರಿಗಿಂತ ಹೆಚ್ಚು ರಾಜಕೀಯ ಅನುಭವ ಹೊಂದಿರುವವರು ನಮ್ಮ ರಾಜ್ಯದ ಈ ತ್ರಿಮೂರ್ತಿಗಳು. ವಿದ್ಯಾರ್ಥಿ ಪರಿಷತ್ತು, ಪುರಸಭೆ, ಪಕ್ಷದ ನಗರ ಘಟಕ, ಪಂಚಾಯಿತಿ ಹೀಗೆ ಹಂತಹಂತವಾಗಿ ಬೆಳೆದೆವರು ಇವರು. ಮೋದಿ ರಾಜಕಾರಣಿಯಾಗಿ ಹೀಗೆ ಹಂತಹಂತವಾಗಿ ಅನುಭವ ಗಳಿಸಿಕೊಂಡವರಲ್ಲ. ಆದರೂ ಯಡಿಯೂರಪ್ಪನವರ ನಡೆಯನ್ನು ಗಮನಿಸಿದರೆ, ಈಶ್ವರಪ್ಪ ಬಳಸುವ ಪದಗಳು ಕಿವಿಗೆ ಬಿದ್ದರೆ ನಿಜಕ್ಕೂ ಈ ಎಲ್ಲ ಹಂತಗಳನ್ನು ದಾಟಿ ಬೆಳೆದ ರಾಜಕಾರಣಿಗಳಾದರೂ ಮಾತಿನಲ್ಲಿ, ಚಿಂತನೆಯಲ್ಲಿ, ನಡವಳಿಕೆಯಲ್ಲಿ ಪಕ್ವತೆ ಬಂದಿಲ್ಲವಲ್ಲ ಎಂದು ಬೇಸರವಾಗುವುದು ಸತ್ಯ. ಕಳೆದವಾರ ’ಸಂಘ’ ಕಿವಿಹಿಂಡಿದ ಮೇಲೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ, ಪಕ್ಷಕಟ್ಟುವ ಮಾತನಾಡುತ್ತಿದ್ದಾರೆ. ನಾವು ಒಗ್ಗಾಟ್ಟಾಗಿದ್ದೇವೆ ಎಂಬುದು ಕೇವಲ ಕ್ಲಿಷೆಯಾಗಬಾರದು. ಉಳಿದಿರುವುದು ಕೇವಲ ಒಂದೂ ಚಿಲ್ಲರೆ ವರ್ಷ. ಮಾತು, ಚಿಂತನೆ, ಕೃತಿ ಎಲ್ಲವೂ ಕರ್ನಾಟಕದ ಪ್ರಗತಿಯೆಡೆಗಿದ್ದರೆ, ನಡವಳಿಕೆಯಲ್ಲಿ ಸಭ್ಯತನವಿದ್ದರೆ ಜನಮಾನಸದಲ್ಲಿ ಉಳಿಯುತ್ತಾರೆ. ಇಲ್ಲದಿದ್ದರೂ ನೆನಪಿನಲ್ಲಿರುತ್ತಾರೆ ಕೆಟ್ಟಕಾರಣಗಳಿಗೆ!
ಪ್ರತೀ ಯುವಮನದಲ್ಲೂ ಮೂಡಲಿ ’ವಿವೇಕ’..!
ಆಕೆ ಬರೆದಿದ್ದನ್ನು ಓದಿದಾಗ ಕೊಂಚ ಹೊಟ್ಟೆಕಿಚ್ಚೆನಿಸಿದ್ದು ನಿಜ. ಅರೆರೆ ಎಂತಹ ಪುಣ್ಯವಂತೆ ಈಕೆ ಎಂದು ಕರುಬಿದ್ದು ಸತ್ಯ. ಎಷ್ಟು ಜನರಿಗೆ ತಾನೇ ಅಂತಹ ಅವಕಾಶ ಸಿಗಲು ಸಾಧ್ಯ ಹೇಳಿ? ನಮ್ಮ ನಡುವಿನ ಯಾರೋ ಸಜ್ಜನರು, ಆದರ್ಶವಾಗಿ ಬದುಕಿದವರು, ಬದುಕಿನಲ್ಲಿ ಮೌಲ್ಯವನ್ನು ಕಾಪಿಟ್ಟುಕೊಂಡವರು, ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದವರು, ವೇದ ಉಪನಿಷತ್ತುಗಳಲ್ಲಿ ಪಾಂಡಿತ್ಯಗಳಿಸಿಕೊಂಡವರು ಸಿಕ್ಕರೆ ಸಾಕು, ಅವರೊಂದಿಗೆ ಒಂದಿಷ್ಟು ಮಾತು, ಕೆಲಗಂಟೆಗಳ ಒಡನಾಟ, ಪ್ರೀತಿಯ ಹಸ್ತಲಾಘವ ದೊರಕಿದರೆ ಪುಣ್ಯ ಎಂದು ಅನಿಸುತ್ತಿರುತ್ತದೆ. ಅಂತವರು ಬೆನ್ನುತಟ್ಟಿ ಪ್ರೋತ್ಸಾಹಿಸಿದರಂತೂ ನಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ ಅಂತದ್ದರಲ್ಲಿ ಅಂತಹ ಮಹಾಮೇಧಾವಿ, ಜಗತ್ತಿಗೇ ಭಾರತದ ಹಿರಿಮೆ ಸಾರಿದ ಸತ್ಪುರುಷನ ಜೊತೆ ಒಡನಾಟ ದೊರಕಿತು, ಅವರೊಂದಿಗೆ ಕೆಲವು ದಿನ ಒಟ್ಟಿಗೇ ಇರಲು, ವಾರವಿಡೀ ಅವರ ದಿವ್ಯವಾಣಿಗೆ ಕಿವಿಯಾಗಲು ಅವಕಾಶ ಸಿಕ್ಕಿತು ಎಂದು ಸಾರಾ ಎಲೆನ್ ವಾಲ್ಡೋ ಬರೆದಿದ್ದನ್ನು ಓದಿದರೆ ಯಾರಿಗೆ ತಾನೇ ಈರ್ಷೆಯಾಗುವುದಿಲ್ಲ.
ಸಾರಾ ಎಲೆನ್ ವಾಲ್ಡೋ ವಿವೇಕಾನಂದರ ಪ್ರಖರ ಪಾಂಡಿತ್ಯಕ್ಕೆ, ವಾಕ್ಚಾತುರ್ಯಕ್ಕೆ ಮನಸೋತು ಅವರ ಶಿಷ್ಯೆಯಾದವರು. ಸಾರಾ, ವಿವೇಕಾನಂದರ ಶಿಷ್ಯೆಯಾದ ಮೇಲೆ ’ಹರಿದಾಸಿ’ಯಾಗಿ ಬದಲಾದರು. ವಿವೇಕಾನಂದರೇ ಅವರಿಗೆ ಈ ಹೆಸರನ್ನು ಸೂಚಿಸಿದ್ದಂತೆ. ಸ್ವಾಮಿ ವಿವೇಕಾನಂದರು ಅಮೇರಿಕೆಗೆ ಬಂದು ಇಲ್ಲಿನ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾರತವನ್ನ, ತನ್ಮೂಲಕ ಹಿಂದೂಧರ್ಮವನ್ನ ಪ್ರತಿನಿಧಿಸಿ, ಜನಮನ್ನಣೆಗಳಿಸಿ ತಮ್ಮ ವಿಚಾರಧಾರೆಯನ್ನು ಅಮೆರಿಕದಾದ್ಯಂತ ಪ್ರಚುರ ಪಡಿಸಲು ಹೊರಟಾಗ ಅನೇಕ ಅಮೆರಿಕನ್ನರು ವಿವೇಕಾನಂದರ ಶಿಷ್ಯವೃತ್ತಿ ಸ್ವೀಕರಿಸಿ ವೇದಾಂತದ ಅಭ್ಯಾಸಿಗಳಾದರು. ಹಾಗೆ ವಿವೇಕಾನಂದರ ಆಪ್ತ ಬಳಗಕ್ಕೆ ಬಂದ ಮೊದಲ 8 ಜನರಲ್ಲಿ ಸಾರಾ ಎಲೆನ್ ವಾಲ್ಡೋ ಕೂಡ ಒಬ್ಬರು.
ಹೀಗೆ ವಿವೇಕಾನಂದರೊಂದಿಗೆ ಆತ್ಮೀಯ ಒಡನಾಟವಿಟ್ಟುಕೊಂಡ ವಾಲ್ಡೋ ಅಮೆರಿಕದಲ್ಲಿ ವಿವೇಕಾನಂದರ ಪ್ರವಾಸ, ಅಲ್ಲಿ ಅವರು ಗಳಿಸಿಕೊಂಡ ಮನ್ನಣೆ, ಎದುರಿಸಿದ ಸವಾಲುಗಳು, ಅವರ ಅಮೆರಿಕೆಯ ದಿನಚರಿ ಎಲ್ಲವನ್ನೂ ಹೆಚ್ಚು ಪರಿಣಾಮಕಾರಿಯಾಗಿ ವಿವಸುತ್ತಾ ಹೋಗುತ್ತಾರೆ. ಅವರು ಸ್ವಾಮೀಜಿಯ ಬಗ್ಗೆ ಬರೆಯುವುದನ್ನು ಓದಿದಾಗ ರೋಮಾಂಚನವಾಗುವುದಂತೂ ದಿಟ. ಮದರಾಸಿನ ಕೆಲವು ಗೆಳೆಯರ ಒತ್ತಡಕ್ಕೆ ಮಣಿದು ಅಮೇರಿಕೆಗೆ ಬರುವ ಮನಸ್ಸು ಮಾಡಿದವರು ವಿವೇಕಾನಂದ. ಅಷ್ಟು ದೂರದ ದೇಶಕ್ಕೆ ಹೋಗಲು ಹಣದ ಕೊರತೆಯುಂಟಾದಾಗ ಗೆಳೆಯರೇ ಮನೆಮನೆಗೆ ಹೋಗಿ, ಆಪ್ತರಿಂದ ಹಣ ಪಡೆದು ಭಾರತವನ್ನು ಪ್ರತಿನಿಧಿಸಲು ನೀನೇ ಸರಿಯಾದ ವ್ಯಕ್ತಿಯೆಂದು ಭುಜತಟ್ಟಿ ವಿವೇಕಾನಂದರನ್ನು ಬಿಳ್ಕೊಟ್ಟರು. ಆದರೆ ಸಾಗಬೇಕಾದ ಗಾವುದ ಗಾವುದ ದಾರಿಯ ಅರಿವಿದ್ದದ್ದು ವಿವೇಕಾನಂದರಿಗೆ ಮಾತ್ರ.
ದಾರಿಯುದ್ದಕ್ಕೂ ಆದ ತೊಂದರೆಗಳು, ಕಳ್ಳಕಾಕರ ಉಪಟಳ ಎಲ್ಲವನ್ನೂ ಸಹಿಸಿಕೊಂಡು ಅಮೇರಿಕದ ನೆಲಕ್ಕೆ ಕಾಲಿಟ್ಟ ವಿವೇಕಾನಂದರ ಬಳಿ ಉಳಿದದ್ದು ಮಾತ್ರ ಪುಡಿಗಾಸು. ಅದರಲ್ಲಿ ಅಲ್ಲಿ ಜೀವನ ಸಾಗಿಸುವುದಾದರೂ ಹೇಗೆ? ಪರಿಚಯಕ್ಕಾದರೂ ಅಲ್ಲಿ ಯಾರೂ ಇರಲಿಲ್ಲ. ವಿಶ್ವ ಧರ್ಮ ಸಮ್ಮೇಳನಕ್ಕೆ ಇನ್ನೂ ಅನೇಕ ತಿಂಗಳುಗಳೇ ಇದ್ದವು. ಇವೆಲ್ಲದರಿಂದ ಮನನೊಂದ ವಿವೇಕಾನಂದರು ಒಂದು ಹಂತದಲ್ಲಿ ಭಾರತಕ್ಕೆ ಮರಳಿ ಬಿಡುವ ನಿರ್ಧಾರಕ್ಕೂ ಬಂದಿದ್ದರಂತೆ. ಆದರೆ ಅವರ ನಿರ್ಧಾರ ಬದಲಾದದ್ದು ಶಿಕಾಗೋನಿಂದ ಬಾಸ್ಟನ್ ಗೆ ಪ್ರಾಯಾಣಿಸುವಾಗ ಸಿಕ್ಕ ಒಬ್ಬ ಸಜ್ಜನ ಮಹಿಳೆಯಿಂದ. ಆಕೆ ವಿವೇಕಾನಂದರಿಗೆ ಆಶ್ರಯ ನೀಡುತ್ತಾರೆ. ನಂತರ ಹಾರ್ವಡ್ ನ ಪ್ರೊಫೇಸರ್ ಪರಿಚಯವಾಗುತ್ತದೆ. ವಿಶ್ವ ಧರ್ಮ ಸಮ್ಮೇಳನಕ್ಕೆ ಪ್ರವೇಶ ಸಾಧ್ಯವಾಗುತ್ತದೆ. ತಮ್ಮ ಹೆಸರು ಭಾಷಣಕ್ಕೆ ಕರೆದಾಗಲೆಲ್ಲಾ ’ಬೇರೆಯಾರಾದರೂ ಮಾತನಾಡಲಿ’ ಎಂದು ಮುಂದೆ ಹಾಕುತ್ತಿದ್ದರಂತೆ ಸ್ವಾಮೀಜಿ. ಕೊನೆಗೂ ತಮ್ಮ ಸರದಿಯಲ್ಲಿ ಭಾಷಣಕ್ಕೆ ನಿಂತಾಗ ವಿವೇಕರ ಸಿಂಹವಾಣಿ ಇಡೀ ಅಮೇರಿಕವನ್ನೇ ನಡುಗಿಸುತ್ತದೆ. ಚಪ್ಪಾಳೆ ಮುಗಿಲು ಮುಟ್ಟುತ್ತದೆ. ಹಿಂದೂ ಧರ್ಮದ ಶ್ರೇಷ್ಠತೆ ವಿಶ್ವಕ್ಕೇ ಮನದಟ್ಟಾಗುತ್ತದೆ.
ನಂತರ ಬಿಡಿ, ವಿವೇಕಾನಂದರ ವೇದಾಂತ ಪ್ರಚಾರಕಾರ್ಯ ಅಮೆರಿಕೆಯಲ್ಲಿ ಭರದಿಂದ ಸಾಗುತ್ತದೆ. ನ್ಯೂಯಾರ್ಕ್, ಶಿಕಾಗೋ,ಬಾಸ್ಟನ್, ಡೆಟ್ರ್ಯಾಟ್ ಇತ್ಯಾದಿ ನಗರಗಳಲ್ಲಿ ಪ್ರವಚನದ ಏರ್ಪಾಡಾಗುತ್ತದೆ. ಭಗವದ್ಗೀತೆ, ಉಪನಿಷತ್ತು, ಭಾರತ ರಾಮಾಯಣಗಳ ಬಗ್ಗೆ ನಿರರ್ಗಳ ಭಾಷಣಕ್ಕೆ ಜನತೆರೆದುಕೊಳ್ಳುತ್ತಾರೆ. ಭಾರತವೆಂದರೆ ಮೂಗು ಮುರಿಯುತ್ತಿದ್ದವರ ಮನ ಪರಿವರ್ತನೆಯಾಗುತ್ತದೆ. ಅಷ್ಠೇ ಅಲ್ಲದೇ ವೇದಾಂತ ಅಧ್ಯಯನ ತರಗತಿಗಳು ಪ್ರಾರಂಭವಾಗುತ್ತವೆ. ಥೌಸಂಡ್ ಐಲ್ಯಾಂಡ್ ನಲ್ಲಿ ಏಳು ದಿನಗಳ ಕಾಲ ವಿವೇಕಾನಂದರು ಶಿಷ್ಯರಿಗೆ ಪಾಠ ಹೇಳುತ್ತಾರೆ. ಶಂಕರ, ರಾಮಾನುಜ, ಮಧ್ವರ ಸಿದ್ದಾಂತಗಳು, ವೇದಾಂತ ಸೂತ್ರ, ನಾರದರ ಭಕ್ತಿ ಸೂತ್ರ ಎಲ್ಲದರ ಬಗ್ಗೆ ವಿವೇಕಾನಂದರು ತಮ್ಮ ಶಿಷ್ಯರೊಂದಿಗೆ ಚರ್ಚಿಸುತ್ತಾರೆ. ಅಷ್ಠೂ ದಿನದ ವಿವೇಕಾನಂದರ ಪ್ರವಚನವನ್ನು ಸಾರಾ ಎಲೆನ್ ವಾಲ್ಡೋ Inspired Talks ಎನ್ನುವ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಮದರಾಸಿನ ರಾಮಕೃಷ್ಣಾಶ್ರಮ ಅದನ್ನು 1908 ರಲ್ಲಿ ಪ್ರಕಟಿಸಿದೆ. ಅದರಲ್ಲಿ ಸಾರ ನಮಗೆ ಪರಿಚಯವಿಲ್ಲದ ವಿವೇಕಾನಂದರ ಕೆಲವು ಗುಣಗಳನ್ನ ವಿವರಿಸುತ್ತಾರೆ . ಅನೇಕ ಬಾರಿ ವಿವೇಕಾನಂದರೇ ತಮ್ಮ ಶಿಷ್ಯರಿಗೆ ಅಡುಗೆ ಮಾಡಿ ಬಡಿಸುತ್ತಿದ್ದರಂತೆ. ಭಾರತದಲ್ಲಿ ಗುರು ಪರಂಪರೆ ಎಂದರೆ ಕೇವಲ ಪಾಠ ಹೇಳುವುದಲ್ಲ. ಕಲಿಸುವಷ್ಟುದಿನ ಶಿಷ್ಯರ ಯೋಗಕ್ಷೇಮವೂ ಗುರುವಿನ ಜವಾಬ್ದಾರಿ ಎಂದಿದ್ದರಂತೆ ಸ್ವಾಮೀಜಿ. ಅಮೆರಿಕನ್ನರ ಅಡುಗೆ ಪದ್ದತಿಯನ್ನು ಕಲಿಯುತ್ತಲೇ ಭಾರತೀಯ ತಿನಿಸುಗಳನ್ನು ಶಿಷ್ಯರಿಗೆ ಮಾಡಿ ಕೊಡುತ್ತಿದ್ದರಂತೆ.
ಬಹುಶಃ ವಿವೇಕಾನಂದರು ಅಮೇರಿಕನ್ನರಿಗೆ ಹೆಚ್ಚು ಇಷ್ಠವಾಗಿದ್ದೇ ಪಾಂಡಿತ್ಯದೊಂದಿಗೆ ಅವರಲ್ಲಿದ್ದ ಸರಳತೆ ಮತ್ತು ಎಲ್ಲರೊಂದಿಗೂ ಹೊಂದಿಕೊಂಡು ಹೋಗುವ, ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವ ಗುಣಸ್ವಭಾವದಿಂದ ಎಂದರೆ ತಪ್ಪಲ್ಲವೇನೊ. ಹಿಂದೂ ಧರ್ಮದ ಸಂದೇಶಗಳನ್ನು ಅಮೇರಿಕನ್ ಶಿಷ್ಯವೃಂದಕ್ಕೆ ತಿಳಿಸಿಕೊಡುವಾಗ ಕೂಡ ಅವರು ಕ್ರೈಸ್ಥಧರ್ಮದಲ್ಲಿ ಭೋದಿಸಲ್ಪಟ್ಟ ಮೌಲ್ಯಗಳನ್ನು ಪ್ರಸ್ತಾಪಿಸಿಯೇ ಹಿಂದೂ ಧರ್ಮ ಹೇಗೆ ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ ಎಂಬುದನ್ನು ವಿವರಿಸುತ್ತಿದ್ದರಂತೆ. ಮೊದಲ ತರಗತಿಯಲ್ಲಿ ಹಿಂದೂ ಸನ್ಯಾಸಿಯ ಕೈಯಲ್ಲಿ ಬೈಬಲ್ ನೋಡಿ ಅಷ್ಠೂ ಜನ ಶಿಷ್ಯಂದಿರು ಆಶ್ಚರ್ಯ ಚಕಿತರಾಗಿದ್ದು ನಿಜ. ನಂತರ ವಿವೇಕರು ಹಿಂದೂ ಧರ್ಮಗ್ರಂಥಗಳ ವ್ಯಾಖ್ಯಾನ ಪ್ರಾರಂಭಿಸಿದಾಗ ಅದೇ ಶಿಷ್ಯವೃಂದ ಹಿಂದೂ ಧರ್ಮದ ಶ್ರೇಷ್ಠತೆ ಅರಿತು ಅವರ ಮುಂದೆ ತಲೆಬಾಗಿತ್ತು.
ವಿವೇಕಾನಂದರು ಇತರ ಸಾಧು ಸಂತರಿಗಿಂತ ಭಿನ್ನವಾಗಿ ನಿಲ್ಲುವುದು ಮತ್ತು ಮನಸ್ಸಿಗೆ ಹತ್ತಿರವಾಗುವುದು ಅವರ ನೇರ ನಿಷ್ಠೂರ ಮಾತುಗಳಿಂದ. ನನ್ನ ದೇಶದ ಬಗ್ಗೆ, ನನ್ನ ಪೂರ್ವಜರ ಬಗ್ಗೆ ನನಗೆ ಹೆಮ್ಮೆಯಿದೆ. ಎಲ್ಲಧರ್ಮೀಯರನ್ನ, ಎಲ್ಲ ದೇಶಗಳ ನಿರ್ಗತಿಕರನ್ನ ಸಹಿಸಿಕೊಂಡು ಆಶ್ರಯನೀಡಿದ ದೇಶ ನನ್ನದು. My religion is one of which Christianity is an offshoot and Buddhism a rebel child ಎಂದು ಹಿಂದೂ ಧರ್ಮವನ್ನು ವ್ಯಾಖ್ಯಾನಿಸಿದವರು ಸ್ವಾಮೀಜಿ. ನೀವು ಕ್ರೈಸ್ಥ ಮಿಷನರಿಗಳನ್ನು ಭಾರತಕ್ಕೆ ಕಳುಹಿಸುತ್ತೀರಿ, ಅವುಗಳ ಉದ್ದೇಶ ಕೇವಲ ಧರ್ಮಪ್ರಸಾರ ಮತ್ತು ಮತಾಂತರವಾಗಿರುತ್ತದೆ ನಿಜಕ್ಕೂ ನಮ್ಮ ಜನಕ್ಕೆ ನಿಮ್ಮ ಧರ್ಮ ಬೇಕಿಲ್ಲ ಅವರಿಗೆ ಬೇಕಿರುವುದು ಹಸಿವಿಗೆ ಆಹಾರ ಎಂದು ನಿಷ್ಠೂರ ಮಾತಿನಲ್ಲಿ ಹೇಳಿದವರು ವಿವೇಕಾನಂದರು. ತಮ್ಮನ್ನು ಹಿಂಬಾಲಿಸಿ ಬಂದ ಶಿಷ್ಯರಿಗೆ ಹೇಳುತ್ತಿದ್ದರಂತೆ ನೀವು ನನ್ನನ್ನು ಗುರುವೆಂದು ಕೇವಲ ಅಂದಾನುಕರಣೆ ಮಾಡಬೇಡಿ. ಯಾವುದನ್ನಾದರೂ ಪರೀಕ್ಷಿಸದೆ ಒಪ್ಪಿಕೊಳ್ಳಬೇಡಿ ಎಂದು. ಸ್ವತಃ ವಿವೇಕರೇ ರಾಮಕೃಷ್ಣರನ್ನು ಪರೀಕ್ಷಿಸದೆ ಒಪ್ಪಿಕೊಂಡವರಲ್ಲ. ಕಾಮಕಾಂಚನದ ಬಗ್ಗೆ ಮೋಹವಿರಬಾರದು, ನಾನು ಹಣವನ್ನು ಸ್ಪರ್ಶಿಸುವುದೂ ಇಲ್ಲ ಎಂದ ಗುರುಗಳ ಹಾಸಿಗೆಯ ಕೆಳಗೇ ನಾಣ್ಯವಿಟ್ಟು ಪರೀಕ್ಷಿಸಿದವರು ವಿವೇಕಾನಂದ.
ವಿವೇಕಾನಂದರ ಸಂದೇಶಗಳೆಂದರೇ ಸಿಡಿಗುಂಡಿನಂತಹವು. ಅವು ಇನ್ನೂ ನೂರಾರು ವರ್ಷಕಳೆದರೂ ಶಾಶ್ವತವಾಗಿ ನಿಲ್ಲುವಂತವು. ಇತಿಹಾಸದ ಅರಿವು ಇದ್ದರೆ ಮಾತ್ರ ಭವಿಷ್ಯ ರೂಪಿಸಲು ಸಾಧ್ಯ, ಮೊದಲು ನಿಮ್ಮ ಪೂರ್ವಜರ ಬಗ್ಗೆ ತಿಳಿದುಕೊಳ್ಳಿ ನಂತರ ನಿಮ್ಮಲ್ಲಿ ಆತ್ಮವಿಶ್ವಾಸ ಮೊಳೆಯದಿದ್ದರೆ ಕೇಳಿ ಎಂದವರು ಸ್ವಾಮೀಜಿ. ಮೊದಲು ನಮ್ಮ ಯುವಕರು ಬಲಿಷ್ಠರಾಗಬೇಕು. ಅನಂತರ ಧರ್ಮ. ಮೊದಲು ಬಲಿಷ್ಠರಾಗಿ. ಗೀತಾಧ್ಯಾಯನಕ್ಕಿಂತ ಪುಟ್ ಬಾಲ್ ಆಟದಿಂದ ಮುಕ್ತಿಗೆ ಹತ್ತಿರ ಹೋಗುವಿರಿ. ನಿಮ್ಮ ಬಾಹುಗಳ ಮಾಂಸಖಂಡಗಳಲ್ಲಿ ಶಕ್ತಿಯಿದ್ದರೆ, ಗೀತೆ ಚೆನ್ನಾಗಿ ತಿಳಿಯಬಲ್ಲಿರಿ. ನೀವು ಸಶಕ್ತರಾಗಿ ನಿಂತು ಪುರುಷರೆಂದು ಪರಿಗಣಿಸಿದಾಗ ಮಾತ್ರ ನಿಮಗೆ ಉಪನಿಷತ್ತಿನ ಮಹಿಮೆ ಚೆನ್ನಾಗಿ ಅರ್ಥವಾಗುತ್ತದೆ ಎಂದು ಯುವಕರಿಗೆ ಚಾಟಿ ಬೀಸಿದವರು ಸ್ವಾಮೀಜಿ. ಭಾರತವನ್ನು ಬದಲಾಯಿಸಲು ಭಾರತಕ್ಕಾಗಿ ಮಿಡಿಯುವ ಹೃದಯ, ಭಾರತದ ಏಳಿಗೆಗೆ ಚಿಂತಿಸುವ ಮೆದುಳಿನಷ್ಠೇ, ಭಾರತಕ್ಕಾಗಿ ದುಡಿಯುವ ಕೈಗಳು ಮುಖ್ಯ ಎಂಬುದಾಗಿ ಹೇಳಿ. ಮಾತನಾಡಿದ್ದು ಸಾಕು, ಕಾರ್ಯಪ್ರವೃತ್ತರಾಗಿ ಎಂದು ಬಿಸಿಮುಟ್ಟಿಸಿದವರು ವಿವೇಕಾನಂದ. ಯುವಕರೆಂದರೆ ವಿವೇಕರಿಗೆ ಎಲ್ಲಿಲ್ಲದ ಮಮಕಾರ, ಭರವಸೆ. ಉಕ್ಕಿನಂತಹ ನರಗಳಿರುವ, ಕಬ್ಬಿಣದಷ್ಟು ಗಟ್ಟಿಯಾದ ಮಾಂಸಖಂಡಗಳಿರುವ ಯುವಕರು ಮಾತ್ರ ಈ ದೇಶದ ವೈಭವವನ್ನು ಮರುಕಳಿಸಬಲ್ಲರು ಎಂದವರು ಸ್ವಾಮೀಜಿ. ಬಿಡಿ, ಭಾರತದಲ್ಲಿ ಯುವಜನತೆಗೇನೂ ಕಮ್ಮಿಇಲ್ಲ, ಇತ್ತೀಚಿನ ಜನಗಣತಿಯ ಪ್ರಕಾರ ಭಾರತದಲ್ಲಿ ಶೇಕಡ 50 ಕ್ಕಿಂತ ಹೆಚ್ಚು ಯುವಕರಿದ್ದಾರೆ. ಆದರೆ ನಿಜಕ್ಕೂ ಈ ಯುವಪಡೆ ವಿವೇಕಾನಂದರ ಕನಸಿನಂತೆ ರೂಪುಗೊಳ್ಳುತ್ತಿದೆಯಾ? ಭಾರತ ಪ್ರಜ್ವಲಿಸಬೇಕಾದರೆ ಮುಖ್ಯವಾಗಿ ಪ್ರತಿ ಯುವಕನ ಮನದಲ್ಲಿ ’ವಿವೇಕ ಪ್ರಜ್ನೆ’ ಜಾಗೃತವಾಗಬೇಕಿದೆ. ಅದು ಇಂದಿನ ಭಾರತದ ಅವಶ್ಯ.
ಸೇತುರಾಂ ಸರಿಸಿದ ಬದುಕಿನ ವಿಕೃತಿ – ಅನಾವರಣ….!
ರೇಷ್ಮೇ ಹುಳಾನ ಪ್ರೀತಿಯಿಂದ ಸಾಕ್ತೀವಿ. ಅದು 24 ಘಂಟೆ ತಿನ್ನತ್ತೆ. ನಿದ್ದೆಗೆಟ್ಟು ಅದರ ಹೊಟ್ಟೆಪಾಡನ್ನ ಗಮನಿಸ್ತೀವಿ.ಅದು ಬಲಿತು ಜೊಲ್ಲು ಸುರಿಸುತ್ತೆ, ಗೂಡು ಕಟ್ಟೋದಕ್ಕೆ ಅವಕಾಶ ಮಾಡಿಕೊಡ್ತೀವಿ. ಗೂಡು ಕಟ್ಟಿದ ಮೇಲೆ ಬಿಸಿನೀರಿಗಾಕಿ ಕುದಿಸಿ ದಾರ ಎಳೀತೀವಿ. ಅದನ್ನ ಸಾಕಿದ್ದೇ ಸ್ವಂತ ಲಾಭಕ್ಕಲ್ವ. ಜೀವಿ ಅಲ್ಲ ವಸ್ತು ಮುಖ್ಯ ಅಂತ ಆದ್ಮೇಲೆ, ರೇಷ್ಮೇ ಹುಳ ಏನು, ಮನುಷ್ಯ ಆದರೇನು? ಇಂತಹ ಸಂಭಾಷಣೆ ಯಾವುದಾದರೂ ಟಿ.ವಿ ಧಾರಾವಾಹಿಯಲ್ಲಿ ನೀವು ಕೇಳಿದರೆ ಥಟ್ ಎಂದು ಇದು ಸೇತುರಾಂರ ಧಾರಾವಾಹಿ ಎಂದು ಬಿಡಬಹುದು. ಇಂತಹ ಸಂಭಾಷಣೆಯನ್ನು ಕೇಳಿದ ಕೆಲವು ಮಹಿಳೆಯರು ಇನ್ಮೇಲೆ ನಾನು ರೇಷ್ಮೇ ಸೀರೆ ತೆಗೆದುಕೊಳ್ಳುವುದಿಲ್ಲ ಎಂದು ಆ ಗಳಿಗೆಯಲ್ಲಿ ಅಂದುಕೊಂಡರೆ ಆಶ್ಚರ್ಯಪಡಬೇಕಿಲ್ಲ. ಸೇತುರಾಂ ಧಾರಾವಾಹಿಯ ಸಂಭಾಷಣೆಗಳಿರುವುದೇ ಹಾಗೇ. ಕೊಂಚ ಘಾಟು, ನೇರಾನೇರಾ, ಕೆಲವೊಮ್ಮೆ ಕ್ಲಿಷ್ಠ, ಆದರೆ ಒಮ್ಮೆಲೇ ವೀಕ್ಷಕನ ಮನಸ್ಸಿಗಿಳಿದು ಚಿಂತನೆಯ ಬೀಜ ಬಿತ್ತಿಬಿಡುವ ತಾಕತ್ತು ಅದಕ್ಕಿರುತ್ತದೆ.
ಆದರೆ ಕಳೆದ ಒಂದು ವಾರದಿಂದ ಕಿರುತೆರೆಯ ಧಾರಾವಾಹಿ ವೀಕ್ಷಕರಲ್ಲಿ ಖಾಲಿತನ ಆವರಿಸಿದೆ. ಏನನ್ನೋ ಕಳೆದುಕೊಂಡ ಭಾವ ಕಾಡುತ್ತಿದೆ. ರಾತ್ರಿ 8:30 ಆಯಿತೆಂದರೆ ಒಂದು ಚಡಪಡಿಕೆ ಶುರುವಾಗಿದೆ. ಕಾರಣ ಮನರಂಜನೆಯೊಂದಿಗೆ ಚಿಂತನೆಯನ್ನೂ ಕಟ್ಟಿಕೊಡುತ್ತಿದ್ದ ಸೇತುರಾಂರ ಅನಾವರಣ ಧಾರಾವಾಹಿ ಮುಗಿದಿದೆ. ಧಾರಾವಾಹಿಗಳು ಹೇಗೆ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತವೆ ಎಂಬ ಬಗ್ಗೆ ಒಂದು ಹಾಸ್ಯದ ಮಾತಿತೆ. ಹಾಸ್ಯ ಸಂಜೆಗಳಲ್ಲಿ ಸಾಮಾನ್ಯವಾಗಿ ಗಂಗಾವತಿ ಪ್ರಾಣೇಶ್ ಈ ಮಾತನ್ನು ಬಳಸುತ್ತಿರುತ್ತಾರೆ. ಗಂಡಸರೆಲ್ಲ ಹೊರಗೆ ಬಾರಲ್ಲಿ ಟೈಟ್ ಆದರೆ ಹೆಂಗಸರು ಮನೆಯಲ್ಲೇ ಟಿ.ವಿ ಮುಂದೆ ಟೈಟ್ ಆಗಿರ್ತಾರೆ. ಅಷ್ಟರ ಮಟ್ಟಿಗೆ ನಮ್ಮ ಟಿ.ವಿ ಧಾರಾವಾಹಿಗಳು ಹೆಂಗಸರನ್ನ ಆವರಿಸಿಕೊಂಡಿದ್ದಾವೆ. ಅದರ ಮುಂದೆ ಅವರಿಗೆ ಸಮಾಜದ ಬೇರಾವ ಕಾರ್ಯಕ್ರಮಗಳಾಗಲಿ, ಪುಸ್ತಕ, ಕಥೆ ಕಾದಂಬರಿಗಳಾಗಲಿ ರುಚಿಸುವುದಿಲ್ಲ. ಹೆಂಗಸರು ಮನೆ ಬಿಟ್ಟು ಹೊರಬಂದಿದ್ದಾರೆ ಎಂದರೆ ಒಂದೋ ಕರೆಂಟ್ ಇಲ್ಲ ಅಥವಾ ಅದು ರವಿವಾರವಾಗಿರುತ್ತದೆ ಯಾವ ಧಾರಾವಾಹಿಗಳು ಇರುವುದಿಲ್ಲ ಎಂದು. ಆ ಮಾತು ಕೊಂಚ ಉತ್ಪ್ರೇಕ್ಷೆ ಎನಿಸಿದರೂ ನಿಜ. ಟಿ.ವಿ ಧಾರಾವಾಹಿಗಳ ನೋಡುಗರಲ್ಲಿ ಬಹುಪಾಲು ಮಹಿಳೆಯರೇ ಆಗಿರುತ್ತಾರೆ. ಆದ್ದರಿಂದಲೇ ಸಾಮಾನ್ಯವಾಗಿ ಮಹಿಳೆಯರನ್ನೇ ಮನದಲ್ಲಿಟ್ಟುಕೊಂಡು ಇವು ಸಿದ್ದವಾಗಿರುತ್ತವೆ. ಹೆಂಗಸರನ್ನು ಸೆಳೆಯುವ ಅತ್ತೆ ಸೊಸೆಯ ಕಥೆ, ಒಂದಷ್ಟು ಭಾವನಾತ್ಮಕ ಸನ್ನಿವೇಷ ಇದ್ದರೆ ಟಿ.ಆರ್.ಪಿ ಹೆಚ್ಚುತ್ತದೆ ಎಂಬುದು ಬಹುಶಃ ಎಲ್ಲ ಧಾರಾವಾಹಿಗಳ ನಿರ್ದೇಶಕರಿಗೆ, ನಿರ್ಮಾಪಕರಿಗೆ ಮನವರಿಕೆಯಾಗಿ ಹೋಗಿದೆ. ಕಥೆಯಲ್ಲಿ ಸಾಂದ್ರತೆ ಇರಲಿ ಇಲ್ಲದಿರಲಿ ನೂರಾರು ಎಪಿಸೋಡುಗಳ ಧಾರಾವಾಹಿ ಸಿದ್ದವಾಗುತ್ತವೆ ಮತ್ತು ಚಾನಲ್ ಗಳು ಕೂಡ ಅವನ್ನು ಖುಷಿಯಿಂದ ಪ್ರಸಾರ ಮಾಡುತ್ತವೆ.
ಲೆಕ್ಕಾ ಹಾಕಿದರೆ ಏನಿಲ್ಲವೆಂದರೂ ಕನ್ನಡದ ಪ್ರತಿ ಚಾನಲ್ಲಿನಲ್ಲಿ ೧೦-೧೨ ಧಾರಾವಾಹಿಗಳು ಪ್ರತಿದಿನ ಪ್ರಸಾರವಾಗುತ್ತವೆ. ಮಧ್ಯಾಹ್ನದಿಂದ ಪ್ರಾರಂಭವಾಗಿ ರಾತ್ರಿ ೧೦ ರ ತನಕವೂ ಮುಂದುವರಿಯುತ್ತವೆ. ಕೆಲಸವೆಲ್ಲವೂ ಆಯಿತು, ಹೊತ್ತು ಹೋಗುತ್ತಿಲ್ಲ, ಸಮಯ ಕಳೆಯಲು ಏನಾದರೂ ಆದೀತು ಎನ್ನುವವರಿಂದಲೇ ಇವು ದುಡ್ಡುಮಾಡುತ್ತವೆ. ಆದ್ದರಿಂದಲೇ ಕೆಲವರಿಗೆ ಅದರಲ್ಲೂ ಯುವಜನಾಂಗಕ್ಕೆ ಧಾರಾವಾಹಿ ನೋಡುವುದೆಂದರೆ ಕಾಲಹರಣ ಮಾಡಿದಂತೆ, ಅವರು ಅತ್ತ ತೆಲೆಹಾಕುವುದು ಕಮ್ಮಿ. ಇನ್ನು ಹೀಗೆ ಸರಣಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ ನಡವೆ ಕೂಡ ಸ್ಪರ್ಧೆ ಇರುತ್ತದೆ. ಒಂದು ಧಾರಾವಾಹಿ ಬೇರೆ ಧಾರಾವಾಹಿಗಳೊಂದಿಗಿನ ಸ್ಪರ್ಧೆಯಲ್ಲಿ ಗೆದ್ದಿತು ಎಂದು ಹೇಳಲು ಕೇವಲ ಅದರ ಟಿ.ಆರ್.ಪಿ ಮತ್ತು ಮಾರ್ಕೆಟಿಂಗ್ ನ ಮಾನದಂಡ ಸಾಕೇನೋ. ಆದರೆ ಅದೇ ಧಾರವಾಹಿ ವೀಕ್ಷಕರ ಮನಗೆದ್ದಿತು ಎನ್ನಬೇಕಾದರೆ ಅದು ಉಂಟುಮಾಡಿದ ಸಂಚಲನ, ವೀಕ್ಷಕರ ಭಾವಲೋಕದಲ್ಲಾದ ಬದಲಾವಣೆ, ಹುಟ್ಟುಹಾಕಿದ ಚರ್ಚೆ ಎಲ್ಲವೂ ಮುಖ್ಯವಾಗುತ್ತದೆ. ಎಲ್ಲೋ ಬೆರಳೆಣಿಕೆಯ ಧಾರವಾಹಿಗಳು ಮನರಂಜನೆಯ ಜೊತೆಗೆ ಮೆದುಳಿಗೆ ಒಂದಷ್ಟು ಚಿಂತನೆಯನ್ನೂ ಕೊಡುತ್ತವೆ, ಅದರಲ್ಲಿನ ಕೆಲಪಾತ್ರಗಳು ಕಾಡುತ್ತವೆ, ಸಂಭಾಷಣೆಗಳಲ್ಲಿ ಸಂದೇಶ ಅಡಕವಾಗಿರುತ್ತದೆ. ಅದರಿಂದ ನೋಡುಗರು ಬದಕನ್ನು ನೋಡುವ ರೀತಿ ಕೊಂಚವಾದರೂ ಬದಲಾಗುತ್ತದೆ. ದಿನನಿತ್ಯದ ಆ ಧಾರಾವಾಹಿ ಬದುಕಿನ ಭಾಗವೇನೋ ಎಂಬಷ್ಟು ಹತ್ತಿರವಾಗುತ್ತದೆ. ಅಂತಹ ಧಾರಾವಾಹಿಗಳು ನೆನಪಿನಲ್ಲಿ ಉಳಿಯುತ್ತವೆ. ಅಂತಹದೊಂದು ಧಾರಾವಾಹಿಯನ್ನು ಸೇತುರಾಂ ಕೊಟ್ಟಿದ್ದಾರೆ.
ಸೇತುರಾಂ ಹೊಸದೊಂದು ಧಾರಾವಾಹಿ ಮಾಡುತ್ತಾರೆ ಎಂದಾಗಿನಿಂದಲೂ ಕುತೂಹಲವಿದ್ದದ್ದು ಸತ್ಯ. ಅದಾಗಲೇ ತಮ್ಮ ವಿಶಿಷ್ಠ ಸಂಭಾಷಣೆಯ ಶೈಲಿ, ಬದುಕಿನ ವಾಸ್ತವಗಳ ಕಥಾವಸ್ತು, ಪ್ರತಿ ಪಾತ್ರಗಳೂ ರೂಪುಗೊಳ್ಳುತ್ತಾ ಹೋಗುವ ಪರಿ ಎಲ್ಲವುಗಳಿಂದ ತಮ್ಮ ಛಾಪು ಮೂಡಿಸಿದ್ದವರು ಸೇತುರಾಂ. ಅವರ ಮಂಥನ ಮತ್ತು ದಿಬ್ಬಣ ಧಾರಾವಾಹಿಗಳು ಕಿರುತೆರೆಯ ವೀಕ್ಷಕರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅನಾವರಣದಲ್ಲೂ ಸೇತುರಾಂ ತಮ್ಮತನವನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಮುಖ್ಯವಾಗಿ ಎಲ್ಲರ ಮನಸ್ಸಿನಲ್ಲೂ ಇರಬಹುದಾದ ರಾಕ್ಷಸತನವನ್ನ ತೆರೆದಿಟ್ಟಿದ್ದಾರೆ. ನಮ್ಮ ಸುತ್ತಲಿನ ಭ್ರಷ್ಠ ವ್ಯವಸ್ಥೆ, ಕುಸಿಯುತ್ತಿರುವ ಮೌಲ್ಯಗಳು, ಪೀಳಿಗೆಯ ನಡುವಿನ ಅಂತರ, ಬದಲಾಗುತ್ತಿರುವ ಬದುಕಿನ ಪರಿ ಎಲ್ಲವೂ ಅನಾವರಣದಲ್ಲಿ ತೆರೆದುಕೊಂಡಿವೆ. ಬಹುಶಃ ವೀಕ್ಷಕರಿಗೆ ಇದು ಹೆಚ್ಚು ಇಷ್ಠವಾದದ್ದು ಅಲ್ಲಿನ ಎಲ್ಲ ಪಾತ್ರಗಳು ಎಲ್ಲರ ಮನೆಯಲ್ಲಿ, ನೆರೆಹೊರೆಯಲ್ಲಿ ಇರಬಹುದಾದದ್ದು ಎಂಬ ಭಾವ ಮೂಡಿಸಿದ್ದರಿಂದೇನೋ.
ಹಣ ಖರ್ಚು ಮಾಡಿ ಪಾಸಾಗಿರೋದು, ಹಣ ಕೊಟ್ಟು ಈ ಹುದ್ದೆ ಪಡೆದಿರೋದು, ಹಣ ಹಂಚಿದಷ್ಟು ದಿನ ಈ ಹುದ್ದೆಯಲ್ಲಿರ್ತೀನಿ. ಹಣಕೊಟ್ಟರೆ ಕೆಲಸ ಆಗತ್ತೆ ಎನ್ನುವ ಅಧಿಕಾರಿ ಮಗ, ಹಣದ ಆಸೆಗೆ ಹೊಗೆ ಸೊಪ್ಪು ಬೆಳೆದು, ವೃದ್ದಪ್ಯಾದಲ್ಲಿ ಅದರ ಪಶ್ಚಾತಾಪದಲ್ಲಿ ನಿಡುಸುಯ್ಯುವ ತಂದೆ, ಕರೆಯದಿದ್ದರೂ ಮಕ್ಕಳ ಮನೆ ಸೇರಿ ಮೊಮ್ಮಕ್ಕಳೊಂದಿಗೆ ಇರುವಷ್ಟು ದಿನ ಬದುಕಬೇಕೆಂದು ಆಸೆ ಪಡುವ ತಾಯಿ. ಆ ಆಸೆಯ ಹಿಂದೆ ತನ್ನ ನಂತರ ಗಂಡನಿಗೆ ಮಕ್ಕಳು ಆಸರೆಯಾಗಲಿ ಎನ್ನುವ ಕಾಳಜಿ. ಹಣ ಮಾಡುವುದಕ್ಕೆ ಯಾವ ಹಾದಿಯನ್ನೂ ತುಳಿಯಬಹುದು ಎನ್ನುವ ತರ್ಕದ ಮತ್ತೊಬ್ಬ ಮಗ ಸೊಸೆ. ಸಾಫ್ಟ್ ವೇರ್ ಉದ್ಯಮದ ದಂಪತಿಗಳಲ್ಲಿ ಆಗುವ ವೈಮನಸ್ಯ, ಅಹಂಕಾರಕ್ಕೆ ಬಲಿಯಾಗುವ ಸಂಸಾರಗಳಿಗೆ ಉದಾಹರಣೆಯಾಗಿರುವ ಕಿರಿಮಗ. ಯೌವ್ವನದ ದುಡುಕಿಗೆ ಬಲಿಯಾಗಿ ಬದುಕು ದೂಡುವ ಒಬ್ಬಳೇ ಮಗಳು. ಇಷ್ಠರಲ್ಲಿಯೇ ಬದುಕಿನ ವಿವಿಧ ಮುಖಗಳ ಅನಾವರಣ ಮಾಡಿಸಿದ್ದಾರೆ ಸೇತುರಾಂ.
ಆದಾಯ ತೆರಿಗೆ ಅಧಿಕಾರಿಯಾಗಿದ್ದವರು ಸೇತುರಾಂ. ಇನ್ನೂ ನೆನಪಿದೆ ಅವರೊಮ್ಮೆ ನನ್ನೂರು ಮದ್ದೂರಿನ ಮಾರ್ವಾಡಿಯ ಮನೆಗೆ ಆದಾಯ ತೆರಿಗೆಯ ವಿಷಯವಾಗಿ ತನಿಖೆಗೆ ಬಂದಿದ್ದರು ಆಗ ಅವರು ಟಿ.ಎನ್ ಸೀತಾರಾಂ ರ ಮಾಯಾಮೃಗ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದರು. ಯಾವುದೋ ಒಂದೆರಡು ಧಾರಾವಾಹಿ, ಹವ್ಯಾಸಕ್ಕೆ ಅಮೆಚುರ್ ಥಿಯೇಟರ್ ನಲ್ಲಿ ನಟನೆ ಎಂದು ಇದ್ದ ಸೇತುರಾಂ 30 ವರ್ಷ ಸೇವೆ ಸಲ್ಲಿಸಿದ್ದ ಆದಾಯ ತೆರಿಗೆ ಇಲಾಖೆಗೆ ನಮಸ್ಕಾರ ಹೇಳಿ ಈ ಟಿವಿಯ ಧಾರಾವಾಹಿ ಕಾಂಟ್ರಾಕ್ಟ್ ಹಿಡಿದು ಹೊರಬಂದರು. 30 ವರ್ಷ ಆದಾಯ ತೆರಿಗೆ ಅಧಿಕಾರಿಯಾಗಿ ಎಲ್ಲರ ಕಥೆ ಕೇಳಿದೆ, ನಂತರ ಗೊತ್ತಾದ ಸತ್ಯ ಎಂದರೆ ಕಥೆ ಕೇಳಿದವರು ಅಲ್ಲೇ ಇರ್ತಾರೆ. ಕಥೆ ಹೇಳುವವರು ಬೆಳೆಯುತ್ತಿರುತ್ತಾರೆ. ಆದ್ದರಿಂದ ನಾನೂ ಕಥೆ ಹೇಳಲು ಧಾರಾವಾಹಿ ಮಾಧ್ಯಮವನ್ನ ಆಯ್ದುಕೊಂಡೆ ಎನ್ನುತ್ತಾರೆ. ಅವರ ಧಾರಾವಾಹಿಗಳಲ್ಲಿ ಬರುವ ಎಲ್ಲ ಪಾತ್ರಗಳೂ ಬದುಕಿನ ಅನುಭವದ ಮೂಸೆಯಲ್ಲಿ ಮೂಡಿದವೇ.
ಅನಾವರಣ ಧಾರಾವಾಹಿಯ ಒಂದು ಪಾತ್ರ ’ದುಡದದ್ದು ಹಂಚೋ ಮನಸ್ಸಿರತ್ತೆ, ಕೈ ಎತ್ತಿ ಕೊಡೊಕೆ ಆಗತ್ತೆ.ಕದ್ದದ್ದು ಆಗಲ್ಲ.ಪುಣ್ಯ ಹಂಚಿಕೋತಾರಂತೆ, ಪಾಪ ಗುಡ್ಡೆ ಹಾಕೋತಾರಂತೆ, ಹೊರಲಾರದ ಹೊರೆ ಅನಿಸಿದರೂ ಇಳಿಸೋಕೆ ಮನಸೇ ಬರಲ್ವಂತೆ.ಪುಣ್ಯದ್ದು ಮನುಷ್ಯರಿಗೆ ಕೊಡ್ತಾರಂತೆ, ಪಾಪದ್ದು ದೇವರಿಗೆ ಕೊಡ್ತಾರೆ ಎನ್ನುವಾಗ ಎಷ್ಟು ಸತ್ಯ ಅಲ್ವ ಅನ್ನಿಸುವುದು ದಿಟ. ಬಹುಶಃ ಸೇತುರಾಂರ ಬಹುದೊಡ್ಡ ಶಕ್ತಿ ಎಂದರೆ ಅವರ ಸಂಭಾಷಣೆ. ಪಟ್ಟ ಸುಖ ಸ್ವಂತ, ಹೆತ್ತ ಮಕ್ಕಳಲ್ಲ. ತಿಂದ ಫಲ ಸ್ವಂತ ಅದರ ಸಾರ ಸವಿ ಸ್ವಂತ, ನೆಟ್ಟ ಗಿಡ ಅಲ್ಲ. ಸಾವು ಅಂದರೆ ಉಸಿರು ನಿಲ್ಲೋದಲ್ಲ, ಸ್ವಾತಂತ್ರ್ಯ ಹರಣ ಎಂದು ಹೆಗಲ ಮೇಲಿನ ಶಲ್ಯ ಕೊಡವಿ ಎದ್ದು ಹೋಗುವ ರಾಮಕೃಷ್ಣಯ್ಯ, ವಯಸ್ಸಲ್ಲಿ ಗಂಡು ಸೋಲಬಾರದಂತೆ, ವಯಸ್ಸಾದ ಮೇಲೆ ಹೆಣ್ಣು ಸೋಲಬಾರದಂತೆ ಪ್ರಪಂಚ ಅವಮಾನಿಸಿದರೆ ಹಠ ಹುಟ್ಟುತ್ತೆ, ಶಕ್ತಿ ಇರತ್ತೆ, ಗಂಡ ಅವಮಾನಿಸಿದರೆ ಖಿನ್ನತೆ ಕಾಡತ್ತೆ, ಆಯಸ್ಸು ಕ್ಷೀಣಿಸತ್ತೆ ಎಂದು ಕಣ್ಣುತುಂಬಿಕೊಳ್ಳುವ ಶಾರದಮ್ಮ, ಪುಣ್ಯವಂತರಿಗೆ ಪಾಪ ಪ್ರಜ್ನೆ. ಪಾಪಿಗಳಿಗೆ ಪ್ರಜ್ನೆನೇ ಇರೋಲ್ಲ, ಪಾಪ ಪ್ರಜ್ನೆ ಎಲ್ಲಿರುತ್ತೇ ಎನ್ನುವ ಭ್ರಷ್ಠ ಅಧಿಕಾರಿ ಶ್ರೀನಿವಾಸ. ಟೀಚರ್ಸ್ ಗೆ ಕೊಡಬೇಕಿರೋದ್ರಲ್ಲಿ ಉಳಿಸಿ ಅರ್ಚಕರಿಗೆ ಕೊಡ್ತಿರಿ, ವಿದ್ಯಾಲಯ ದೇವಾಲಯ ಆಗಬೇಕಂತೆ, ಆದರೆ ನೀವು ದೇವಾಲಯಾನೇ ವಿದ್ಯಾಲಯ ಮಾಡಿಬಿಟ್ರಿ ಎನ್ನುವ ಮೊಮ್ಮಗಳು ಮನಸ್ಸಿನಲ್ಲಿ ಉಳಿಯುವುದೇ ಸೇತುರಾಂ ಆ ಪಾತ್ರದ ಮೂಲಕ ಕೊಟ್ಟ ಮನಮುಟ್ಟುವ ಚುರುಕು ಸಂಭಾಷಣೆಯಿಂದಾಗಿ.
ಈ ಧಾರಾವಾಹಿ ಕೇವಲ ಕರ್ನಾಟಕದಲ್ಲಿ ಟಿ.ವಿ ಮುಂದೆ ಕುಳಿತ ವೀಕ್ಷಕರ ಮನಗೆದ್ದಿದ್ದು ಮಾತ್ರವಲ್ಲ. ವಿದೇಶದಲ್ಲಿರುವ ಕನ್ನಡಿಗರೂ ಇದಕ್ಕೆ ಮನಸೋತಿದ್ದಿದೆ. ಗಂಡ ಹೆಂಡತಿ ಬೆಳಗಿನಿಂದ ಸಂಜೆಯವರೆಗೆ ದುಡಿದು, ಸಂಜೆ ಒಟ್ಟಿಗೇ ಕಂಪ್ಯೂಟರ್ ಮುಂದೆ ಆಸೀನರಾಗುತ್ತಿದ್ದರು ಎಂದರೆ ಅದು ಅನಾವರಣದ ವೀಕ್ಷಣೆಗೆ.ಇನ್ನು ಫೇಸ್ ಬುಕ್ ನಂತಹ ಸಾಮಾಜಿಕ ತಾಣದಲ್ಲಿ ಕೂಡ ಧಾರಾವಾಹಿ ನೋಡುಗರ ಗುಂಪು ಪ್ರಾರಂಭವಾಯಿತು. ಪ್ರತಿ ಎಪಿಸೋಡುಗಳ ಬಗ್ಗೆ ಚರ್ಚೆ ನಡೆದವು. ಧಾರಾವಾಹಿ ಮುಗಿಯುವ ಹೊತ್ತಿಗೆ ಫೇಸ್ ಬುಕ್ ಗೆಳೆಯರು ಸೇತುರಾಂರೊಂದಿಗೆ ಭಾವದರ್ಪಣ ಎಂಬ ಕಾರ್ಯಕ್ರಮ ಇಟ್ಟುಕೊಂಡರು. ಆಗಲೇ 50 ಎಪಿಸೋಡು ದಾಟಿದ್ದ ಧಾರಾವಾಹಿಯ ಒಂದು ಎಪಿಸೋಡು ನೋಡಿದ ಗೆಳತಿಯೊಬ್ಬಳು ಗಬಗಬನೆ ಮೊದಲಿನಿಂದ ಎಲ್ಲಾ ಎಪಿಸೋಡುಗಳನ್ನು ವಾರದಲ್ಲೇ ನೋಡಿ ಮುಗಿಸಿದ್ದಳು. ಮುಖ್ಯವಾಗಿ ಅನಾವರಣ, ಕನ್ನಡ ಧಾರಾವಾಹಿಗಳೆಂದರೆ ಮೂಗು ಮುರಿಯುತ್ತಿದ್ದವರನ್ನ ತನ್ನತ್ತ ಸೆಳೆಯಿತು. ಹಾಗೇ ನೋಡಿದರೆ 139 ಎಪಿಸೋಡುಗಳ ಅನಾವರಣ ಕೇವಲ ಧಾರಾವಾಹಿಯಾಗಿ ಉಳಿಯದೆ ಒಂದು ಶ್ರೇಷ್ಠ ಕೃತಿಯಂತೆ ಕಂಡದ್ದು ಅದರ ಸಾರ್ಥಕತೆ. ಕೊನೆಯ ಎಪಿಸೋಡಿನ ಕೊನೆಯ ಸಂಭಾಷಣೆ ಹೀಗೆ ಬರುತ್ತದೆ ’ಚೈತನ್ಯವಿರೋ ಚಿತ್ತ ಇನ್ನೂ ಬದುಕಿದೆ, ಪ್ರಪಂಚ ನೋಡಿ ಮೂಗಿನ ಮೇಲೆ ಬೆರಳಿಡೋ ಚಿತ್ತಾರವಾಗಲಿ, ನೀವು ಎಷ್ಟೇ ಅಡಚಣೆ ಒಡ್ಡಿದರೂ ನಾನು ಬದುಕೇ ತೀರ್ತೀನಿ” ಬಹುಶಃ ಇದು ಸೇತುರಾಂರ ಮನಸ್ಸಿನ ಮಾತ? ಸೇತುರಾಂ ತಮ್ಮ ಅನುಭವದ ಮೂಸೆಯಿಂದ ಮತ್ತೊಂದಿಷ್ಟನ್ನು ಮೊಗೆದು ನಮ್ಮ ಮನೆಯಂಗಳಕ್ಕೆ ಬೇಗ ಬರಲಿ.
ಮದಿರೆಯ ಮತ್ತಿನಲಿ ಕಳೆದುಹೋಗದಿರಲಿ ಹೊಸವರ್ಷದ ಉತ್ಸಾಹ
ಡಿಸೆಂಬರ್ ೩೧ರ ಕತ್ತಲ ರಾತ್ರಿಯಲ್ಲಿ ಅರೆ ಬೆತ್ತಲಾಗುವವರು, ಮದಿರೆಯ ಮಬ್ಬಿನಲಿ ಅನಾಹುತ ಮಾಡಿಕೊಳ್ಳುವವರು, ’ಪರಮಾತ್ಮ ಆಡಿಸಿದಂತೆ ಆಡುವೆನಾನು’ ಎಂದು ಬೀದಿಗಿಳಿದು ದಾಂದಲೆ ಮಾಡುವವರು, ಹಾಗೆ ಕುಡಿದು, ಕುಣಿದು ಕುಪ್ಪಳಿಸುವುದನ್ನೇ ಹೊಸವರ್ಷದ ಬರಮಾಡಿಕೊಳ್ಳುವಿಕೆಯೆಂದು ಸಂಭ್ರಮಿಸುವವರು ಅನೇಕರಿದ್ದಾರೆ. ’ಕುರುಡು ಕಾಂಚಾಣ ಕುಣಿಯುವ’ ಸಾಫ್ಟ್ ವೇರಿಗರಿಗಂತೂ ಈ ವಿಷಯದಲ್ಲಿ ಎಲ್ಲಿಲ್ಲದ ಉತ್ಸಾಹ. ಡಿಸೆಂಬರ್ ಪ್ರಾರಂಭವಾಗುತ್ತಿದ್ದಂತೆಯೇ ನಾನಾ ರೆಸಾರ್ಟುಗಳ, ಸ್ಟಾರ್ ಹೋಟೆಲುಗಳ ಇ-ಮೇಲ್ ಗಳು ಐಟಿಗರ ಇನ್ ಬಾಕ್ಸ್ ತುಂಬಿ ಕುಳಿತು ಬಿಡುತ್ತವೆ. ಕೇವಲ ೧೦೦೦ ರೂ ಒಬ್ಬರಿಗೆ ಪಾವತಿಸಿ ಕಾಕ್ ಟೈಲ್ ಪಾರ್ಟಿಯಲ್ಲಿ ಪಾಲ್ಗೊಳ್ಳಿ’ ಎಂಬ ಇ-ಮೇಲು ಗಳಿಗೇನು ಕಮ್ಮಿ ಇಲ್ಲ.
ಐಟಿ ವಲಯದಲ್ಲಿರುವ ಎಲ್ಲರೂ ಹೊಸವರ್ಷಾಚರಣೆಗೆ ಮೋಜಿಗೆ,ಜೂಜಿಗೆ ಸಿದ್ದವಾಗುತ್ತಾರೆ ಎಂದಲ್ಲ. ಆದರೆ ಹೀಗೆ ಮೋಜು ಮಾಡದೆ ಹೊಸವರ್ಷಾಚರಣೆ ಮಾಡಲು ಸಾಧ್ಯವೇ ಇಲ್ಲ ಎನ್ನುವ ದೊಡ್ಡಗುಂಪೇ ಐಟಿ ವಲಯದಲ್ಲಿದೆ. ಒಂದು ವೇಳೆ ಇದಕ್ಕೆಲ್ಲಾ ಒಪ್ಪದ, ತನಗೆ ಈ ಪಾರ್ಟಿ, ಡಿಸ್ಕೋ, ಮದಿರೆ ಇಷ್ಠವಿಲ್ಲವೆನ್ನುವವನು ಈ ಮಂದಿಯ ಮಟ್ಟಿಗೆ ’ದೊಡ್ಡ ಗುಗ್ಗು’ ಆಗಿಬಿಡುತ್ತಾನೆ, ಬಿಡಿ, ಈಗ ಐಟಿಗರಲ್ಲದ ಅನೇಕರ ಪಾಲಿಗೂ ಇದೇ ವರ್ಷಾಚರಣೆಯ ರೀತಿ. ಆದರೆ ಇನ್ನೂ ಹೇಗೆಲ್ಲಾ ಹೊಸವರ್ಷವನ್ನು ಬರಮಾಡಿಕೊಳ್ಳಬಹುದು ಎಂದು ನಾವೇಕೆ ಯೋಚಿಸುವುದಿಲ್ಲ? ಕ್ಲಬ್ಬಿನಲ್ಲಿ, ಪಬ್ಬಿನಲ್ಲಿ, ಮದಿರೆಯ ಮತ್ತಿನಲ್ಲಿ ಕಳೆದು ಹೋಗಿ ಹೊಸವರ್ಷದ ಸೂರ್ಯೋದಯವನ್ನೇ ತಪ್ಪಿಸಿಕೊಳ್ಳುವುದು ಸಂಭ್ರಮವೇಗಾಗುತ್ತದೆ? ಭಾರತೀಯರಿಗೆ ಸೂರ್ಯೋದಯ ಮಹತ್ವದ್ದು. ನಾವು ಆಚರಿಸುವ ಯಾವುದೇ ಹಬ್ಬ, ಹರಿದಿನಗಳನ್ನು ತೆಗೆದುಕೊಳ್ಳಿ ಅದರಲ್ಲಿ ಆಧ್ಯಾತ್ಮದ ಸ್ಪರ್ಶ, ವಿವೇಕದ ಸಿಂಚನ, ಸಂಸ್ಕೃತಿಯ ಸೊಗಡು ಎದ್ದು ಕಾಣುತ್ತದೆ. ಬೆಳಗ್ಗೆ ಸೂರ್ಯೋದಯದ ಹೊತ್ತಿಗೇ ಎದ್ದು ಮನೆಯ ಮುಂದೆ ರಂಗೋಲಿ ಇಡುವುದರಿಂದ ಹಿಡಿದು, ತಳಿರುತೋರಣ ಕಟ್ಟುವುದು, ಸ್ನಾನ ಇತ್ಯಾದಿಗಳನ್ನು ಮಾಡಿ ಶುಚಿಯಾಗುವುದು, ದೇವರ ಪೂಜೆ, ಸಿಹಿ ಹಂಚಿಕೆ, ಬಂಧುಬಳಗದವರೊಂದಿಗೆ, ಸ್ನೇಹಿತರೊಂದಿಗೆ ಮಾತು, ಒಳ್ಳೆಯ ಆಹಾರ ಸೇವನೆ ಇತ್ಯಾದಿ ಅದರ ಭಾಗವಾಗಿರುತ್ತದೆ. ಹಾಗಾದರೆ ಹೊಸವರುಷವನ್ನೂ ಹೀಗೆ ಅರ್ಥಪೂರ್ಣವಾಗಿ ಹಬ್ಬದ ರೀತಿ ಬರಮಾಡಿಕೊಳ್ಳಬಹುದಲ್ಲವೆ?
ಕೊಂಚ ಸೃಜನಾತ್ಮಕವಾಗಿ ಯೋಚಿಸಿದರೆ ಹೇಗೆಲ್ಲಾ ನೂತನ ವರ್ಷದ ಮೊದಲ ದಿನವನ್ನು ಕಳೆಯಬಹುದು ಎಂಬುದು ನಮಗೇ ಗೊತ್ತಾಗುತ್ತದೆ. ಮೊದಲ ದಿನದ ಕೆಲವು ಘಂಟೆಗಳನ್ನು ಸಿಂಹಾವಲೋಕನಕ್ಕೆ ಉಪಯೋಗಿಸಿ ೨೦೧೧ ರಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಯಿತು, ಸಿಕ್ಕಿದ ಯಶಸ್ಸು ಎಷ್ಟು, ಸೋಲಿಗೆ ಕಾರಣಗಳಾವುವು. ಸಮಯದ ಅಭಾವದಿಂದ ಮಾಡಲಾಗದ ಕೆಲಸಗಳ ಪಟ್ಟಿ ಏನು? ಯಾವೆಲ್ಲಾ ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು, ಎಷ್ಟು ಉತ್ತಮ ಪುಸ್ತಕಗಳನ್ನು ಓದಿದೆ. ಗಮನ ಸೆಳೆದ ಸೂಕ್ತಿ, ಯಶಸ್ಸಿನ ಸೂತ್ರಗಳನ್ನು ಬರೆದಿಟ್ಟುಕೊಂಡೆನಾ, ಎಷ್ಟು ಜನ ಹೊಸಗೆಳೆಯರಾದರು, ಹಳೆ ಗೆಳೆಯರಲ್ಲಿ ಎಷ್ಟು ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಾಯಿತು. ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಯಿತೆ, ಹಣಕಾಸಿನ ವಿಷಯದಲ್ಲಿ ಶಿಸ್ತು ಬದ್ದವಾಗಿ ನಡೆದುಕೊಂಡೆನಾ?, ವೃತ್ತಿಯಲ್ಲಿ ಅಂದುಕೊಡಷ್ಟು ಯಶಸ್ಸು ಸಾಧ್ಯವಾಗದಿದ್ದದ್ದು ಏಕೆ? ಹೀಗೆ ವರ್ಷವಿಡೀ ನಮ್ಮ ಬೆಳವಣಿಗೆಗೆ ಪೂರಕವಾದ, ಮಾರಕವಾದ ವಿಷಯಗಳ ಬಗ್ಗೆ ಗಮನ ಹರಿಸಬಹುದು.
ಹೀಗೆ ಕಳೆದ ವರ್ಷದ ಸಿಂಹಾವಲೋಕನ ಮಾಡುವಾಗ, ಈ ವರ್ಷದಲ್ಲಿ ತಲುಪಬೇಕಾದ ಗುರಿ ಸ್ಪಷ್ಠವಾಗುತ್ತಾ ಹೋಗುತ್ತದೆ. ಹಿಂದೆ ಎಡವಿದ ಕಲ್ಲನ್ನು ಪಕ್ಕಕ್ಕಿಟ್ಟು ಬದುಕಿನ ದಾರಿಯಲ್ಲಿ ಸ್ಪಷ್ಠ ಹೆಚ್ಚೆ ಗುರುತು ಮೂಡಿಸಲು ನೆರವಾಗುತ್ತದೆ. ಕಾರ್ಪೊರೇಟ್ ವಲಯದಲ್ಲಿ ’ಗೋಲ್ ಸೆಟ್ಟಿಂಗ್’ ಎಂಬ ಪ್ರಕ್ರಿಯೆ ನಡೆಯುತ್ತದೆ. ಅದು ಸಾಮನ್ಯ ನೌಕರನಿಂದ ಹಿಡಿದು, ಕಂಪನಿಗಳ ಮುಖ್ಯಸ್ಥರವರೆಗೆ ಕಡ್ಡಾಯ. ಆರ್ಥಿಕ ವರ್ಷಾರಂಭದಲ್ಲಿ ಎಲ್ಲರೂ ಪ್ರಸಕ್ತ ವರ್ಷದ ತಮ್ಮ ಗುರಿಗಳನ್ನು ದಾಖಲಿಸಬೇಕಾಗುತ್ತದೆ. ಯಾರೊಬ್ಬರೂ ಸಬೂಬು ಹೇಳುವಂತಿಲ್ಲ. ಸಾಮಾನ್ಯ ನೌಕರನಾದರೆ ತನ್ನ ದಿನನಿತ್ಯದ ಕೆಲಸದಲ್ಲಿ ಸಾಧಿಸಬಹುದಾದ ಪ್ರಗತಿಯನ್ನ, ಉನ್ನತ ಅಧಿಕಾರದಲ್ಲಿರುವವರಾದರೆ ವ್ಯವಹಾರವನ್ನು ಎಷ್ಟು, ಹೇಗೆ, ಯಾವ ಸಮಯದಲ್ಲಿ ವಿಸ್ತರಿಸಬೇಕು, ತಮ್ಮ ಒಟ್ಟು ಗಳಿಕೆಯನ್ನು ಹೆಚ್ಚು ಮಾಡಿಕೊಳ್ಳುವ ಬಗೆ ಹೇಗೆ ಎಂಬುದನ್ನು ಬರೆದಿಟ್ಟುಕೊಳ್ಳುತ್ತಾರೆ. ಹೀಗೆ ಬರೆದಿಟ್ಟುಕೊಂಡದ್ದನ್ನು ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಪರಿಶೀಲಿಸಿ ನಾವು ಹಾಕಿಕೊಂಡ ಗುರಿ ತಲುಪುವತ್ತ ಹೆಜ್ಜೆ ಇಟ್ಟಿದ್ದೇವಾ? ತಡವಾಗಿದ್ದರೆ ಯಾಕಾಯಿತು, ಮುಂದೆ ನಿಗದಿತ ಸಮಯದಲ್ಲಿ ಹೇಗೆ ಕೆಲಸವನ್ನು ತ್ವರಿತಗೊಳಿಸಿ ಆ ಗುರಿಯನ್ನು ತಲುಪಬಹುದು ಎಂಬುದನ್ನು ಯೋಚಿಸಲೆಂದೇ ಒಂದಿಷ್ಟು ಸಮಯವನ್ನು ವ್ಯಯಿಸುತ್ತಾರೆ. ಇದು ಕಾರ್ಪೋರೇಟ್ ವಲಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಹೀಗೆಯೇ ನಮ್ಮ ಬದುಕಿನ ಗುರಿಗಳನ್ನೂ ಕೂಡ ಕಟ್ಟಿಕೊಳ್ಳುವುದು, ಇಟ್ಟ ಹೆಜ್ಜೆಗಳನ್ನು ಪರಿಶೀಲಿಸುವುದು ಕೂಡ ಅತ್ಯವಶ್ಯಕ. ಈ ಕೆಲಸಕ್ಕೆ ಹೊಸವರ್ಷ ಒಂದು ನೆಪವಾದರೆ ಎಷ್ಟು ಚೆಂದ ಅಲ್ಲವೇ? ಇದು ತೀರಾ ಸುಲಭ, ನೀವು ಈ ವರ್ಷ ಮಾಡಬೇಕಾದ ಕೆಲಸ ಕಾರ್ಯಗಳನ್ನು ಒಂದೆಡೆ ಬರೆಯುತ್ತಾ ಹೋಗಿ, ವಿಧ್ಯಾರ್ಥಿಗಳಾದರೆ ಹೇಗೆ ಓದಿನ ವಿಸ್ತಾರವನ್ನು ಹೆಚ್ಚಿಸಿಕೊಂಡು, ಹೇಗೆ ಉತ್ತಮ ಫಲಿತಾಂಶಗಳಿಸಬಹುದೂ ಎಂದೂ, ನೌಕರರಾಗಿದ್ದರೆ ಹೇಗೆ ಕೆಲಸದಲ್ಲಿ ನೈಪುಣ್ಯ ಸಾಧಿಸಿ ಮೇಲಧಿಕಾರಿಯಿಂದ ಪ್ರಶಂಸೆಗಳಿಸಬಹುದು, ಗಳಿಕೆಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂದೂ, ವ್ಯಾಪಾರಸ್ತರಾದರೆ ಹೇಗೆ ವ್ಯಾಪಾರದ ಪರಿಧಿಯನ್ನು ವಿಸ್ತರಿಸಬಹುದು ಎಂದೂ ಚಿಂತಿಸಿ ಬರೆದಿಟ್ಟುಕೊಳ್ಳಿ. ಇನ್ನುಳಿದಂತೆ ಎಲ್ಲರಿಗೂ ಇರಬಹುದಾದ ಸಾಮಾನ್ಯ ಕನಸುಗಳ ಬಗ್ಗೆ ಕೂಡ ಆಲೋಚಿಸಿ, ಸ್ವಂತಕ್ಕೊಂದು ಮನೆ, ಕಾರು, ಒಳ್ಳೆಯ ನೌಕರಿ, ಆರ್ಥಿಕ ಭದ್ರತೆ ಇತ್ಯಾದಿ ಇತ್ಯಾದಿ ಪಡೆದುಕೊಳ್ಳಲು ೨೦೧೨ ರಲ್ಲಿ ಏನೆಲ್ಲಾ ಮಾಡಬೇಕೆಂಬ ರೂಟ್ ಮ್ಯಾಪ್ ಸಿದ್ದಮಾಡಿಕೊಳ್ಳಿ. ಪ್ರತಿ ಕೆಲಸಕ್ಕೆ ನಿಗದಿತ ಸಮಯವನ್ನು ನಮೂದಿಸಿಕೊಳ್ಳಿ. ದಾಖಲಿಸಿದ ಗುರಿಗಳ ಪರಿಶೀಲನೆಗೆ ೩-೪ ತಿಂಗಳಿಗೊಮ್ಮೆ ಸಮಯ ತೆಗೆದಿಟ್ಟುಕೊಳ್ಳಿ.
ಇವಿಷ್ಟು ನಿಮ್ಮ ವ್ಯವಹಾರ, ಆರ್ಥಿಕ ಪರಿಸ್ಥಿತಿಯ ಸುಧಾರಣಾ ಕ್ರಮದ ಬಗ್ಗೆ ಆಯಿತು. ಆದರೆ ಬದುಕೆಂದರೆ ಕೇವಲ ವ್ಯವಹಾರ, ವೃತ್ತಿ, ಹಣಗಳಿಕೆ ಮಾತ್ರವಲ್ಲವಲ್ಲ. ಒಂದಷ್ಟು ಸಮಾಜ ಸೇವೆ, ಆಧ್ಯಾತ್ಮದೆಡೆಗಿನ ಆಸಕ್ತಿ, ಬದುಕಿಗೊಂದು ಮೌಲ್ಯ ಎಲ್ಲವೂ ಒಳಗೊಂಡಿರಬೇಕು. ಆದ್ದರಿಂದ ಈ ನಿಟ್ಟಿನಲ್ಲೂ ಆಲೋಚನೆಗಳು ಸಾಗಲಿ, ಒಳ್ಳೆಯ ಪುಸ್ತಕ ಓದುವುದಕ್ಕೆ, ಸದ್ಗುಣ ಸಂಪನ್ನರನ್ನ ಭೇಟಿಯಾಗುವುದಕ್ಕೆ, ಹೊಸ ಹೊಸ ವಿಷಯ ತಿಳಿಯುವುದಕ್ಕೆ, ಕಲಿಯುವುದಕ್ಕೆ ಕೂಡ ಸಮಯ ಎತ್ತಿಡಿ. ನಿಮ್ಮ ಗಳಿಕೆಯಲ್ಲಿ ಕನಿಷ್ಠ ೫ ರಷ್ಠನ್ನಾದರೂ ಯಾರೋ ನಿರ್ಗತಿಕರಿಗೆ, ಹಣದ ತೊಂದರೆಯಿರುವ ವಿಧ್ಯಾರ್ಥಿಗಳ ಓದಿಗೆ ತೆಗೆದಿಡುವ ಸಂಕಲ್ಪ ಮಾಡಿ. ತೀರಾ ದಿನನಿತ್ಯದ ಸಣ್ಣ ಸಣ್ಣ ಸಂಗತಿಗಳೂ ನಿಮ್ಮ ಹೊಸವರ್ಷದ ನಿರ್ಣಯಗಳಲ್ಲಿ ಸೇರಿರಲಿ, ಬಿಡುವಿದ್ದಾಗ ಹೆಂಡತಿಗೆ ಅಡಿಗೆ ಕೆಲಸದಲ್ಲಿ ನೆರವಾಗುವುದು, ಅಪ್ಪ ಅಮ್ಮನೊಡನೆ ಸಮಯ ಕಳೆಯುವುದು, ಮಕ್ಕಳನ್ನು ಕೂರಿಸಿಕೊಂಡು ಕಥೆ ಹೇಳುವುದು, ಮನೆಯವರೆಲ್ಲಾ ಜೊತೆಯಾಗಿ ಹಳೆಯ ಪೋಟೋ ಆಲ್ಬಮ್ ತಿರುವಿಹಾಕುವುದು ಕೂಡ ನಿಮ್ಮ ಸಂತೋಷ ಹೆಚ್ಚಿಸುತ್ತಾದ್ದರಿಂದ ಅವೂ ನಿರ್ಣಯದ ಪರಿದಿಗೆ ಸೇರಲಿ.
ಒಟ್ತಿನಲ್ಲಿ ಹೊಸವರ್ಷಾಚರಣೆಯನ್ನು ಯಾವುದೋ ಬಾರಿನಲ್ಲೋ, ರೆಸಾರ್ಟಿನಲ್ಲೋ, ಕಂಠ ಪೂರ್ತಿ ಕುಡಿದು, ಮದಿರೆಯ ನಶೆಯಲ್ಲಿ ಸಭ್ಯತನವನ್ನು ಬದಿಗಿಟ್ಟು, ರಂಪ ರಾದ್ದಾಂತಗಳಿಗೆ ಎಡೆ ಮಾಡಿಕೊಟ್ಟು ಕಳೆಯುವುದಕ್ಕಿಂತ, ಹೊಸವರ್ಷದ ಸಂದರ್ಭವನ್ನು ಬದುಕಿಗೊಂದು ಕನಸು ಕಟ್ಟಲು, ಆ ಕನಸನ್ನು ನನಸಾಗಿಸಿಕೊಳ್ಳುವ ಮಾರ್ಗ ಹುಡುಕಲು, ವ್ಯಕ್ತಿತ್ವಕ್ಕೆ ಮತ್ತೊಂದಿಷ್ಟು ಮೌಲ್ಯ ತುಂಬಿಕೊಳ್ಳಲು ಬಳಸಿಕೊಳ್ಳಿ. ನವವರುಷಕ್ಕೆ ನಿರ್ಣಯಗಳನ್ನು ಮಾಡುವುದೇನೋ ಸುಲಭ, ಆದರೆ ಅದರ ಪಾಲನೆ ಮಾಡಬೇಕಾದವರು ನೀವೇ ಎಂಬುದು ಗಮನದಲ್ಲಿರಲಿ. ಹಾಗೊಮ್ಮೆ ಪಟ್ಟಿ ಮಾಡಿಟ್ಟುಕೊಂಡ ನಿರ್ಣಯಗಳನ್ನು ನೀವು ಪಾಲಿಸಿದ್ದೇ ಆದರೆ ೨೦೧೨ ರಲ್ಲಿ ನಿಮ್ಮ ಬದುಕು ಹೊಸದಿಕ್ಕಿಗೆ ಮಗ್ಗಲು ಬದಲಿಸುತ್ತದೆ. ೨೦೧೨ ನಿಮಗೆ ಅಂಥಹ ಸಾರ್ಥಕ ವರ್ಷವಾಗಲಿ. ಇತಿಹಾಸದ ಪುಟ ಸೇರುತ್ತಿರುವ ೨೦೧೧, ನಿಮ್ಮ ಬದುಕಿನ ಖುಷಿಯನ್ನು ಹೇಗೆ ಹೆಚ್ಚುಮಾಡಿತು ಎಂದು ನೆನಪಿಸಿಕೊಂಡು ಅದಕ್ಕೊಂದು ಥ್ಯಾಕ್ಸ್ ಹೇಳಿ, ೨೦೧೨ ರನ್ನು ಸ್ವಾಗತಿಸಿ, ನಿಮ್ಮೆಲ್ಲರಿಗೂ ಹೊಸವರ್ಷದ ಶುಭಾಷಯಗಳು.
ಆತ ತನ್ನ ಜನಕ್ಕೆ ವಿದ್ಯುತ್ ನೊಂದಿಗೆ ಭರವಸೆಯನ್ನೂ ನೀಡಿದವನು..
ನಮ್ಮಲ್ಲಿ ಹೆಚ್ಚಿನವರು ಇರುವುದೇ ಹಾಗೇ. ನೂರು ಜನರಲ್ಲಿ ೯೫ ಜನ ಮಾತೆತ್ತಿದರೆ ವ್ಯವಸ್ಥೆಯನ್ನು ಬಯ್ಯುತ್ತಾ ನಿಲ್ಲುತ್ತೇವೆ. ನಮ್ಮ ಮನೆಯ ಆಯಕಟ್ಟಿನ ಹೊರಗೆ ಏನೇ ಸಮಸ್ಯೆಗಳಿದ್ದರೂ ಅದು ನಮಗೆ ಸಂಭಂದಿಸಿದ್ದಲ್ಲ ಎಂಬಂತಿರುತ್ತದೆ ನಮ್ಮ ವರ್ತನೆ. ಇನ್ಯಾರೋ ಆ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂಬುದೇ ಮಾತಿನ ದಾಟಿಯಾಗಿರುತ್ತದೆ. ರಸ್ತೆ, ನೀರು, ಶುಚಿತ್ವ, ವಿದ್ಯುತ್ ಯಾವುದರ ಸಮಸ್ಯೆ ಬಂದರೂ ಸರ್ಕಾರವನ್ನು ಶಪಿಸುತ್ತಲೇ ಮಾತು ಮುಗಿಸುತ್ತೇವೆ. ನಮ್ಮ ಪರಿದಿಯಲ್ಲಿ ನಾವು ಮಾಡಬಹುದಾದದ್ದೇನು ಎಂಬುದನ್ನೂ ಯೋಚಿಸಲು ಹೋಗುವುದಿಲ್ಲ. ಈಗ ನಮ್ಮ ಕರ್ನಾಟಕವನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಲ್ಲಿ ವಿದ್ಯುತ್ ಅಭಾವ ಕೂಡ ಒಂದು. ಕಲ್ಲಿದ್ದಲು ಶೇಖರಣೆ ಇಲ್ಲ, ಜಲವಿದ್ಯುತ್ ಉತ್ಪಾದನೆ ಬೇಡಿಕೆಯನ್ನು ಪೂರೈಸುತ್ತಿಲ್ಲ, ವಿದ್ಯುತ್ ಉತ್ಪಾದಿಸಲು ಪರ್ಯಾಯ ಮಾರ್ಗಗಳಿದ್ದರೂ ಅದರ ಉತ್ಪಾದನಾ ಘಟಕಗಳು ಲಭ್ಯವಿಲ್ಲ ಹೀಗೆ ಇಲ್ಲ ಇಲ್ಲ ಇಲ್ಲ ಎಂಬಲ್ಲಿಗೇ ನಮ್ಮ ಮಾತು ನಿಲ್ಲುತ್ತದೆ. ಕನಿಷ್ಠ ರಾಜ್ಯ ಇಂತಹ ಸಮಸ್ಯೆ ಎದುರಿಸುತ್ತಿರುವಾಗ ವಿದ್ಯುತ್ ಉತ್ಪಾದನೆಯ ಬಗ್ಗೆ ಚಿಂತಿಸುವುದಿರಲಿ ನಮ್ಮ ಮನೆಯಲ್ಲಿ, ಕಛೇರಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವಿದ್ಯುತ್ ಪೋಲಾಗುವುದನ್ನು ತಡೆಯಬಹುದು ಎಂಬುದನ್ನೂ ನಾವು ಯೋಚಿಸುವುದಿಲ್ಲ. ನಾನೊಬ್ಬ ಉಳಿಸಿದರೆ ಎಷ್ಟು ಮಹಾ ಉಳಿದೀತು ಎಂಬ ಉದಾಸೀನ ದೋರಣೆಯೇ ನಮ್ಮದು.
ಹೀಗೆ ನಾವು ವ್ಯವಸ್ಥೆಯನ್ನು ಶಪಿಸುತ್ತಾ, ಉದಾಸೀನ ತೋರುತ್ತಾ ಕುಳಿತಿರುವಾಗಲೇ ಶೇಕಡ ೫ ರಷ್ಟಾದರೂ ಜನ, ಸಮಸ್ಯೆಯ ಪರಿಹಾರಕ್ಕೆ ಪರಿತಪಿಸುತ್ತಾರೆ, ತಮ್ಮ ಕೈಲಾದ ಮಟ್ಟಿಗೆ ಸಮಸ್ಯೆಯ ನಿವಾರಣೆಗೆ ಪ್ರಯತ್ನಿಸುತ್ತಿರುತ್ತಾರೆ. ಹೀಗೆ ಹೇಳುವಾಗ ನೆನಪಾಗುವವನು ವಿಲಿಯಂ ಕ್ವಾಂಬಾ. ಈತನದು ಆಫ್ರೀಕಾದ ಮಲಾವಿ ಎಂಬ ಕಡುಬಡರಾಷ್ಟ್ರ. ಭಾರತವೆಂದರೆ ಇನ್ನೂ ಮುಂದುವರಿಯುತ್ತಿರುವ ರಾಷ್ಟ್ರ, ಬಡತನ, ಕೊಳಗೇರಿಗಳು, ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಅನೇಕರನ್ನು ಒಳಗೊಂಡ ನಾಡು ಎಂದು ನಾವು ಶಪಿಸುತ್ತೇವೆ. ಆದರೆ ಪ್ರಪಂಚದ ಎಷ್ಠೋ ರಾಷ್ಟ್ರಗಳಲ್ಲಿ ನಮಗಿರುವಷ್ಟೂ ಸೌಲಭ್ಯಗಳಿಲ್ಲ. ಮಲಾವಿ ಕೂಡ ಅಂತಹದೇ ದೇಶ. ಹೆಚ್ಚಿನವರು ವ್ಯವಸಾಯ ಮಾಡುತ್ತಾರಾದರೂ ಅನೇಕ ಊರುಗಳಲ್ಲಿ ಇಂದಿಗೂ ವಿದ್ಯುತ್ ಸೌಲಭ್ಯವಿಲ್ಲ. ಇನ್ನು ಕೆಲವು ನಗರಗಳಲ್ಲಿ ಕೆಲವು ಗಂಟೆಗಳ ವಿದ್ಯುತ್ ಸೌಲಭ್ಯ ಮಾತ್ರ. ವಿಲಿಯಂ ತನ್ನ ಬಡರಾಷ್ಟ್ರದ ಕಥೆ ವಿವರಿಸುತ್ತಿದ್ದರೆ ಕರುಳು ಹಿಂಡಿದ ಅನುಭವವಾಗುತ್ತದೆ. ಅಲ್ಲಿನ ಜನರದ್ದೇನಿದ್ದರೂ ಸೂರ್ಯ ಇರುವಷ್ಟು ಹೊತ್ತು ಮಾತ್ರ ಕೆಲಸ, ತಿರುಗಾಟ. ಮಕ್ಕಳಿಗೆ ಶಾಲೆಗಳು ದುರ್ಲಭ. ಎಲ್ಲೋ ಒಂದೆರಡು ಶಾಲೆಗಳಿದ್ದರೂ ಅಲ್ಲಿ ಸೌಲಭ್ಯಗಳಿಲ್ಲ. ಓದೇನಿದ್ದರೂ ದೀಪದ ಬೆಳಕಿನಲ್ಲಿ. ವಿದ್ಯುತ್ ಇಲ್ಲವಾದ್ದರಿಂದ ಕಾರ್ಖಾನೆಗಳು ನಡೆಯುವುದಿಲ್ಲ. ಇನ್ನು ಜನಕ್ಕೆ ಉದ್ಯೋಗ ಎಲ್ಲಿಂದ? ಆದ್ದರಿಂದ ಬಹುತೇಕರು ನೆಚ್ಚಿಕೊಂಡಿರುವುದೇ ಬೇಸಾಯ. ಇನ್ನು ಪ್ರಕೃತಿ ವಿಕೋಪ ಉಂಟಾಗಿ, ಬರ ಆವರಿಸಿದರೆ, ಬೇಸಾಯವೂ ಸಾಧ್ಯವಾಗುವುದಿಲ್ಲ.
ಆ ದೇಶದ ರಾಜಕಾರಣಿಗಳು ನಮ್ಮಲ್ಲಿನ ರಾಜಕಾರಣಿಗಳ ತರಹ ಆಶ್ವಾಸನೆ ನೀಡುವವರೆ ಹೊರತು ಜನರ ಉದ್ದಾರಕ್ಕಾಗಿ ಯಾವುದೇ ಯೋಜನೆಯನ್ನು ಅನುಷ್ಠಾನಕ್ಕೆ ತರುವವರಲ್ಲ. ಅಲ್ಲಿನ ಅಧ್ಯಕ್ಷೀಯ ಚುನಾವಣೆಗೆ ನಿಂತ ಮಹನೀಯನೊಬ್ಬ, ನನಗೆ ಮತ ನೀಡಿದರೆ ಎಲ್ಲರಿಗೂ ಉಚಿತ ಚಪ್ಪಲಿ ನೀಡುವುದಾಗಿ ಹೇಳಿ ನಂತರ ಗೆದ್ದ ಮೇಲೆ ಚಪ್ಪಲಿ ನೀಡಲು ಆಗುವುದಿಲ್ಲ, ಏಕೆಂದರೆ ನಿಮ್ಮ ಪಾದಗಳ ಅಳತೆ ಬೇರೆಬೇರೆ ಇರುತ್ತದೆ, ಅಳತೆ ಗೊತ್ತಾಗುವುದಿಲ್ಲ ಎಂದು ಸಬೂಬು ನೀಡಿದ್ದನಂತೆ. ಇದು ತಮಾಷೆಯಾಗಿ ಕಂಡರು. ಅಲ್ಲಿನ ಜನ ಕೇವಲ ಚಪ್ಪಲಿಗಾಗಿ ಮತಹಾಕುತ್ತಾರೆಂದರೆ ಅವರ ದಯನೀಯ ಸ್ಥಿತಿಯ ಬಗ್ಗೆ ಊಹಿಸಿ.
ಇಂತಹ ಬಡರಾಷ್ಟ್ರದ ಒಬ್ಬ ಸಾಧಾರಣ ಯುವಕ ವಿಲಿಯಂ ಇಂದು ತಲುಪಿರುವ ಹಂತ ನೋಡಿದರೆ ಆಶ್ಚರ್ಯವಾಗುವುದು ದಿಟ. ಇಂದು ವಿಲಿಯಂ ಅಮೇರಿಕದಲ್ಲಿ ಮಾತಿಗೆ ನಿಂತರೆ, ಡಾಕ್ಟರೇಟ್ ಮಾಡಿರುವವರು, ವಿಜ್ನಾನಿಗಳು, ತಂತ್ರಜ್ನರು ಆತನ ಮಾತನ್ನು ತದೇಕಚಿತ್ತದಿಂದ ಆಲಿಸುತ್ತಾರೆ. ಅವನ ಮಾತಿನ ಕೊನೆಗೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸುತ್ತಾರೆ. ಕನಿಷ್ಠ ೧೦ ನಿಮಿಷದ ಚಪ್ಪಾಳೆ ಮೊಳಗುತ್ತದೆ. ವಿಲಿಯಂ ಕ್ವಾಂಬಾ ಅಂತಹ ಗೌರವಕ್ಕೆ ಅರ್ಹ ಎಂಬುದರಲ್ಲಿ ಎರಡು ಮಾತಿಲ್ಲ. ಆತ ಮಾಡಿದ್ದು ಸಾಮಾನ್ಯ ಕಾರ್ಯವೇನಲ್ಲ. ತನ್ನ ಊರಿಗೆ, ತನ್ನ ಜನಗಳಿಗೆ ವಿದ್ಯುತ್ ಎಂಬ ತೀರಾ ದೈನಂದಿನ ಅವಶ್ಯವನ್ನ ಒದಗಿಸುವಲ್ಲಿ ಸಫಲನಾಗಿದ್ದಾನೆ. ತನ್ನೂರಿನ ಜನರ ಪ್ರೀತಿ, ವಿಶ್ವಾಸಗಳಿಸಿದ್ದಾನೆ. ಅವರ ಬದುಕಿಗೊಂದು ಭರವಸೆ ನೀಡಿದ್ದಾನೆ. ಕತ್ತಲಿನಿಂದ ಬೆಳಕಿನೆಡೆಗೆ ತನ್ನವರನ್ನು ಕರೆತಂದಿದ್ದಾನೆ.
ಈ ಸಫಲತೆಯಲ್ಲಿ ಆತ ಕ್ರಮಿಸಿದ ಹಾದಿಯನ್ನು ಗಮನಿಸಬೇಕು. ಬಾಲ್ಯದಿಂದಲೂ ಬಡತನವನ್ನೇ ಕಂಡುಂಡು ಬೆಳೆದ ವಿಲಿಯಂಗೆ ಮೊದಲಿನಿಂದಲೂ ಪ್ರಶ್ನಿಸುವ ಮನೋಭಾವ. ಎಲ್ಲವನ್ನೂ ಭೇಧಿಸಿ ನೋಡುವ ಕುತೂಹಲ. ರೇಡಿಯೋ ಕಾರ್ಯನಿರ್ವಹಿಸುವುದು ಹೇಗೆ? ವಿದ್ಯುತ್ ಇಲ್ಲದೇ ಕೇವಲ ಸೆಲ್ ಗಳಿಂದ ಅದು ಹೇಗೆ ಶಕ್ತಿ ಪಡೆದುಕೊಳ್ಳುತ್ತದೆ. ಸೈಕಲ್ ಮುಂಭಾಗದ ದೀಪ ಉರಿಯುವುದು ಹೇಗೆ? ಇತ್ಯಾದಿ ಕುತೂಹಲಗಳನ್ನಿಟ್ಟುಕೊಂಡ ವಿಲಿಯಂ ಕ್ವಾಂಬ ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವತ್ತ ಸಾಗಿದವನು. ಮನೆಯಲ್ಲಿನ ಬಡತನದಿಂದ ಶಾಲೆಗೆ ಶುಲ್ಕ ತುಂಬಲಾರದೆ ಶಾಲೆ ಬಿಟ್ಟರೂ, ಏನನ್ನಾದರೂ ಓದಬೇಕು ಎಂಬ ಕುತೂಹಲವಿದ್ದೇ ಇತ್ತು. ಅಷ್ಟರಲ್ಲಾಗಲೇ ರೇಡಿಯೋ ಇತ್ಯಾದಿ ಸಣ್ಣ ಪುಟ್ಟ ಎಲೆಕ್ಟ್ರಾನಿಕ್ ಉಪಕರಣಗಳ ದುರಸ್ಥಿ ಕೈಹಿಡಿದಿತ್ತು. ಬಿಡುವಿನ ಸಮಯದಲ್ಲಿ ಗ್ರಂಥಾಲಯ ಹೊಕ್ಕು ಅಲ್ಲಿದ್ದ ಪುಸ್ತಕಗಳನ್ನು ಕೈಗೆತ್ತಿಕೊಳ್ಳುತ್ತಿದ್ದ ವಿಲಿಯಂಗೆ ಒಂದು ದಿನ Using Energy ಎಂಬ ಪುಸ್ತಕ ಕೈಗೆ ಎಡತಾಕಿತು. ಆದರೆ ಅವನಿಗೆ ಇಂಗ್ಲೀಷ್ ಓದಲು ಬರುತ್ತಿರಲಿಲ್ಲ. ಅದರಲ್ಲಿನ ಚಿತ್ರಗಳನ್ನು ಗಮನಿಸುತ್ತಾ ಹೋದ, ಪ್ರಯೋಗಶೀಲ ಮನಸ್ಸಿಗೆ ಅಷ್ಟು ಸಾಕಿತ್ತು.
ತನ್ನದೇ ಆದ ಕಲ್ಪನೆಯಲ್ಲಿ ವಿಲಿಯಂ ವಿಂಡ್ ಮಿಲ್ ನ ವಿನ್ಯಾಸ ಮಾಡಲು ಪ್ರಾರಂಭಿಸಿದ. ಅದಕ್ಕೆ ಬಳಸಿದ ವಸ್ತುಗಳಾದರೂ ಎಂತಹದು, ಅಂಟು ಮರದ ಹಲಗೆಗಳು, ಪಿವಿಸಿ ಪೈಪುಗಳು, ಗುಜರಿಯಲ್ಲಿ ಸಿಕ್ಕ ಕಬ್ಬಿಣ, ಸೈಕಲ್ ನ ಡೈನಾಮೋ, ಟ್ರ್ಯಾಕ್ಟರ್ ನ ಫ್ಯಾನ್ ಇತ್ಯಾದಿ ಉಪಯೋಗಕ್ಕೆ ಬಾರದ ವಸ್ತುಗಳು. ಇವೆಲ್ಲವನ್ನೂ ತೆಗೆದುಕೊಂಡು ವಿದ್ಯುತ್ ಉತ್ಪಾದಿಸುತ್ತೇನೆ ಎಂದು ಹೇಳಿದಾಗ ಸ್ನೇಹಿತರೂ, ನೆರೆಹೊರೆಯ ಜನರು ಗಹಗಹಿಸಿ ನಕ್ಕಿದ್ದರು. ಕೆಲವರು ಅಸಡ್ಡೆ ನೋಟ ಬೀರಿದ್ದರು. ಆದರೂ ಯುವಕ ವಿಲಿಯಂ ತನ್ನ ಪ್ರಯತ್ನ ಬಿಡಲಿಲ್ಲ. ತಾನು ಮಾಡಿಟ್ಟುಕೊಂಡ ವಿನ್ಯಾಸದಂತೆ ಆ ವಸ್ತುಗಳನ್ನು ಜೋಡಿಸುತ್ತಾ ಹೋದ. ಕೆಲದಿನಗಳಲ್ಲೇ ತನ್ನ ಮನೆಯ ಮುಂದೆಯೇ ೩೯ ಅಡಿಯಷ್ಟು ದೊಡ್ಡ ಗಾಳಿ ಚಕ್ರವನ್ನು ನಿಲ್ಲಿಸಿಬಿಟ್ಟ. ಮೊದಲಿಗೆ ಅದು ಅಂದುಕೊಂಡಂತೆ ಕಾರ್ಯನಿರ್ವಹಿಸಲಿಲ್ಲ. ನಂತರ ತಪ್ಪುಗಳನ್ನು ಸರಿಪಡಿಸುತ್ತಾ ಬಂದ ವಿಲಿಯಂ, ಕೆಲದಿನಗಳಲ್ಲೇ ಅದು ಕಾರ್ಯನಿರ್ವಹಿಸುವಂತೆ ಮಾಡಿದ. ತನ್ನ ಮನೆಯ ಒಂದು ಬಲ್ಬ್ ಉರಿದು ಬೆಳಕು ಬಂದಾಗ ಕುಪ್ಪಳಿಸಿ ಸಂತಸ ಪಟ್ಟಿದ್ದ. ಆಗ ಅಲ್ಲಿನ ಜನ ಭಲೇ ವಿಲಿಯಂ ಎಂದಿದ್ದರು.
ಸಿಕ್ಕ ಚಿಕ್ಕದೊಂದು ಗೆಲುವು, ಸಣ್ಣ ಹೊಗಳಿಕೆ,ಪ್ರೋತ್ಸಾಹ ಅವನ ಆತ್ಮವಿಶ್ವಾಸವನ್ನು ಇಮ್ಮಡಿಯಾಗಿಸಿತು. ಮತ್ತೊಂದು ಪ್ರಯತ್ನದಲ್ಲಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಗಾಳಿ ಚಕ್ರವನ್ನು ನಿಲ್ಲಿಸಿದ್ದ. ಅದು ಒಂದು ಪಂಪ್ಸೆಟ್, ನಾಲ್ಕು ಬಲ್ಬ್ ಮತ್ತು ರೇಡಿಯೋಗೆ ವಿದ್ಯುತ್ ಸರಬರಾಜು ಮಾಡುವಷ್ಟು ಸಾಮರ್ಥ್ಯ ಹೊಂದಿತ್ತು. ಅಲ್ಲಿಗೆ ವಿಲಿಯಂನ ಅದೃಷ್ಠ ಕುಲಾಯಿಸಿತು. ಸ್ಥಳೀಯ ಪತ್ರಿಕೆ ಈತನ ಬಗ್ಗೆ ವರದಿಮಾಡಿತು. ನಂತರ ಅದು ಅಂತರಾಷ್ಟ್ರೀಯ ಸುದ್ದಿಯಾಯಿತು. ಅನೇಕರು ಈತನ ಓದಿಗೆ ಸಹಾಯ ಹಸ್ತ ಚಾಚಿದರು. ಜಗತ್ತಿನ ಅತ್ಯುತ್ತಮ ಶಾಲೆಗಳು ಈತನಿಗೆ ಸ್ಕಾಲರ್ಶಿಪ್ ನೊಂದಿಗೆ ಆಹ್ವಾನ ನೀಡಿದವು. ಅಮೇರಿಕ ವಿಲಿಯಂನನ್ನು ಬರಮಾಡಿಕೊಂಡು ಓದಲಿಕ್ಕೆ ಪ್ರೋತ್ಸಾಹ ನೀಡಿತು. ಇದೇವರ್ಷ ಗೂಗಲ್ ವಿಜ್ನಾನ ಮೇಳದಲ್ಲಿ ಈತನನ್ನು ಅತಿಥಿ ಉಪನ್ಯಾಸಕನಾಗಿ ಆಹ್ವಾನಿಸಲಾಗಿತ್ತು.
ಇಂಗ್ಲೀಷ್ ಬರದ ಯುವಕ ವಿಲಿಯಂ ಇಂದು ತಡವರಿಸುತ್ತ ಇಂಗ್ಲೀಷ್ ಮಾತನಾಡುತ್ತಾನಾದರೂ ಆತನ ಮಾತಿಗೆ ಕಿವಿಯಾಗಲು ಅನೇಕರು ಉತ್ಸುಕರಾಗಿರುತ್ತಾರೆ. ವಿಲಿಯಂನ ತಲೆಯಲ್ಲಿ ಇನ್ನೂ ಅನೇಕ ಯೋಜನೆಗಳು ಕಾವು ಪಡೆಯುತ್ತಿವೆ. ಸ್ಟೀಮ್ ಇಂಜಿನ್, ಕೊಳವೆ ಬಾವಿಯಂತ್ರಗಳನ್ನು ತನ್ನ ಜನರಿಗೆ ಅಲ್ಲೇ ದೊರೆಯುವ ಸಾಮಾಗ್ರಿಗಳಿಂದ ಕಡಿಮೆ ಖರ್ಚಿನಲ್ಲಿ ಮಾಡಿಕೊಡಬೇಕು ಎಂಬ ಕನಸಿದೆ. ತನ್ನ ಬಿಡುವಿನ ವೇಳೆಯಲ್ಲಿ ತನ್ನ ದೇಶದ ಮಕ್ಕಳೊಂದಿಗೆ ಸಮಯಕಳೆದು ವಿಜ್ನಾನದ ಬಗ್ಗೆ ಅವರ ಗಮನ ಸೆಳೆಯುತ್ತಿರುವ ವಿಲಿಯಂ ಹೇಳುವ ಮಾತು ಒಂದೇ, ’ಆತ್ಮವಿಶ್ವಾಸ ಬೆಳೆಸಿಕೊಳ್ಳಿ, ಕಂಡ ಕನಸನ್ನು ನನಸಾಗಿಸಿಕೊಳ್ಳುವತ್ತ ಶ್ರಮ ಪಟ್ಟು ದುಡಿಯಿರಿ, ವೈಫಲ್ಯದಿಂದ ವಿಚಲಿತರಾಗಿ ಪ್ರಯತ್ನ ಬಿಟ್ಟುಕೊಡಬೇಡಿ’ . ನನ್ನಂತಹ ಅನೇಕ ಕ್ರಿಯಾಶೀಲ, ಪ್ರಯೋಗಶೀಲ ಯುವಕರು ಎಲ್ಲದೇಶಗಳಲ್ಲೂ ಇದ್ದಾರೆ, ನಾವುಗಳು ಅದನ್ನು ಉಪಯೋಗಿಸಿಕೊಂಡು ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಿಕ್ಕೆ ಪ್ರಯತ್ನಿಸಿದರೆ, ಭ್ರಷ್ಠ ಸರ್ಕಾರಗಳನ್ನು ಅವಲಂಬಿಸಬೇಕಿಲ್ಲ, ಇನ್ನಿತರ ದೇಶಗಳತ್ತ ಸಹಾಯಕ್ಕೆ ಹಸ್ತ ಚಾಚಬೇಕಿಲ್ಲ. ಬನ್ನಿ ಬಡತನ ಮುಕ್ತ ಆಫ್ರಿಕ ಕಟ್ಟೋಣ ಅನ್ನುತ್ತಾನೆ ವಿಲಿಯಂ. ವಿಲಿಯಂ ಅವನ ಜನರಿಗೆ ವಿದ್ಯುತ್ ಮಾತ್ರ ನೀಡಲಿಲ್ಲ, ಭರವಸೆ, ಆತ್ಮವಿಶ್ವಾಸವನ್ನೂ ನೀಡಿದ. ಅವನ ಮಾತು, ಪ್ರಯೋಗಶೀಲತೆ, ಆತ್ಮವಿಶ್ವಾಸ ಭಾರತದ ಯುವಕರಿಗೆ ಆದರ್ಶವಾದರೆ, ವ್ಯವಸ್ಥೆಯನ್ನು ಜರಿಯುತ್ತಾ ಕೂರವ ವ್ಯಾಧಿ ವಾಸಿಯಾಗಬಹುದೇನೋ. ವಿಲಿಯಂನತಹ ಯುವಕರು ಭಾರತದಲ್ಲೂ ಇದ್ದಾರೆ, ಅವರ ಸಂತತಿ ಸಾವಿರ ಸಾವಿರವಾಗಬೇಕಿದೆ.
ನೋಬಲ್ ಜಾಬ್, ನೋಟುಗಳಿಸುವ ಜಾಬ್ ಆಗಿರುವಾಗ!
ಅಂತಹದೊಂದು ಅನುಮಾನವಿದ್ದೇ ಇದೆ. ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿವೆಯಾ? ಪತ್ರಕರ್ತರು ಪಾವಿತ್ರ್ಯ ಉಳಿಸಿಕೊಂಡಿದ್ದಾರಾ? ಮಾಧ್ಯಮಗಳು ಉದ್ಯಮಿಗಳ ಕೈಗೊಂಬೆಯಾಗುತ್ತಿದೆಯಾ? ರಾಜಕಾರಣಿಗಳು ಲೇಖನಿ ಹಿಡಿದವರನ್ನು ನಿಯಂತ್ರಿಸುತ್ತಿದ್ದಾರಾ? ಸಮಾಜದ ಒಳಿತಿಗಾಗಿ ದುಡಿಯುವ ಪ್ರತಿಜ್ನೆ ಮಾಡಿ ಲೇಖನಿ ಹಿಡಿದವರು, ಅದನ್ನೇ ಬ್ಲಾಕ್ಲ್ ಮೈಲ್ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರಾ? ಸಂವಿಧಾನದ ನಾಲ್ಕನೇ ಆಧಾರ ಸ್ತಂಭ ತುಕ್ಕುಹಿಡಿದು ಶಿಥಿಲಗೊಳ್ಳುವತ್ತ ಸಾಗಿದೆಯಾ? ದಶಕಗಳ ಹಿಂದೆ ಪತ್ರಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದ ಓದುಗ, ಈಗಲೂ ಅಷ್ಠೇ ಆಸ್ಥೆಯಿಂದ ಪತ್ರಿಕೆಯನ್ನು ಕೈಗೆತ್ತಿಕೊಳ್ಳುತ್ತಾನಾ? ಪತ್ರಿಕೆಗಳು ಓದುಗರಲ್ಲಿ ಒಂದು ಚಿಂತನೆಯನ್ನ ಹುಟ್ಟುಹಾಕುವಲ್ಲಿ ವಿಫಲವಾಗುತ್ತಿದೆಯಾ? ಪ್ಯಾಕೇಜ್ ಜರ್ನಲಿಸಂ ಕನ್ನಡ ಮಾಧ್ಯಮಗಳಿಗೆ ಇಷ್ಟು ಬೇಗ ಅಂಟಿಕೊಂಡುಬಿಟ್ಟಿತಾ? ಮೌಲ್ಯಗಳು, ಪ್ರಾಮಾಣಿಕತೆ ಲೇಖನದಲ್ಲಷ್ಠೇ ಉಳಿದು, ಸುದ್ದಿಮನೆಯಿಂದ ಕಾಲ್ಕಿತ್ತಿವೆಯಾ?
ಇದಿಷ್ಟು ಅನುಮಾನಗಳು ಅನೇಕ ಪತ್ರಿಕಾ ಓದುಗರನ್ನ, ದೃಶ್ಯ ಮಾಧ್ಯಮಗಳ ನೋಡುಗರನ್ನ ಪದೇ ಪದೇ ಕಾಡುತ್ತಲೇ ಇರುತ್ತವೆ. ಅದರಲ್ಲೂ ಕಳೆದ ಕೆಲವರ್ಷಗಳಿಂದ ಮಾಧ್ಯಮಗಳು ತುಳಿಯುತ್ತಿರುವ ಹಾದಿಯನ್ನು ಗಮನಿಸಿದರೆ ಇಂತಹ ಅನುಮಾನಗಳು ಮೂಡುವುದು ಸಹಜವೇ. ಇತ್ತೀಚೆಗೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮುಖ್ಯಸ್ಥರಾಗಿರುವ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಒಂದು ಸುದ್ದಿವಾಹಿನಿಗೆ ಸಂದರ್ಶನ ಕೊಡುತ್ತಾ ಪತ್ರಕರ್ತರ ಮತ್ತು ಮಾಧ್ಯಮಗಳ ವಿಶ್ವಾಸರ್ಹತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ತಮ್ಮ ಖಾರವಾದ ಉತ್ತರಗಳಿಂದ ಸ್ವತಃ ಸಂದರ್ಶಕನಿಗೇ ಅಚ್ಚರಿಯಾಗುವಂತೆ ಮನಬಿಚ್ಚಿಮಾತನಾಡಿದ್ದರು. ಹಾಗೆ ನೋಡಿದರೆ ಈ ಬಗ್ಗೆ ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ ಪತ್ರಿಕೆ ಮತ್ತು ಇಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಗಂಭೀರ ಚರ್ಚೆ ಆಗಬೇಕಿತ್ತು. ಆದರೆ ಅಂತಹ ಮಹತ್ವದ ಚರ್ಚೆಗಳು ನಡೆಯಲಿಲ್ಲ, ಕೆಲವು ಪತ್ರಕರ್ತರು ಖಟ್ಜು ನಿಲುವನ್ನು ಟೀಕಿಸಿದರು. ಖಟ್ಜು ಹೇಳಿದ್ದರಲ್ಲಿ ಎಲ್ಲವೂ ಒಪ್ಪಿಕೊಳ್ಳಲು ಸಾಧ್ಯವಾಗದೇ ಇದ್ದರೂ ಕೆಲವೊಂದು ಮಾತುಗಳಾದರೂ ಕನಿಷ್ಠ ಪಕ್ಷ ಪತ್ರಕರ್ತರನ್ನ ಆತ್ಮಾವಲೋಕನಕ್ಕೆ ಹಚ್ಚಿದ್ದರೂ ಸಾಕಿತ್ತು. ಅದು ಕೂಡ ಆದಂತೆ ತೋರುತ್ತಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮ ಕ್ಷೇತ್ರದ ವಿಶ್ವಾಸಾರ್ಹತೆಗೆ ಮೊದಲು ಪೆಟ್ಟು ಕೊಟ್ಟದ್ದು ’ಪೇಯ್ಡ್ ನ್ಯೂಸ್’ ಕಳಂಕ. ಈ ಹಿಂದೆ ೨೦೦೯ ರಲ್ಲಿ ಮಾಧ್ಯಮಗಳ ಗೋಸುಂಬೆತನ ಮತ್ತು ಕೆಲವು ಪತ್ರಿಕೆಗಳು, ಸುದ್ದಿವಾಹಿನಿಗಳು ಹೇಗೆ ಪೇಯ್ಡ್ ನ್ಯೂಸ್ ನ ಲಾಭಿಗಿಳಿದಿವೆ ಎಂಬುದನ್ನು ಪತ್ರಕರ್ತ ಪಿ.ಸಾಯಿನಾಥ್ ಹಿಂದೂ ಪತ್ರಿಕೆಯ ತಮ್ಮ ಲೇಖನದಲ್ಲಿ ಎಳೆ ಎಳೆಯಾಗಿ ವಿವರಿಸಿದ್ದರು. ಅದೇ ವರ್ಷ ಲೋಕಸಭಾ ಚುನಾವಣೆ ನಡೆದ ಸಂದರ್ಭದಲ್ಲಿ ಹೇಗೆ ಕೆಲವು ಪತ್ರಿಕೆಗಳು ರಾಜಕಾರಣಿಗಳ ಹಿಂದೆ ಬಿದ್ದವು. ಕಾಸು ಪಡೆದು ಪುಟಗಟ್ಟಲೆ ಅವರ ಸಾಧನೆಯ ಬಗ್ಗೆ ಬರೆದವು, ಸಂಪಾದಕೀಯವನ್ನೂ ಲಾಭಿಗೆ ಹೇಗೆ ಬಳಸಿಕೊಂಡವು ಎಂಬುದನ್ನು ಸಾಯಿನಾಥ್ ಅಂಜಿಕೆಯಿಲ್ಲದೆ ಹೇಳಿದ್ದರು. ನಂತರ ಜೌಟ್ ಲುಕ್ ಪತ್ರಿಕೆ ಆ ವಿಷಯದ ಬಗ್ಗೆಯೇ ’ಪೆಯ್ಡ್ ನ್ಯೂಸ್ ಆಫ್ ಇಂಡಿಯಾ’ ಎಂಬ ಮುಖಪುಟದ ಸಂಚಿಕೆ ತಂದಿತು. ಅನೇಕ ರಾಜಕಾರಣಿಗಳು ಯಾರ್ಯಾರು ತಮ್ಮನ್ನು ಹಣಕ್ಕಾಗಿ ಚುನಾವಣಾ ಸಮಯದಲ್ಲಿ ಸಂಪರ್ಕಿಸಿದರು ಎಂಬ ಮಾಹಿತಿ ಬಹಿರಂಗ ಪಡಿಸಿದರು. ಅನೇಕ ಪತ್ರಿಕೆಗಳಲ್ಲಿ ೨-೩ ಲಕ್ಷಕ್ಕೆಲ್ಲಾ ಅರ್ಧ ಪುಟ ಬಿಕರಿಯಾಗಿತ್ತು. ಮಾಧ್ಯಮಗಳ ಈ ನಾಚಿಕೆಗೇಡಿನ ಸಂಗತಿಯ ಬಗ್ಗೆ ಒಂದಷ್ಟು ಚರ್ಚೆಗಳಾಗಿದ್ದು ನಿಜ. ಆದರೆ ಅದರಿಂದ ಬದಲಾವಣೆಯೇನೂ ಕಾಣಲಿಲ್ಲ. ಪ್ರೆಸ್ ಕೌನ್ಸಿಲ್ ಒಂದು ತಂಡ ರಚಿಸಿ ಆ ಬಗ್ಗೆ ತನಿಖೆ ನೆಡೆಸಿ ಒಂದು ವರದಿಯನ್ನೂ ಸಿದ್ದಪಡಿಸಿತು. ಯಾವೆಲ್ಲಾ ಭಾಷೆಯ ಪತ್ರಿಕೆ ಮತ್ತು ಸುದ್ದಿವಾಹಿನಿಗಳು ಪೇಯ್ಡ್ ನ್ಯೂಸ್ ಲಾಭಿಯಲ್ಲಿ ಭಾಗಿಯಾಗಿದ್ದವು ಎಂಬ ವಿವರಣೆ ಕೂಡ ವರದಿಯಲ್ಲಿ ಕಾಣಿಸಿತು. ಆದರೆ ಆ ವರದಿಯನ್ನು ಕೂಡ ಮಾಧ್ಯಮಗಳು ಮುಟ್ಟಿ ನೋಡಲಿಲ್ಲ. ಆದ್ದರಿಂದ ಆ ವರದಿಯಲ್ಲಿನ ಸತ್ಯಗಳು ಜನರಿಗೆ ತಲುಪಲಿಲ್ಲ.
’ಮಾಧ್ಯಮಗಳಲ್ಲಿ ಮೂಲಭೂತವಾಗಿ ಇರಬೇಕಿದ್ದ ನಿಸ್ಪಕ್ಷಪಾತ, ಸಮಗ್ರತೆ ಮತ್ತು ವಿಶ್ವಾಸಾರ್ಹತೆಗಳು ಇಂದು ಬಿಕರಿಗಿವೆ. ಕೇವಲ ಪ್ರಸರಣ ಸಂಖ್ಯೆ ಮತ್ತು ಟಿ.ಆರ್.ಪಿ ಯ ಬಾಲ ಹಿಡಿದು ಓಡುತ್ತಿರುವ ಮಾಧ್ಯಮಗಳಿಗೆ ಮೌಲ್ಯಗಳು ತೊಡಕಾಗಿ ಕಾಣುತ್ತದೆ. ಪತ್ರಿಕೋದ್ಯಮ ಕ್ಷೇತ್ರ ಒಂದು ಉದ್ಯಮವಾಗಿ ಕಂಡವರಿಗೆ ಮೌಲ್ಯಗಳನ್ನು ನೆಚ್ಚಿಕೊಂಡು ಆಗಬೇಕಾಗಿದ್ದೇನಿದೆ. ಅಲ್ಲೇನಿದ್ದರೂ ಟಿ.ಆರ್. ಪಿ, ಪ್ರಸರಣಸಂಖ್ಯೆ ಇವುಗಳಲ್ಲೇ ಮೌಲ್ಯಮಾಪನ. ಹಾಗಾಗುತ್ತಿರುವುದು ದುರಂತ’ ಎನ್ನುತ್ತಾರೆ ರಿಚರ್ಡ್ ಬೆನೆಡೆಟ್ಟೊ. ಅವರ ’ಪೊಲಿಟೀಷಿಯನ್ಸ್ ಆರ್ ಪೀಪಲ್ ಟೂ’ ಪುಸ್ತಕವನ್ನು ತಿರುವಿಹಾಕುವಾಗ ಸುದ್ದಿಮನೆಯಲ್ಲಿನ ಅನೇಕ ಒಳಗುಟ್ಟುಗಳು ರಟ್ಟಾಗುತ್ತಾ ಹೋಯಿತು. ರಿಚರ್ಡ್, ’ಬಫೆಲೋ ನ್ಯೂಸ್’, ’ದಿ ನ್ಯೂಸ್’ ಮತ್ತು ’ಯು.ಎಸ್.ಎ ಟುಡೆ” ಪತ್ರಿಕೆಗಳಲ್ಲಿ ವರದಿಗಾರರಾಗಿ ದುಡಿದವರು. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿದವರು. ಅಮೇರಿಕದ ಅಧ್ಯಕ್ಷರಾಗಿದ್ದ ಹಲವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರು. ಅಧ್ಯಕ್ಷರು ಪಯಣಿಸುವ ’ಏರ್ಪೋರ್ಸ್ ಒನ್’ನಲ್ಲಿ ಅನೇಕ ವೇಳೆ ಅಧ್ಯಕ್ಷರಿಗೆ ಜತೆಯಾದವರು. ಪ್ರಸರಣ ಸಂಖ್ಯೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪತ್ರಿಕೆಗಳು ಏನೆಲ್ಲಾ ಮಾಡುತ್ತವೆ ಎಂಬುದರ ಬಗ್ಗೆ ಅವರು ಬರೆಯುತ್ತಾರೆ. ಅತಿಯಾದ ಸುದ್ದಿಯ ವೈಭವೀಕರಣ, ಗಾಳಿ ಸುದ್ದಿಗಳಿಗೆ ಪ್ರಾಶಸ್ತ್ಯ, ಸಿನಿಮಾನಟರ, ರಾಜಕಾರಣಿಗಳ ವಯುಕ್ತಿಕ ಬದುಕಿನ ಗುಟ್ಟುಗಳತ್ತಲೇ ಗಮನ, ಸಂಘರ್ಷ ಉಂಟುಮಾಡಬಲ್ಲ ಸಂಗತಿಗಳಿಗೆ ಮೊದಲ ಆದ್ಯತೆ ಕೊಡುವುದು, ಯಾವುದೋ ವಿವಾದಾಸ್ಪದ ವಿಷಯ ಎಳೆದು ತಂದು ಸಂವಾದಕ್ಕೆ ನಿಲ್ಲುವುದು, ಇವೆಲ್ಲಾ ಪ್ರಸರಣ ಸಂಖ್ಯೆ ಹೆಚ್ಚಿಸಿಕೊಳ್ಳುವ ತಂತ್ರಗಳು ಎನ್ನುತ್ತಾರೆ ರಿಚರ್ಡ್. ಇದನ್ನು ಓದುವಾಗ ಕನ್ನಡದ ಕೆಲ ಪತ್ರಿಕೆಗಳು ನೆಚ್ಚಿಕೊಂಡಿರುವುದು ಈ ಅಂಶಗಳನ್ನೇ ಅಲ್ಲವೆ ಅನ್ನಿಸಿದ್ದು ಸುಳ್ಳಲ್ಲ.
ಇನ್ನು ನಮ್ಮ ದೃಶ್ಯ ಮಾಧ್ಯಮಗಳನ್ನೇ ತೆಗೆದುಕೊಳ್ಳಿ. ಅವು ಕೇವಲ ಭವಿಷ್ಯ,ವಾಸ್ತು, ಪುನರ್ಜನ್ಮ, ರಿಯಾಲಿಟಿ ಷೋ ಇತ್ಯಾದಿಗಳಿಗೆ ಜೋತು ಬಿದ್ದಿವೆ. ಮೌಡ್ಯತೆ ಬಿತ್ತುವಲ್ಲಿ ಸ್ಪರ್ಧೆಗೆ ನಿಂತಿವೆ. ಇತ್ತೀಚೆಗೆ ಐಶ್ವರ್ಯ ರೈಗೆ ಮಗುವಾಗುವವರೆಗೆ ಆ ಕುಟುಂಬದ ಸುತ್ತ ಸುತ್ತಿದ ಮಾಧ್ಯಮಗಳನ್ನು ನೋಡಿದ್ದೇವೆ. ರಾಜಕೀಯ ಚರ್ಚೆಗಳಲ್ಲಿ ಅವರವರ ಗುಂಪುಗಳನ್ನೇ ಒಂದೆಡೆ ಸೇರಿಸಿ, ವಾಗ್ವಾದ, ಕೆಸರೆರಚಾಟ, ಒಮ್ಮೊಮ್ಮೆ ಬೆಂಬಲಿಗರು ಕೈ ಕೈ ಮಿಲಾಯಿಸುವುದನ್ನು, ಅದಕ್ಕೇ ಕಾಯುತ್ತಿದ್ದವರಂತೆ ಚಿತ್ರೀಕರಿಸಿಕೊಂಡು ದಿನವಿಡಿ ಬಿತ್ತರಿಸುವ ಮಾಧ್ಯಮ ಒಂದು ಘನ ಚರ್ಚೆಗೆ ನಿಜಕ್ಕೂ ವೇದಿಕೆ ಕಲ್ಪಿಸುತ್ತದಾ? ಹೇಗೆ ಸಾಧ್ಯ, ಸಾವಿನ ಮನೆಯೊಳಗಿನ ಸಂಕಟ, ಐಶ್ವರ್ಯ ಹಡೆದಿದ್ದು, ಪವಾರ್ ಕೆನ್ನೆಗೆ ಏಟುಕೊಟ್ಟದ್ದು, ಮಾನಭಂಗದ ತುಣುಕುಗಳು ನೇರಪ್ರಸಾರವಾದಾಗಲೇ ಟಿ.ಆರ್.ಪಿ ಹೆಚ್ಚುವುದು. ಇನ್ನು ಬ್ರೇಕಿಂಗ್ ನ್ಯೂಸ್ ನೆಪದಲ್ಲಿ ಊಹಾಪೋಹ ಸುದ್ದಿಯೂ ಖಚಿತ ಸುದ್ದಿಯಂತೆ ಬಿತ್ತರವಾಗುತ್ತದೆ. ಇತ್ತೀಚೆಗೆ ಒಂದು ಸುದ್ದಿವಾಹಿನಿ, ಬ್ರೇಕಿಂಗ್ ನ್ಯೂಸ್ ನೀಡುವ ಬರದಲ್ಲೋ ಅಥವಾ ಉದ್ದೇಶಪೂರ್ವಕವಾಗಿಯೋ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಒಂದು ಸಂಘಟನೆ ಭೂ ಅಕ್ರಮದಲ್ಲಿ ಭಾಗಿಯಾಗಿದೆ ಎಂದು ಸುದ್ದಿ ಪ್ರಸಾರ ಮಾಡಿ, ನಂತರ ಜನರಿಂದ ಚೀಮಾರಿ ಹಾಕಿಸಿಕೊಂಡು, ತಪ್ಪಾಯ್ತು ಎಂದು ಕ್ಷಮೆ ಕೇಳಬೇಕಾಗಿ ಬಂದದ್ದು ನಿಮಗೆ ಗೊತ್ತೇ ಇದೆ. ಹೀಗೆ ನಡೆದುಕೊಳ್ಳುವ ಮಾಧ್ಯಮಗಳು ಸಾಮಾಜಿಕ ಕಳಕಳಿಯಿಂದ ಯಾವುದೋ ಸಮಸ್ಯೆಯ ವಿಷಯ ಎತ್ತಿಕೊಂಡು, ತಜ್ನರೊಂದಿಗೆ ಚರ್ಚಿಸಿ, ಪರಿಹಾರ ಹುಡುಕುವ ವೇದಿಕೆಯಾಗಿ ರೂಪುಗೊಳ್ಳಲು ಹೇಗೆ ಸಾಧ್ಯವಾಗುತ್ತದೆ? ಮಾಧ್ಯಮಗಳ ಇಂತಹ ಅತಿರೇಕಗಳನ್ನೇ ನ್ಯಾ||ಖಟ್ಜು ತರಾಟೆಗೆ ತೆಗೆದುಕೊಂಡಿದ್ದು.
ಭಾರತದಲ್ಲಿ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳು ಕಮ್ಮಿ ಏನಿಲ್ಲ. ದಿನೇ ದಿನೇ ಇವುಗಳ ಸಂಖ್ಯೆಯಲ್ಲಿ ಹೆಚ್ಚಾಗುತ್ತಲೇ ಇದೆ. ಕನ್ನಡದಲ್ಲೂ ಹೊಸ ಹೊಸ ಪತ್ರಿಕೆಗಳು, ಟಿವಿ ಚಾನಲ್ ಗಳು ಬರಲಾರಂಭಿಸಿದೆ. ಪತ್ರಿಕೋದ್ಯಮವನ್ನು ಆಯ್ದುಕೊಳ್ಳುವತ್ತ ಯುವ ಪೀಳಿಗೆ ಒಲವು ತೋರುತ್ತಿದೆ. ಅದು ಸ್ವಾಗತಾರ್ಹ ಕೂಡ. ಪತ್ರಿಕೋದ್ಯಮದ ಬಗ್ಗೆ ಒಲವಿಟ್ಟುಕೊಂಡು, ಆದರ್ಶಗಳನ್ನಿಟ್ಟುಕೊಂಡು ಬಂದರೆ ಅಡ್ಡಿಯಿಲ್ಲ. ಆದರೆ ಈ ಕ್ಷೇತ್ರಕ್ಕೆ ಬರುವವರು ’ನೋಬಲ್ ಜಾಬ್’ ಎಂದು ಬರದೆ ’ನೋಟುಗಳಿಸುವ ಜಾಬ್’ ಎಂದು ಬಂದರೆ ಅದು ಅಪಾಯ. ಪತ್ರಿಕೆಯ ವಿಶ್ವಾಸಾರ್ಹತೆ ಎಂದರೆ ಹೆಂಗಸಿನ ಪಾತಿವ್ರತ್ಯವಿದ್ದಂತೆ ಎಂಬ ಮಾತಿದೆ. ಒಮ್ಮೆ ವಿಶ್ವಾಸಾರ್ಹತೆ ಕಳೆದುಕೊಂಡರೆ ಗಳಿಸುವುದು ಕಷ್ಟಸಾಧ್ಯ. ಆದರೂ ನಮ್ಮ ಮಾಧ್ಯಮಗಳು ಲಾಭಿಗೆ ಬಿದ್ದು, ಪೀತ ಪತ್ರಿಕೆಗಳಾಗಿ ರೂಪುಗೊಳ್ಳುತ್ತಾ, ರಾಜಕೀಯ ಮೇಲಾಟಕ್ಕೆ ವೇದಿಕೆಯಾಗುತ್ತಾ, ಪೈಪೋಟಿಯ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗುತ್ತಾ ಬೆಳೆಯುತ್ತಿರುವುದು, ಏನೆಲ್ಲಾ ಮಾಡಿಯೂ ನಾವೇ ನಂ ೧ ಎಂದು ಬೀಗುತ್ತಿರುವುದು ಆತಂಕಕಾರಿ. ಹಾಗೇ ನೋಡಿದರೆ ಅನೇಕ ಪತ್ರಿಕೆಗಳು ಪ್ರಸರಣ ಸಂಖ್ಯೆಯಲ್ಲಿ ಮುಂದಿವೆ, ಆದರೆ ವಿಶ್ವಾಸಾರ್ಹತೆ ಕಳೆದುಕೊಂಡು ಬಹಳ ದಿನಗಳೇ ಆಗಿವೆ, ಪತ್ರಕರ್ತರೂ ಕೂಡ!
ಯೋಗ ಬೇಡವೆನ್ನುವ ರೋಗಗ್ರಸ್ಥ ಮನಸ್ಸುಗಳು…
ಇತ್ತೀಚೆಗೆ ಮತ್ತೊಮ್ಮೆ ಅಂತಹ ಹೇಳಿಕೆಯನ್ನು ಕ್ರೈಸ್ತ ಪಾದ್ರಿಯೊಬ್ಬರು ನೀಡಿದ್ದಾರೆ. ವ್ಯಾಟಿಕನ್ ನ ಪಾದ್ರಿಯಾಗಿರುವ ಫಾದರ್ ಗೇಬ್ರಿಯಲ್ ಅಮರ್ಥ್ ಯಾವತ್ತಿನ ತಮ್ಮ ಹಿಡಿತವಿಲ್ಲದ ಮಾತಿಗೆ ಹೆಸರಾದವರು. ಹಿಂದೆ ಕೂಡ ಇಂತಹ ಹೇಳಿಕೆ ನೀಡಿ, ಸ್ವತಃ ಕ್ರೈಸ್ತರ ಅಸಡ್ಡೆ ನೋಟಕ್ಕೆ ಕಾರಣರಾದವರು. ಮೊನ್ನೆ ಕೂಡ ಅವರು ಮಾತನಾಡುತ್ತಾ ಯೋಗ ಎಂಬುದು ದೆವ್ವದ ಕೆಲಸ. ಯೋಗ ಮಾಡುವುದರಿಂದ ನಿಮ್ಮ ದೈನಂದಿನ ಜಂಜಾಟದಿಂದ ದೂರ ಉಳಿದು ಮನಸ್ಸನ್ನು ನಿರಾಳವಾಗಿಟ್ಟುಕೊಳ್ಳಬಹುದು, ದೇಹವನ್ನು ಆರೋಗ್ಯ ಪೂರ್ಣವಾಗಿ ಕಾಯ್ದುಕೊಳ್ಳಬಹುದು ಎಂದುಕೊಂಡಿದ್ದೀರಿ. ಆದರೆ ನಿಮಗೇ ಗೊತ್ತಿಲ್ಲದೆ ಯೋಗ ನಿಮ್ಮನ್ನು ಹಿಂದೂ ಧರ್ಮದತ್ತ ಸೆಳೆಯುತ್ತದೆ. ಆದ್ದರಿಂದ ಯೋಗ ಮಾಡುವುದು ಪಾಪ. ಕ್ರೈಸ್ತ ಧರ್ಮಕ್ಕೆ ವಿರುದ್ದ ಎಂದು ಇಟಲಿಯಲ್ಲಿ ಬಡಬಡಾಯಿಸಿದ್ದಾರೆ. ಇಷ್ಠೇ ಅಲ್ಲದೆ ಮಾತು ಮುಂದುವರಿಸಿದ ಪಾದ್ರಿ ಅಮರ್ಥ್, ಯೋಗ ಮಾಡುವುದಕ್ಕಿಂತ ನೈಟ್ ಕ್ಲಬ್ ಗಳಿಗೆ ಹೋಗಿ ಕುಡಿಯುವುದು, ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು, ಮಾದಕ ವಸ್ತುವನ್ನು ಸೇವಿಸುವುದು ಮೇಲು ಎಂದು ಯುವಕರಿಗೆ ಕರೆ ನೀಡಿದ್ದಾರೆ. ಆ ಹೇಳಿಕೆಯಿಂದಲೇ ಅವರ ರೋಗಗ್ರಸ್ತ ಮನಸ್ಸಿನ ದರ್ಶನವಾಗಿದೆ.
ಇದು ಮೊದಲೇನಲ್ಲ. ಹೀಗೆ ಯೋಗದ ಬಗ್ಗೆ ಅಪಸ್ವರವೆತ್ತಿದ ಕ್ರೈಸ್ತ ಪಾದ್ರಿಗಳ, ಮುಲ್ಲಾಗಳ ದೊಡ್ಡ ಪಟ್ಟಿಯೇ ಇದೆ. ೧೯೬೨ ರಲ್ಲೇ ವ್ಯಾಟಿಕನ್, ಕ್ರೈಸ್ತರು ಯೋಗ ಮಾಡುವುದು ತರವಲ್ಲ ಎಂದು ಆದೇಶ ಹೊರಡಿಸಿತ್ತು. ಸುಮಾರು ೫೦೦೦ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಭಾರತದ ಸಂಜೀವಿನಿ ವಿದ್ಯೆ ಯೋಗ, ಬಾಬಾರಾಮದೇವ್, ಬಿ.ಕೆ. ಎಸ್ ಅಯ್ಯಂಗಾರ್, ರವಿಶಂಕರ ಗುರೂಜಿ ಇತ್ಯಾದಿ ಮಹನೀಯರಿಂದ ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ವಿವಿಧ ದೇಶಗಳಿಗೆ ಪಸರಿಸಿ ವಿದೇಶಿಗರನ್ನು ಯೋಗದತ್ತ ತನ್ಮೂಲಕ ಭಾರತದತ್ತ ಆಕರ್ಶಿಸಿತೋ ಆಗಲೇ ಕ್ರೈಸ್ಥ ಪಾದ್ರಿಗಳು ಮತ್ತು ಮತಾಂಧ ಮುಲ್ಲಾಗಳು ಕಳವಳಕ್ಕೀಡಾದರು. ವ್ಯಾಟಿಕನ್ ಸೇರಿದಂತೆ ಹಲವು ದೇಶದ ಚರ್ಚಿನ ಪಾದ್ರಿಗಳು ಯೋಗವನ್ನು ಕ್ರೈಸ್ತ ಧರ್ಮ ವಿರೋಧಿ ಆಚರಣೆ ಎಂದು ಪುಕಾರು ಹಬ್ಬಿಸಿದರು. ಇನ್ನು ಕೆಲವು ಮುಸಲ್ಮಾನ ಧರ್ಮಗುರುಗಳು ಬಿಡಿ, ಮಾತೆತ್ತಿದರೆ ಫತ್ವಾ ಜಾರಿಗೊಳಿಸುವ ಸಣ್ಣ ಮನಸ್ಸಿನವರು, ಆಸನಗಳ ಕೆಲವು ಭಂಗಿಗಳು, ಧ್ಯಾನದಲ್ಲಿ ಉಚ್ಚರಿಸಲ್ಪಡುವ ಓಂಕಾರ, ಕೆಲವು ಮಂತ್ರಗಳು ಹಿಂದೂ ಧರ್ಮ ಮೂಲದ್ದೂ ಆದ್ದರಿಂದ ಇದು ಇಸ್ಲಾಂಗೆ ವಿರುದ್ಧ, ಯೋಗಮಾಡುವುದು ಪಾಪಕರ ಎಂದು ಫತ್ವಾ ಹೊರಡಿಸಿದರು. ಭಾರತದಲ್ಲೇ ಇಂತಹ ಫತ್ವಾಗಳು ಜಾರಿಯಾದವು. ಶಾಲೆಗಳಲ್ಲಿ ಮಕ್ಕಳಿಗೆ ಯೋಗ ಕಲಿಸುವುದನ್ನೂ ವಿರೋಧಿಸಿ, ಮುಸಲ್ಮಾನ ವಿಧ್ಯಾರ್ಥಿಗಳಿರುತ್ತಾರಾದ್ದರಿಂದ ಯೋಗ ಕಲಿಕೆ ಶಾಲೆಯಲ್ಲಿ ಬೇಡವೆಂಬ ವರಾತ ತೆಗೆದರು.
ಇದು ಆಯಾ ಧರ್ಮದ ಸರ್ವೋಚ್ಚ ಸ್ಥಾನದಲ್ಲಿರುವ ಧರ್ಮಗುರುಗಳು ತೋರುತ್ತಿರುವ ಸಣ್ಣತನವಲ್ಲದೇ ಮತ್ತೇನು? ಜನರೇ ಸ್ವಇಚ್ಚೆಯಿಂದ ಯೋಗದ ಅನುಕೂಲಗಳನ್ನು ಅರಿತು, ಆರೋಗ್ಯ ಪೂರ್ಣ ಜೀವನಕ್ಕೆ ಇದು ಪೂರಕ ಎಂದು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡರೆ ಇವರಿಗೇಕೆ ಅಳುಕು. ಅಷ್ಟಕ್ಕೂ ಟೆಹರೇನ್, ಬಾಗ್ದಾದ್, ಕೈರೋಗಳಲ್ಲಿ ಯೋಗ ತರಗತಿಗಳು ಅನೇಕ ದಶಕಗಳಿಂದಲೇ ನಡೆಯುತ್ತಿವೆ. ಇರಾನಿನಲ್ಲೂ ಯೋಗದ ಸಾವಿರಾರು ಕೇಂದ್ರಗಳು ಪ್ರತಿದಿನ ತರಗತಿ ನಡೆಸುತ್ತಿವೆ. ಮಷ್ಹಾದ್ ನಗರದಲ್ಲೇ ಪ್ರತಿವಾರ ಸಾವಿರಾರು ಯೋಗದ ತರಗತಿಗಳು ನಡೆಯುತ್ತವೆ. ಇಲ್ಲೆಲ್ಲೂ ಯೋಗ ಇಸ್ಲಾಂನ ವಿರೋಧಿ ಎಂಬ ಭಾವನೆಗಳಿಲ್ಲ. ಜನರು ಆತಂಕ, ಕೆಲಸದ ಒತ್ತಡ ಕಡಿಮೆ ಮಾಡಿಕೊಂಡು ಮನಃಶಾಂತಿ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಗವನ್ನು ಅಪ್ಪಿಕೊಂಡಿದ್ದಾರೆ.
ಅರಬ್ ರಾಷ್ಟ್ರಗಳಲ್ಲಿ ಯೋಗದ ಮಹತ್ವ ಅರಿತು ತಮ್ಮ ನಿತ್ಯದ ಆಚರಣೆಯಲ್ಲಿ ಯೋಗವನ್ನು ಅಳವಡಿಸಿಕೊಂಡ ಸಾವಿರಾರು ಯೋಗಾಭ್ಯಾಸಿಗಳಿದ್ದಾರೆ. ಬೈರತ್ ನಗರದಲ್ಲಿ ಯೋಗದ ದೊಡ್ಡ ಕಲಿಕಾ ಶಾಲೆಯೇ ಇದೆ. ಅಲ್ಲಿ ಕ್ರಿಶ್ಚಿಯನ್ನರು ಮತ್ತು ಮುಸಲ್ಮಾನರು ಒಟ್ಟಿಗೆ ಸೇರಿಯೇ ಆಸನಗಳ ಅಭ್ಯಾಸ ಮಾಡುತ್ತಾರೆ. ಲೆಬನಾನ್ ನಂತಹ ಕಡೆ ಯೋಗಕ್ಕೆ ಮುಗಿಬೀಳುವವರ ಸಂಖ್ಯೆ ದೊಡ್ಡದಿದೆ. ಜಿಮ್ ನೊಂದಿಗೆ ಯೋಗವನ್ನು ಕಲಿಸುವ ಶಾಲೆಗಳಿವೆ. ಪ್ರಸಿದ್ದ ನಟ ನಟಿಯರು, ಶ್ರೀಮಂತರ ಆದಿಯಾಗಿ ಎಲ್ಲರದೂ ಯೋಗ ಕಲಿಯುವ ಉತ್ಸಾಹ. ಅವರ್ಯಾರಿಗೂ ಇದು ತಮ್ಮ ತಮ್ಮ ಧರ್ಮಕ್ಕೆ ವಿರೋಧಿಯಾದುದು ಎನ್ನಿಸಿಲ್ಲ. ಬದಲಾಗಿ ಸ್ವಸ್ಥ ಆರೋಗ್ಯಕ್ಕೆ, ಉತ್ತಮ ಜೀವನ ಶೈಲಿಗೆ ಯೋಗ ಕೀಲೀಕೈ ಎಂಬುದು ಅವರ ಅರಿವಿಗೆ ಬಂದಿದೆ. ಆದರೆ ತಕರಾರಿರುವುದು ಧರ್ಮಗುರುಗಳಿಗೆ ಮಾತ್ರ.
ಕ್ರಿಶ್ಚಿಯನ್ ಯೋಗ, ಇದು ಯೋಗವನ್ನು ಕ್ರೈಸ್ತರು ಮರುಸೃಷ್ಠಿಸಿಕೊಂಡ ವಿಧಾನ. ಯಾವಾಗ ಪಾದ್ರಿಗಳು ಯೋಗ ಮಾಡುವುದು ಕ್ರೈಸ್ತ ಧರ್ಮಕ್ಕೆ ವಿರುದ್ದ ಎಂದರೋ, ಆವಾಗ ಯೋಗ ತರಗತಿಗಳು, ವಿದೇಶದಲ್ಲಿನ ಯೋಗ ಶಿಕ್ಷಕರು, ಅದಾಗಲೇ ಯೋಗಕ್ಕೆ ಮನಸೋತಿದ್ದ ಕ್ರೈಸ್ತರು, ಯೋಗದ ಅದೇ ಆಸನಗಳನ್ನ, ಧ್ಯಾನ, ಪ್ರಾಣಾಯಾಮದ ನಿಯಮಗಳನ್ನ ಸ್ವಲ್ಪ ಮಟ್ಟಿಗೆ ಮಾರ್ಪಾಟು ಮಾಡಿಕೊಂಡು ಮಂತ್ರಗಳ ಬದಲಿಗೆ ಏಸುವಿನ ಸ್ಮರಣೆಯನ್ನು ಅದರಲ್ಲಿ ಅಳವಡಿಸಿ ಅದಕ್ಕೆ ಕ್ರಿಶ್ಚಿಯನ್ ಯೋಗವೆಂದು ಕರೆದು ತರಗತಿ ನಡೆಸಲು ಶುರುಮಾಡಿದರು. ಇಂತಹ ತರಗತಿಗಳು ಅಮೆರಿಕದ ಅನೇಕ ನಗರಗಳಲ್ಲಿ ನಡೆಯುತ್ತದೆ. ಶಿಕಾಗೋ, ಫಿಡ್ಸ್ ಬರ್ಗ್, ನ್ಯೂಯಾರ್ಕ್ ಇತ್ಯಾದಿನಗರಗಳಲ್ಲಿ ಕ್ರಿಶ್ಚಿಯನ್ ಯೋಗ ಹೇಳಿಕೊಡುವ ಶಾಲೆಗಳು ಹುಟ್ಟಿಕೊಂಡಿವೆ.
ಕಳೆದ ೧೫ ವರ್ಷಗಳಿಂದ ಶಿಕಾಗೋದ ಟ್ರಿನಿಟಿ ಯುನೈಟೆಡ್ ಚರ್ಚನಲ್ಲಿ ಪ್ರತಿ ಶನಿವಾರ ೭:೩೦ ಕ್ಕೆ ಯೋಗ ತರಗತಿಗಳು ನಡೆಯುತ್ತವೆ. ಅನೇಕ ರೋಮನ್ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಚರ್ಚುಗಳಲ್ಲೂ ಯೋಗ ಕಲಿಸುವಿಕೆ ೧೯೭೦ ರಿಂದಲೇ ಜಾರಿಯಲ್ಲಿದೆ. ಕ್ಯಾಥೋಲಿಕ್ ಆಧ್ಯಾತ್ಮ ಚಿಂತನೆಗಳ ಬಗ್ಗೆ ಅನೇಕ ಪುಸ್ತಕ ಬರೆದಿರುವ ಜಾರ್ಜ್ ಎ ಮೋನೆ “ ಯಾವುದೇ ಆಚರಣೆ ಅಥವಾ ಕ್ರಿಯೆಯ ಫಲಿತಾಂಶ ಮಾನವನ ಜೀವನವನ್ನು ಮತ್ತಷ್ಟು ಸುಂದರವಾಗಿಸುತ್ತದೆ ಎಂದಾದರೆ ಅದನ್ನು ಒಪ್ಪಿಕೊಳ್ಳಿ. ಸುಳ್ಳೇ ಧರ್ಮದ ನೆಪ ಹೇಳಬೇಡಿ “ ಎಂದದ್ದು ಇನ್ನೂ ಕ್ರೈಸ್ಥ ಪಾದ್ರಿಗಳಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಿಲ್ಲವೇನೋ.
ಚರ್ಚುಗಳು ಯೋಗದ ಬಗ್ಗೆ ಇಷ್ಠೆಲ್ಲಾ ಬೊಬ್ಬೆಹೊಡೆದರೂ, ಯೋಗದತ್ತ ಮುಖಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೇ. ಯೋಗ, ಪ್ರಾರ್ಥನೆಯ ಇನ್ನೊಂದು ವಿಧ ಎಂಬುದು ಅನೇಕರ ಅಭಿಪ್ರಾಯ. ಚರ್ಚಿಗೆ ಹೋಗಿ ಪ್ರಾರ್ಥಿಸಿದಾಗ ಸಿಕ್ಕುವ ನೆಮ್ಮದಿ ಸಮಾಧಾನಗಳಿಗಿಂತ ಹೆಚ್ಚಿನ ಮನಃಶಾಂತಿ ಯೋಗ ಮತ್ತು ಧ್ಯಾನಗಳ ಆಚರಣೆಯಲ್ಲಿ ಸಿಗುತ್ತಿದೆ ಎಂದು ಅನೇಕರು ಒಪ್ಪಿಕೊಳ್ಳುತ್ತಾರೆ. ಕೆಲವು ಪಾದ್ರಿಗಳು ಯೋಗ ಆಚರಿಸಿ ಅಡ್ಡಿಯಿಲ್ಲ. ಆದರೆ ಕ್ರಿಶ್ಚಿಯನ್ ಯೋಗವಾಗಿರಲಿ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ. ಯೋಗದ ಲಾಭಬೇಕು ಆದರೆ ಅದನ್ನು ಹಿಂದೂ ಮೂಲದ್ದು ಎಂದು ಒಪ್ಪಿಕೊಳ್ಳದ ಮತ್ತು ಅದನ್ನು ಭಾರತೀಯ ಯೋಗವಾಗಿಯೇ ಅಪ್ಪಿಕೊಳ್ಳಲು ಸಿದ್ದವಿರದ ಚರ್ಚಿನ ಪಾದ್ರಿಗಳ ದ್ವಂದ್ವಗಳು ಮಾತ್ರ ವಿಪರ್ಯಾಸ. ಇದನ್ನು ಅನೇಕರು ಖಂಡಿಸಿದ್ದಾರೆ. ಒರ್ಲಾಂಡೋವಿನ ಅಮೆರಿಕಾ ಹಿಂದೂ ಯೂನಿವರ್ಸಿಟಿಯ ಯೋಗ ಮತ್ತು ಫಿಲಾಸಫಿ ವಿಭಾಗದ ಪ್ರೊಫೆಸರ್ ಸುಭಾಷ್ ತಿವಾರಿ, ಯೋಗ ಮತ್ತು ಹಿಂದೂ ಧರ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಒತ್ತಿ ಹೇಳಿದ್ದಾರೆ. ಯೋಗದ ವಿರುದ್ದ ಮಾತನಾಡುವ ಪಾದ್ರಿಗಳ, ಮುಲ್ಲಾಗಳ ಹೇಳಿಕೆ ಗಮನಿಸಿದರೆ, ಅವರ ಕಳವಳವಿರುವುದು ತಮ್ಮ ಮತಸ್ಥರು ಯೋಗ ಮಾಡುತ್ತಾರೆ ಎಂದಲ್ಲ. ಎಲ್ಲಿ ಯೋಗ ಹಿಂದೂ ಧರ್ಮವನ್ನು ಅವರು ಅಪ್ಪಿಕೊಳ್ಳುಲು ಹೆದ್ದಾರಿಯಾಗಿಬಿಡುತ್ತದೋ ಎಂಬ ಸಂಶಯದಲ್ಲಿ. ಇಂತವರ ಸಂಕುಚಿತ, ರೋಗಗ್ರಸ್ತ ಮನಸ್ಸಿಗೆ ಏನನ್ನೋಣ?
ಶುಕ್ರವಾರದ ಸೇಲಿನ ವೇಳೆಗೆ ಭಾಗ್ಯದ ಲಕ್ಷ್ಮೀ ಬಾರಮ್ಮ….
’ನನಗೆ ತುಂಬಾ ಸಂತೋಷವಾಗುತ್ತಿದೆ, ಈ ವಾರ ನಮ್ಮ ಅಪ್ಪ, ಅಮ್ಮ, ಅಣ್ಣ ಅವನ ಹೆಂಡತಿ, ಬಾಲ್ಯದ ಗೆಳೆಯ, ಅವನ ಕುಟುಂಬ ವರ್ಗದವರು ಎಲ್ಲರೂ ಬರುತ್ತಿದ್ದಾರೆ. ಅವರಿಗೆಲ್ಲಾ ನಮ್ಮ ಮನೆಯಲ್ಲಿ ಜೌತಣ, ವಾರಪೂರ್ತಿ ರಜೆ ತೆಗೆದುಕೊಳ್ಳುತ್ತೇನೆ. ಜೌತಣಕ್ಕೆ ಸಿದ್ದತೆ ಮಾಡಿಕೊಳ್ಳಬೇಕು, ನಾನು ಮತ್ತು ನನ್ನ ಪತ್ನಿ ಸೇರಿಕೊಂಡು ಎಲ್ಲ ಪದಾರ್ಥಗಳನ್ನು ಸಿದ್ದಪಡಿಸುತ್ತೇವೆ. ಶಾಪಿಂಗ್ ಮಾಡಬೇಕಾದ ದೊಡ್ಡ ಪಟ್ಟಿ ಸಿದ್ದವಾಗಿದೆ. ಐ ಆಮ್ ಸೋ ಹ್ಯಾಪಿ ಅಂಡ್ ಐ ಆಮ್ ಥ್ರಿಲ್ಡ್’ ಎಂದು ಅಮೆರಿಕನ್ ಸಹೋದ್ಯೋಗಿ ಹೇಳುತ್ತಿದ್ದ. ಅವನು ಹೇಳುತ್ತಿದ್ದದ್ದು ಈ ವಾರದ ಥ್ಯಾಂಕ್ಸ್ ಗಿವಿಂಗ್ ಡೇ ಬಗ್ಗೆ. ಹೌದು ಈ ವಾರ ಅಮೆರಿಕದಲ್ಲಿ ಎಲ್ಲಿ ನೋಡಿದರೂ ಸಡಗರ, ಸಂಭ್ರಮ. ಜಗಮಗಿಸುವ ದೀಪಗಳು, ಮೋಜು ಮಸ್ತಿಗೆ ತೆರೆದುಕೊಂಡ ಹೊಟೇಲು, ಬಾರುಗಳು, ಒಂದು ಕೊಂಡರೆ ಎರಡು ಫ್ರೀ, ವರ್ಷದ ಅತೀ ಕಡಿಮೆ ಬೆಲೆಗೆ ವಸ್ತುಗಳ ಮಾರಾಟ, ಕ್ಲಿಯರೆನ್ಸ್ ಸೇಲ್ ಎಂಬ ಬೋರ್ಡಿನೊಂದಿಗೆ ಸಿಂಗಾರಗೊಂಡ ಮಾಲ್ ಗಳು, ಮನೆಮನೆಯಲ್ಲೂ ಔತಣ, ಟರ್ಕಿಕೋಳಿಯಿಂದ ತಯಾರಿಸಿದ ಪದಾರ್ಥಗಳು, ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಖುಷಿಪಡುವ ಜನ,
ಇಲ್ಲಿ ನವೆಂಬರ್ ನಾಲ್ಕನೇ ವಾರವೆಂದರೆ ರಜಾ ಕಾಲದ ಆರಂಭ. ಒಂದು ತಿಂಗಳು ಕಳೆದರೆ ಕ್ರಿಸ್ಮಸ್. ಆ ಸಂಭ್ರಮಕ್ಕೆ ಮುನ್ನುಡಿಯಂತಿರುವುದೇ ಥ್ಯಾಂಕ್ಸ್ ಗಿವೀಂಗ್ ಡೇ. ಆದ್ದರಿಂದಲೇ ನವೆಂಬರ್ ಬಂತೆಂದರೆ ಮುಂಬರುವ ರಜಾದಿನಗಳು ಇಲ್ಲಿನ ಜನರ ಸಂತಸವನ್ನು ಹೆಚ್ಚಿಸುತ್ತವೆ. ಎಲ್ಲಿನೋಡಿದರೂ ಚುರುಕುತನ, ಲವಲವಿಕೆ, ಮನೆಗಳ ಸಿಂಗಾರ, ನೆಂಟರಿಷ್ಠರನ್ನು ಕರೆದು ಜೌತಣ, ಎಲ್ಲವೂ ಈ ನವೆಂಬರ್ ಮತ್ತು ಡೆಸೆಂಬರಿನಲ್ಲೇ. ವರ್ಷದ ಆರಂಭದಿಂದಲೂ ತಮ್ಮ ತಮ್ಮ ಕೆಲಸಗಳಲ್ಲಿ ದಣಿವೆಣಿಸದೆ ದುಡಿವ ಜನ ಈ ವರ್ಷಾಂತ್ಯದ ಸಂಭ್ರಮಕ್ಕೆ ಕಾಯುತ್ತಿರುತ್ತಾರೆ. ಥ್ಯಾಂಕ್ಸ್ ಗಿವಿಂಗ್ ಡೇ ಇಂದ ಕ್ರಿಸ್ಮಸ್ ವರೆಗೆ ವರ್ಷಾರಂಭದಿಂದ ಕೂಡಿಟ್ಟ ರಜಾದಿನಗಳನ್ನ ಬಳಕೆಮಾಡಿಕೊಂಡು ಸ್ನೇಹಿತರು, ಬಂಧುಬಳಗ, ಪಾರ್ಟಿ ಎಂದು ಯಾವತ್ತಿನ ಕೆಲಸದ ಜಂಜಾಟಗಳಿಂದ ದೂರವುಳಿಯುತ್ತಾರೆ.
ಈ ಥ್ಯಾಂಕ್ಸ್ ಗಿವಿಂಗ್ ಡೇ ಬರುವುದು ನವೆಂಬರ್ ನಾಲ್ಕನೇ ಗುರುವಾರ. ಈ ಆಚರಣೆ ಅಮೆರಿಕದಲ್ಲಿ ಪ್ರಾರಂಭವಾಗಿದ್ದು ಹೇಗೆ ಎಂದು ತಿಳಿಯಬೇಕಾದರೆ ಸುಮಾರು ನಾಲ್ಕುನೂರು ವರ್ಷಗಳಷ್ಟು ಇತಿಹಾಸದ ಪುಟಗಳನ್ನು ಹಿಂದೆ ಸರಿಸಬೇಕು. ಈ ಬಗ್ಗೆ ನಿಮಗೆ ವಿವರಿಸಬೇಕಾದರೆ ಒಂದು ಪುಟ್ಟ ಕಥೆಯನ್ನೇ ಹೇಳಬೇಕು, ಕೇಳಿ ಹೇಳುತ್ತೇನೆ. ’ಹದಿನೇಳನೇ ಶತಮಾನದಲ್ಲಿ ಇಂಗ್ಲೇಂಡಿನ ಒಂದು ಪ್ರದೇಶವನ್ನು ಜೇಮ್ಸ್ ಎಂಬ ರಾಜ ಆಳುತ್ತಿದ್ದ. ಅವನ ಮತಾಂಧತೆ ಎಷ್ಠಿತ್ತೆಂದರೆ ಜನರು ತಾನು ಪೂಜಿಸುವ ದೇವರನ್ನೇ ಪೂಜಿಸಬೇಕು ಮತ್ತು ತಾನು ಪೂಜಿಸುವ ರೀತಿಯಲ್ಲೇ ಪೂಜಿಸಬೇಕೆಂಬ ಕರಾರು ಅವನದು. ಹಾಗೊಮ್ಮೆ ಯಾರಾದರೂ ಇತರ ದೇವರುಗಳನ್ನ ಪೂಜಿಸಿದರೆ ಅವನು ಕೋಪಗೊಳ್ಳುತ್ತಿದ್ದ, ಅಂತಹ ಜನರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಜೈಲಿಗಟ್ಟುತ್ತಿದ್ದ. ಕೆಲವೊಮ್ಮೆ ಅನೇಕರನ್ನು ಕೊಂದದ್ದೂ ಇದೆ. ರಾಜನ ಈ ಹುಚ್ಚಾಟವನ್ನು ಒಂದಷ್ಟು ಜನ ಸಹಿಸದಾದರು, ಆದರೆ ರಾಜನ ಈ ಮನೋಧರ್ಮವನ್ನು ವಿರೋಧಿಸಿ ಆ ದೇಶದಲ್ಲಿ ಉಳಿಯುವಹಾಗೂ ಇರಲಿಲ್ಲ. ಕೊನೆಗೆ ರಾಜನ ವರ್ತನೆಯಿಂದ ರೋಸಿಹೋದ ನೂರು ಜನರ ತಂಡವೊಂದು ಆ ದೇಶಬಿಟ್ಟು ಹಡಗಿನ ಮೂಲಕ ವಾಸಿಸಲು ಯೋಗ್ಯವಾದ ಪ್ರದೇಶವನ್ನು ಹುಡುಕುತ್ತಾ ಹೊರಟರು. ಶೀತಗಾಳಿ, ಮಂಜುಗೆಡ್ಡೆಗಳು, ಸಾಂಕ್ರಾಮಿಕ ರೋಗಗಳು ಇತ್ಯಾದಿಗಳಿಂದ ಅವರಲ್ಲಿ ಅನೇಕರು ಮಾರ್ಗಮಧ್ಯದಲ್ಲೇ ತೀರಿಕೊಂಡರು. ಕೊನೆಗೂ ಉಳಿದ ಕೆಲವರು, ಒಂದು ಯೋಗ್ಯ ಪ್ರದೇಶವನ್ನು ಕಂಡುಕೊಂಡರು. ಅದು ಅಮೇರಿಕಾ ಆಗಿತ್ತು, ಅಲ್ಲಿ ನೆಲೆಯೂರಿದರಾದರೂ ನವೆಂಬರ್ ತಿಂಗಳಿನ ಹವಾಮಾನ ವೈಪರಿಥ್ಯ, ಹಸಿವು, ಪ್ರಯಾಣದ ದಣಿವು ಎಲ್ಲವೂ ಆ ವಲಸಿಗರನ್ನು ಹೈರಾಣಮಾಡಿತ್ತು. ಆದರೆ ಅಮೆರಿಕದಲ್ಲಿದ್ದ ಮೂಲ ನಿವಾಸಿಗಳಾದ ಇಂಡಿಯನ್ನರು ಕರುಣಾಮಯಿಗಳಾಗಿದ್ದರು. ವಲಸಿಗರನ್ನು ಉಪಚರಿಸಿ, ಅವರಿಗೆ ಜೋಳವನ್ನು ಬೆಳೆಯುವ ಬಗ್ಗೆ ತಿಳಿಸಿಕೊಟ್ಟರು. ಹೀಗೆ ವ್ಯವಸಾಯದ ವಿಧಾನವನ್ನು ಇಂಡಿಯನ್ನರಿಂದ ಕಲಿತ ವಲಸಿಗರು, ತಾವೇ ದವಸ ಧಾನ್ಯಗಳನ್ನು ಬೆಳೆಯಲು ಪ್ರಾರಂಭಿಸಿದರು. ಉತ್ತಮ ಬೆಳೆಯಿಂದಾಗಿ ಜೀವನ ಸಮೃದ್ದವಾಗತೊಡಗಿತು. ಇಲ್ಲಿಯವರೆಗೆ ವಿವಿಧ ರೂಪದಲ್ಲಿ ಬಂದು ತಮ್ಮನ್ನು ಕಾಯ್ದ ದೇವರಿಗೆ ಕೃತಜ್ನತೆ ಸಲ್ಲಿಸುವ ಸಲುವಾಗಿ ಥ್ಯಾಂಕ್ಸ್ ಗಿವಿಂಗ್ ಡೇ ಎಂಬ ಆಚರಣೆ ಚಾಲ್ತಿಗೆತಂದರು. ತಮಗೆ ನೆರವಾದ ಮೂಲನಿವಾಸಿ ಇಂಡಿಯನ್ನರನ್ನು ಕರೆದು ಆ ದಿನ ಜೌತಣ ಕೊಟ್ಟರು.ಅದು ಮೊದಲು ನೆಡೆದ ಥ್ಯಾಂಕ್ಸ್ ಗಿವಿಂಗ್ ಆಚರಣೆ’
ನಂತರ ೧೬೨೩ರಲ್ಲಿ ಭೀಕರ ಬರ ಅಮೇರಿಕವನ್ನು ಕಾಡಿತು. ಆಗ ಕಂಗಾಲಾದ ಜನ, ಉಪವಾಸ ಮಾಡಿ, ದೇವರ ಮೊರೆ ಹೋಗುವ ಉಪಾಯ ಕಂಡುಕೊಂಡರು. ಬರ ಕಳೆದು ಮತ್ತೆ ಸಮೃದ್ದಿ ನೆಲೆಸಿತು. ನಂತರದ ವರ್ಷಗಳಿಂದ ಈ ಆಚರಣೆ ಪ್ರತಿವರ್ಷದ ಆಚರಣೆಯಾಗಿ ರೂಪುಗೊಂಡಿತು. ನಂತರ ಅಮೇರಿಕಾದ ಕ್ರಾಂತಿಯ ಸಂದರ್ಭದಲ್ಲಿ ಅಮೆರಿಕನ್ ಕಾಂಗ್ರೇಸ್, ವರ್ಷದಲ್ಲಿ ಒಂದು ಬಾರಿಯಾದರೂ ಈ ಥ್ಯಾಂಕ್ಸ್ ಗಿವಿಂಗ್ ಡೇ ಆಚರಿಸಲು ಕರೆನೀಡಿತು. ೧೭೮೯ರಲ್ಲಿ ಜಾರ್ಜ್ ವಾಷಿಂಗ್ಟನ್ ಅಮೇರಿಕದ ಸ್ವಾತಂತ್ರ್ಯ ಹೋರಾಟ, ಪ್ರಜಾಪ್ರಭುತ್ವದ ಸ್ಥಾಪನೆಯಲ್ಲಿ ಸುಖಾಂತ್ಯವಾಗಿದ್ದಕ್ಕೆ ಧನ್ಯವಾದ ಸಲ್ಲಿಸುವ ಸಲುವಾಗಿ ಥ್ಯಾಂಕ್ಸ್ ಗಿವಿಂಗ್ ಡೇ ಆಚರಿಸಲು ಕರೆಯಿತ್ತ. ಆದರೂ ಇದು ಅಮೇರಿಕದ ಅಧಿಕೃತ ಆಚರಣೆಯಾಗೇನೂ ಇರಲಿಲ್ಲ. ನಿರ್ಧಿಷ್ಠ ದಿನದಂದು ಆಚರಿಸುವ ಪರಿಪಾಠವೂ ಬೆಳೆದಿರಲಿಲ್ಲ.
ಆದರೆ ಇದನ್ನು ನಿರ್ಧಿಷ್ಠ ದಿನದಂದು ಆಚರಿಸುವ ಘೋಷಣೆ ಸರ್ಕಾರದಿಂದ ಆಗಬೇಕು ಎಂಬ ಕೂಗು ಮಾತ್ರ ಇತ್ತು. ೧೮೧೭ ರಿಂದಲೂ ಅಮೇರಿಕದ ಪ್ರಸಿದ್ದ ಬರಹಗಾರ್ತಿ ಮತ್ತು ವಾರಪತ್ರಿಕೆಯ ಸಂಪಾದಕಿಯಾಗಿದ್ದ ಸಾರಾ ಜೋಸೆಫ್ ಥ್ಯಾಂಕ್ಸ್ ಗಿವಿಂಗ್ ಡೇ ಯನ್ನು ಅಮೇರಿಕದ ಅಧಿಕೃತ ರಾಷ್ಟ್ರೀಯ ಆಚರಣೆಯನ್ನಾಗಿ ಮಾಡಿ, ಆ ದಿನವನ್ನು ರಜಾದಿನವೆಂದು ಘೋಷಿಸಬೇಕೆಂದು ಒಂದು ಚಳುವಳಿಯನ್ನೇ ಹುಟ್ಟು ಹಾಕಿದಳು, ಆ ಬಗ್ಗೆ ಲೇಖನಗಳನ್ನು ಬರೆದಳು, ಅನೇಕ ಸರ್ಕಾರಗಳಿಗೆ ಮನವಿ ನೀಡುತ್ತಾ ಬಂದಳು. ಸತತ ೩೬ ವರ್ಷದ ಪ್ರಯತ್ನದಿಂದಾಗಿ ೧೮೬೩ ರಲ್ಲಿ ಅಬ್ರಹಂ ಲಿಂಕನ್ ಆ ಮನವಿಗೆ ಪುರಸ್ಕಾರವಿತ್ತು ನವೆಂಬರ್ ನ ನಾಲ್ಕನೇ ಗುರುವಾರವನ್ನು ಥ್ಯಾಂಕ್ಸ್ ಗಿವಿಂಗ್ ಡೇ ಆಚರಿಸಲು ನಿಗದಿಗೊಳಿಸಿದ. 1939 ರಲ್ಲಿ ಫ್ರಾಂಕ್ಲಿನ್ ರೋಸ್ವೆಲ್ಟ್ ರಜಾದಿನವನ್ನು ಒಂದು ವಾರಕ್ಕೆ ವಿಸ್ತರಿಸಿದ. ಅಮೇರಿಕ ಆಗ ಆರ್ಥಿಕ ಸಂಕಷ್ಠ ಎದುರಿಸುತ್ತಿತ್ತು. ಒಂದು ವಾರಗಳ ಕಾಲ ರಜಾ ನೀಡಿದರೆ ಜನ ಹೆಚ್ಚೆಚ್ಚು ಖರೀದಿ ಮಾಡುತ್ತಾರೆ ತನ್ಮೂಲಕ ಉದ್ಯಮದಾರರು ಮತ್ತು ಮಾರಾಟಗಾರರು ಕೊಂಚ ಮಟ್ಟಿಗಾದರೂ ಅರ್ಥಿಕವಾಗಿ ಸುಧಾರಿಸುತ್ತಾರೆ ಎಂಬುದು ರೋಸ್ವೆಲ್ಟ್ ನ ಉಪಾಯವಾಗಿತ್ತು. ಆದರೆ ನಂತರ ೧೯೪೧ ರಲ್ಲಿ ಮತ್ತೆ ಎಥಾ ಪ್ರಕಾರ ನವೆಂಬರ್ ನಾಲ್ಕನೇ ಗುರುವಾರಕ್ಕೆ ಈ ಆಚರಣೆ ಸೀಮಿತಗೊಂಡಿತು.
ಮೂಲದಲ್ಲಿ ಈ ಆಚರಣೆ ಉದ್ದೇಶ ಇಷ್ಠೇ, ಆರೋಗ್ಯ, ಆಯುಷ್ಯ, ಸಕಲ ಸೌಭಾಗ್ಯ ಕರುಣಿಸಿದ ದೇವರಿಗೆ ಧನ್ಯವಾದ ಹೇಳುವುದು. ಆದರೆ ಇಂದು ಅಷ್ಟಕ್ಕೇ ಸೀಮಿತವಾಗಿಲ್ಲ. ಥ್ಯಾಂಕ್ಸ್ ಗಿವಿಂಗ್ ಡೇ ಇಂದರೆ ಅಮೆರಿಕನ್ನರ ಸಡಗರವೇ ಬೇರೆ. ವಾರಗಳ ಮೊದಲೇ ಈ ಆಚರಣೆಗೆ ಅಮೆರಿಕನ್ನರು ತಯಾರಿ ನಡೆಸುತ್ತಾರೆ. ಟರ್ಕಿಯನ್ನು ಯಾವಾಗ ತರಬೇಕು, ಏನೇನು ಪದಾರ್ಥ ಮಾಡಬೇಕು, ಯಾರನ್ನೆಲ್ಲಾ ಔತಣಕ್ಕೆ ಕರೆಯಬೇಕು ಎಂಬ ಸಿದ್ದತೆ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಔತಣ ತೀರಾ ಹತ್ತಿರದ ಕುಟುಂಬವರ್ಗದವರಿಗೆ ಮತ್ತು ಸ್ನೇಹಿತರಿಗೆ ಮಾತ್ರ. ಟರ್ಕಿ ಪಕ್ಷಿಯ ವಿವಿಧ ತಿನಿಸುಗಳು ಇರಲೇಬೇಕು. ಜೊತೆಗೆ ಪರಸ್ಪರ ಉಡುಗೊರೆ ವಿನಿಮಯ ಕೂಡ ನೆಡೆಯುತ್ತದೆ. ಹಲವು ನಗರಗಳಲ್ಲಿ ಪರೇಡ್ ಕೂಡ ನಡೆಯುತ್ತದೆ. ಅದರಲ್ಲೂ ನ್ಯೂಯಾರ್ಕ್ ನಗರದಲ್ಲಿ ನಡೆಯುವ ಪರೇಡ್ ವಿಶೇಷ ಮತ್ತು ಆಕರ್ಷಣೀಯ.
ಬ್ಲಾಕ್ ಪ್ರೈಡೇ, ನವೆಂಬರ್ ನ ನಾಲ್ಕನೇ ಶುಕ್ರವಾರವನ್ನ ಕರೆಯುವುದೇ ಹಾಗೇ. ಅಂದು ವ್ಯಾಪಾರಿಗಳಿಗೆ ಸುಗ್ಗಿ, ಕೊಳ್ಳುಬಾಕರಿಗೆ ಜೇಬಿಗೆ ಕತ್ತರಿ. ವಾಲ್ ಮಾರ್ಟ್, ಟಾರ್ಗೆಟ್, ಬೆಸ್ಟ್ ಬೈ, ಮೇಸೀಸ್ ನಂತಹ ಮಾಳಿಗೆಗಳು ತಿಂಗಳಿಗೆ ಮುಂಚೆಯೇ ತಮ್ಮ ವೆಬ್ ಸೈಟಿನಲ್ಲಿ, ಜಾಹಿರಾತು ಪತ್ರಿಕೆಗಳಲ್ಲಿ ಯಾವೆಲ್ಲಾ ವಸ್ತುಗಳು, ಬ್ಲಾಕ್ ಪ್ರೈಡೇ ದಿನ ಕಡಿಮೆ ಬೆಲೆಗೆ ದೊರಕುತ್ತವೆ ಎನ್ನುವುದನ್ನು ಪ್ರಕಟಿಸುತ್ತವೆ. ನೀವು ನಂಬಲಾರಿರಿ, ಜನರು ಒಂದೆರೆಡು ದಿನಗಳ ಮೊದಲೇ ಈ ಮಾಳಿಗೆಗಳ ಮುಂದೆ ಟೆಂಟ್ ಹಾಕಿಕೊಂಡು ವಾಸ್ತವ್ಯ ಹೂಡಿಬಿಡುತ್ತಾರೆ. ಶುಕ್ರವಾರದ ಬೆಳಗಿನ ಜಾವ 3 ಕ್ಕೆಲ್ಲಾ ಈ ಮಾಲುಗಳು ಬಾಗಿಲು ತೆರೆಯುತ್ತವೆ. ಜನ ಕಿ.ಮಿ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ತಮಗೆ ಬೇಕಾದ ವಸ್ತುಗಳನ್ನು ಕೊಳ್ಳುತ್ತಾರೆ. ಇದು ನಿರಂತರವಾಗಿ ರಾತ್ರಿ ಹನ್ನೆರಡವರೆಗೂ ನಡೆಯುತ್ತದೆ. ಅಮೆರಿಕದ ಆರ್ಥಿಕ ತಜ್ನರ ಪ್ರಕಾರ ವರ್ಷದ ಅಷ್ಟೂ ತಿಂಗಳಿನಲ್ಲಿ ನಷ್ಟದಲ್ಲಿ ವ್ಯಾಪಾರ ವಹಿವಾಟು ನೆಡೆದರೂ, ಈ ಬ್ಲಾಕ್ ಪ್ರೈಡೇ ದಿನ ನಡೆಯುವ ವ್ಯಾಪಾರ ಅಷ್ಟೂ ನಷ್ಠವನ್ನು ತುಂಬಿ ಲಾಭದತ್ತ ವ್ಯಾಪಾರಿಗಳನ್ನ ಕೊಂಡೊಯ್ಯುತ್ತದಂತೆ. ಬ್ಯಾಲೆನ್ಸ್ ಶೀಟಿನಲ್ಲಿ ನಷ್ಟವನ್ನ ಕೆಂಪುಶಾಯಿ ಉಪಯೋಗಿಸಿ ಬರೆಯುತ್ತಾರೆ, ಲಾಭ ಗುರುತು ಹಾಕಲು ಕಪ್ಪು ಶಾಯಿ ಬಳಸುತ್ತಾರೆ. ನವೆಂಬರ್ ನಾಲ್ಕನೇ ಶುಕ್ರವಾರ ಲಾಭತರುವುದರಿಂದ ಅದಕ್ಕೆ ಬ್ಲಾಕ್ ಪ್ರೈಡೇ ಎನ್ನುವುದು ಒಂದು ಕಾರಣ. ಒಟ್ಟಿನಲ್ಲಿ ಥ್ಯಾಂಕ್ಸ್ ಗಿವಿಂಗ್ ಡೇ ಮತ್ತು ಬ್ಲಾಕ್ ಪ್ರೈಡೇ ಎಂದರೆ ಅಮೆರಿಕನ್ನರಿಗೆ ಎಲ್ಲಿಲ್ಲದ ಸಂಭ್ರಮ, ಕೊಳ್ಳುಬಾಕರಿಗೆ ಬೇಕೋ ಬೇಡವೋ ಎಲ್ಲವನ್ನೂ ಖರೀದಿಸುವ ಹಂಬಲ, ವ್ಯಾಪಾರಿಗಳಿಗೆ ಲಾಭದ ಖುಷಿ, ವರ್ಷಪೂರ್ತಿ ವ್ಯಾಪಾರ ಕುಂಟುತ್ತಿದ್ದರೂ ಥ್ಯಾಂಕ್ಸ್ ಗಿವಿಂಗ್ ಡೇ ಮರುದಿನ, ಶುಕ್ರವಾರದ ಸೇಲಿನ ವೇಳೆಗೆ ಭಾಗ್ಯದ ಲಕ್ಷ್ಮೀ ಬಾರಮ್ಮ ಎಂದು ವ್ಯಾಪಾರಿಗಳು ಆಶಾಭಾವದಿಂದ ನೋಡುತ್ತಾರೆ. ಕೊಳ್ಳುಬಾಕರ ಜೇಬಿನಿಂದ ಲಕ್ಷ್ಮೀ ವ್ಯಾಪರಿಗಳ ಖಜಾನೆ ಸೇರುತ್ತಾಳೆ.
ಅಪ್ಪನಂತಾಗದೆ ದಿಟ್ಟತನ ತೋರಿದ ಮಗಳು ಇಂದಿರಾ!
ಆಕೆಯಲ್ಲೊಂದು ಅಭದ್ರತಾ ಭಾವವಿದ್ದಿದ್ದು ನಿಜ. ಆ ಅಭದ್ರತೆಯ ಭಾವವೇ ಆಕೆಯ ವರ್ತನೆಯನ್ನು ನಿಯಂತ್ರಿಸುತ್ತಿತ್ತು. ಸಿಟ್ಟು, ಸೇಡು, ಸರ್ವಾಧಿಕಾರಿ ಮನಸ್ಸು, ಸಂಶಯ, ಅಸಹನೆ, ಅಳುಕು ಇದೆಲ್ಲಾ ಅಂತಹದೊಂದು ಅಭದ್ರತೆ ಸೃಷ್ಠಿಸಿದ ವ್ಯಕ್ತಿತ್ವದ ಭಾಗವಾಗಿತ್ತು. ಒಮ್ಮೊಮ್ಮೆ ಗಟ್ಟಿತನದಿಂದ ಘರ್ಜಿಸಿದರೂ ಮಗದೊಮ್ಮೆ ಮಗುವಿನಂತೆ ಅತ್ತಿದ್ದು, ಅಳುಕಿನಿಂದ ಹಿಂದೆ ಸರಿದದ್ದು, ಕೀಳರಿಮೆಯಿಂದ ನರಳಿದ್ದು ಎಲ್ಲವೂ ಇದೆ. ಇವೆಲ್ಲದರ ಒಟ್ಟು ರೂಪವೇ ಇಂದಿರಾ ಪ್ರಿಯದರ್ಶಿನಿ. ಹಾಗೇ ನೋಡಿದರೆ ದೇಶದ ಪ್ರಧಾನಿಯ ಸ್ಥಾನದಲ್ಲಿ ಕೂತು ಭಾರತವನ್ನು ಹೆಚ್ಚು ಅವಧಿಗೆ ಆಳಿದ ಎರಡನೆಯ ಪ್ರಧಾನಿ ಇಂದಿರಾ ಗಾಂಧಿ. ಆದರೆ ಅವರ ಬದುಕಲ್ಲಿ ನೆಮ್ಮದಿ, ಸಂತಸ, ಧನ್ಯತಾಭಾವ ಇತ್ತಾ ನೋಡಿದರೆ ಕಾಣುವುದು ಶೂನ್ಯ. ಬಾಲ್ಯದಿಂದಲೂ ಒಂದುಕಡೆ ಹಾಸಿಗೆ ಹಿಡಿದ ತಾಯಿ, ಅಧಿಕಾರ ವ್ಯಾಮೋಹದಿಂದ ಸಾಂಸಾರಿಕ ಜೀವನವನ್ನು ಕಡೆಗಣಿಸಿದ ತಂದೆ, ವಿದೇಶಕ್ಕೆ ಹೋದರೂ ಕೈಹಿಡಿಯದ ಓದು, ಇಷ್ಟಪಟ್ಟು ಕಟ್ಟಿಕೊಂಡವನ ದುಷ್ಠತನ,ದುರಭ್ಯಾಸ. ಅಷ್ಟೇನೂ ಎತ್ತರಕ್ಕೇರದ ಮಗ ರಾಜೀವ್, ಕನಿಷ್ಠ ಸಭ್ಯತನವನ್ನೂ ರೂಡಿಸಿಕೊಳ್ಳದ ಕಿರಿಮಗ ಸಂಜಯ್, ನಗುಮುಖವಿದ್ದರೂ ಒಳಗೊಳಗೇ ಶಪಿಸುತ್ತಿದ್ದ ಸೊಸೆಯಂದಿರು, ಕೊನೆಗೆ ರಸ್ತೆಯಲ್ಲಿ ಗುಂಡಿಗೆ ಬಲಿಯಾಗಬೇಕಾದ ಸಂದರ್ಭ ಯಾವುದರಲ್ಲಿತ್ತು ನೆಮ್ಮದಿ, ಸಂತಸ.
ಒಮ್ಮೊಮ್ಮೆ ದೊಡ್ಡವರ ಜೀವನದ ಪುಟ ಸರಿಸುವಾಗ ಯಾವುದರಲ್ಲಿತ್ತು ಇವರ ದೊಡ್ಡತನ ಎಂಬ ಪ್ರಶ್ನೆ ಮೂಡುತ್ತದೆ. ಹಣ, ಅಧಿಕಾರ, ಹುದ್ದೆ ಎಲ್ಲದರಲ್ಲೂ ಉನ್ನತ ಸ್ಥಾನದಲ್ಲಿದ್ದರೂ ವ್ಯಕ್ತಿತ್ವದಲ್ಲಿನ ದುರ್ಬಲತೆ ರಾಚುತ್ತದೆ. ಪಪುಲ್ ಜಯಕರ್ ಬರೆದ ಇಂದಿರಾ ಜೀವನಚರಿತ್ರೆ ಪುಟ ಸರಿಸುವಾಗ, ಎಲ್ಲೋ ಇಂದಿರಾರನ್ನು ಪೂರ್ಣವಾಗಿ ತೆರೆದಿಡುವ ಪ್ರಯತ್ನ ಆ ಕೃತಿಯಲ್ಲಿ ಆಗಿಲ್ಲವೇನೋ ಎನಿಸಿತು. ಪಪುಲ್ ಜಯಕರ್ ಇಂದಿರಾರನ್ನು ತೀರಾ ಹತ್ತಿರದಿಂದ ಕಂಡವರು, ಇಂದಿರಾ ಸಮಸ್ಯೆಗಳಿಗೆ ಕಿವಿಯಾದವರು, ಸಾಂತ್ವಾನದ ಮಾತುಗಳಾಡಿದವರು. ಆದರೂ ಆ ಆಪ್ತತೆ ಇಂದಿರಾ ವಯುಕ್ತಿಕ ಜೀವನದ ಯಾರಿಗೂ ಗೊತ್ತಿರದ ವಿಷಯವನ್ನೇನು ತೆರೆದಿಡಲು ನೆರವಾಗಲಿಲ್ಲ. ಕಳೆದವಾರ ನೆಹರೂರ ಬಗ್ಗೆ ಬರೆಯುವಾಗ ಜೆ.ಬಂದೋಪಾಧ್ಯಾಯರ ಕೃತಿಯನ್ನು ಉಲ್ಲೇಖಿಸಿದ್ದೇ. ಅದೇ ಕೃತಿಯಲ್ಲಿ ಅವರು ಹೇಳುತ್ತಾರೆ ಬಾಲ್ಯದಿಂದಲೂ ಇಂದಿರಾ ಅಳುಕಿನಿಂದಲೇ ಬೆಳೆದರು. ಹೆಚ್ಚು ಮಾತನಾಡುತ್ತಿರಲಿಲ್ಲ. ಶಾಂತಿನಿಕೇತನದಿಂದ ವಿದೇಶಕ್ಕೆ ತೆರಳಿ ಬ್ರಿಸ್ಟಲ್ ನಲ್ಲಿ ವಿದ್ಯಾಭ್ಯಾಸಕ್ಕೆ ಹೋದರೂ ಅಲ್ಲೂ ಅವರು ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗಲಿಲ್ಲ. ಜೊತೆಗೆ ಅನಾರೋಗ್ಯವೂ ಕಾಡಿದ್ದಿದೆ. ಇದೆಲ್ಲವುಗಳಿಂದ ಅವರಲ್ಲಿ ಕೀಳರಿಮೆ ಮೂಡಿತ್ತು. ಆ ಕೀಳರಿಮೆ ಮುಂದೆ ಅವರು ಪ್ರಧಾನಿಯಾದಾಗ ಕೂಡ ಅವರ ವರ್ತನೆಯಲ್ಲಿ ಅಭಿವ್ಯಕ್ತವಾಗಿತ್ತು.
ಇನ್ನು ಇಂದಿರಾರಿಗೆ ತೀರಾ ಆಪ್ತರಾಗಿದ್ದ ಮತ್ತು ಅವರ ಎಲ್ಲ ತಪ್ಪುಗಳನ್ನು ಮತ್ತು ಎಮೆರ್ಜೆನ್ಸಿಯಂತಹ ಅಕ್ಷಮ್ಯಗಳನ್ನು ಕೂಡ ಒಂದು ಹಂತದಲ್ಲಿ ಸಮರ್ಥಿಸುತ್ತಿದ್ದ ಪತ್ರಕರ್ತ ಖುಷವಂತ್ ಸಿಂಗ್ ಇಂದಿರಾ ಬಗ್ಗೆ ಹೇಳುವುದು ಹೀಗೆ. “ ಇಂದಿರಾ ಯಾವುದೇ ಟೀಕೆಗಳನ್ನು ಕೂಡ ಧನಾತ್ಮಕವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ತಮಗೆ ಪ್ರತಿಸ್ಪರ್ಥಿಯಾಗಿ ಯಾರಾದರೂ ಕಂಡರೆ ಅವರನ್ನು ತೆರೆಯಹಿಂದೆ ಸರಿಸುವ ಕೆಲಸಕ್ಕೆ ಕೈಹಾಕುತ್ತಿದ್ದರು. ಜಯಪ್ರಕಾಶ ನಾರಾಯಣರು ತನಗೆ ಪ್ರತಿಸ್ಪರ್ಧಿಯಾಗಬಲ್ಲರು ಎಂದು ಅವರಿಗೆ ಅನ್ನಿಸಿತ್ತು. ಆದ್ದರಿಂದಲೇ ಜೆಪಿಯವರನ್ನು ಮೂಲೆಗುಂಪುಮಾಡಲು ಶತಾಯಗತಾಯ ಪ್ರಯತ್ನಿಸಿದರು. ಮುಖ್ಯವಾಗಿ ತೀರಾ ಓದಿಕೊಂಡ, ಸಜ್ಜನರ ಸಹವಾಸ ಅವರಿಗೆ ಅಪಥ್ಯವಾಗಿತ್ತು. ಬಹುಶಃ ಇದಕ್ಕೆ ಕಾರಣ ಅವರ ಕೀಳರಿಮೆ, ತಾನು ವಿಧ್ಯಾಭ್ಯಾಸದಲ್ಲಿ ಹಿಂದುಳಿದವಳೆಂಬ ಅಳುಕು. ಆದ್ದರಿಂದಲೇ ತಮ್ಮ ಸುತ್ತ ಕೇವಲ ಹೊಗಳು ಭಟ್ಟರನ್ನ, ಅವಿವೇಕಿಗಳನ್ನ ಬಿಟ್ಟುಕೊಂಡರು.”
ಯಾರೆಲ್ಲಾ ಇಂದಿರಾ ಸುತ್ತ ಇದ್ದರೋ ಅವರ ಅರ್ಹತೆಗಳೇನು ಎಂದು ನೋಡಿದರೆ ಖುಷವಂತರ ಮಾತು ಸತ್ಯವೆನಿಸುತ್ತದೆ. ಯಶಪಾಲ್ ಕಪೂರ್, ಆರ್.ಕೆ ಧವನ್, ಮೊಹಮದ್ ಯೂನಸ್ ಎಲ್ಲರೂ ಇಂದಿರಾ ಆಪ್ತರೆಂಬ ಕಾರಣಕ್ಕೆ ಸರ್ಕಾರದ ಪ್ರಮುಖ ವಿಷಯದಲ್ಲಿ ಮೂಗುತೂರಿಸಿದವರು. ನೆಹರು ಕುಟುಂಬದೊಂದಿಗೆ ಆಪ್ತವಾಗಿದ್ದರೆಂಬ ಕಾರಣಕ್ಕೆ ಜಿ.ಪಾರ್ಥಸಾರತಿ ಪಾಲಿಸಿ ಅಂಡ್ ಪ್ಲಾನಿಂಗ್ ಕಮಿಷನ್ನಿನ ಛೇರ್ಮನ್ ಆದರು. ಖಾನ್ ಅಬ್ದುಲ್ ಗಫರ್ ಖಾನರ ಪುತ್ರ ಎಂಬ ಕಾರಣಕ್ಕೆ ಮೊಹಮದ್ ಯೂನಸ್ ರನ್ನು ತಮ್ಮ ಆಪ್ತಪಾಳಯಕ್ಕೆ ಇಂದಿರಾ ಕೆರೆದುಕೊಂಡರು. ಪರಮೇಶ್ವರ ನಾರಾಯಣ ಹಸ್ಕರ್ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸದೆ ಅಧಿಕಾರಿಯಾಗಿ ಸೇರ್ಪಡೆಯಾದರು. ಇಂದಿರಾರ ಅವಧಿಯಲ್ಲೇ ಭ್ರಷ್ಠಾಚಾರ ಹೆಮ್ಮರವಾಗಿ ಬೆಳೆದದ್ದು. ಅಧಿಕಾರಿಗಳು, ಸಚಿವರುಗಳು ಎಷ್ಠೇ ಭ್ರಷ್ಠರಾದರೂ ಇಂದಿರಾ ಸಹಿಸುತ್ತಿದ್ದರು. ಹಾಗೊಮ್ಮೆ ಅವರು ಇಂದಿರಾರ ವಿರುದ್ದ ಧ್ವನಿಯೆತ್ತಿದ್ದರೆ, ಅದೇ ಭ್ರಷ್ಠತೆಯ ನೆಪವೊಡ್ಡಿ ಅವರನ್ನು ಕಿತ್ತೊಗೆಯುತ್ತಿದ್ದರು.
ತೀರಾ ಅಚ್ಚರಿ ಎನಿಸುವ ಅವರ ವಯುಕ್ತಿಕ ವಿಷಯಗಳಲ್ಲಿ ಒಂದೆಂದರೆ ಅವರಿಗೆ ತಮ್ಮ ಸುತ್ತ ಇತರ ಹೆಂಗಸರು ಸುಂದರವಾಗಿ ಕಂಡರೆ ಕರುಬುವ ಗುಣವಿತ್ತು. ಸಚಿವೆ ತಾರಕೇಶ್ವರಿ ಇಂತಹ ಕರುಬುವಿಕೆಗೆ ಬಲಿಯಾಗಿದ್ದರು. ತಮ್ಮ ಪತಿ ಫಿರೋಜ್ ಗಾಂಧಿಯೊಂದಿಗೆ ತಾರಕೇಶ್ವರಿ ಸಲಿಗೆಯಿಂದ ನಡಿದುಕೊಳ್ಳುತ್ತಾರೆಂಬ ಗುಮಾನಿ ಇಂದಿರಾರಿಗಿತ್ತು. ಒಂದೊಮ್ಮೆ ತಾರಕೇಶ್ವರಿ ಇಂದಿರಾರ ಕಾಲು ಹಿಡಿದು ಕ್ಷಮೆ ಕೇಳಿದ್ದರಂತೆ, ಆದರೆ ಇಂದಿರಾ ಅವರನ್ನು ಕ್ಷಮಿಸಿರಲಿಲ್ಲ. ನಿಮಗೆ ಗೊತ್ತಿದ್ದ ಹಾಗೆ ಗರಿಗರಿ ಇಸ್ತ್ರಿಯ ಸೀರೆ, ಒಪ್ಪವಾಗಿ ಬಾಚಿದ ಕೂದಲು, ಮುಖದ ಸಿಂಗಾರ ಯಾವುದೂ ಇಲ್ಲದೇ ಇಂದಿರಾ ಮನೆಯಿಂದ ಹೊರಬೀಳುತ್ತಿರಲಿಲ್ಲ. ಎಲ್ಲ ಹೆಂಗಸರಂತೆ ಅವರಿಗೂ ತಮ್ಮನ್ನು ಆಕರ್ಷಣೀಯವಾಗಿ ಪ್ರೆಸೆಂಟ್ ಮಾಡಿಕೊಳ್ಳಬೇಕೆಂಬ ಅಭಿಲಾಷೆಯಿತ್ತು. ಅವರು ಗುಂಡೇಟಿಗೆ ಬಲಿಯಾದ ದಿನ ಕೂಡ ಕನ್ನಡಿ ಮುಂದೆ ಕೂತು ಅಚ್ಚುಕಟ್ಟಾಗಿ ಸಿಂಗಾರಗೊಂಡು, ’ನನ್ನ ಮೇಕಪ್ ಹೇಗಿದೆ? ಟಿ.ವಿ ಸಂದರ್ಶನಕ್ಕೆ ಒಪ್ಪುವಂತಿದೆಯಾ? ಎಂದು ಕೇಳಿಯೇ ಮನೆಯಿಂದ ಹೊರಬಿದ್ದಿದ್ದರಂತೆ.
ಆದರೆ ಇವೆಲ್ಲವುಗಳ ಹೊರತಾಗಿ ಇಂದಿರಾರಲ್ಲಿ ಇಷ್ಟವಾಗುವುದು ಅವರ ಗಟ್ಟಿತನದ ನಿರ್ಧಾರಗಳು. ನೆಹರೂರ ವಿಚಾರ ಧಾರೆಗಳಿಂದ ಪ್ರೇರಿತರಾದರೂ, ತಮ್ಮ ತಂದೆ ತೋರಿದ ಅಸಹಾಯಕತೆ, ಅಂಜುಬುರುಕುತನ ಇಂದಿರಾ ಪ್ರದರ್ಶಿಸಲಿಲ್ಲ. ಅವರು ೧೯೭೧ ರ ಭಾರತ ಮತ್ತು ಪಾಕಿಸ್ತಾನ ಯುದ್ದವನ್ನು ನಿಭಾಯಿಸಿದ್ದೇ ಅವರ ದಿಟ್ಟತನಕ್ಕೆ ಉದಾಹರಣೆ. ೧೯೭೧ ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿತು, ಪರಿಸ್ಥಿತಿ ಹದಗೆಟ್ಟಿತು. ಪರಿಣಾಮವಾಗಿ ಸಾವಿರಾರು ನಿರಾಶ್ರಿತರು ಭಾರತದತ್ತ ಮುಖಮಾಡಿದರು, ಇದು ಮುಂದುವರಿದರೆ ಭಾರತದ ಅರ್ಥವ್ಯವಸ್ಥೆ ಕುಸಿಯುವುದೆಂದು ಅರಿತ ಭಾರತಸರ್ಕಾರ ಪೂರ್ವ ಪಾಕಿಸ್ಥಾನವನ್ನು ವಿಮೋಚನೆಗೊಳಿಸುವ ಆಂದೋಲನಕ್ಕೆ ಸಹಕರಿಸಲು ನಿರ್ಧರಿಸಿತು. ಆದರೆ ಅದಾಗಲೇ ಚೀನಾದೊಂದಿಗೆ ಭಾರತದ ಬಾಂಧವ್ಯ ಹಳಸಿತ್ತು. ಈ ವಿಷಯದಲ್ಲಿ ಭಾರತ ಮೂಗುತೂರಿಸಬಾರದೆಂದು ಚೀನಾ ಎಚ್ಚರಿಸಿತು. ಚೀನಾದ ಬೆನ್ನಿಗೆ ಅಮೆರಿಕ ನಿಂತಿತು. ಹಾಗೊಮ್ಮೆ ಭಾರತ ಮುಂದುವರಿದರೆ, ಚೀನಾ ಭಾರತದ ಮೇಲೆರಗಬಹುದು ಅದನ್ನು ನಾವು ವಿರೋಧಿಸುವುದಿಲ್ಲ ಎಂಬ ಸ್ಪಷ್ಠಸಂದೇಶ ಅಮೆರಿಕದಿಂದ ರವಾನೆಯಾಯಿತು.
ಬಹುಶಃ ನೆಹರೂರಾಗಿದ್ದರೆ ಮತ್ತೊಮ್ಮೆ ವಿಶ್ವಸಂಸ್ಥೆಯ ಕದತಟ್ಟಿ ಕೈಕಟ್ಟಿ ಕುಳಿತುಕೊಳ್ಳುತ್ತಿದ್ದರೇನೋ ಆದರೆ ಇಂದಿರಾ ಸುಮ್ಮನಾಗಲಿಲ್ಲ ರಣತಂತ್ರ ರೂಪಿಸಿದರು. ದುರ್ಗಾಪ್ರಸಾದ್ ಧರ್ ರನ್ನು ರಷ್ಯಾಕ್ಕೆ ಕಳುಹಿಸಿ, ರಷ್ಯಾದೊಂದಿಗೆ ದ್ವಿಪಕ್ಷೀಯ ಒಪ್ಪಂದಕ್ಕೆ ಮುಂದಾದರು. ನಿಮಗೆ ಅಚ್ಚರಿಯೆನಿಸಬಹುದು ಈ ಒಪ್ಪಂದದ ಬಗ್ಗೆ ಸಹಿ ಮಾಡುವ ಮುಂಜಾನೆಯವರೆಗೂ ಕ್ಯಾಬಿನೆಟ್ಟಿನ ಯಾವ ಸಚಿವರಿಗೂ ಮಾಹಿತಿ ಇರಲಿಲ್ಲ. ರಷ್ಯಾದೊಂದಿಗಿನ ಒಪ್ಪಂದ ಭಾರತಕ್ಕೆ ಬಲ ನೀಡಿತು. ಆ ಒಪ್ಪಂದದಂತೆ ಉಭಯ ದೇಶಗಳಲ್ಲಿ ಯಾವ ದೇಶದ ಭದ್ರತೆಗೆ ಧಕ್ಕೆಯುಂಟಾದರೂ ಮತ್ತೊಂದು ದೇಶ ಸಹಾಯಕ್ಕೆ ನಿಲ್ಲಬೇಕೆಂಬ ಅಂಶವಿತ್ತು. ಸೈನ್ಯಕ್ಕೆ ಯುದ್ದದ ಮುನ್ಸೂಚನೆ ನೀಡಿ, ಸಿದ್ದವಾಗುವಂತೆ ಸೂಚಿಸಿದರು. ಇಂದಿರಾ ನೆಹರೂರಂತೆ ಸೈನ್ಯದ ಅಧಿಕಾರಿಗಳ ಮಾತು ಧಿಕ್ಕರಿಸುತ್ತಿರಲಿಲ್ಲ. ಆದ್ದರಿಂದಲೇ ಯುದ್ದಕ್ಕೆ ಚಳಿಗಾಲ ಸೂಕ್ತಸಮಯ ಎಂಬ ಸೈನ್ಯಾಧಿಕಾರಿಗಳ ಮಾತಿಗೆ ಸಮ್ಮತಿಯಿತ್ತು ಇಂದಿರಾ ಕಾದರು. ಅಷ್ಟರ ಒಳಗೆ ಬೆಲ್ಜಿಯಂ, ಆಸ್ಟ್ರೆಲಿಯಾ, ಇಂಗ್ಲೆಂಡ್, ಫ್ರಾಂನ್ಸ್, ಜರ್ಮನಿ ಮುಂತಾದ ದೇಶಗಳಿಗೆ ಭೇಟಿಕೊಟ್ಟು ಭಾರತಕ್ಕೆ ಎದುರಾಗಿರುವ ಸಮಸ್ಯೆ ವಿವರಿಸಿ, ಅನುಕಂಪಗಿಟ್ಟಿಸುವ ಪ್ರಯತ್ನ ಮಾಡಿದರು. ಅಂತೂ ಯುದ್ದಕ್ಕೆ ಕಾಲ ಪ್ರಶಸ್ತವಾಯಿತು. ಡಿಸೆಂಬರ್ ೩ ರಂದು ಪಾಕಿಸ್ಥಾನ ಮೂರ್ಖತನ ಪ್ರದರ್ಶಿಸಿ ಭಾರತದ ವಿಮಾನವೊಂದನ್ನು ಭಸ್ಮ ಮಾಡಿತು. ಇಷ್ಟು ನೆಪ ಸಾಕಾಗಿತ್ತು. ಭಾರತದ ಸೈನಿಕರು ಚುರುಕುತನದಿಂದ ಮುಂದುವರಿದು ಪೂರ್ವ ಪಾಕಿಸ್ಥಾನವನ್ನು ವಶಮಾಡಿಕೊಂಡರು. ಪಾಕಿಸ್ಥಾನ ಮಂಡಿಯೂರಿತು. ಚೀನಾ ಮತ್ತು ಅಮೆರಿಕ ಇಂದಿರಾ ತೋರಿದ ದಿಟ್ಟತನದಿಂದ ದಿಕ್ಕೆಡುವಂತಾಯಿತು. ಭಾರತ ಜಯದ ನಗೆ ಬೀರಿತು. ಅದರ ಹಿಂದಿದದ್ದು ಇಂದಿರಾರ ಚಾಣಾಕ್ಷತೆ ಮತ್ತು ಧೀರೋದ್ದಾತ ನಿಲುವು ಎನ್ನುವುದನ್ನು ಅಲ್ಲಗೆಳೆಯುವಂತಿಲ್ಲ. ವಾಜಪೇಯಿಯವರು ಇಂದಿರಾರನ್ನು ದುರ್ಗಾ ಎಂದಿದ್ದು ಆ ಹಿನ್ನಲೆಯಲ್ಲಿಯೇ.
ಇಂದಿರಾ ಬದುಕಿನ ಬೆಳವಣಿಗೆ ನೋಡಿದರೆ ಅಚ್ಚರಿಯೆನಿಸುವುದು ಸತ್ಯ. ಬಾಲ್ಯದಲ್ಲಿ ಅಷ್ಠೇನೂ ಚುರುಕುತನ ತೋರದ, ಸದಾ ಮೌನಿಯಾಗಿರುತ್ತಿದ್ದ ಇಂದಿರಾ, ಅಪ್ಪ ಬರೆದ ಪತ್ರಗಳ ಮೂಲಕ ಪ್ರಪಂಚವನ್ನು ನೋಡಿದವರು. ನೆಹರು ಮನೆತನ, ಮೋತಿಲಾಲರ ಮೊಮ್ಮಗಳು, ಜವಹರಲಾಲರ ಮಗಳು ಎಂಬೆಲ್ಲಾ ಅಂಶಗಳು ಅವರ ಬೆಳವಣಿಗೆಗೆ ಕಾರಣವಾದವು ದಿಟ. ಆದರೆ ರಾಜಕೀಯವಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಎಲ್ಲರನ್ನೂ ಮತ್ತು ಎಲ್ಲವನ್ನೂ ತಮ್ಮ ಸುಪರ್ಧಿಗೆ ತೆಗೆದುಕೊಂಡು ಬೆಳೆದ ಪರಿ ಸೋಜಿಗ ಹುಟ್ಟಿಸದೆಯಿರದು. ’ಇಂದಿರಾ ಇಸ್ ಇಂಡಿಯಾ, ಇಂಡಿಯಾ ಇಸ್ ಇಂದಿರಾ’, ’ಇಂದಿರಾಗಾಂಧಿಯವರ ಸಂಪುಟದ ಏಕೈಕ ಗಂಡಸು ಇಂದಿರಾ ಆಗಿದ್ದರು’ ಎನ್ನುವ ಮಾತು ಚಾಲ್ತಿಗೆ ಬಂದದ್ದೂ ಅವರ ಆ ನಡುವಳಿಕೆಯಿಂದಲೇ. ಅಧಿಕಾರ ದುರುಪಯೋಗ ಮಾಡಿ, ಎಮರ್ಜೆನ್ಸಿ ಹೇರಿದ್ದು, ಮಗ ಮಾಡಿದ್ದೆಲ್ಲವನ್ನೂ ಪುತ್ರವ್ಯಾಮೋಹದಿಂದ ಸಹಿಸಿಕೊಂಡಿದ್ದು, ಭ್ರಷ್ಠತೆಯ ಬೇರಿಗೆ ನೀರೆರೆದಿದ್ದು,’ಆಪರೇಷನ್ ಬ್ಲೂಸ್ಟಾರ್’ ಕಾರ್ಯಚರಣೆಗೆ ಮುಂದಾಗಿದ್ದು ಎಲ್ಲವೂ ಅಕ್ಷಮ್ಯಗಳೇ, ಅದರೆ ಇದರ ಜೊತೆಗೆ ಚೀನಾ ಕುತಂತ್ರದಿಂದ ಕಾಲುಕೆರೆದು ಬಂದಾಗ ಗದರಿದ್ದು, ಚಾಣಾಕ್ಷತನದಿಂದ ಯುದ್ದ ನಿಭಾಯಿಸಿದ್ದು, ಭಾರತಕ್ಕೆ ಗೆಲುವು ತಂದುಕೊಟ್ಟದ್ದು, ಪಾಕಿಸ್ಥಾನವನ್ನೇ ಮುರಿದಿದ್ದು, ಅಣು ಪರೀಕ್ಷೆಯಂತಹ ಸಾಹಸಕ್ಕೆ ಕೈ ಹಾಕಿದ್ದು ಇಷ್ಟಪಡುವ ವಿಷಯಗಳು. ಅಪ್ಪನಂತಾಗದ ದಿಟ್ಟಮಗಳು ಇಂದಿರಾ ವಯುಕ್ತಿಕ ಬದುಕಿನ ಎಲ್ಲ ಅಪಸವ್ಯಗಳ ನಡುವೆ ಮೆಚ್ಚಿಗೆಯಾಗುವುದು ಆ ಕಾರಣಕ್ಕೆ. ಇಂದಿರಾ ಜನ್ಮದಿನದ ನೆಪದಲ್ಲಿ ಇವೆಲ್ಲಾ ನಿಮ್ಮ ಮುಂದಿಡಬೇಕಾಯಿತು.
ದೇಶವನ್ನು ಮುನ್ನಡೆಸುವುದೆಂದರೆ ಮಕ್ಕಳಾಟವೇ ಚಾಚಾ?
“ಆ ವಿಷಯವನ್ನು ನಿಜ ಅರ್ಥದಲ್ಲಿ ಉಕ್ಕಿನ ಮನುಷ್ಯರೇ ಆಗಿದ್ದ ಸರ್ದಾರ್ ಪಟೇಲರು ನಿಭಾಯಿಸಿದ್ದರೆ ಒಳ್ಳೆಯದಿತ್ತು. ಅದು ಸಮಸ್ಯೆಯಾಗಿ ಉಳಿಯುತ್ತಿರಲಿಲ್ಲ. ಹಾಗೊಮ್ಮೆ ಸಮಸ್ಯೆ ಉಂಟಾಗಿದ್ದರೂ, ಹೇಗೆ ನಿವಾರಿಸಿಕೊಳ್ಳಬೇಕೆಂಬ ಜಾಣ್ಮೆ ಪಟೇಲರಿಗಿತ್ತು, ಅವರು ರಾಜನೀತಿಯನ್ನು ಚೆನ್ನಾಗಿಯೇ ಅರಿತಿದ್ದರು. ಆದರೆ ಕಾಶ್ಮೀರದ ವಿಷಯವನ್ನು ನಾನೇ ನಿಭಾಯಿಸಬಲ್ಲೆ ಎಂಬ ಅಹಂಕಾರ ಪಂಡಿತ ನೆಹರೂಗಿತ್ತೇ ವಿನಹಃ., ದೂರದೃಷ್ಟಿತನವಾಗಲಿ, ಮುತ್ಸದ್ದಿತನವಾಗಲಿ, ಎದೆಗಾರಿಕೆಯಾಗಲಿ ಇರಲಿಲ್ಲ. ಸ್ವತಃ ಪಟೇಲರೇ, “ಕಾಶ್ಮೀರ ವಿಷಯದಲ್ಲಿ ನೆಹರೂ ಹೀಗೇಕೆ ವರ್ತಿಸುತ್ತಿದ್ದಾರೋ,ಅದನ್ನು ನಾನು ಕೆಲವೇ ದಿನಗಳಲ್ಲಿ ಬಗೆಹರಿಸಲ್ಲೆ” ಎಂದು ತಮ್ಮ ಸಂಪುಟ ಸಹೋದ್ಯೋಗಿಯೊಂದಿಗೆ ಹೇಳಿದ್ದರು. ನೆಹರೂಗೆ ತೀರಾ ಆತ್ಮೀಯರಾಗಿದ್ದ ಶೇಕಬ್ದುಲ್ಲಾಗೆ ಕೂಡ ಪಟೇಲರೆ ಈ ಬಿಕ್ಕಟ್ಟನ್ನು ನಿವಾರಿಸಲು ಸೂಕ್ತವ್ಯಕ್ತಿ ಎಂದು ಅನಿಸಿದ್ದು ಇದೆ. ಬಹುಶಃ ಪಟೇಲರಿಗೆ ಆ ಜವಾಬ್ದಾರಿ ಕೊಟ್ಟಿದ್ದರೆ, ಕಾಶ್ಮೀರ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಬಗೆಹರಿಯದ ಸಮಸ್ಯೆಯಾಗಿ ಉಳಿಯುತ್ತಿರಲಿಲ್ಲ. ಸಾವಿರಾರು ಸೈನಿಕರು, ಲಕ್ಷಾಂತರ ಕಾಶ್ಮೀರಿಗಳು ಬಲಿಯಾಗಬೇಕಾಗಿ ಬರುತ್ತಿರಲಿಲ್ಲ. ನೆಹರು ಮಾಡಿದ ಅನೇಕ ತಪ್ಪುಗಳಲ್ಲಿ ಇದು ಮಹತ್ವದ್ದು.” ಹೀಗೆ ವಿವರಿಸುತ್ತಾ ಹೋಗುತ್ತಾರೆ ವಿದೇಶಾಂಗ ಕಾರ್ಯಾಲಯದ ನಿವೃತ್ತ ಅಧಿಕಾರಿ ಜೆ.ಬಂದೋಪಾಧ್ಯಯ.
ಮೊನ್ನೆ ಬಂದೋಪಾಧ್ಯಯರ The Making of India’s Foreign policy ಪುಸ್ತಕವನ್ನು ತಿರುವಿ ಹಾಕುತ್ತಿದ್ದೆ. ಆ ಪುಸ್ತಕದಲ್ಲಿ ಲೇಖಕರು ಹೇಗೆ ಒಂದು ದೇಶದ ವಿದೇಶಾಂಗ ನೀತಿಯನ್ನು ರೂಪಿಸಲಾಗುತ್ತದೆ, ಅದು ಹೇಗೆ ಕಾಲ ಕಾಲಕ್ಕೆ ಬದಲಾಗಬೇಕು, ಯಾವೆಲ್ಲಾ ಸನ್ನಿವೇಶಗಳಲ್ಲಿ ಒಂದು ದೇಶ ತನ್ನ ವಿದೇಶಾಂಗ ನೀತಿಯನ್ನು ಮರು ಪರಿಶೀಲನೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ರಾಷ್ಟ್ರನಾಯಕರ ಸಿದ್ದಾಂತ, ನಿಲುವು, ನಾಯಕತ್ವಗುಣ, ರಾಜಕೀಯ ಕಾರ್ಯತಂತ್ರ, ಅಧಿಕಾರ ಕೇಂದ್ರೀಕರಿಸಿಕೊಳ್ಳಬೇಕೆಂಬ ಅಭಿಲಾಷೆ ಹೇಗೆ ದೇಶದ ವಿದೇಶಾಂಗ ನೀತಿಯ ಮೇಲೆ ಪರಿಣಾಮ ಬೀರಬಲ್ಲದು ಎಂಬುದನ್ನು ವಿವರಿಸುತ್ತಾ ಹೋಗುತ್ತಾರೆ. ಮುಖ್ಯವಾಗಿ ಭಾರತದ ವಿದೇಶಾಂಗನೀತಿ ನೆಹರೂ, ಇಂದಿರಾ, ಮುರಾರ್ಜಿ, ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಹೇಗೆ ದೇಶವನ್ನು ಇಕ್ಕಟ್ಟಿಗೆ ಸಿಲುಕಿಸಿತು ಎಂದು ಉದಾಹರಣೆಗಳ ಮೂಲಕ ತಿಳಿಸುತ್ತಾರೆ.
ಬಂದೋಪಾಧ್ಯಯರ ಪುಸ್ತಕದ ಪುಟ ಪುಟ ತಿರುವಿಹಾಕುವಾಗ ನಮ್ಮ ನಾಯಕರು ಹೇಗೆ ತಮ್ಮ ಅಹಂಕಾರಕ್ಕೆ, ಅಧಿಕಾರದ ವ್ಯಾಮೋಹಕ್ಕೆ, ವಯುಕ್ತಿಕ ಸ್ನೇಹಕ್ಕೆ, ಹೆಸರು ಮಾಡಬೇಕೆಂಬ ತೆವಲಿಗೆ ದೇಶದ ಹಿತರಕ್ಷಣೆಯನ್ನು ಒತ್ತೆಯಿಡುತ್ತಾರೆಂದು ಓದಿ ಹೇಸಿಗೆಯಾಯಿತು. ಅದರಲ್ಲೂ ಸ್ವಾತಂತ್ರ್ಯನಂತರ ೧೭ ವರ್ಷ ಭಾರತವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ನೆಹರು ನೆಡೆದುಕೊಂಡ ರೀತಿಯಿದೆಯಲ್ಲಾ ಅದು ರೇಜಿಗೆ ಹುಟ್ಟಿಸುವಂತದ್ದು.
ಸ್ವಾತಂತ್ರ್ಯ ಪೂರ್ವ ಕಾಂಗ್ರೇಸ್ಸಿನ ವಿದೇಶಾಂಗ ಕಾರ್ಯಸೂಚಿಯನ್ನು ಸಿದ್ದಪಡಿಸಿದ್ದು ನೆಹರು, ಆದರೆ ಸ್ವಾತಂತ್ರ್ಯೋತ್ತರ ಭಾರತದ ವಿದೇಶಾಂಗನೀತಿ, ಕಾಂಗ್ರೇಸ್ಸಿನ ವಿದೇಶಾಂಗ ಕಾರ್ಯಸೂಚಿಗೆ ಭಿನ್ನವಾಗೇನು ಇರಲಿಲ್ಲ. ಪ್ರಧಾನಿ ಪಟ್ಟದಲ್ಲಿ ಕೂತ ಜವಹರಲಾಲರು, ತಮ್ಮ ಬಳಿಯೇ ವಿದೇಶಾಂಗ ಖಾತೆಯನ್ನೂ ಇಟ್ಟುಕೊಂಡರು. ವಿದೇಶಗಳಿಗೆ ಭೇಟಿ, ಅಲ್ಲಿನ ನಾಯಕರೊಂದಿಗೆ ಹಸ್ತಾಲಾಘವ, ಭಾರತದ ನಿರ್ಮಾತೃ ಎಂದೆನ್ನಿಸಿಕೊಳ್ಳುವುದರ ಜೊತೆಗೆ ವಿಶ್ವನಾಯಕನಾಗಿ ಬೆಳೆಯಬೇಕೆಂಬ ಮಹದಾಸೆ ಎಲ್ಲಕ್ಕೂ ವಿದೇಶಾಂಗಖಾತೆ ಅನುಕೂಲಕರವಾಗಿತ್ತು. ನೆಹರೂರ ಆತ್ಮಕಥೆ ಬರೆದ ಇತಿಹಾಸಕಾರ ಬರೆದಿದ್ದ. “ಯಾವ ದೇಶದಲ್ಲೂ ಹೀಗೆ ನಡೆಯಲು ಸಾಧ್ಯವಿಲ್ಲ. ಒಂದು ದೇಶದ ವಿದೇಶಾಂಗ ನೀತಿ ಒಬ್ಬ ವ್ಯಕ್ತಿಯಿಂದ ರೂಪಿತವಾಗುವುದು ಮತ್ತು ಅದು ಅವರ ವಯಕ್ತಿಕ ಕಾರ್ಯಸೂಚಿಯಂತೆ ಇರುವುದು ಸಾಧ್ಯವಾಗಿದ್ದು ಭಾರತದಲ್ಲಿ ಮಾತ್ರ. ಸಾಧ್ಯವಾಗಿಸಿದವರು ನೆಹರು” ಆತನ ಮಾತಿನಲ್ಲಿ ಸತ್ಯವಿತ್ತು. ಭಾರತದ ವಿದೇಶಾಂಗ ನೀತಿ ನೆಹರೂರ ಮೂಗಿನ ನೇರಕ್ಕೆ ರೂಪಿತವಾಗಿತ್ತು.
ಹಾಗೇ ನೋಡಿದರೆ ನೆಹರೂರಲ್ಲಿ ಖಚಿತ ನಿಲುವುಗಳಿರಲಿಲ್ಲ. ಪ್ರಧಾನಿ ಪಟ್ಟಕ್ಕೆ ಏರಲು ಇದ್ದ ಏಕೈಕ ಅರ್ಹತೆಯೆಂದರೆ ಅದು ಗಾಂಧಿಜೀಯೊಂದಿಗಿನ ಆತ್ಮೀಯ ಒಡನಾಟ. ವಿದೇಶದಲ್ಲಿನ ಓದು, ಪ್ರಪಂಚ ಜ್ನಾನ, ಮಾತುಗಾರಿಕೆ ನೆಹರೂರಲ್ಲಿ ಇದ್ದಿದ್ದು ನಿಜ. ಆದರೆ ಬುದ್ದಿವಂತಿಕೆ, ವಿವೇಕ, ಸಮಯಪ್ರಜ್ನೆ, ಎದೆಗಾರಿಕೆ ಊಹುಃ ಕೇಳಬೇಡಿ. ನೆಹರು ಪಟೇಲರ ಕೆಳಗೆ ಕೆಲಸ ಮಾಡಲಾರರು ಎಂಬುದು ಗಾಂಧೀಜಿಗೆ ಮನವರಿಕೆಯಾಗಿತ್ತು. ಆದ್ದರಿಂದಲೇ 16 ರಾಜ್ಯಗಳಲ್ಲಿ 13 ರಾಜ್ಯಗಳ ಪ್ರತಿನಿಧಿಗಳು ಪಟೇಲರನ್ನು ಬೆಂಬಲಿಸಿದ್ದರೂ, ಗಾಂಧೀಜಿ ಪಟೇಲರ ಮನವೊಲಿಸಿ ನೆಹರೂಗೆ ಅಧ್ಯಕ್ಷ ಸ್ಥಾನ ಸಿಗುವಂತೆ ನೋಡಿಕೊಂಡರು. ಅಲ್ಲಿಗೆ ನೆಹರು ಪ್ರಧಾನಿಯಾದರು, ಪ್ರಧಾನಿಯಾಗಲು ಎಲ್ಲ ಅರ್ಹತೆಯಿದ್ದ ಪಟೇಲರು ಗೃಹಮಂತ್ರಿಸ್ಥಾನದಲ್ಲಿ ಕೂರಬೇಕಾಯಿತು.
ಬಂದೋಪಾಧ್ಯಯರು ಖಾರವಾಗಿಯೇ ಬರೆಯುತ್ತಾರೆ. “ಕಾಶ್ಮೀರ ದೇಶದ ಅವಿಭಾಜ್ಯ ಅಂಗವೆಂದು ಪರಿಗಣಿಸಿ ಆ ಸಮಸ್ಯೆಯನ್ನು ಬಗೆಹರಿಸಲು ಗೃಹ ಕಛೇರಿಗೆ ವಹಿಸಬೇಕಿತ್ತು. ಆದರೆ ಅವಿವೇಕಿ ಪ್ರಧಾನಿಗಳು ಅದನ್ನು ವಿದೇಶಾಂಗ ಖಾತೆಯಡಿ ತಂದು , ತಾವೇ ಅದನ್ನು ಅಂತರಾಷ್ಟ್ರೀಯ ಬಿಕ್ಕಟ್ಟೆಂದು ಬಿಂಬಿಸಿದರು. ಆ ಮೂರ್ಖತನದಿಂದ ಇವತ್ತೀಗೂ ಪಾಕಿಸ್ತಾನ ಆ ಒಂದು ನಿರ್ಧಾರವನ್ನೇ ವಿಶ್ವಸಂಸ್ಥೆಯ ಮುಂದಿಟ್ಟು ಕಾಶ್ಮೀರ ಭಾರತದ ಅಂಗವಾಗಿರಲಿಲ್ಲ ಎಂದು ತಗಾದೆ ತೆಗೆಯುತ್ತದೆ. ಭಾರತ ಆ ವಿಷಯದಲ್ಲಿ ಇಂದಿಗೂ ಮೂಕವಾಗಬೇಕಾದ್ದು ಪ್ರಥಮ ಪ್ರಧಾನಿಗಳ ಮೂರ್ಖತನದಿಂದ.”
ಇನ್ನು ಕಾಶ್ಮೀರದ ರಾಜ ಹರಿಸಿಂಗ್ ಎಲ್ಲಿ ಕಾಶ್ಮೀರ ಪಾಕಿಸ್ತಾನಕ್ಕೆ ಸೇರ್ಪಡೆಗೊಂಡು, ಅಲ್ಲಿನ ಮತಾಂದರ ದಾಳಿಗೆ ಕಾಶ್ಮೀರದ ಪುರಾತನ ದೇವಾಲಯಗಳು ಬಲಿಯಾಗುತ್ತವೋ ಎಂದು ಹೆದರಿ ಭಾರತದೊಂದಿಗೆ ಯಾವುದೇ ಕರಾರುಗಳಿಲ್ಲದೆ ವಿಲೀನಗೊಳ್ಳಲು ಸಿದ್ದ ಎಂದಾಗಲೂ, ನೆಹರೂ ಮಧ್ಯೆಪ್ರವೇಶಿಸಿದರು, ಗೌರ್ನರ್ ಜನರಲ್ ಮೌಂಟ್ ಬ್ಯಾಟನ್ ಒಂದು ಪತ್ರ ಬರೆದ, “ಯಾವುದೇ ರಾಜ್ಯ ಭಾರತದೊಂದಿಗೆ ವಿಲೀನವಾದರೂ, ಅಲ್ಲಿ ಶಾಂತಿ ಸುವ್ಯವಸ್ತೆ ನೆಲೆಸಿದ ನಂತರ, ಆ ಭಾಗದ ಜನರ ಆಶಯದಂತೆ ಆ ರಾಜ್ಯದ ಒಡೆತನದ ತೀರ್ಮಾನವಾಗಬೇಕು” ಹೀಗೆ ಗೌರ್ನರ್ ಜನರಲ್ ನಿಂದ ಆದೇಶ ಹೊರಡಿಸಿದ್ದು ಸ್ವತಃ ನೆಹರೂರೇ ಆಗಿದ್ದರು. ಇವತ್ತು ಮುಖ್ಯ ಪ್ರಶ್ನೆ ಎದ್ದಿರುವುದೇ ಈ ಒಂದು ವಿಷಯದಲ್ಲಿ. ಇವತ್ತಿಗೂ ಕಾಶ್ಮೀರ ವಿಮೋಚನೆಗಾಗಿ ಹೋರಾಡುತ್ತಿರುವವರು ಎತ್ತುವ ತಕರಾರೇ ಇದು. ಮೊನ್ನೆ ಪ್ರಶಾಂತ್ ಭೂಷಣ್ ಆಡಿದ ಪರಮ ಮೂರ್ಖತನದ ಮಾತಿಗೂ ಇದೇ ಕಾರಣ. ಇದಕ್ಕೆಲ್ಲಾ ಮುನ್ನುಡಿ ಬರೆದಿದ್ದೆ ಪಂಡಿತ ಪ್ರಧಾನಿಗಳು.
ನೆಹರೂರ ಸುತ್ತ ಇದ್ದವರೂ ಅಂಥವರೇ, ಕೃಷ್ಣ ಮೆನನ್, ಎಂ. ಒ ಮಥಾಯ್, ಭಾರತದ ರಾಯಭಾರಿಯಾಗಿದ್ದ ಕೆ. ಎಮ್ ಫಣೀಕರ್ ಕೂಡ ಮೂರ್ಖತನ ಪ್ರದರ್ಶಿಸುವಲ್ಲಿ ಸ್ಪರ್ಧೆಗೆ ನಿಂತವರೆ. ಶೇಕ್ ಅಬ್ದುಲ್ಲಾ ಮತ್ತು ನೆಹರೂರ ಸ್ನೇಹ ಹೇಗಿತ್ತೆಂದರೆ, ಒಂದು ಉದಾಹರಣೆ ಇಲ್ಲಿದೆ. 1953 ರಲ್ಲಿ ಐದು ದಿನದ ನ್ಯಾಷನಲ್ ಕಾನ್ಪರೆನ್ಸ್ ಕಾಶ್ಮೀರದಲ್ಲಿ ಆಯೋಜನೆಯಾಗಿತ್ತು. ಆ ವೇಳೆಗಾಗಲೇ ತನ್ನ ಬೇಳೆ ಬೇಯಿಸಿಕೊಳ್ಳಲು ಶುರುವಿಟ್ಟಿದ್ದ ಶೇಕ್ ಅಬ್ದುಲ್ಲಾ ಮತಾಂದತೆಗೆ ತುಪ್ಪಸುರಿದು, ಕೋಮು ಸೌಹಾರ್ದವನ್ನು ಕಾಶ್ಮೀರದಲ್ಲಿ ಹಾಳುಗೆಡವಿದ್ದರು. ಬರಬರುತ್ತಾ ಹಿಂದೂಗಳ ಹತ್ಯೆ, ಮಾನಭಂಗದಂತಹ ಪ್ರಸಂಗಗಳು ಹೆಚ್ಚಾದವು. ಇದನ್ನು ಅರಿತ ನೆಹರು ಇಂಟೆಲಿಜೆನ್ಸ್ ಬ್ಯೂರೋದ ಡರೆಕ್ಟರ್ ಆಗಿದ್ದ ಜಿ.ಕೆ ಹಂಡೂ ಅವರನ್ನು ಶೇಕ್ ಸಾಹೇಬನ ಬಗ್ಗೆ ಮಾಹಿತಿ ಕಲೆಹಾಕಲು ಕೇಳಿಕೊಂಡರು. ಶೇಕ್ ಅಬ್ದುಲ್ಲಾರ ಕುತಂತ್ರದ ಬಗ್ಗೆ ಮಾಹಿತಿಯನ್ನು ದಾಖಲೆ ಸಹಿತ ಆ ಅಧಿಕಾರಿ ಮತ್ತು ಮಂತ್ರಿ ಕೈಲಾಶನಾಥ್ ಕಾಜು ತಂದಿಟ್ಟಾಗ, ನೆಹರು ಎಚ್ಚೆತ್ತುಕೊಂಡರು. ಶೇಕ್ ಸಾಹೇಬನನ್ನು ಕರೆಸಿ “ ಇದುವರೆಗೆ ನಾನು ನಿನ್ನ ಸ್ನೇಹಿತನಂತೆ ನಡೆದುಕೊಂಡಿದ್ದೇನೆ, ಇನ್ನೂ ನಿಮ್ಮ ವರ್ತನೆ ಹೀಗೆ ಮುಂದುವರಿದರೆ ದೇಶದ ಪ್ರಧಾನಿಯಾಗಿ ಅಧಿಕಾರ ಚಲಾಯಿಸುತ್ತೇನೆ ಎಂದು ಗದರಿದರು.” ಅಲ್ಲಿಯವರೆಗೆ ದೇಶಕ್ಕಿಂತ ನೆಹರೂರಿಗೆ ಸ್ನೇಹವೇ ಮುಖ್ಯವಾಗಿತ್ತು.
ಜವರಹರಲಾಲರಿಗೆ ಅಧಿಕಾರದ ವ್ಯಾಮೋಹ ಎಷ್ಠಿತ್ತೆಂದರೆ, ಎಲ್ಲರನ್ನೂ ಸಂಶಯದ ದೃಷ್ಠಿಯಲ್ಲೇ ನೋಡುತ್ತಿದ್ದರು.ಯಾರಾದರೂ ತಮ್ಮಿಂದ ಅಧಿಕಾರ ಕಸಿದುಕೊಂಡರೆ ಎಂಬ ಗುಮಾನಿ ನೆಹರುರ ತಲೆಯಲ್ಲಿ ಕೊರೆಯುತ್ತಿದ್ದದ್ದು ನಿಜ. ಜನರಲ್ ಕಾರ್ಯಪ್ಪನವರ ಬಗ್ಗೆ ಅಂತಹದೊಂದು ಗುಮಾನಿ ಅವರಿಗಿತ್ತು. ಕಾರ್ಯಪ್ಪನವರೇ ನೆಹರೂರ ಬಗ್ಗೆ ಹೀಗೆ ಹೇಳುತ್ತಾರೆ. “ ಆ ಮನುಷ್ಯನ ಬಗ್ಗೆ ನನಗೆ ಕನಿಕರ ಎನಿಸುತ್ತದೆ. ನಾನು ದೇಶದ ಅಧಿಕಾರವನ್ನು ಅವರಿಂದ ಕಿತ್ತುಕೊಳ್ಳುಬಹುದೆಂದು ಆತ ಹೆದರಿದ್ದರು. ದೇಶ ಸ್ವತಂತ್ರ್ಯವಾದಾಗ ದೇಶದ ರಾಜಧಾನಿ ಯಾರ ಕೈಯಲ್ಲಿತ್ತು? ನಮ್ಮ ಸೈನ್ಯದ ಕೈಯಲ್ಲಿತ್ತು ಅಲ್ಲವೇ? ನಾನು ಮನಸ್ಸು ಮಾಡಿದ್ದರೆ ಒಂದೇ ಒಂದು ಗುಂಡು ಹಾರಿಸದೇ, ದೇಶದ ಸಿಂಹಾಸನವನ್ನು ಹಿಡಿದುಕೊಳ್ಳಬಹುದಿತ್ತು. ಆದರೆ ನಾನು ಪ್ರಜಾಪ್ರಭುತ್ವವಾದಿ ಇದನ್ನು ನೆಹರೂ ಎಂದೂ ಅರ್ಥಮಾಡಿಕೊಳ್ಳಲಿಲ್ಲ”
ಬಿಡಿ, ನೆಹರೂರ ಬಗ್ಗೆ ಬರೆಯುತ್ತಾ ಹೋದರೆ ಆದರ್ಶಕ್ಕಿಂತ ಅಸಹ್ಯಗಳೆ ಢಾಳಾಗಿ ಕಾಣುತ್ತವೆ. ಅವರ ವಯುಕ್ತಿಕ ಜೀವನದ ಕೆಲವು ಸಂಗತಿಗಳು ಮಕ್ಕಳಿಗೆ ಪರಿಚಯವಾಗದಿರುವುದೇ ಒಳಿತು. ನನಗೆ ಬಾಲ್ಯದಲ್ಲಿ ನೆಹರೂರ ಬಗ್ಗೆ ಹೆಚ್ಚಿನ ಆಸ್ಥೆಯೇ ಇತ್ತು. ನೆಹರೂರ ಮುಖದ ತೇಜಸ್ಸು, ಮಾತುಗಾರಿಕೆ, ಗರಿ ಗರಿ ಇಸ್ತ್ರಿಯ ಧಿರಿಸು ಎಲ್ಲವನ್ನೂ ಮೆಚ್ಚಿಕೊಂಡಿದ್ದು ನಿಜ. ಮಕ್ಕಳ ದಿನಾಚರಣೆಯಂದು ಶಾಲೆಯಲ್ಲಿ ಭಾಷಣಕ್ಕೆ ನಿಲ್ಲುತ್ತಿದ್ದೆ. “ನೆಹರೂರಿಗೆ ಮಕ್ಕಳೆಂದರೆ ಪ್ರೀತಿ, ಆದ್ದರಿಂದಲೇ ಈ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ.. “ಎಂದು ಬಾಯಿಪಾಠ ಮಾಡಿದ ಭಾಷಣವನ್ನು ಮಂಡಿಸುತ್ತಿದ್ದೆ. ಆದರೆ ಬೆಳೆದಂತೆ ನೆಹರೂರೆಡೆಗಿನ ಭಾವನೆಗಳೂ ಬದಲಾಗುತ್ತಾ ಹೋದವು. ಒಂದು ಹಂತದಲ್ಲಿ ನೆಹರೂರ ವ್ಯಕ್ತಿತ್ವ ಪೂರ್ತಿಯಾಗಿ ಅರ್ಥವಾಗುತ್ತಾ ಹೋಯಿತು. ತುಂಬ ಖುಷಿಯಿಂದ ಮೇಜಿಗೆ ತಂದುಕೊಂಡ ನೆಹರೂರ ಬರಹ ಡಿಸ್ಕವರಿ ಆಫ್ ಇಂಡಿಯಾ, ಗ್ಲಿಂಬ್ಸ್ ಆಫ್ ವರ್ಡ್ ಹಿಸ್ಟರಿ ನಂತರ ಅಸಡ್ಡೆಯ ನೋಟಕ್ಕೆ ಕಾರಣವಾಯಿತು. ಶ್ಯಾಮ್ ಪ್ರಸಾದ್ ಮುಖರ್ಜಿರವರ, ಸಂಸತ್ತಿನ ಭಾಷಣದ ಪ್ರತಿ ಓದಿದ ನಂತರ ನೆಹರೂ ಬಗ್ಗೆ ಅಸಹನೆಯ ಕಟ್ಟೆ ಒಡೆಯಿತು. ದಳವಿಯವರ ’ಹಿಮಾಲಯನ್ ಬ್ಲಂಡರ್’ ನೆಹರೂರ ವ್ಯಕ್ತಿತ್ವವನ್ನು ಬೆತ್ತಲೆ ಮಾಡಿತು. ಎಂತೆಂಥವರನ್ನೆಲ್ಲಾ ನಾವು ಆರಾಧಿಸಿದೆವು ಎಂದು ಅಸಹ್ಯವಾಯಿತು. ಪ್ರಥಮ ಪ್ರಧಾನಿಯಾಗಿ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ನಿರ್ಮಿಸಬೇಕಿದ್ದ ನೆಹರು, ತಮ್ಮ ತಪ್ಪುಗಳಿಂದ ಇತಿಹಾಸ ಎಂದಿಗೂ ಕ್ಷಮಿಸಲಾರದಂತಹ ಪ್ರಧಾನಿ ಎನಿಸಿಕೊಂಡರು. ಮಕ್ಕಳ ದಿನಾಚರಣೆಯ ನೆಪದಲ್ಲಿ ನೆಹರೂರನ್ನು ಇಂದಿನ ಮಕ್ಕಳು ಸ್ಮರಿಸಿದರೂ ಮುಂದೊಂದು ದಿನ ಅವರು ಕೇಳಿಯೇ ಕೇಳುತ್ತಾರೆ ’ದೇಶವನ್ನು ಮುನ್ನಡೆಸುವುದೆಂದರೆ ಮಕ್ಕಳಾಟವೇ ಚಾಚಾ?’ ಉತ್ತರ ಕೊಡುವವರಾರು?
ಚಳಿಗಾಲದ ಹೊಸ್ತಿಲಲಿ ಗುಮ್ಮ ಬಂತು ಗುಮ್ಮ
ಅರೆರೆ, ಇಲ್ಲೂ ಇಂತಹ ಆಚರಣೆ ಇದೆಯಾ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಲು ಕಾರಣವಿತ್ತು. ಅಮೆರಿಕೆಯಲ್ಲಿ ಈಗ ಚಳಿಗಾಲ ಅಮರಿಕೊಳ್ಳುತ್ತಿದೆ. ಅಕ್ಟೋಬರ್ ಪ್ರಾರಂಭವಾಗುತ್ತಿದ್ದಂತೆ ಮರದ ಎಲೆಗಳೆಲ್ಲಾ ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುತ್ತವೆ. ನಂತರ ಕೆಲವು ವಾರಗಳಲ್ಲಿ ಅವು ಉದುರಲು ಪ್ರಾರಂಭಿಸುತ್ತವೆ. ಅದನ್ನು ’ಫಾಲ್’ ಎನ್ನುತ್ತಾರೆ. ಇದು ಒಂದು ರೀತಿಯಲ್ಲಿ ಬೇಸಿಗೆ ಮತ್ತು ಚಳಿಗಾಲದ ನಡುವಿನ ಸಂಧಿಕಾಲ. ನವೆಂಬರ್ ಪ್ರಾರಂಭವಾಗುತ್ತಿದ್ದಂತೆ ಚಳಿ ಪ್ರಾರಂಭವಾಗುತ್ತದೆ. ೨೧ ರಿಂದ ೩೪ ಡಿಗ್ರಿವರೆಗೆ ಬೇಸಿಗೆಯಲ್ಲಿದ್ದ ಉಷ್ಣಾಂಶ, ಅಕ್ಟೋಬರ್ ಬರುತ್ತಿದ್ದಂತೆ ಒಂದಂಕಿಗೆ ಇಳಿಮುಖವಾಗತೊಡಗುತ್ತದೆ. ನವೆಂಬರ್ ನ ಎರಡುವಾರ ಕಳೆದರೆ ಬೆಚ್ಚನೆಯ ಉಡುಪಿಲ್ಲದೆ, ಕೈಗಳಿಗೆ ಗ್ಲೌಸುಗಳಿಲ್ಲದೆ ಹೊರಗೆ ಅಡ್ಡಾಡುವುದು ಕೊಂಚ ಕಷ್ಟವೇ.ಬೇಸಿಗೆಯಲ್ಲಿ ಹಗಲು ಹೆಚ್ಚು, ರಾತ್ರಿ ಎಂಟು ಕಳೆದರೂ ಇಲ್ಲಿ ಸೂರ್ಯ ವಿರಮಿಸಲು ಹೊರಡುವುದಿಲ್ಲ. ಆದರೆ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಸೂರ್ಯನಿಗೂ ಮನೆ ಸೇರಲು ಆತುರ, ಸಂಜೆ ಐದಕ್ಕೇ ಅವನು ಮನೆಗೆ ಹೊರಡಲು ಸಜ್ಜಾಗುತ್ತಾನೆ. ಬೆಳಿಗ್ಗೆ ಎಂಟಾದ ಮೇಲೆಯೇ ಅವನು ಮೈಮುರಿದು ಏಳುವುದು. ಆದ್ದರಿಂದ ಚಳಿಗಾಲದಲ್ಲಿ ಹಗಲು ಕಮ್ಮಿ ಮತ್ತು ರಾತ್ರಿ ಹೆಚ್ಚು.
ಹೀಗೆ ಬೇಸಿಗೆ ಕಳೆದು ಚಳಿಗಾಲ ಪ್ರಾರಂಭವಾಗುವ ಈ ಕಾಲದಲ್ಲಿ ಅಲರ್ಜಿಯಿಂದ ಉಂಟಾಗುವ ಶೀತ, ಉಬ್ಬಸ, ಜ್ವರದಂತಹ ಕಾಯಿಲೆ ಕೂಡ ಹೆಚ್ಚಾಗಿ ಜನರನ್ನು ಕಾಡುತ್ತವೆ. ಆದ್ದರಿಂದಲೇ ಇಲ್ಲಿ ಬಹುತೇಕ ಎಲ್ಲರೂ ಪ್ಲೂ ಶಾಟ್ಸ್ (ಲಸಿಕೆ)ಗಳನ್ನ ತೆಗೆದುಕೊಳ್ಳುತ್ತಾರೆ. ಅಮೇರಿಕನ್ನರಿಗೆ ಆರೋಗ್ಯದ ಬಗ್ಗೆ ಕೊಂಚ ಹೆಚ್ಚೇ ಕಾಳಜಿಯಿದೆ. ಆದರೂ ಚಳಿ ಹೆಚ್ಚಿರುವುದರಿಂದ ಈ ಚಳಿಗಾಲದಲ್ಲಿ ಬೇರೆಲ್ಲಾ ದೇಶಗಳಂತೆ ಇಲ್ಲೂ ಸಾವಿನ ಪ್ರಮಾಣ ಹೆಚ್ಚು. ಸಾವು ನೋವುಗಳು, ಮನುಷ್ಯನ ಮನಸ್ಸನ್ನು ದುರ್ಬಲಗೊಳಿಸುತ್ತವೆ. ಆಗಲೇ ಮೂಢನಂಬಿಕೆಗಳು ಜಾಗ್ರತವಾಗುತ್ತವೆ. ಕಾಣದ ಶಕ್ತಿಯ ಕೈವಾಡ ಎಂಬ ಕಲ್ಪನೆ ಮನಸ್ಸಿನಲ್ಲಿ ಮೊಳಕೆಯೊಡೆಯುತ್ತದೆ.
ಹೌದು. ನಾ ಇಲ್ಲಿ ಹೇಳ ಹೊರಟಿರುವುದೂ ಅದನ್ನೇ. ಇಲ್ಲೂ ಅಂತಹ ಕೆಲವು ನಂಬಿಕೆಗಳು, ಮೂಢನಂಬಿಕೆಗಳು ಇವೆ. ದೆವ್ವ, ಪ್ರೇತಾತ್ಮ ಎಂಬ ಕಲ್ಪನೆಗಳು ಜೀವಂತವಾಗಿವೆ. ಅಮೇರಿಕದ ಮೂಲ ನಿವಾಸಿಗಳೊಂದಿಗೆ ಇಲ್ಲಿ ಬಹುಸಂಖ್ಯೆಯಲ್ಲಿರುವವರು ಐರೀಷ್ ಜನ. ಐರ್ಲೆಂಡ್ ದೇಶದಿಂದ ವಲಸೆ ಬಂದ ಇವರು ಇಲ್ಲಿ ನೆಲೆಯೂರಿ ಇದೀಗ ಅಮೆರಿಕನ್ನರೇ ಆಗಿಹೋಗಿದ್ದಾರೆ. ಇವರಲ್ಲಿನ ಒಂದು ಆಚರಣೆ ಕುತೂಹಲಕಾರಿಯಾಗಿದೆ. ಅದು ಅಕ್ಟೋಬರ್ ಕೊನೆಯ ದಿನದ ರಾತ್ರಿ ನಡೆಯುವ ಆಚರಣೆ. ಅದನ್ನು ಅಮೆರಿಕೆಯಲ್ಲಿ ’ಹಾಲೋವಿನ್’ ಎಂದು ಕರೆಯುತ್ತಾರೆ.
ಸುಮಾರು ೨೦೦೦ ವರ್ಷಗಳ ಹಿಂದೆ ಐರ್ಲ್ಯಾಂಡ್ ನಲ್ಲಿದ್ದ ಸೆಲ್ಟಿಕ್ ಎಂಬ ಜನಾಂಗದಲ್ಲಿ ಒಂದು ಆಚರಣೆಯಿತ್ತು. ಅವರಿಗೆ ನವೆಂಬರ್ ೧ ಹೊಸವರ್ಷ. ನವೆಂಬರ್ ೧ ಎಂದರೆ ಬೇಸಿಗೆ ಮುಗಿದು ಚಳಿಗಾಲಕ್ಕೆ ಮುನ್ನುಡಿ ಬರೆಯುವ ಸಂಧಿಕಾಲ. ಆ ಹಿಂದಿನ ರಾತ್ರಿ ಅಕ್ಟೋಬರ್ ೩೧ ರಂದು ಅವರಲ್ಲಿ ಒಂದು ಆಚರಣೆ ಚಾಲ್ತಿಯಲ್ಲಿತ್ತು. ಅವರ ನಂಬಿಕೆಯೇನೆಂದರೆ ಆ ದಿನ ಭೂತ ಪ್ರೇತಗಳು ಭೂಮಿಗೆ ದಾಳಿ ಇಡುತ್ತವೆ ಮತ್ತು ಅವು ಇಲ್ಲಿರುವ ಜನರಿಗೆ ತೊಂದರೆ ಕೊಡುವುದರ ಜೊತೆಗೆ ತಾವು ಬೆಳೆದ ದವಸ ಧಾನ್ಯಗಳನ್ನು ಹಾಳು ಮಾಡುತ್ತವೆ ಎಂಬುದು. ಆ ಪ್ರೇತಗಳ ಕಾಟ ವಿಮೋಚನೆಗೆ ಒಂದು ದೊಡ್ಡ ಅಗ್ನಿಕುಂಡ ನಿರ್ಮಿಸಿ ಅಲ್ಲಿ ಪ್ರೇತಾಹ್ವಾನವಾಗಿದೆಯೆಂದು ಭಾವಿಸಿ, ದವಸ ಧಾನ್ಯ ಮತ್ತು ಪ್ರಾಣಿಯನ್ನು ಆ ಅಗ್ನಿಗೆ ಬಲಿಯ ರೂಪದಲ್ಲಿ ಅರ್ಪಿಸುತ್ತಿದ್ದರು. ಹಾಗೆ ಮಾಡುವಾಗ ತಮ್ಮ ಮುಖವನ್ನು ಮರೆಮಾಚುವ ಸಲುವಾಗಿ ವಿವಿಧ ಅಲಂಕಾರ ಸಾಮಾಗ್ರಿ ಬಳಸಿ ಪ್ರಾಣಿಗಳ ಹಾಗೆ, ಪ್ರೇತಗಳ ಹಾಗೆ ವೇಷಧರಿಸುತ್ತಿದ್ದರು. ನಂತರ ಮುಂಬರುವ ಚಳಿಗಾಲದಲ್ಲಿ ನಮ್ಮನ್ನು ರಕ್ಷಿಸು ಎಂದು ಅಗ್ನಿಯಲ್ಲಿ ಪ್ರಾರ್ಥಿಸುತ್ತಿದ್ದರು.
ಮೂಲದಲ್ಲಿ ಈ ಆಚರಣೆ ಚಾಲ್ತಿಯಲ್ಲಿದ್ದದ್ದು ರೋಮಿನಲ್ಲಿ, ರೋಮನ್ನರು ೪೦೦ ವರ್ಷ ಉತ್ತರ ಫ್ರಾನ್ಸ್ ಮತ್ತು ಇಂಗ್ಲೇಂಡಿನ ಭಾಗವನ್ನು ಆಕ್ರಮಿಸಿಕೊಂಡಾಗ ಅವರ ಈ ಪದ್ದತಿ ಸೆಲ್ಟಿಕ್ ಜನಾಂಗಕ್ಕೂ ಪಸರಿಸಿತು. ನಂತರ ಈ ಆಚರಣೆ ಅಮೆರಿಕವೂ ಸೇರಿದಂತೆ ಅನೇಕ ದೇಶಗಳಲ್ಲಿ ಚಾಲ್ತಿಗೆ ಬಂತು. ರೋಮನ್ನರಲ್ಲಿ ಎರಡು ಆಚರಣೆಗಳಿದ್ದವು. ಒಂದು ಅಕ್ಟೋಬರ್ ಕೊನೆಯದಿನ ಭೂತಗಳ ಆಹ್ವಾಹನೆ ಮತ್ತು ನವೆಂಬರ್ ಒಂದರಂದು ’ಪೊಮೊನ’ ಎಂಬ ದೇವತೆಯನ್ನು ಪೂಜಿಸಿ ನಂತರದ ವರ್ಷದಲ್ಲಿ ಕಷ್ಟನಷ್ಟಗಳಾಗದಂತೆ ಪ್ರಾರ್ಥಿಸುವ ಪರಿಪಾಠ ಅದು. ಇವೆರಡು ಒಂದುಗೂಡಿ ಹಾಲೋವಿನ್ ಎಂಬ ಆಚರಣೆ ಪ್ರಾರಂಭವಾಯಿತು. ಇದು ಅಮೇರಿಕದಲ್ಲಿ ಪ್ರಾರಂಭವಾಗಿದ್ದು ಐರ್ಲೆಂಡಿನ ಜನರು ಅಮೇರಿಕಕ್ಕೆ ವಲಸೆ ಬರಲು ಆರಂಭವಾದ ಮೇಲೆ. ಈಗಲೂ ಅಮೇರಿಕದ ಕೆಲವು ಭಾಗಗಳಲ್ಲಿ ಐರೀಷ್ ಜನಸಮೂಹದ್ದೇ ಪಾರುಪತ್ಯ. ಆ ಭಾಗದಲ್ಲಿ ಈ ಆಚರಣೆ ಹೆಚ್ಚು.
ಬರಬರುತ್ತಾ ಇದು ಬೇರೆಯ ಸ್ವರೂಪ ಪಡೆಯಲಾರಂಭಿಸಿತು. ಒಂದೊಂದು ಪ್ರದೇಶದ ಒಂದೊಂದು ಜನಸಮೂಹ ಭಿನ್ನವಾಗಿ ಹಾಲೋವಿನ್ ಆಚರಿಸುತ್ತಾರೆ. ಅಮೇರಿಕದಲ್ಲಿ ಹಾಲೋವಿನ್ ಎಂದರೆ ಮನೆಯನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸುವುದು, ಬಾಗಿಲುಗಳಲ್ಲಿ ಸಿಹಿ ಕುಂಬಳವನ್ನು ಕೊರೆದು ಕಣ್ಣು ಮೂಗು ಬಾಯಿ ಮೂಡಿಸಿ, ಅದರಲ್ಲಿ ದೀಪಹಚ್ಚಿಟ್ಟು ದೃಷ್ಠಿ ಬೊಂಬೆಯಂತೆ ಇಡುವುದು, ಪ್ರೇತವು ಮನೆಯನ್ನು ಪ್ರವೇಶಿಸದೆ ಬಾಗಿಲಲ್ಲೇ ನಿಂತು ಹೊರಟು ಹೋಗಲಿ ಎಂದು ಆಹಾರ ಪದಾರ್ಥಗಳನ್ನು ಬಾಗಿಲಲ್ಲಿ ಇಡುವುದು. ನೆರೆಹೊರೆಯವರು ತಮ್ಮ ಕುಟುಂಬದಲ್ಲಿ ತೀರಿಹೋದವರ ಬಗ್ಗೆ ಪರಸ್ಪರ ಮಾತನಾಡುವುದು, ಹಿರಿಯರ ಸ್ಮರಣೆ ಮಾಡುವುದು, ಮಕ್ಕಳಿಗೆ ದೆವ್ವ ಭೂತಗಳ ಕಥೆ ಹೇಳುವುದು, ಸಂಜೆಯಾದರೆ ಎಲ್ಲರೂ ಒಂದು ಕಡೆ ಸೇರಿ ಪಾರ್ಟಿ ಮಾಡುವುದು, ಮಕ್ಕಳು ವಿವಿಧ ವೇಷ ತೊಟ್ಟು,ನೆರೆಹೊರೆಯವರ ಮನೆಗೆ ಕ್ಯಾಂಡಿಗಾಗಿ ಧಾಂದಲೆ ಇಡುವುದು, ಅಸಹಾಯಕರಿಗೆ, ಭಿಕ್ಷುಕರಿಗೆ ಕೇಕ್ ಗಳನ್ನು ವಿತರಿಸಿ ತೀರಿಕೊಂಡ ತಮ್ಮ ಪೂರ್ವಜರಿಗೆ ಒಳಿತನ್ನು ಬಯಸಿ ಎನ್ನುವುದು ಈಗ ಅಮೇರಿಕದಲ್ಲಿ ಚಾಲ್ತಿಯಲ್ಲಿರುವ ಹಾಲೋವಿನ್ ಆಚರಣೆ.
ಐರ್ಲೆಂಡಿನಲ್ಲಿ ಪ್ರಾರಂಭವಾದ ಆಚರಣೆ ಇಂದು ಅನೇಕ ದೇಶಗಳಿಗೆ ಪಸರಿಸಿದೆ. ಲ್ಯಾಟಿನ್ ಅಮೆರಿಕ, ಕೆನಡ, ಸ್ಪೇನ್, ಮೆಕ್ಸಿಕೊ, ಇಂಗ್ಲೇಂಡ್, ಚೈನಾ, ಜರ್ಮನಿಯಲ್ಲಿ ಕೂಡ ಹಾಲೋವಿನ್ ಆಚರಣೆ ಇದೆ. ಆದರೆ ಒಂದು ದೇಶದ ಆಚರಣೆಗಿಂತ ಮತ್ತೊಂದು ದೇಶದಲ್ಲಿ ಈ ಆಚರಣೆ ಕೊಂಚ ಭಿನ್ನ. ಭಾರತದಲ್ಲಿ ನಾವು ಹೇಗೆ ಪೂರ್ವಜರಿಗೆ ಶ್ರಾದ್ದ ಮಾಡುತ್ತೇವೆಯೋ, ಪಿತೃಪಕ್ಷದಲ್ಲಿ ತೀರಿಕೊಂಡ ಹಿರಿಯರಿಗೆ ಎಡೆಯಿಡುವ ಪದ್ದತಿ ಇದೆಯೋ. ಅದೇ ರೀತಿ ಈ ಹಾಲೋವಿನ್ ಆಚರಣೆಯಲ್ಲಿ ಕೂಡ ಅಮೇರಿಕನ್ನರು ತಮ್ಮ ಕುಟುಂಬದಲ್ಲಿ ತೀರಿಕೊಂಡವರಿಗಾಗಿ ಅವರ ನೆಚ್ಚಿನ ಆಹಾರ ಪದಾರ್ಥ, ನೀರು, ಟವಲ್ ಎಲ್ಲವನ್ನೂ ಅಕ್ಟೋಬರ್ ೩೧ ರ ರಾತ್ರಿ ಇಡುತ್ತಾರೆ.
ಇನ್ನು ಕೆಲವರಿಗೆ ಹಾಲೋವಿನ್ ಆಚರಣೆ ಕೇವಲ್ ಮೋಜು. ಆ ದಿನ ಸ್ನೇಹಿತರೊಂದಿಗಿನ ಪಾರ್ಟಿಗೆ, ಮಕ್ಕಳನ್ನು ವಿವಿಧ ವೇಷದಲ್ಲಿ ಸಿಂಗರಿಸುವುದಕ್ಕೆ ಮೀಸಲು. ಹಾಗೆ ಸಿಂಗಾರಗೊಂಡ ಮಕ್ಕಳು ನೆರೆಹೊರೆಯ ಮನೆಗೆ ತೆರಳಿ, ’ಟ್ರಿಕ್ ಆರ್ ಟ್ರೀಟ್’ ಎಂದು ಕೇಳುವುದು. ಟ್ರೀಟ್ ನ ರೂಪದಲ್ಲಿ ಕ್ಯಾಂಡಿಗಳನ್ನು ಪಡೆದು ಬುಟ್ಟಿಗೆ ತುಂಬಿಕೊಂಡು ನಂತರದ ಮನೆಗೆ ಹೋಗುವುದು. (ಹೀಗೆ ಹೇಳುವಾಗ ನವರಾತ್ರಿಯಲ್ಲಿ ನಮ್ಮಲ್ಲಿ ಮನೆಮನೆಗೆ ತೆರಳಿ ಗೊಂಬೆಗಳನ್ನು ನೋಡಲು ಹೋಗುವುದು, ಆಗ ಮನೆಯವರು ಗೊಂಬೆಗಳಿಗೆ ಆರತಿ ಮಾಡಿ, ಮಕ್ಕಳಿಗೆಲ್ಲಾ ಸಿಹಿ ನೀಡುವ ಪದ್ದತಿ ನೆನಪಾಗುತ್ತದೆ) ಉಳಿದಂತೆ ಹಲವೆಡೆ ವಿವಿಧ ವೇಷ ಸ್ಪರ್ಧೆ, ಟ್ರೆಷರ್ ಹಂಟ್ ನಂತಹ ಆಟ, ಸೇಬನ್ನು ಎತ್ತರದಿಂದ ಇಳಿಬಿಟ್ಟು ಮಕ್ಕಳು ಅವನ್ನು ಕುಪ್ಪಳಿಸಿ ತಿನ್ನುವ ಆಟಗಳನ್ನು ಕೂಡ ನೆಡೆಸಲಾಗುತ್ತದೆ.
ಒಟ್ಟಿನಲ್ಲಿ ಈ ಹಾಲೋವಿನ್ ಗು ಭಾರತದಲ್ಲಿನ ಪಿತೃಪಕ್ಷ, ಮಹಾಲಯ ಅಮವಾಸ್ಯೆಗೂ ಆಚರಣೆಯಲ್ಲಿ ಒಂದು ರೀತಿಯ ಸಾಮ್ಯತೆ ಕಾಣುವುದು ನಿಜ. ಎಷ್ಠೇ ವಿಜ್ನಾನ ತಂತ್ರಜ್ನಾನದಲ್ಲಿ ಈ ದೇಶಗಳು ಮುಂದುವರೆದಿದ್ದರೂ ಇಲ್ಲೂ ಹಾಲೋವಿನ್ ನಂತಹ ನಂಬಿಕೆಗಳು, ಮಾಟ ಮಂತ್ರ ಭೂತಚೇಷ್ಟೇಯಂತಹ ಮೂಢನಂಬಿಕೆಗಳೂ ಇದ್ದೇ ಇದೆ. ಗುಂಡಿಗೆಯನ್ನೇ ನಡುಗಿಸುವ ಚಳಿ, ಮುಸ್ಸಂಜೆಯ ಗಾಢಾಂದಕಾರ, ಚಳಿಗಾಲದಲ್ಲಿನ ಸಾವು ನೋವುಗಳು ಜನರಲ್ಲಿ ಒಂದು ರೀತಿಯ ಭಯಹುಟ್ಟಿಸಿ, ಮನದಲ್ಲಿ ಮೌಢ್ಯವನ್ನು ಜಾಗೃತಗೊಳಿಸಿದರೆ ಅದು ಅಸಹಜವೇನಲ್ಲ. ಆ ಭಯದಿಂದಲೇ ’ಗುಮ್ಮ ಬಂತು ಗುಮ್ಮ’ ಎಂದರೆ ಆಶ್ಚರ್ಯಪಡಬೇಕಿಲ್ಲ.
ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು
ಇಂಟರ್ನೆಟ್! ಬಹುಶಃ ಅನೇಕರ ದಿನನಿತ್ಯದ ತೀರಾ ಅಗತ್ಯಗಳಲ್ಲಿ ಇಂಟರ್ನೆಟ್ ಕೂಡ ಒಂದು. ಫೇಸ್ ಬುಕ್,ಆರ್ಕುಟ್, ಟ್ವಿಟರ್ ಇತ್ಯಾದಿಗಳು ಬಂದ ಮೇಲಂತೂ ಅದೊಂದು ಅಡಿಕ್ಷನ್. ಬೆಳಗಾಗೆದ್ದು ಫೇಸ್ ಬುಕ್ ತೆರೆದು ಕೂರುವವರು ಹೆಚ್ಚು ಸಂಖ್ಯೆಯಲ್ಲೇ ಇದ್ದಾರೆ. ಇನ್ನು ಬ್ಯಾಂಕಿನ ವ್ಯವಹಾರಕ್ಕೆ, ಶೇರು ಮಾರುಕಟ್ಟೆಯ ಕೊಡುಕೊಳ್ಳುವಿಕೆಗೆ, ರೈಲ್ವೇ, ಬಸ್ ಟಿಕೇಟ್ ಮುಂಗಡ ಬುಕ್ಕಿಂಗಿಗೆ, ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕೂಡ ಇಂಟರ್ ನೆಟ್ ನೆಚ್ಚಿಕೊಂಡವರು ನಾವು. ಮೊಬೈಲ್ ನಲ್ಲೂ ಅಂತರ್ಜಾಲ ಜಾಲಾಡಬಹುದಾದ ವ್ಯವಸ್ಥೆ ಬಂದಾಗಿನಿಂದ ನಿಜ ಅರ್ಥದಲ್ಲಿ ಅನೇಕರ ಸಂಗಾತಿಯಾಗಿರುವುದು ಇಂಟರ್ನೆಟ್. ಆದರೆ ನಮ್ಮಲ್ಲಿ ಎಷ್ಟು ಜನಕ್ಕೆ ಅಂತರ್ಜಾಲದ ಬಗ್ಗೆ, ಕಂಪ್ಯೂಟರಿನ ಬಗ್ಗೆ ಮಾಹಿತಿ ಇದೆ? ಬ್ರೌಸರ್ ತೆರೆದು ಫೇಸ್ ಬುಕ್.ಕಾಮ್ ಎಂದು ಟೈಪಿಸಿದರೆ ಲಾಗಿನ್ ಸ್ಕ್ರೀನ್ ಬರುತ್ತದೆ, ಮತ್ತು ಅಲ್ಲಿ ನಮ್ಮ ಇಮೈಲ್ ಮತ್ತು ಪಾಸ್ವರ್ಡ್ ಟೈಪಿಸಿ ಲಾಗಿನ್ ಬಟನ್ ಒತ್ತಿದರೆ ಫೇಸ್ ಬುಕ್ಕಿನ ಗೋಡೆ ಕಾಣಸಿಗುತ್ತದೆ. ಇವೆಲ್ಲಾ ಆಗುವುದಾದರೂ ಹೇಗೆ? ಕೂತಲ್ಲೇ ಬ್ಯಾಂಕಿನ ಹಣವನ್ನು ನೋಡಿ, ಬಡ್ಡಿ ಜಮೆಯಾಗಿದೆಯೇ ಪರಿಶೀಲಿಸಿ, ಪೋನು, ಕರೆಂಟು ಇತ್ಯಾದಿ ಬಿಲ್ಲುಗಳನ್ನು ಕೇವಲ ಒಂದೇ ನಿಮಿಷದಲ್ಲಿ, ಮನೆಯಲ್ಲೇ ಕೂತು ಪಾವತಿಸಲು ಸಾಧ್ಯವಾಗಿದ್ದು ಹೇಗೆ? ಮನೆಯಲ್ಲಿಟ್ಟ ಪುಟ್ಟ ಮೋಡೆಮ್ ನಿಂದ ಹಾದು ಹೋದ ತಂತಿ ಹೇಗೆ ಅಷ್ಟೆಲ್ಲಾ ಮಾಹಿತಿಯನ್ನು ಗಣಕಕ್ಕೆ ತುಂಬುತ್ತದೆ?
ಊಹುಃ, ಅಂತರ್ಜಾಲ ಬಳಸುವುದು ಗೊತ್ತು, ಸ್ನೇಹಿತರ ಜೊತೆ ಗಂಟೆಗಟ್ಟಲೆ ಚಾಟಿಸುವುದು ಗೊತ್ತು, ಆನ್ ಲೈನ್ ಸಿನಿಮಾ ನೋಡುವುದು ಗೊತ್ತೇ ವಿನಹಃ ಇದೆಲ್ಲಾ ಸಾಧ್ಯವಾಗುವುದು ಹೇಗೆ? ಇದರಲ್ಲೂ ಮೋಸ ವಂಚನೆ ಇದೆಯಾ? ಬ್ಯಾಂಕ್ ವ್ಯವಹಾರ ಮಾಡುವಾಗ ಹೇಗೆ ಜಾಗರೂಕತೆ ವಹಿಸಬೇಕು? ಇವೆಲ್ಲದರ ಬಗ್ಗೆ ಯೋಚಿಸಿರುವುದೇ ಇಲ್ಲ. ಪರವಾಗಿಲ್ಲ ಬಿಡಿ, ಇದೆಲ್ಲಾ ತಿಳಿದುಕೊಳ್ಳುವ ಮನಸ್ಸಿದ್ದರೆ ಪುಸ್ತಕದಂಗಡಿಗೆ ಹೋದರೆ ಇಂತಹ ಮಾಹಿತಿ ಒದಗಿಸುವ ಅನೇಕ ಪುಸ್ತಕಗಳು ಸಿಗುತ್ತವೆ. ತೀರಾ ತಂತ್ರಜ್ನಾನದ ಭಾಷೆಯಲ್ಲೇ ವಿವರಿಸುವ ಪುಸ್ತಕ ಬೋರು ಹೊಡೆಸುತ್ತವೆ ಎನ್ನುತ್ತೀರಾ? ಅದಕ್ಕೆಂದೇ ಕನ್ನಡದಲ್ಲಿ ವಿಜ್ನಾನ-ತಂತ್ರಜ್ನಾನದ ಬಗ್ಗೆ ಬರೆಯುತ್ತಿರುವ ಕೆಲವೇ ಕೆಲವು ಸೃಜನಶೀಲ ಲೇಖಕರಲ್ಲಿ ಒಬ್ಬರಾಗಿರುವ ಯುವಮಿತ್ರ ಟಿ.ಜಿ ಶ್ರೀನಿಧಿ ಒಂದು ಪುಸ್ತಕ ತಂದಿದ್ದಾರೆ. ’ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು’ ಆ ಪುಸ್ತಕದ ಹೆಸರು. ಹೆಸರಷ್ಠೇ ತಮಾಷೆಯಾಗಿಲ್ಲ. ತೀರಾ ಜಿಗುಟು ಜಿಗುಟೆನಿಸುವ ತಂತ್ರಜ್ನಾನದ ಭಾಷೆಗೂ ನವಿರಾದ ಹಾಸ್ಯಲೇಪ ನೀಡಿ ಅಂತರ್ಜಾಲದ ಬಗ್ಗೆ, ಮಾಹಿತಿ ತಂತ್ರಜ್ನಾನದಲ್ಲಾಗುತ್ತಿರುವ ಕ್ಷಿಪ್ರ ಪ್ರಗತಿಯ ಬಗ್ಗೆ, ಕ್ಲೌಡ್ ಕಂಪ್ಯೂಟಿಂಗ್ ಬಗ್ಗೆ ಲೇಖಕರು ಈ ಪುಸ್ತಕದಲ್ಲಿ ವಿವರಿಸುತ್ತಾ ಹೋಗುತ್ತಾರೆ.
ಕಂಪ್ಯೂಟರ್ ಮತ್ತು ಇಂಟರ್ನೆಟ್ ಗಳಿಂದ ಎಷ್ಟು ಉಪಯೋಗಗಳಿವೆಯೋ ಅಷ್ಟೇ ದುರುಪಯೋಗಗಳಿವೆ. ಕುಳಿತಲ್ಲೇ ಬ್ಯಾಂಕಿನ ಅಕೌಂಟ್ ತೆರೆದು, ಸಾಲದ ಕಂತು ಕಟ್ಟಿ, ಮತ್ತೊಬ್ಬರಿಗೆ ದುಡ್ಡು ವರ್ಗಾಯಿಸಿ, ಬಿಲ್ಲುಗಳನ್ನು ಪಾವತಿ ಮಾಡಿಬಿಡಬಹುದು ಎಂಬ ಸಂತಸವಿದ್ದಾಗಿಯೂ, ಯಾರಾದರೂ ನಮ್ಮ ಖಾತೆಗೆ ಸುಲಭವಾಗಿ ಲಗ್ಗೆಯಿಟ್ಟು ಕೂಡಿಟ್ಟದ್ದನ್ನೆಲ್ಲಾ ಲಪಟಾಯಿಸಿಬಿಡಬಹುದಾ ಎಂಬ ಆತಂಕವೂ ಇದೆ. ಈ ಬಗ್ಗೆ ’ ಗುರೂ ಸ್ವಲ್ಪ ಹುಷಾರು’ ’ ಹುಷಾರು ಕಣ್ರೀ, ಫಿಶಿಂಗ್ ಗಾಳಕ್ಕೆ ಸಿಕ್ಕಬೇಡಿ!’ ಎಂದು ಎಚ್ಚರಿಸುವ ಶ್ರೀನಿಧಿ, ಫಿಶಿಂಗ್ ಮತ್ತು ವಿಶಿಂಗ್ ತಂತ್ರಗಳನ್ನು ವಿವರಿಸುತ್ತಾ, ಗಾಬರಿಯಾಗಬೇಕಾದ ಅವಶ್ಯಕತೆ ಇಲ್ಲ. ಸ್ವಲ್ಪ ಜಾಗರೂಕರಾಗಿದ್ದರೆ ಎಲ್ಲವೂ ಸುಗಮ ಮತ್ತು ಸುಲಭ ಎಂಬ ಅಭಯ ನೀಡುತ್ತಾ ಹೋಗುತ್ತಾರೆ.
ಮೊನ್ನೆ ಯೂಟ್ಯೂಬಿನಲ್ಲಿ ಒಂದು ವೀಡಿಯೋ ನೋಡುತ್ತಿದ್ದೆ. ಅದರಲ್ಲಿ ಮಾತನಾಡುತ್ತಿದ್ದದ್ದು, ಭಾರತ ಸರ್ಕಾರದ ಎ ದರ್ಜೆಯ ಹುದ್ದೆಯಲ್ಲಿದ್ದು ನಿವೃತ್ತರಾದ ಅಧಿಕಾರಿ. ಅವರು ಕಂಪ್ಯೂಟರ್ ಮತ್ತು ಅದರಲ್ಲಿನ ಕ್ಷಿಪ್ರ ಪ್ರಗತಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಅವರು ಕ್ಲೌಡ್ ಕಂಪ್ಯೂಟಿಂಗ್ ಬಗ್ಗೆ ಮಾತನಾಡಿದ್ದು ಕೇಳಿ ನಕ್ಕು ಸುಮ್ಮನಾಗಬೇಕೊ, ಇಂತವರೂ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದರಲ್ಲ ಎಂದು ಮೂಗುಮುರಿಯಬೇಕೋ ಅರ್ಥವಾಗಲಿಲ್ಲ. ಕ್ಲೌಡ್ ಕಂಪ್ಯೂಟಿಂಗಿಗೂ ಮೋಡ, ಮಳೆಗೂ ಸಂಭಂದ ಕಲ್ಪಿಸಿ ಅವರು ಮಾತನಾಡುತ್ತಿದ್ದರು. ಶ್ರೀನಿಧಿ ಈ ಪುಸ್ತಕದಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಬಗ್ಗೆ ವಿವರಿಸುವಾಗ ಆ ಅಧಿಕಾರಿಯ ನೆನಪಾಯಿತು. ಬಹುಶಃ ಇಂತಹ ಪುಸ್ತಕವನ್ನೊಮ್ಮೆ ಅವರು ಓದಿ ನಂತರ ಮಾತಿಗೆ ನಿಂತಿದ್ದರೆ ಅಭಾಸವಾಗುತ್ತಿರಲಿಲ್ಲ.
ಉಳಿದಂತೆ ಪುಸ್ತಕದಲ್ಲಿ ಅನೇಕ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಾ ಹೋಗುವ ಲೇಖಕ ಶ್ರೀನಿಧಿ. ಎಚ್ ಟಿಟಿಪಿ ಮತ್ತು ಎಚ್ ಟಿಟಿಪಿಎಸ್ ಗಳ ನಡುವಿನ ವ್ಯತ್ಯಾಸವೇನು, ವೈರಸ್ ನಿಂದ ಆಗುವ ಹಾನಿಗಳೇನು, ಆಪ್ಟಿಕಲ್ ಫೈಬರ್ ಅನ್ನು ಯಾಕೆ ಮತ್ತು ಹೇಗೆ ಅಂತರ್ಜಾಲ ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ, ಕಂಪ್ಯೂಟರ್ ಕಾರ್ಯಾಚರಣೆ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನೂ ವಿವರಿಸುತ್ತಾರೆ. ’ಅತ್ತೆಗೊಂದು ಕಾಲ ಬ್ರೌಸರ್ ಗೊಂದು ಕಾಲ’ ಎಂಬಂತಹ ಶೀರ್ಷಿಕೆಗಳು ಆಕರ್ಷಣೀಯವಾಗಿವೆ. ಪುಸ್ತಕದ ಕೊನೆಯಲ್ಲಿ ನೀಡಿರುವ ಪದ ಪರಿಚಯದ ಮೇಲೆ ಒಮ್ಮೆ ಕಣ್ಣಾಡಿಸಿದರೆ ಅನೇಕ ತಾಂತ್ರಿಕ ಪದಗಳ ಅರ್ಥ ಮತ್ತು ಸಂಕ್ಷಿಪ್ತ ವಿವರ ನಮ್ಮ ಜ್ನಾನಭಂಡಾರಕ್ಕೆ ಜಮೆಯಾಗುತ್ತದೆ.
ಕಂಪ್ಯೂಟರ್ ಮತ್ತು ಇಂಟರ್ನೆಟ್ ಬಗ್ಗೆ ಕುತೂಹಲ ಇರುವವರಿಗೆ, ಈಗಷ್ಠೇ ಅಂತರ್ಜಾಲದ ಸಂಪರ್ಕಕ್ಕೆ ಬಂದವರಿಗೆ, ಶಾಲಾ ವಿಧ್ಯಾರ್ಥಿಗಳಿಗೆ ಈ ಪುಸ್ತಕ ಆಪ್ತಮಿತ್ರನಂತೆ ಗಣಕಜಗತ್ತಿನ ಪರಿಚಯ ಮಾಡಿಸಬಲ್ಲದು. ಈಗಾಗಲೇ ಕಂಪ್ಯೂಟರ್ ಅಭ್ಯಾಸ ಮಾಡಿರುವವರು ಕೂಡ ಒಮ್ಮೆ ಪುಟ ಸರಿಸುತ್ತಾ ಹೋದರೆ ತಿಳುವಳಿಕೆಯ ಹರವು ವಿಸ್ತಾರಗೊಳ್ಳುತ್ತದೆ. ಬೋರೆನಿಸುವ ತಂತ್ರಜ್ನಾನ ವಿಷಯದ ಪುಸ್ತಕಗಳ ನಡುವೆ ಮಾಹಿತಿ ನೀಡುತ್ತಲೇ ಈ ಪುಸ್ತಕ ಮಖದಲ್ಲಿ ಮಂದಹಾಸ ಮೂಡಿಸಬಲ್ಲದು. ಅಂದಹಾಗೆ ಹಿರಿಯ ವಿಜ್ನಾನ ಬರಹಗಾರ ನಾಗೇಶ್ ಹೆಗಡೆಯವರಿಗೆ ಅರ್ಪಿತವಾಗಿರುವ ಈ ಪುಸ್ತಕ ಇದೇ ಭಾನುವಾರ ಬಿಡುಗಡೆಗೊಳ್ಳುತ್ತಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಲಿ, ಶ್ರೀನಿಧಿ ಇನ್ನೂ ಹೆಚ್ಚು ಮಾಹಿತಿಯುಕ್ತ ಕೃತಿಗಳನ್ನು ಕನ್ನಡದ ಓದುಗರಿಗೆ ಕೊಡುವಂತಾಗಲಿ, ಅವರ ವಿಜ್ನಾನದ ಬಗೆಗಿನ ಆಸಕ್ತಿ ಮತ್ತು ಬರೆಯುವ ಕಾಯಕ ಹೀಗೆಯೇ ಮುಂದುವರಿಯಲಿ ಎಂಬ ಹಾರೈಕೆ ನನ್ನದು. ಒಟ್ಟಿನಲ್ಲಿ ಹೇಳುವುದಾದರೆ ಈಗಾಗಲೇ ನಾಲ್ಕಾರು ವಿಜ್ನಾನ-ತಂತ್ರಜ್ನಾನ ವಿಷಯಾಧಾರಿತ ಪುಸ್ತಕ ಬರೆದಿರುವ ಟಿ.ಜಿ ಶ್ರೀನಿಧಿಯವರ ’ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು’ ಶ್ರೀವತ್ಸ ಜೋಶಿಯವರು ಮುನ್ನುಡಿಯಲ್ಲಿ ಹೇಳಿರುವಂತೆ ‘ಓದಲಾಗದ ಪುಸ್ತಕವಾಗುವುದಿಲ್ಲ’ ಎಂಬ ಖಾತ್ರಿಯನ್ನಂತೂ ನಾನು ಕೊಡಬಲ್ಲೆ.
.
ಕನ್ನಡ ಪ್ರೇಮವೆಂದರೆ ಬರೀ ’ವೇದಿಕೆ’ಯ ಹೋರಾಟ ಹಾರಾಟಗಳಲ್ಲ…
ಕನ್ನಡದ ಹಬ್ಬ ಎದುರಿಗಿದೆ.ಕರ್ನಾಟಕದಲ್ಲಿ ಕನ್ನಡ ಹಬ್ಬ ಬಿಡಿ, ನಿಮಗೆ ಗೊತ್ತಿರುವುದೇ. ಕನ್ನಡ ಘೋಷಣೆ, ಧ್ವಜಾರೋಹಣ, ಹೆಚ್ಚು ಜ್ನಾನಪೀಠ ಪ್ರಶಸ್ತಿ ಪಡೆದ ಭಾಷೆ ಎಂಬ ಹಿಗ್ಗು. ಕನ್ನಡದ ಹೋರಾಟ ಅನಿವಾರ್ಯ, ಕನ್ನಡಿಗರು ನಾವೆಲ್ಲರೂ ಒಂದಾಗಬೇಕು, ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂಬ ಭಾವಾವೇಶದ ಮಾತು.ಆದರೆ ಹೊರನಾಡಿನಲ್ಲಿರುವ ಕನ್ನಡಿಗರಿಗೆ ಕನ್ನಡ ಹಬ್ಬವೇ ಬೇರೆ. ಕನ್ನಡದ ಬಗೆಗಿನ ಚಿಕ್ಕ ಪುಟ್ಟ ಸಂಗತಿಗಳು ಇಲ್ಲಿ ಕನ್ನಡ ಹಬ್ಬದ ಸಂತಸ ತರುತ್ತವೆ. ಅಚಾನಕ್ಕಾಗಿ ಯಾರೋ ಕನ್ನಡಿಗರು ಮಾತಿಗೆ ಸಿಕ್ಕರೆ, ಕನ್ನಡದ ಭಾವಗೀತೆ ದೂರದಿಂದೆಲ್ಲೋ ತೇಲಿಬಂದರೆ, ಕನ್ನಡದ ಅಕ್ಷರಗಳು ಮಸುಕುಮಸುಕಾಗಿ ಕಣ್ಣಳತೆಯಾಚೆ ಕಂಡರೂ ಅಂದು ಕನ್ನಡ ಹಬ್ಬವೇ.
ಈಗ ಬಿಡಿ, ಅಮೆರಿಕ, ಇಂಗ್ಲೇಂಡ್, ಆಸ್ಟ್ರೇಲಿಯ, ದುಬೈ ಇತ್ಯಾದಿ ದೇಶಗಳಲ್ಲಿ ಹೆಚ್ಚು ಸಂಖ್ಯೆಯಲ್ಲೇ ಉದ್ಯೋಗ ಹರಸಿ ಬಂದ ಕನ್ನಡಿಗರಿದ್ದಾರೆ. ಹೀಗೆ ಉದ್ಯೋಗ ಹರಸಿಬಂದ ಕನ್ನಡಿಗರು ಇಲ್ಲಿ ನೆಲೆಸಿ ಸಂಸಾರ ಹೂಡಿದ್ದಾರೆ. ಕನ್ನಡ ಕುಟುಂಬಗಳು ಪರಸ್ಪರ ಬೆರೆಯುವುದಕ್ಕೆ, ಕನ್ನಡದ ಸಂಸ್ಕೃತಿ, ಕನ್ನಡತನ ತಮ್ಮ ಮುಂದಿನ ಪೀಳಿಗೆಗೂ ಪರಿಚಯಿಸುವುದಕ್ಕೆ ತಾವುಗಳೇ ಒಗ್ಗೂಡಿ ಕನ್ನಡ ಸಂಘಗಳನ್ನ ಕಟ್ಟಿಕೊಂಡಿದ್ದಾರೆ. ಅಮೇರಿಕಾದಲ್ಲೇ ಬರೋಬ್ಬರಿ 50 ಕ್ಕಿಂತ ಹೆಚ್ಚು ಕನ್ನಡ ಸಂಘಗಳಿವೆ. ಎರಡು ವರ್ಷಕ್ಕೊಮ್ಮೆ ’ಅಕ್ಕ’ ನಡೆಸುವ ದೊಡ್ಡ ಸಮ್ಮೇಳನವಷ್ಠೇ ಅಲ್ಲ. ಪ್ರತಿವರ್ಷ ಕೂಡ ಅನೇಕ ನಗರಗಳಲ್ಲಿ ಸಮ್ಮೇಳನ, ಸಾಹಿತ್ಯ ಗೋಷ್ಠಿ, ಪುಸ್ತಕ ಬಿಡುಗಡೆ, ಸಂಗೀತ ಕಛೇರಿ, ವಿಚಾರ ಗೋಷ್ಠಿ, ಹಬ್ಬಗಳ ಆಚರಣೆ ಎಲ್ಲವೂ ನಡೆಯುತ್ತವೆ. ಕನ್ನಡನಾಡಿನಿಂದಲೂ ಸಾಹಿತಿಗಳನ್ನ, ಕಲಾವಿದರನ್ನ, ಸಿನಿಮಾ ನಟರನ್ನ ಇಲ್ಲಿಗೆ ಕರೆಸಿಕೊಂಡು ಸಂಭ್ರಮಿಸುವುದೂ ಉಂಟು. ಅಷ್ಠರ ಮಟ್ಟಿಗೆ ಇಲ್ಲಿ ಕನ್ನಡತನ ಸದಾ ಜಾಗ್ರತ.
ಕರ್ನಾಟಕದಿಂದ ಸಾವಿರಾರು ಮೈಲಿಗಳಾಚೆಯಿರುವವರಿಗೆ ಕನ್ನಡದ ಬಗ್ಗೆ ಒಂದು ಚಡಪಡಿಕೆ ಇದ್ದೇ ಇರುತ್ತದೆ. ಸದಾ ಆಂಗ್ಲಾ ಭಾಷೆಯಲ್ಲೇ ವ್ಯವಹರಿಸುವ ಜನರೊಂದಿಗಿದ್ದಾಗ ಆಗೀಗ ಸಿಗುವ ಕನ್ನಡ ವಾತಾವರಣ ರೋಮಾಂಚನಗೊಳಿಸುತ್ತದೆ. ಸಿಕ್ಕ ಒಂದೇ ಕನ್ನಡ ಪುಸ್ತಕದ ಪುಟ ಪುಟ ತಿರುವಿಹಾಕುವಾಗ ಸಿಕ್ಕುವ ಸಂತಸ ವರ್ಣನಾತೀತ. ಇತ್ತೀಚೆಗೆ ಅಮೇರಿಕಾದಲ್ಲಿ ನೆಲೆಸಿದ್ದ ಮತ್ತು ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಕಾದಂಬರಿಕಾರ ಎಂ.ಆರ್ ದತ್ತಾತ್ರಿ, ತಮ್ಮ ’ದ್ವೀಪವ ಬಯಸಿ’ ಕಾದಂಬರಿಯನ್ನು ಕಳುಹಿಸಿಕೊಟ್ಟಿದ್ದರು. ತುಂಬಾ ಇಷ್ಠವಾದ ಮತ್ತು ಸರಾಗವಾಗಿ ಓದಿಸಿಕೊಂಡು ಹೋದ ಕಾದಂಬರಿ ಅದು. ಹೀಗೆ ಒಮ್ಮೆ ಅದೇ ಕಾದಂಬರಿಯ ಪುಟಗಳನ್ನು ಸಿಸ್ಸಿನಾಟಿಯಲ್ಲಿನ ಮೆಟ್ರೋ ಬಸ್ಸಿನಲ್ಲಿ ಕೂತು ತಿರುವಿಹಾಕುತ್ತಿದ್ದೆ. ಪಕ್ಕದಲ್ಲಿ ಕೂತವನು ಗಮನಿಸುತ್ತಿದ್ದ. ಆತನಿಗೆ ಬಹುಶಃ ಈ ಭಾಷೆಯ ಪರಿಚಯವಿರಲಿಲ್ಲ. ಕೇಳಲೋ ಬೇಡವೋ ಎಂಬ ಸಂಕೋಚದಲ್ಲೇ ನಾನೊಮ್ಮೆ ನೋಡಲೆ ಎಂದು ತೆಗೆದುಕೊಂಡ, ಒಂದಷ್ಟು ಪುಟ ಸರಿಸಿದ. ಯಾವುದೀ ಭಾಷೇ ನೋಡಲು ಸುಂದರವಾಗಿದೆ. ಹಿಂದೊಮ್ಮೆ ಈ ಭಾಷೆಯ ಪುಸ್ತಕವನ್ನ ನ್ಯೂಯಾರ್ಕಿನ ಗ್ರಂಥಾಲಯದಲ್ಲಿ ನೋಡಿದ್ದೆ ಎಂದ. ಖುಷಿಯಾಯಿತು. ಇದು ನನ್ನ ಕನ್ನಡ ಭಾಷೆ, ಅಕ್ಷರಗಳಷ್ಟೇ ಸುಂದರವಲ್ಲ. ಭಾಷೇ ಕೂಡ ಎಂದು ಹೆಮ್ಮೆ ಯಿಂದ ಹೇಳಿದ್ದೆ. ಅಂದು ಆದ ಸಂತೋಷಕ್ಕೆ ಪಾರವೇ ಇಲ್ಲ.
ಸಿನ್ಸಿನಾಟಿಯಲ್ಲಿನ ಲೈಬ್ರರಿ ಕೂಡ ತುಂಬಾ ವಿಶಾಲವಾದದ್ದು. ಮೂರು ಮಹಡಿಯ ಎರಡು ಕಟ್ಟಡಗಳ ತುಂಬಾ ಪುಸ್ತಕಗಳು. ನಾನಾ ದೇಶದ ಇತಿಹಾಸ, ಅನೇಕ ರಾಷ್ಟ್ರನಾಯಕರ ಜೀವನ ಚರಿತ್ರೆ, ವಿಜ್ನಾನ, ತಂತ್ರಜ್ನಾನ, ವೈದ್ಯಕೀಯ ಇನ್ನಿತರ ಸಾವಿರಾರು ಪುಸ್ತಕಗಳ ಖಣಜ ಆ ಗ್ರಂಥಾಲಯ. ಅಲ್ಲಿನ ಪುಸ್ತಕದ ಕಪಾಟುಗಳಲ್ಲಿ ಮೊದಲು ಹುಡುಕಲು ಹೊರಟಿದ್ದೂ ಕನ್ನಡದ ಯಾವುದಾದರು ಪುಸ್ತಕ ಇದೆಯಾ ಎಂದು. ನಂತರ ಛೇ! ಒಂದೂ ಕನ್ನಡ ಪುಸ್ತಕಗಳೇ ಇಲ್ಲವಲ್ಲ! ಎಂದು ಗೊಣಗಿಕೊಂಡಿದ್ದೆ. ಇಲ್ಲಿ ಅನೇಕ ಭಾಷೆಗಳ ಪುಸ್ತಕಗಳಿವೆ. ಅಂತರಾಷ್ಟ್ರಿಯ ಪುಸ್ತಕ ವಿಭಾಗದಲ್ಲಿ ಆಯಾ ದೇಶದ ಉತ್ತಮ ಪುಸ್ತಕಗಳ ಸಂಗ್ರಹವಿದೆ. ಆದರೆ ಕನ್ನಡ ಮಾತ್ರ ಇಲ್ಲಿ ಕಣ್ಮರೆ. ಇನ್ನು ಸಿ.ಡಿಗಳ ವಿಭಾಗಕ್ಕೆ ಹೋದರೂ, ಜಗತ್ತಿನ ಅಷ್ಟೂ ಭಾಷೆಗಳ ಉತ್ತಮ ಚಿತ್ರಗಳ ಸಿ.ಡಿ ಇಲ್ಲಿ ಲಭ್ಯ. ಭಾರತದ ಹಿಂದಿ, ತಮಿಳು, ತೆಲುಗು ಭಾಷೆಯ ಚಲನ ಚಿತ್ರಗಳು ಇಲ್ಲಿ ಕಾಣಸಿಗುತ್ತವೆ. ಆ ಸಾಲಿನಲ್ಲೂ ನಾನು ಹುಡುಕಿದ್ದು ಕನ್ನಡ ಚಿತ್ರಗಳು ಯಾವುದಾದರೂ ಇದೆಯಾ? ಕೊನೆಗೂ ನನ್ನ ಭಾಷೆಯ ಚಿತ್ರದ ಸಿ.ಡಿ ಅಲ್ಲಿ ಕಂಡು ಸಂತಸವಾಯಿತು. ಪಿ.ಶೇಷಾದ್ರಿಯವರ ’ಮುನ್ನುಡಿ’ ಕಂಡು ಖುಷಿಯೋ ಖುಷಿ, ಬೇರೆ ಯಾವುದಾದರೂ ಕನ್ನಡ ಸಿನಿಮಾ ಇದೆಯಾ ನೋಡಿದರೆ ಯಾವುದೂ ಸಿಕ್ಕಲಿಲ್ಲ. ಆದರೂ ಅಷ್ಠೂ ಸಿನಿಮಾಗಳ ಮಧ್ಯೆದಲ್ಲಿ ’ಮುನ್ನುಡಿ’ ತಂದ ಸಂತೋಷ ಅಷ್ಠಿಷ್ಠಲ್ಲ.
ಹೀಗೆ ಕನ್ನಡದ ಬಗೆಗಿನ ಸಣ್ಣ ಸಣ್ಣ ಸಂಗತಿಗಳು ಹೊರನಾಡಿನಲ್ಲಿದ್ದು ಕನ್ನಡ ಪ್ರೀತಿಸುವವರಿಗೆ ಸಂತಸ ನೀಡುತ್ತವೆ, ಪುಳಕ ಗೊಳಿಸುತ್ತವೆ.ಒಮ್ಮೆ ಜಯಂತ ಕಾಯ್ಕಿಣಿ ಈ ಬಗ್ಗೆ ಹೇಳುತ್ತಿದ್ದರು ’ಈ ಕನ್ನಡ ನಾಡು, ಹೊರನಾಡು ಎಂದು ಮಾತನಾಡುವವರಿಗೆಲ್ಲಾ ಒಂದು ಪ್ರಶ್ನೆ. ನಾವು ಬಾಂಬೆಯಲ್ಲೋ, ಅಸ್ಸಾಮಿನಲ್ಲೋ, ಅಮೇರಿಕದಲ್ಲೋ ,ಇಂಗ್ಲೇಂಡಿನಲ್ಲೋ ಇದ್ದುಕೊಂಡು, ಒಳ್ಳೆಯ ಕೆಲಸಗಾರರಾಗಿ, ಒಳ್ಳೆಯ ಪ್ರಜೆಯಾಗಿ, ಒಳ್ಳೆಯ ತಂದೆಯಾಗಿ, ಒಳ್ಳೆಯ ಸ್ನೇಹಿತನಾಗಿ, ಒಳ್ಳೆಯ ಅಣ್ಣ ನಾಗಿ, ತಮ್ಮನಾಗಿ ಇರೋದು ಕನ್ನಡತನವೋ? ಅಥವಾ ವಿಧಾನ ಸೌಧದ ಮುಂಬಾಗದಲ್ಲೇ ಇದ್ಕೊಂಡು, ಕೈಗಳ ಹತ್ತೂ ಬೆರೆಳಿಗೆ ಉಂಗುರಗಳನ್ನ ಹಾಕ್ಕೊಂಡು, ಕತ್ತಿಗೆ ದಪ್ಪದ ಚಿನ್ನದ ಚೈನು ಹಾಕ್ಕೊಂಡು, ಭ್ರಷ್ಠಾಚಾರ, ಮೋಸ ವಂಚನೆ ಮಾಡ್ಕೊಂಡು, ಮೈಗಳ್ಳತನ ಮಾಡ್ಕೊಂಡು, ಅತ್ಯಂತ ಹೀನವಾಗಿ ಬದುಕಿ, ಕೇವಲ ರಾಜ್ಯೋತ್ಸವದ ದಿನ ಧ್ವಜ ಹಾರಿಸಿಬಿಟ್ಟರೆ ಅದು ಕನ್ನಡತನವೋ? ಕನ್ನಡತನ ಅಂದರೆ ಅದೊಂದು ಮೌಲ್ಯ. ಎಲ್ಲಿದ್ದರೂ ಕೂಡ ಚೆನ್ನಾಗಿ ಕೆಲಸಮಾಡಿ, ಒಳ್ಳೆಯತನದಿಂದ ಇದ್ದರೆ ಅದು ಕನ್ನಡತನ.’
ಜಯಂತರ ಮಾತು ಸತ್ಯ. ಕೇವಲ ಕೆಂಪು ಹಳದಿ ಬಣ್ಣದ ಟವಲ್ ಭುಜದ ಮೇಲೇರಿಸಿಕೊಂಡು, ಊರಿಗೊಂದು ಕೇರಿಗೊಂದು ಕನ್ನಡ ವೇದಿಕೆ ಕಟ್ಟಿಕೊಂಡು, ಬೀದಿಯುದ್ದಕ್ಕೂ ಕಟೌಟ್ ನಿಲ್ಲಿಸಿಕೊಂಡು, ನವಂಬರ್ ನಲ್ಲಿ ಕನ್ನಡ ಪ್ರೇಮ ಪ್ರದರ್ಶಿಸುವುದು ಕನ್ನಡತನವಲ್ಲ. ಕನ್ನಡಿಗನ ಮನಸಲ್ಲಿ ಕನ್ನಡದ ಬಗ್ಗೆ ಒಲವಿದ್ದರೆ, ಮನೆ ಮನೆಗಳಲ್ಲಿ ಕನ್ನಡದ ವಾತಾವರಣವಿದ್ದರೆ, ಇತರರಿಗೂ ಕನ್ನಡ ಕಲಿಸಬೇಕೆಂಬ ಮನಸ್ಸಿದ್ದರೆ, ಮೊಸರನ್ನ ಕರ್ಡ್ ರೈಸ್ ಆಗದಿದ್ದರೆ, ತಿಳಿಸಾರು ರಸಂ ಆಗದೆ ತಿಳಿಸಾರಾಗೇ ಉಳಿದರೆ, ಅಮ್ಮ ಮಮ್ಮಿಯಾಗದಿದ್ದರೆ, ಕಂಗ್ಲೀಷ್ ಪ್ರಯೋಗ ಕಮ್ಮಿಯಾದರೆ,ಮಕ್ಕಳಿಗೆ ಚಿಕ್ಕವಯಸ್ಸಲ್ಲೇ ಬೇಂದ್ರೆ, ಕಾರಂತ, ಭೈರಪ್ಪ, ತೇಜಸ್ವಿ ಪರಿಚಯವಾದರೆ. ಕನ್ನಡ ಅಷ್ಠರ ಮಟ್ಟಿಗೆ ಜೀವಂತ. ಇದರ ಹೊರತು ಹೋರಾಟ ಎಂಬುದು ವ್ಯರ್ಥ. ಅಲ್ಲವೇ?
ಕಾಂಗ್ರೆಸ್ಸಿಗರಿಗೆ ಆರ್.ಎಸ್.ಎಸ್ ಅಪತ್ಯವಾದರೆ ನಿಮಗೂ ಅಪತ್ಯವೇನಣ್ಣಾ?
ಇವರಿಗೆ ಮೊದಲು ತೋಚುವುದೇ ಅದು. ದೇಶದ ಹಿತಾಸಕ್ತಿಯ ವಿರುದ್ದ ಯಾರೋ ಹೇಳಿಕೆ ಕೊಟ್ಟಾಗ, ಮತ್ತಾರೋ ಅವರ ಮೇಲೆ ಹಲ್ಲೆ ಮಾಡಿರಲಿ, ಚಪ್ಪಲಿ ಎಸೆದಿರಲಿ ಅಥವಾ ಕಲ್ಲು ತೂರಿರಲಿ. ಇವರು ಮೊದಲು ಹುಡುಕುವುದೇ ಆ ಹಲ್ಲೆಮಾಡಿದ ವ್ಯಕ್ತಿಗೆ ಆರ್.ಎಸ್.ಎಸ್ ಸಂಪರ್ಕವಿದೆಯಾ? ಎಂದಾದರೂ ಸಂಘದ ಶಾಖೆಗೆ ಹೋಗಿದ್ದನ? ಎಲ್ಲಿಯಾದರು ಅವನು ಗಣವೇಷ ತೊಟ್ಟ ಪೋಟೋ ಇದೆಯಾ? ಒಂದು ಕುರುಹು ಸಿಕ್ಕರೆ ಸಾಕು ಇವರು ಪ್ರೆಸ್ ಕಾನ್ಪರೆನ್ಸಿಗೆ ದೌಡಾಯಿಸುತ್ತಾರೆ, ಟಿವಿ ಕ್ಯಾಮರಾ ಮುಂದೆ ನಿಂತು ತವಡುಕುಟ್ಟಲು ಶುರುವಿಡುತ್ತಾರೆ, ಈ ಪ್ರಕರಣದಲ್ಲಿ ಆರ್.ಎಸ್.ಎಸ್ ನ ಕೈವಾಡವಿದೆ ಎಂದು ಅಬ್ಬರಿಸುತ್ತಾರೆ. ಇದು ಆರ್.ಎಸ್.ಎಸ್ ಕುತಂತ್ರ ಎಂದೆಲ್ಲಾ ಬಡಬಡಾಯಿಸುತ್ತಾರೆ. ಒಟ್ಟಿನಲ್ಲಿ ಎಲ್ಲದಕ್ಕೂ ಆರ್.ಎಸ್.ಎಸ್ ಕಾರಣ ಎಂದು ಹಣೆಪಟ್ಟಿ ಕಟ್ಟುವ ಜಾಯಮಾನ ಕಾಂಗ್ರೇಸ್ಸಿಗರದು. ಇವರು ಹೀಗೆಂದಿದ್ದೇ ತಡ ಎನ್.ಡಿ.ಟಿ.ವಿ , ಸಿಎನ್ಎನ್-ಐಬಿನ್ ನಂತಹ ಕಾಂಗ್ರೇಸ್ ಕೃಪಾ ಪೋಷಿತ ಮಾಧ್ಯಮಗಳು ಗಂಟೆಗಟ್ಟಲೇ ಚರ್ಚೆಗೆ ಕುಳಿತು ಬಿಡುತ್ತವೆ.
ಈಗ ನೋಡಿ, ಅಣ್ಣಾ ಹಜಾರೆಯೆಂಬ ಗಾಂಧಿವಾದಿ ಭ್ರಷ್ಠಾಚಾರದ ವಿರುದ್ದ ಬಹುದೊಡ್ಡ ಹೋರಾಟ ಕಟ್ಟಿದರು. ಉಪವಾಸಕ್ಕೆ ಕೂತರು. ವಿಧ್ಯಾರ್ಥಿಗಳಿಂದ ಹಿಡಿದು ಆಬಾಲ ವೃದ್ದರವರೆಗೆ ಎಲ್ಲರೂ ಅಣ್ಣಾ ಹೋರಾಟಕ್ಕೆ ಸಾಥುನೀಡಿದರು. ಅನೇಕರು ತಾವೂ ಕೂಡ ಉಪವಾಸಕ್ಕೆ ಕೂತರು, ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೀದಿಯಲ್ಲಿ ಪ್ಲೆಕಾರ್ಡ್ ಹಿಡಿದು ನಿಂತರು, ರಾಮಲೀಲಾ ಮೈದಾನ ಮತ್ತು ಜಂತರ್ ಮಂತರ್ ನೆಡೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಬಂದರು. ಉಪವಾಸ ಯಶಸ್ವಿಯಾಯಿತು. ಸರ್ಕಾರ ಮಂಡಿಯೂರಿತು. ಜನಲೋಕಪಾಲ್ ಮಸೂದೆ ತರಲು ಸಿದ್ದ ಎಂದು ಮಾತು ಕೊಟ್ಟಿತು. ಅಣ್ಣಾ ಉಪವಾಸ ಅಂತ್ಯಗೊಳಿಸಿದರು. ಇವೆಲ್ಲ ಆಗಿ ಕೆಲದಿನಗಳಾದವು ಈಗ ತನ್ನ ಹಳೇ ವರಸೆತೆಗೆದಿರುವ ಕಾಂಗ್ರೇಸ್ ಅಣ್ಣಾ ಹೋರಾಟ ಆರ್.ಎಸ್.ಎಸ್ ಪ್ರೇರಿತ ಎಂದು ಮತ್ತೆ ತಗಾದೆ ತೆಗೆದು ಕುಳಿತಿದೆ. ಇದು ಆರ್.ಎಸ್.ಎಸ್ ಸಂಘಟಿಸಿದ ಹೋರಾಟ ಆದ್ದರಿಂದ ಇದರ ಪಾವಿತ್ರ್ಯತೆ ಕುಗ್ಗಿದೆ. ಇದು ರಾಜಕೀಯ ಪ್ರೇರಿತ ಎಂದೆಲ್ಲಾ ಬಡಬಡಾಯಿಸುತ್ತಿದೆ. ಈ ಕಳಂಕ ಹಚ್ಚಿ ಹೋರಾಟದ ಕಾವು ತಣ್ಣಗೆ ಮಾಡಲು ಅದು ಎಂದಿನಂತೆ ನಾಲಗೆ ಹಿಡಿತವಿಲ್ಲದ ದಿಗ್ವಿಜಯ್ ಸಿಂಗ್ (ಕೆಲವರು ಡಾಗ್ ವಿಜಯ್ ಸಿಂಗ್ ಎಂದು ಅಣಕಿಸುತ್ತಾರೆಂಬುದು ಬೇರೆ ಮಾತು) ರನ್ನು ಬಳಸಿಕೊಂಡಿದೆ.
ದಿಗ್ವಿಜಯ್ ಸಿಂಗ್ ರದ್ದು ಕೇಳಬೇಕೆ ಮೊದಲೇ ಅದು ಆಚಾರವಿಲ್ಲದ ನಾಲಗೆ. ಮೊದಲಿನಿಂದಲೂ ಆರ್.ಎಸ್.ಎಸ್ ಎಂದರೆ ಉರಿಮೂತ್ರ ಬಂದವರಂತೆ ಆಡುವ ದಿಗ್ವಿಜಯ್ ಸಿಂಗ್, ಆರ್.ಎಸ್.ಎಸ್ ಬಗ್ಗೆ ಸದಭಿಪ್ರಾಯದಿಂದ ಮಾತನಾಡುತ್ತಾರೆಂದು ಬಯಸುವುದು ಮೂರ್ಖತನವಾಗುತ್ತದೆ. ಆದ್ದರಿಂದಲೇ ಪದೇ ಪದೇ ಮಾಧ್ಯಮಗಳು ಸಂದರ್ಶನಕ್ಕೆ ಕ್ಯಾಮರಾ ಮುಂದೆ ಕರೆದು ಮೈಕ್ ಹಿಡಿದಾಗಲೆಲ್ಲ ಇದೇ ಮಾತು ತೆಗೆಯುತ್ತಿದ್ದಾರೆ ’ಅಣ್ಣಾ ಹೋರಾಟ ರಾಜಕೀಯ ಪ್ರೇರಿತ, ಇದಕ್ಕೆ ಆರ್.ಎಸ್.ಎಸ್ ಬೆಂಬಲವಿತ್ತು, ಆ ಬಗ್ಗೆ ನನ್ನ ಬಳಿ ಸಾಕ್ಷಿ ಇದೆ. ಸಂಘದ ಹಿರಿಯರಾದ ಸುರೇಶ್ ಭಯ್ಯಾ ಜೋಷಿ ಅಣ್ಣಾಗೆ ಬೆಂಬಲ ವ್ಯಕ್ತಪಡಿಸಿ ಬರೆದ ಕಾಗದ ನನ್ನಬಳಿ ಇದೆ. ಆರ್.ಎಸ್.ಎಸ್ ತನ್ನ ಸ್ವಯಂಸೇವಕರಿಗೂ ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆನೀಡಿದ ಬಗ್ಗೆಯೂ ಸಾಕ್ಷಿ ಇದೆ, ರಾಮ್ ಮಾಧವ್ ಮತ್ತು ಗೋವಿಂದಾಚಾರ್ಯರು ಅಣ್ಣಾರ ವೇದಿಕೆಯಲ್ಲಿ ಕಾಣಿಸಿಕೊಂಡದ್ದೂ ಅಣ್ಣಾ ಹೋರಾಟದ ಹಿಂದೆ ಆರ್.ಎಸ್.ಎಸ್ ಇದೆ ಎನ್ನುವುದಕ್ಕೆ ಸಾಕ್ಷಿ’ ಎಂದು ಪದೇ ಪದೇ ಹೇಳುತ್ತಿದ್ದಾರೆ.
ಪ್ರಶ್ನೆಗಳೇಳುವುದೇ ಇಲ್ಲಿ. ಅಷ್ಠಕ್ಕೂ ಆರ್.ಎಸ್.ಎಸ್ ಅಣ್ಣಾ ಹೋರಾಟದಲ್ಲಿ ಪಾಲ್ಗೊಂಡರೆ ಇವರಿಗೇಕೆ ಕಳವಳ? ದೇಶದ ಅಷ್ಠೂ ಜನ ಜತ್ಯಾತೀತವಾಗಿ, ವರ್ಗಾತೀತವಾಗಿ, ಭಾಷಾತೀತವಾಗಿ ಅಣ್ಣಾ ಹೋರಾಟಕ್ಕೆ ಸ್ಪಂದಿಸಿದಾಗ ಎಂದಿನಿಂದಲೂ ದೇಶದ ಭ್ರಷ್ಠತೆ ತೊಲಗಬೇಕು, ಭ್ರಷ್ಠತೆ ತೊಲಗಿದಾಗ ಮಾತ್ರ ಭಾರತ ಮತ್ತಷ್ಠು ಬಲಶಾಲಿಯಾಗಲು ಸಾಧ್ಯ ಎಂಬ ನಿಲುವು ಹೊಂದಿರುವ ಮತ್ತು ಹಿಂದಿನಿಂದಲೂ ಭ್ರಷ್ಠಾಚಾರದ ವಿರುದ್ದ ಧ್ವನಿಯೆತ್ತಿರುವ, ಹೋರಾಟಗಳಿಗೆ ಬೆಂಬಲ ನೀಡಿರುವ ’ಸಂಘ’, ಅಣ್ಣಾ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವುದು ಒಂದು ಸಹಜ ಪ್ರಕ್ರಿಯೆ. ಅದು ಕೇವಲ ಅಣ್ಣಾಗೆ ವ್ಯಕ್ತಪಡಿಸಿದ ಬೆಂಬಲವಲ್ಲ ಅವರು ಕಟ್ಟಿದ ಹೋರಾಟಕ್ಕೆ ಮತ್ತು ಹೋರಾಟದ ಧ್ಯೇಯೋದ್ದೇಶಕ್ಕೆ ವ್ಯಕ್ತಪಡಿಸಿದ ಬೆಂಬಲ. ಭ್ರಷ್ಠಾಚಾರದ ವಿರುದ್ದದ ಹೋರಾಟವನ್ನು ಅಣ್ಣಾ ಅಲ್ಲದೇ ಬೇರಾರೇ ಮಾಡಿದ್ದರೂ, ಅಷ್ಠೇ ಏಕೆ ದಿಗ್ವಿಜಯ್ ಸಿಂಗ್ ನೇತೃತ್ವ ವಹಿಸಿದ್ದರೂ ಅಂತಹ ಹೋರಾಟದ ಉದ್ದೇಶ ದೇಶವನ್ನು ಮತ್ತಷ್ಠು ಶಕ್ತಿಯುತಗೊಳಿಸುತ್ತದೆ ಎಂಬುದಾಗಿದ್ದರೆ ದೇಶದ ಒಳಿತಿಗಾಗಿ ಸದಾ ತುಡಿಯುವ ಸಂಘ ಸಹಜವಾಗಿಯೇ ಬೆಂಬಲವ್ಯಕ್ತಪಡಿಸುತ್ತಿತ್ತು.
ಇನ್ನು ಇವರು ಸಂಘದ ಬಗ್ಗೆ ಮೂದಲಿಸುವುದನ್ನು ನೋಡಿದರೇ ಆಶ್ಚರ್ಯ. ಅಷ್ಟಕ್ಕೂ ಆರ್.ಎಸ್.ಎಸ್ ಈ ದೇಶದ ಸಂವಿಧಾನವನ್ನು ಧಿಕ್ಕರಿಸಿದ ಸಂಸ್ಥೆಯಲ್ಲ. ನಕ್ಸಲ್, ಸಿಮಿ, ಹಿಜ್ಬುಲ್, ಲಷ್ಕರ್ ತರಹ ದೇಶವಿರೋಧಿ ಚಟುವಟಿಕೆ ಮಾಡುವ ಸಂಘಟನೆಯಲ್ಲ. ದೇಶದ ಹಿತರಕ್ಷಣೆಯ ಪ್ರಶ್ನೆ ಬಂದಾಗ ನಾವು ಯುದ್ದಭೂಮಿಯಲ್ಲಿ ನಿಲ್ಲಲು ಸಿದ್ದ ಎಂದು ತೋರಿದ್ದು ‘ಸಂಘ’, ಭೂಕಂಪ, ಸುನಾಮಿ, ಅತಿವೃಷ್ಠಿಯಂತಹ ಪ್ರಕೃತಿ ವಿಕೋಪಗಳಿಗೆ ಸರ್ಕಾರದ ಸಂಸ್ಥೆಗಳಿಗಿಂತ ತ್ವರಿತವಾಗಿ ಸ್ಪಂದಿಸಿದ್ದು ‘ಸಂಘ’, ಸರ್ಕಾರಿ ಶಾಲೆಗಳು ತಲುಪದಂತಹ ಕಾಡಿನ ಬುಡಕಟ್ಟು ಪ್ರದೇಶಗಳಲ್ಲಿ ಅಕ್ಷರ ಕಲಿಸಲು ಹೊರಟದ್ದು ‘ಸಂಘ’, ರೈಲ್ವೆ, ವಿಮಾನ ಅಪಘಾತಗಳಂತಹ ಭೀಕರ ಅವಘಡಗಳು ಸಂಭವಿಸಿದಾಗ ಮೊದಲು ಚಿಕಿತ್ಸೆಗೆ ಧಾವಿಸಿದ್ದು ‘ಸಂಘ’. ಹೀಗೆ ದೇಶಪ್ರೇಮ ಮೆರೆಯುವ ‘ಸಂಘ’ ಒಂದು ಹೋರಾಟದಲ್ಲಿ ಪಾಲ್ಗೊಂಡರೆ ಅದನ್ನು ಸಂಶಯದ ದೃಷ್ಠಿಯಿಂದ ನೋಡುವ ಕಾಂಗ್ರೇಸ್ಸಿಗರಿಗೆ ಹಾಗಾದರೆ ದೇಶಪ್ರೇಮ ಎಂಬುದೇ ಅಪತ್ಯವೇ?
ಅಷ್ಠಕ್ಕೂ ಕಾಂಗ್ರೇಸ್ಸಿಗರು ಕೊಂಚ ತಮ್ಮ ಪಕ್ಷದ ಇತಿಹಾಸವನ್ನೇ ಅವಲೋಕಿಸಿ ನೋಡಿಕೊಳ್ಳಬೇಕು. ತಮ್ಮದೇ ಪಕ್ಷದ ವರಿಷ್ಠ ಪಂಡಿತ್ ಜವಹರಲಾಲ್ ನೆಹರು ಕೂಡ ಆರ್.ಎಸ್.ಎಸ್ ಬಗ್ಗೆ ಸಧ್ಬಾವನೆ ಹೊಂದಿದವರೇನು ಅಲ್ಲ. ಆದರೆ ಯಾವಾಗ ಭಾರತ ಮತ್ತು ಚೀನಾ ಯುದ್ದದಲ್ಲಿ ಸೈನಿಕರಿಗೆ ಆಹಾರ, ಜೌಷದ ಇತ್ಯಾದಿ ಅಗತ್ಯಗಳನ್ನು ಪೂರೈಸಲು ಮತ್ತು ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಲು ಸಂಘದ ಸ್ವಯಂಸೇವಕರು ಪ್ರಾಣದ ಹಂಗು ತೊರೆದು ಯುದ್ದ ಭೂಮಿಗೆ ಬಂದರೋ, ನೆಹರು ತಮ್ಮ ಪೂರ್ವಾಗ್ರಹವನ್ನು ಕಳಚಿಟ್ಟರು. ಸಂಘದ ಸ್ವಯಂಸೇವಕರು ಗಣವೇಷದಲ್ಲಿ ಕೆಂಪು ಕೋಟೆಯ ಮುಂದೆ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದಾಗ ಕೂಡ ಯುದ್ದ ಭೂಮಿಯಲ್ಲಿ ಸೈನಿಕರ ಕೊರತೆಯುಂಟಾಯಿತು. ಆಗ ಪೊಲೀಸರನ್ನ ಯುದ್ದ ಭೂಮಿಗೆ ಕಳುಹಿಸಿಕೊಟ್ಟು, ಪೊಲೀಸರ ಸ್ಥಾನ ತುಂಬಿ ದೆಹಲಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಪಣ ತೊಟ್ಟು ನಿಂತದ್ದು ಇದೇ ಸಂಘದ ಸ್ವಯಂಸೇವಕರು. ಇದೆಲ್ಲಾ ಪದೇ ಪದೇ ಸಂಘದ ಬಗ್ಗೆ ಕುಹಕವಾಡುವ ದಿಗ್ವಿಜಯ್ ಸಿಂಗರಿಗೆ, ಕಾಂಗ್ರೇಸ್ಸಿಗರಿಗೆ ತಿಳಿದಿಲ್ಲವ?
ಅವರುಗಳು ಬಿಡಿ, ಸಂಘದ ಬಗ್ಗೆ ಪೂರ್ವಾಗ್ರಹ ಪೀಡಿತವಾಗಿಯೇ ಮಾತನಾಡುವವರು. ಅವರು ಅಣ್ಣಾ ಹೋರಾಟಕ್ಕೆ ಸಂಘದ ಬೆಂಬಲವಿದೆ ಎಂಬ ತಗಾದೆ ತೆಗೆದಾಗ, ಅಣ್ಣಾ ಹಜಾರೆಯವರು ಕೇವಲ ಒಂದು ಮಾತಿನಲ್ಲಿ ಅವರ ಈ ಚಾಳಿಗೆ ಚಾಟಿಬೀಸಬಹುದಿತ್ತು. ’ಹೌದು, ನಾನು ಕೈಗೊಂಡ ಹೋರಾಟ ದೇಶದ ಒಳಿತಿಗಾಗಿ ಕೈಗೊಂಡದ್ದು. ಇದರಲ್ಲಿ ಪಾಲ್ಗೊಳ್ಳಲು ಭಾರತದ ಅಷ್ಟೂ ಪ್ರಜೆಗಳು ಸ್ವತಂತ್ರರು. ನನ್ನ ಹೋರಾಟಕ್ಕೆ ಯಾವುದೇ ಪಕ್ಷ, ಮತ್ತು ಆರ್. ಎಸ್.ಎಸ್ ಒಳಗೊಂಡಂತೆ ಎಬಿವಿಪಿ, ಎಸ್ ಎಫ಼್ ಐ, ಅಥವಾ ಇನ್ಯಾವುದೇ ಸಂಘಟನೆ ಬೆಂಬಲ ನೀಡಿದ್ದರೆ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ, ಈ ಹೋರಾಟದಲ್ಲಿ ಪಾಲ್ಗೊಳ್ಳುವುದು ಎಲ್ಲರ ಹಕ್ಕು’ ಎಂದು ಬಿಟ್ಟಿದ್ದರೆ ಈ ಹೋರಾಟವನ್ನು ಹತ್ತಿಕ್ಕುವ ಕಾಂಗ್ರೇಸ್ಸಿಗರ ಸಂಚು ಮಗುಚಿ ಬೀಳುತ್ತಿತ್ತು. ಆದರೆ ಅಣ್ಣಾ ಹಜಾರೆ ಕೂಡ ’ದಿಗ್ವಿಜಯ್ ಸಿಂಗ್ ವಾದಕ್ಕೆ’ ಪ್ರತಿಯಾಗಿ ಆರ್.ಎಸ್.ಎಸ್ ಬೆಂಬಲ ತಿರಸ್ಕರಿಸುತ್ತಾ ಬಂದರು. ಇಷ್ಟು ದೊಡ್ಡ ಹೋರಾಟ ರೂಪಿಸಿದ ಅಣ್ಣಾಗೂ ಗೊತ್ತು, ಆ ಹೋರಾಟಕ್ಕೆ ಸಾವಿರ ಸಾವಿರ ಜನರು ಜಮೆಯಾಗುವಂತೆ ನೋಡಿಕೊಂಡವರಲ್ಲಿ, ಜಮಖಾನ ಹಾಸಿ, ಪೆಂಡಾಲು ಹಾಕಿದವರಲ್ಲಿ, ಹೋರಾಟದ ವಿಸ್ತಾರಕ್ಕೆ ಕಾರಣವಾದವರಲ್ಲಿ ಬಹುಪಾಲು ಸಂಘದ ಸ್ವಯಂಸೇವಕರಿದ್ದರೆನ್ನುವುದು. ಆದರೂ ಅಣ್ಣಾ ಆರ್.ಎಸ್.ಎಸ್ ಬೆಂಬಲವನ್ನು ಅನುಮೋದಿಸಲು ತಯಾರಿಲ್ಲ. ಕಾಂಗ್ರೇಸ್ಸಿಗರಿಗೆ ಆರ್.ಎಸ್.ಎಸ್ ಅಪತ್ಯವಾದರೆ ನಿಮಗೂ ಅಪತ್ಯವೇನಣ್ಣಾ?
ಹೊಸ ದಿಗಂತದಲ್ಲಿ ಪರದೇಶಿ ಪರಪಂಚ….!
“ಪರದೇಶಿ ಪರಪಂಚ” ಇದು ಹೊಸದಿಗಂತದಲ್ಲಿ ಇಂದಿನಿಂದ (ಅಕ್ಟೋಬರ್ ೧೫ ೨೦೧೧) ಪ್ರಾರಂಭವಾಗಿರುವ ಅಂಕಣ. ಪ್ರಸ್ತುತ ನಾನು ಅಮೇರಿಕೆಯಲ್ಲಿ ಉದ್ಯೋಗ ನಿಮಿತ್ತ ಇದ್ದೇನೆ. “ಪರಸ್ಥಳ ಪ್ರಾಣಸಂಕಟ” ಎಂಬ ಮಾತು ಇದೆ. ಪರಸ್ಥಳದಲ್ಲಿ ಗೊತ್ತಿರುವವರು ಯಾರೂ ಇರುವುದಿಲ್ಲ, ಜನ, ಭಾಷೆ, ನಡವಳಿಕೆ, ಆಹಾರ, ವಾತಾವರಣ ಎಲ್ಲವೂ ಭಿನ್ನವಾಗಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಲ್ಲಿಗೆ ಹೊಂದಿಕೊಳ್ಳುವುದಕ್ಕೆ ಕಷ್ಠ ಎಂಬ ಅರ್ಥದಲ್ಲಿ ಹುಟ್ಟಿಕೊಂಡ ಮಾತು ಅದು. ಆದರೆ ಈಗ “ಗ್ಲೋಬಲ್ ವಿಲೇಜ್” ಎಂದು ಕರೆಯುವ ಮಟ್ಟಿಗೆ ಜಗತ್ತು ಚಿಕ್ಕದಾಗಿದೆ. ಸಂಪರ್ಕ ಬೆಳೆದಿದೆ. ಪ್ರಪಂಚದ ಮೂಲೆ ಮೂಲೆಗೂ ನಿಮಿಷದಲ್ಲೇ ಸಂಪರ್ಕ ಸಾಧಿಸಬಹುದಾದಷ್ಟು ತಂತ್ರಜ್ನಾನ ಮುಂದುವರೆದಿದೆ. ಜಗತ್ತಿನ ಮೂಲೆ ಮೂಲೆಗೆ ಭಾರತೀಯರು ಉದ್ಯೋಗಕ್ಕಾಗಿ ಒಲಸೆ ಹೋಗಿದ್ದಾರೆ. ಆದ್ದರಿಂದ ಯಾವುದೇ ಪರಸ್ಥಳದಲ್ಲಿ ಕೂಡ ಹುಡುಕಿದರೆ ನಮ್ಮವರು ಕಾಣಸಿಗುತ್ತಾರೆ. ಇಂಟರ್ ನೆಟ್, ಗೂಗಲ್ ಮ್ಯಾಪ್ ಗಳು ಪ್ರತಿ ತಿರುವನ್ನೂ ಗೊತ್ತು ಮಾಡಿಸುವಷ್ಟು ಮಾಹಿತಿ ನೀಡುತ್ತವೆ. ಆದ್ದರಿಂದ ಪರಸ್ಥಳ, ಪರದೇಶ ಪ್ರಾಣಸಂಕಟವೆನ್ನುವ ಹಾಗಿಲ್ಲ ಬದಲಿಗೆ ಇದು ವಿಸ್ಮಯ. ಆಹಾರ, ವಿಹಾರ, ಮಾತು, ಉಡುಗೆ, ಆಚರಣೆ ಎಲ್ಲವೂ ಭಿನ್ನವಿರುವ ಜನಗಳೊಂದಿಗೆ ಬದುಕುವುದು, ಇಲ್ಲಿನ ನವೀನತೆಗೆ ತೆರೆದುಕೊಳ್ಳುವುದು ಒಂದು ರೀತಿ ಸಿಹಿ ಸಂಕಟ. ಎಷ್ಠೇ ಆದರೂ ಹುಟ್ಟಿ ಬೆಳೆದ ಊರು, ಬದುಕು ಕಟ್ಟಿಕೊಂಡ ನಾಡು, ಬದುಕು ರೂಪಿಸಿದ ಪೋಷಕರು, ಭುಜತಟ್ಟಿದ ಬಂಧುಗಳು, ಆಸರೆಗೆ ನಿಂತ ಸ್ನೇಹಿತರು ಎಲ್ಲರನ್ನೂ ಬಿಟ್ಟು ದೂರತೀರಕ್ಕೆ ಬಂದು ಬದುಕುವುದು ಸುಲಭವೇನೂ ಅಲ್ಲ. ದೈನಂದಿನ ಬದುಕು, ವ್ಯವಹಾರ ಇಲ್ಲಿಯಾದರೂ, ಮನಸ್ಸು ಮಾತ್ರ ಭಾರತದಲ್ಲೇ. ಭಾರತದಲ್ಲಿ ಏನಾಗುತ್ತಿದೆ, ಕರ್ನಾಟಕದಲ್ಲಿ ನಡೆದ ಬೆಳವಣಿಗೆಗಳೇನು, ಊರಿನ ಸುದ್ಧಿ, ಸಿನಿಮಾ, ಕ್ರೀಡೆ, ರಾಜಕೀಯ ಇತ್ಯಾದಿಗಳಲ್ಲಿ ಹೊಸತೇನು ಎನ್ನುವ ಕುತೂಹಲ ಇದ್ದೇ ಇರುತ್ತದೆ. ವಿದೇಶದಲ್ಲಿನ ವಿಸ್ಮಯ ಮತ್ತು ಸ್ವದೇಶದಲ್ಲಿನ ವಿದ್ಯಾಮಾನವನ್ನು ಗಮನಿಸುತ್ತ, ಜೊತೆಗೆ ಓದಿದ್ದು, ನೋಡಿದ್ದು, ಅನುಭವಕ್ಕೆ ಬಂದದ್ದನ್ನು ಒಂದಷ್ಟು ಜನರೊಂದಿಗೆ ಹಂಚಿಕೊಳ್ಳುವುದೇ “ಪರದೇಶಿ ಪರಪಂಚ”ದ ಉದ್ದೇಶ. ಈ ಬ್ಲಾಗ್ ನ ಬರಹಗಳು ಇಷ್ಠವಾಗಿದ್ದರೆ ಹೊಸದಿಂಗತದ ಅಂಕಣವೂ ಇಷ್ಠವಾಗಬಹುದು. ಇನ್ನು ಮುಂದೆ ಈ ಬ್ಲಾಗ್ ನೊಂದಿಗೆ ಪ್ರತಿಶನಿವಾರ ಹೊಸದಿಂಗತದಲ್ಲೂ ಪರದೇಶಿ ಪರಪಂಚದ ಮೂಲಕ ಸಿಗುತ್ತೇನೆ. ನೀವು ಆಗಾಗ ಅರಳೀಕಟ್ಟೆ ಸುತ್ತು ಹಾಕುತ್ತಲೇ, ಪ್ರತಿ ಶನಿವಾರ ಹೊಸದಿಗಂತದ ಪುಟಗಳನ್ನೂ ತಿರುವಿ ಹಾಕುತ್ತೀರೆನ್ನುವ ನಂಬಿಕೆ ಇದೆ.
ಶ್ರೀಮಂತ ರಾಷ್ಟ್ರದಲ್ಲಿ ಬಡವನ ಕೂಗು ಗಟ್ಟಿಯಾಗುತ್ತಿದೆ….
ಅಮೆರಿಕೆಯಲ್ಲಿ ಅಕ್ಷರಶಃ ಜನರು ಬೀದಿಗಿಳಿದಿದ್ದಾರೆ. ಜಗತ್ತಿನ ಹಿರಿಯಣ್ಣನ ಅಂಗಳದಲ್ಲಿ ಒಂದು ಪ್ರತಿಭಟನೆ ಕಾವು ಪಡೆಯುತ್ತಿದೆ. ನ್ಯೂಯಾರ್ಕ್ ನಗರದಲ್ಲಿ ಸಣ್ಣದಾಗಿ ’ಆಕ್ಯುಪಯ್ ವಾಲ್ ಸ್ಟ್ರೀಟ್’ ಹೆಸರಿನಲ್ಲಿ ಶುರುವಾದ ಈ ಪ್ರತಿಭಟನೆ ಇಂದು ಅಮೇರಿಕಾದ ಎಲ್ಲ ನಗರಗಳಿಗೂ ಪಸರಿಸಿದೆ. ಜನ ತಮ್ಮ ಅಗತ್ಯ ವಸ್ತುಗಳೊಂದಿಗೆ ಒಂದು ಆಯಕಟ್ಟಿನ ಸ್ಥಳದಲ್ಲಿ ಮೊಕ್ಕಾಮ್ ಹೂಡಿದ್ದಾರೆ. ಇಲ್ಲಿ ಅವರುಗಳು ತಮ್ಮ ಕನಸು, ಅನುಭವಿಸಿದ ಕಷ್ಟ ಎಲ್ಲವನ್ನೂ ವಿನಿಮಯ ಮಾಡಿಕೊಳ್ಳುತ್ತಾರೆ. ಖ್ಯಾತ ಲೇಖಕರು, ಯುನಿವರ್ಸಿಟಿಯ ಪ್ರೊಫೆಸರ್ ಗಳು, ಪತ್ರಕರ್ತರು, ಅಂಕಣಕಾರರು ಅವರನ್ನುದ್ದೇಶಿಸಿ ಮಾತನಾಡುತ್ತಾರೆ. ಎಲ್ಲರದು ಒಂದೇ ಮಂತ್ರ ’ನಾವು 99 ಪ್ರತಿಶತ ಇದ್ದೇವೆ, ಹೊಸ ಅಮೇರಿಕ ಕಟ್ಟುತ್ತೇವೆ’. ಈ ಒಂದು ವಾಕ್ಯ ನೂರಾರು ಜನರನ್ನು ಒಟ್ಟಿಗೆ ಸೇರಿಸಿದೆ. ಅಲ್ಲಿ ಪ್ರಸ್ತಾಪವಾಗುವ ಮಾತುಗಳಾದರೂ ಇಷ್ಠೇ. ”2006-2009 ರ ತನಕ 12 ಜನರ ನೌಕರನ್ನೊಳಗೊಂಡ ನನ್ನದೇ ಆದ ಸಣ್ಣ ಉದ್ಯಮವಿತ್ತು. ಆದರೆ 2009 ರಲ್ಲಿ ಅದನ್ನು ಅನಿವಾರ್ಯವಾಗಿ ಮುಚ್ಚಬೇಕಾಯಿತು. 2010 ರಲ್ಲಿ ನನ್ನ ಸ್ವಂತ ಮನೆಯನ್ನು ಮಾರಿಕೊಳ್ಳುವ ಪರಿಸ್ಥಿತಿ ಉಂಟಾಯಿತು. ಆರು ತಿಂಗಳ ಕಾಲ ನನ್ನ ಟ್ರಕ್ಕಿನಲ್ಲೇ ನನ್ನ ವಾಸ್ತವ್ಯ. ಈಗ ಒಂದು ಸಣ್ಣ ರೂಮನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದೇನೆ” ಎನ್ನುತ್ತಾನೆ ಒಬ್ಬ 30 ರ ತರುಣ. “ನನಗೆ ಈಗ 60 ವರ್ಷ, ನನ್ನ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಆದರೆ ಹೇಳಿಕೊಳ್ಳುವ ಆರೋಗ್ಯವೂ ಇಲ್ಲ. ಜೌಷದೋಪಚಾರ, ವೈದ್ಯಕೀಯ ತಪಾಸಣೆ ಎಲ್ಲವಕ್ಕೂ ಸಾವಿರಾರು ಡಾಲರ್ ಬೇಕಾಗುತ್ತದೆ. ಕನಿಷ್ಠ ಆರೋಗ್ಯ ವಿಮೆಯನ್ನೂ ಸರ್ಕಾರ ತನ್ನ ಪ್ರಜೆಗಳಿಗೆ ಕೊಡದಿದ್ದರೆ ಹೇಗೆ” ಇದು 60 ವರ್ಷದ ವೃದ್ದೆಯ ಮಾತು. ಹೀಗೆ ವಿದ್ಯಾರ್ಥಿಗಳು, ಕೆಲಸ ಕಳೆದುಕೊಂಡ ಯುವಕರು, ಅನೇಕ ಕಾರಣಗಳಿಗೆ ನೊಂದ ವೃದ್ದರು ತಮ್ಮದೇ ಸಮಸ್ಯೆಯ ಜೊತೆಗೆ ಪ್ರತಿಭಟನೆಗೆ ಧನಿಗೂಡಿಸಿದ್ದಾರೆ.
ಈ ಪ್ರತಿಭಟನೆಗೆ ಒಂದು ರೂಪರೇಷೆ ಕೊಟ್ಟದ್ದು ಕೆನಡ ಮೂಲದ ’ಅಡ್ ಬಸ್ಟರ್’ ಎಂಬ ಒಂದು ಪತ್ರಿಕೆ. ಈ ಪತ್ರಿಕೆ ಈ ಹಿಂದೆ ಕೂಡ ಬೇರೆ ಬೇರೆ ತರಹದ ಪ್ರತಿಭಟನೆಗೆ ಮುನ್ನುಡಿ ಬರೆದಿತ್ತು. Buy nothing day, screen-free week ಕೂಡ ಇದು ರೂಪಿಸಿದ ಚಳುವಳಿಗಳೇ. ಅಮೇರಿಕನ್ನರ ಕೊಳ್ಳುಬಾಕ ತನದಿಂದ ಆಗುತ್ತಿರುವ ದುಷ್ಟರಿಣಾಮದ ವಿರುದ್ದ ಅದು ಸಾರಿದ ಹೋರಾಟ ಬೈ ನಥಿಂಗ್ ಡೇ. ಸಾಮಾನ್ಯವಾಗಿ ನವೆಂಬರ್ ಕೊನೆಯ ವಾರ ಬರುವ ಥ್ಯಾಂಕ್ಸ್ ಗೀವಿಂಗ್ ಡೇ ಇಲ್ಲಿನ ವ್ಯಾಪರಿಗಳಿಗೆ ಸುಗ್ಗಿ, ಆ ವಾರಂತ್ಯ ನಡೆಯುವ ವಹಿವಾಟೇ ಸಾವಿರಾರು ಕೋಟಿ ಡಾಲರ್ ದಾಟುತ್ತದೆ. ಬೇಕೋ ಬೇಡವೋ, ಅಗತ್ಯವೋ ಇಲ್ಲವೋ ಎಲ್ಲವನ್ನೂ ತಂದು ಪೇರಿಸಿಕೊಳ್ಳುವ ಕೊಳ್ಳುಬಾಕತನದ ವಿರುದ್ದ “ಈ ಒಂದು ದಿನದ ಪ್ರತಿಭಟನೆ ನಡೆಸಿ, ಏನನ್ನೂ ಆ ದಿನ ಕೊಳ್ಳಬೇಡಿ ಮತ್ತು ಮುಂದೆ ಕೂಡ ಅಗತ್ಯವಿದ್ದಷ್ಠನ್ನೇ ಕೊಳ್ಳಿ” ಎಂದು ಸಾರುತ್ತದೆ ಅಡ್ ಬಸ್ಟರ್. ಇನ್ನು ಟಿವಿ ಟರ್ನ್ ಆಫ್ ವೀಕ್ ಕೂಡ ಇದೇ ಪತ್ರಿಕೆ ರೂಪಿಸಿದ ಚಳುವಳಿ. ಈ ಚಳುವಳಿಯ ಉದ್ದೇಶ ಒಂದು ವಾರಗಳ ಕಾಲ ಟಿ.ವಿ ಯಿಂದ ದೂರವಿದ್ದು ಓದು, ಚಾರಣ, ಮನೆಯವರೊಂದಿಗೆ ಮಾತು, ಹರಟೆ ವಿಚಾರ ವಿನಿಮಯಕ್ಕೆ ಮೀಸಲಿಡಿ ಎಂದು ಕರೆನೀಡಲು ಹುಟ್ಟಿಕೊಂಡದ್ದು. ಈ ಚಳುವಳಿಯಲ್ಲಿ ಭಾಗವಹಿಸಿದ್ದು ಹತ್ತು ಲಕ್ಷಕ್ಕೂ ಅಧಿಕ ಮಂದಿ. ಹೀಗೆ ಒಂದಿಲ್ಲೊಂದು ಚಳುವಳಿಗೆ ರೂಪರೇಷ ಕೊಡುವಲ್ಲಿ ಸಕ್ರಿಯವಾಗಿರುವ ’ಅಡ್ ಬಸ್ಟರ್’ ಕಳೆದ ತಿಂಗಳು ಈ ’ ಆಕ್ಯುಪಯ್ ವಾಲ್ ಸ್ಟ್ರೀಟ್’ ಚಳುವಳಿಗೆ ಕರೆ ನೀಡಿತು.
ಆರಂಭದಲ್ಲಿ ಕೇವಲ ಹತ್ತಾರು ಮಂದಿ ಪ್ಲೆಕಾರ್ಡ್ ಗಳನ್ನು ಹಿಡಿದು ಬೀದಿಗೆ ಬಂದರು. ವಾಲ್ಸ್ ಸ್ಟ್ರೀಟ್ ನಲ್ಲಿ ವಾಸ್ತವ್ಯ ಹೂಡಿದರು. ನಂತರ ಅನೇಕ ಸಂಘ, ಸಂಸ್ಥೆಗಳು ಈ ಪ್ರತಿಭಟನೆಗೆ ಸೇರಿಕೊಂಡವು. ವಿಶೇಷವೆಂದರೆ ಈ ಚಳುವಳಿಗೆ ನಾಯಕನಿಲ್ಲ. ಇಲ್ಲಿ ಯಾರೂ ಕಿಟಕಿಗಳಿಗೆ ಕಲ್ಲು ತೂರುವುದಿಲ್ಲ. ಜನಜೀವನ ಅಸ್ತವ್ಯಸ್ತವಾಗುವಂತೆ ವರ್ತಿಸುವುದಿಲ್ಲ. ಪ್ರತಿಭಟನೆ ಏನಿದ್ದರೂ ಅದು ಶಾಂತಿಯುತ. ಮೊದಲ ವಾರ ನ್ಯೂಯಾರ್ಕ್ ಗೆ ಸೀಮಿತವಾಗಿದ್ದ ಚಳುವಳಿ ದಿನಕಳೆದಂತೆ ಅನೇಕ ನಗರಗಳಿಗೆ ವ್ಯಾಪಿಸುತ್ತಿದೆ. ಕ್ಯಾಲಿಪೋರ್ನಿಯ, ಬಾಸ್ಟನ್, ಲಾಸ್ ಏಂಜಲೀಸ್, ಶೀಕಾಗೋ, ಕೊಲಂಬಸ್, ಸಿನ್ಸಿನಾಟಿ, ಮಿಷಿಗನ್,ವಾಶಿಂಗ್ಟನ್ ಹೀಗೆ ಹತ್ತಾರು ಕಡೆ ಜನ ಈ ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಅನೇಕ ನಗರಗಳಲ್ಲಿ ಈ ಪ್ರತಿಭಟನೆಗೆ ಧ್ವನಿವರ್ಧಕ ಬಳಸಲು ಅನುಮತಿ ನೀಡಿಲ್ಲದ ಕಾರಣ ಯಾರೊಬ್ಬರು ಭಾಷಣಕ್ಕೆ ನಿಂತರು, ಅವರ ಮಾತು ಹತ್ತಾರು ಜನ ಮತ್ತೆ ಪುನರುಚ್ಚರಿಸಿ ದೂರದಲ್ಲಿರುವವರಿಗೂ ಕೇಳುವ ಹಾಗೆ ಮಾಡುತ್ತಾರೆ. ಅಲ್ಲೇ ಆಹಾರ, ಜೌಷಧ ಸರಬರಾಜಾಗುತ್ತಿದೆ.
ಕೇವಲ ಕೆಲಸ ಕಳೆದುಕೊಂಡವರು ಮಾತ್ರವಲ್ಲ, ಅನೇಕ ವಿಚಾರವಾದಿಗಳು ಚಳುವಳಿಗೆ ದುಮುಕುತ್ತಿದ್ದಾರೆ. ಫೇಸ್ ಬುಕ್, ಟ್ಲಿಟರ್ ನಂತಹ ಅಂತರ್ಜಾಲ ತಾಣದಲ್ಲೂ ಚರ್ಚೆನಡೆದಿದೆ. ೧೨ ತಾಸಿನಲ್ಲೇ ಅನೇಕ ವೆಬ್ ಸೈಟುಗಳು ರೂಪುಗೊಂಡಿವೆ. ನಾಮಿ ಕ್ಲೈನ್ ಅನೇಕ ಪ್ರಶಸ್ತಿಗಳನ್ನ ತನ್ನ ಬರಹಗಳಿಗೆ ಪಡೆದುಕೊಂಡಿರುವ ಅಮೇರಿಕದ ಪ್ರಸಿದ್ದ ಪತ್ರಕರ್ತೆ ಮತ್ತು ಲೇಖಕಿ. ಅಷ್ಠೇ ಅಲ್ಲದೇ ಖ್ಯಾತ ಪತ್ರಿಕೆಗಳಾದ ದಿ ನೇಷನ್ ಮತ್ತು ಗಾರ್ಡಿಯನ್ ಪತ್ರಿಕೆಗಳ ಅಂಕಣಗಾರ್ತಿ. ಆಕೆ ಕೂಡ ಈ ಪ್ರತಿಭಟನೆಯ ರ‍್ಯಾಲಿಯನ್ನ ಉದ್ದೇಶಿಸಿ ಮಾತನಾಡಿದ್ದಾಳೆ. ಆಕೆಯ ಪ್ರಕಾರ ಇಂದು ಯಾವ ದೇಶವನ್ನೂ ಶ್ರೀಮಂತ ದೇಶವೆನ್ನುವ ಹಾಗಿಲ್ಲ. ಎಲ್ಲ ದೇಶಗಳಲ್ಲೂ ಕೇವಲ ಕೆಲವೇ ಕೆಲವು ಮಂದಿ ಶ್ರೀಮಂತರಾಗುತ್ತಲೇ ಇದ್ದಾರೆ. ಅವರ ಸಂಖ್ಯೆ ಪ್ರತಿಶತ ಒಂದು ಮಾತ್ರ. ಆ ಒಂದು ಪ್ರತಿಶತ ಇರುವ ಉದ್ಯಮಿಗಳು ಇನ್ನುಳಿದ 99 ಪ್ರತಿಶತ ಜನರ ರಕ್ತವನ್ನು ಹೀರುತ್ತಾ ಬೆಳೆಯುತ್ತಿದ್ದಾರೆ. ಇದು ಕೇವಲ ಆರ್ಥಿಕ ಹಿಂಜರಿತದ ಬಗ್ಗೆ ಪ್ರತಿಭಟನೆಯಲ್ಲ. ಆರ್ಥಿಕವಾಗಿ ಅಮೆರಿಕ ಸೊರಗುತ್ತಿದೆಯಾದರು, ಪ್ರಾಕೃತಿಕ ಸಂಪನ್ಮೂಲದ ವಿಷಯದಲ್ಲೂ ದೇಶ ಸೊರಗುತ್ತಿದೆ. ಮಾನವನ ಧನದಾಹ ಪ್ರಕೃತಿ ವಿನಾಶಕ್ಕೆ ಮುನ್ನುಡಿ ಬರೆಯುತ್ತಿದೆ. ಕೇವಲ ಬಡವರ ಮೇಲಿನ ಟ್ಯಾಕ್ಸ್ ಕಡಿತಗೊಳಿಸಿ ಶ್ರೀಮಂತರಿಗೆ ಹೆಚ್ಚಿನ ಟ್ಯಾಕ್ಸ್ ನಿಗದಿ ಮಾಡಿ ಎಂದು ನಾವು ಒತ್ತಾಯಿಸುತ್ತಿಲ್ಲ. ಇಡೀ ವ್ಯವಸ್ಥೆ ಮತ್ತು ಅದು ನಡೆದುಕೊಳ್ಳುತ್ತಿರುವ ರೀತಿ, ಪ್ರಕೃತಿಯ ಸಂಪನ್ಮೂಲಗಳ ಮಿತಿಯನ್ನು ಅರಿಯದೆ ಅವುಗಳನ್ನು ಮನಸೋ ಇಚ್ಚೆ ಬಳಸುವ ಮನಸ್ಥಿತಿ ಕೂಡ ಬದಲಾಗಬೇಕಿದೆ ಎನ್ನುತ್ತಾಳೆ ನಾಮಿ ಕ್ಲೈನ್.
ಒಟ್ಟಿನಲ್ಲಿ ಮೇಲ್ನೋಟಕ್ಕೆ ಇದು ಬಂಡವಾಳಶಾಹಿಗಳ ವಿರುದ್ದದ ಸಮರ ಎನಿಸಿದರೂ, ಸಮಾಜಿಕ ಸ್ವಾಸ್ಥ್ಯ ನೆಲಸಬೇಕು, ಎಲ್ಲರಿಗೂ ಒಂದೇ ಕಾನೂನು, ಒಂದೇ ಅನುಕೂಲಗಳು ದೊರೆಯಬೇಕು. ಶಿಕ್ಷಣ, ಆರೋಗ್ಯ ಖಾಸಗಿಕರಣಗೊಳ್ಳಬಾರದು, ಪ್ರಕೃತಿ ನಾಶಕ್ಕೆ ತೆರೆಬೀಳಬೇಕು. ಹೊರಗುತ್ತಿಗೆಗೆ ಕಡಿವಾಣ ಹಾಕಬೇಕು. ಸ್ವದೇಶಿ ವಸ್ತುಗಳ ಬಳಕೆಗೆ ಒತ್ತುಕೊಡಬೇಕೆಂಬ ಬೇಡಿಕೆಗಳು ಇದರೊಂದಿಗೆ ಸೇರಿಕೊಂಡಿದೆ. ಈ ಹಿಂದೆ ಕೂಡ TEA Party Movement ನಂತಹ ಅನೇಕ ಚಳುವಳಿಗಳು ಅಮೆರಿಕೆಯಲ್ಲಿ ನಡೆದಿದೆ. ಕೆಲವು ಯಶ ಕಂಡರೆ, ಕೆಲವು ನಾಲ್ಕೇದಿನಕ್ಕೆ ತೆರೆಗೆ ಸರಿದಿವೆ. ಈ ಚಳುವಳಿ ಕೂಡ ಯಶ ಕಾಣುತ್ತದೆನ್ನುವ ಗ್ಯಾರೆಂಟಿಯಿಲ್ಲ. ಈ ಎಲ್ಲ ಬೆಳವಣಿಗೆಗಳಿಂದ ಒಂದಂತೂ ಸ್ಪಷ್ಠ, ಒಬಾಮಾಗೆ ಜೈಕಾರ ಹಾಕಿ, ಆತ ಅಭಿವೃದ್ದಿಯ ಹರಿಕಾರ ಎಂದುಕೊಂಡಿದ್ದ ಅಮೇರಿಕದ ನಿರೀಕ್ಷೆಗಳು ಇಂದು ಜೀವಂತವಾಗಿಲ್ಲ. ಅಮೆರಿಕದ ಅಧಃಪಥನದ ಮುನ್ಸೂಚನೆ ಅರಿತ ಇಲ್ಲಿಯ ಜನ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಆದರೆ ಭಾರತ ಅಮೇರಿಕದ ಕೊಳ್ಳುಬಾಕತನವನ್ನು ಅನುಸರಿಸುತ್ತಾ ಕ್ರೆಡಿಟ್ ಕಾರ್ಡ್ ಸಂಸ್ಕೃತಿ ರೂಡಿಸಿಕೊಳ್ಳುತ್ತಿದೆ. ಅಮೇರಿಕದ ಕೊಳ್ಳುಬಾಕತನ ಭಾರತಕ್ಕೆ ಎಂದಿಗೂ ಆದರ್ಶವಾಗಬಾರದು.
’೧೯೫೯ ರ ಜನವರಿ ೧೧ ರಂದು ನಾನು ಅವರ ಕಛೇರಿಗೆ ತೆರಳಿ ಅವರ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯಕ್ಕೆ ಸೇರ್ಪಡೆಗೊಳ್ಳಬೇಕಿತ್ತು. ಅವರ ಹೆಸರನ್ನು ಮೊದಲೇ ಕೇಳಿದ್ದೆ. ಕಾಂಗ್ರೇಸ್ಸಿನಲ್ಲಿ ಅವರಿಗೆ ಒಳ್ಳೆಯ ಹೆಸರಿತ್ತು. ಕಾಂಗ್ರೆಸ್ಸಿನ ಅಗ್ರ ನಾಯಕರಲ್ಲಿ ಅವರೂ ಒಬ್ಬರಾಗಿದ್ದರು. ನನ್ನ ಸಹೋದ್ಯೋಗಿ ಮಿತ್ರರು ಅವರ ಬಗ್ಗೆ, ಅವರ ಸರಳತೆ, ಪ್ರಾಮಾಣಿಕತೆಗಳ ಬಗ್ಗೆ ಅದಾಗಲೇ ವಿವರಿಸಿದ್ದರು. ನನಗೆ ಸಂಕೋಚ ಮತ್ತು ಭಯ. ಹೇಗೆ ನನ್ನನ್ನು ಪರಿಚಯಿಸಿಕೊಳ್ಳಬೇಕು. ವಿಶ್ವಾಸವಿಟ್ಟು ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಟ್ಟದ್ದಕ್ಕೆ ಏನೆಂದು ಧನ್ಯವಾದ ಹೇಳಬೇಕು. ಅವರೊಂದಿಗಿನ ಮೊದಲ ಭೇಟಿ ಹೇಗಿರಬೇಕು ಎಂದೆಲ್ಲಾ ಮನಸ್ಸಿನಲ್ಲಿ ಲೆಕ್ಕಹಾಕುತ್ತಾ ಉದ್ಯೋಗ ಭವನದ ಅವರ ಕಛೇರಿಯನ್ನು ಪ್ರವೇಶಿಸಿದೆ. ಅಲ್ಲಿ ನಡೆದಿದ್ದೇ ಬೇರೆ. ನಾನು ಕಛೇರಿ ಪ್ರವೇಶಿಸಿದೊಡನೆ ಮಂತ್ರಿಗಳೇ ತಮ್ಮ ಕುರ್ಚಿಯಿಂದ ಎದ್ದು, ನನ್ನೆಡೆಗೆ ಬಂದರು, ಕೈ ಕುಲುಕಿದರು, ಮೈದಡವಿದರು. ತುಂಬು ಸಂತೋಷದಿಂದ ನನ್ನನ್ನು ಬರಮಾಡಿಕೊಂಡರು. ನನ್ನ ಬಾಯಿಯಿಂದ ಏನೊಂದೂ ಮಾತು ಹೊರಡುವ ಮುನ್ನ, ಅವರೇ ನನ್ನನ್ನು ಅಭಿನಂದಿಸಿ, ನನ್ನ ಆಪ್ತ ಕಾರ್ಯದರ್ಶಿಯಾಗಿ ಬರಲು ಒಪ್ಪಿದ್ದಕ್ಕೆ ನಿಮಗೆ ಧನ್ಯವಾದ ಎಂದರು. ಮೊದಲ ಭೇಟಿಯಲ್ಲೇ ನಾನು ಅವರ ವ್ಯಕ್ತಿತ್ವಕ್ಕೆ ಮಾರುಹೋದೆ’ ಹೀಗೆ ಸಂತನಂತೆ ಸರಳತೆಯಿಂದ ಬದುಕಿದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗ್ಗೆ ಬರೆಯುತ್ತಾ ಹೋಗುತ್ತಾರೆ ಶ್ರೀ ರಾಜೇಶ್ವರ್ ಪ್ರಸಾದ್.
ರಾಜೇಶ್ವರ್ ಪ್ರಸಾದ್ ಲಂಡನ್ ಯುನಿವರ್ಸಿಟಿಯಲ್ಲಿ ಓದು ಮುಗಿಸಿ ಐಎಎಸ್ ನಲ್ಲಿ ಉತ್ತಮ ಶ್ರೇಣಿ ಪಡೆದು ೧೯೪೮ ರಲ್ಲಿ ಐ.ಎ.ಎಸ್ ಅಧಿಕಾರಿಯಾಗಿ ಸೇವೆಗೆ ನಿಯುಕ್ತಿಗೊಂಡವರು. ನಂತರ ೧೯೫೯ ರಿಂದ ಶಾಸ್ತ್ರಿಯವರ ಕಡೆದಿನದ ತನಕ ಅಂದರೆ ೧೧ ಜನವರಿ ೧೯೬೬ ರ ವರೆಗೆ ಶಾಸ್ತ್ರಿಯವರ ನಿಕಟವರ್ತಿಯಾಗಿ ಅವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು. ತಮ್ಮ ಮತ್ತು ಶಾಸ್ತ್ರಿಯವರ ಆ ಏಳು ವರ್ಷಗಳ ಒಡನಾಟದ ನೆನಪುಗಳನ್ನ ’Days with Lal Bahadur Shastri:Glimpses from the last seven years’ ಎಂಬ ಪುಸ್ತಕದಲ್ಲಿ ಬರೆಯುತ್ತಾ ಹೋಗುತ್ತಾರೆ. ಯಾವುದೇ ಮಂತ್ರಿಗೆ ಅವರ ಹೆಂಡತಿಗಿಂತಲೂ ಹತ್ತಿರವಿದ್ದು ಅವರ ಎಲ್ಲ ಬೇಕು ಬೇಡಗಳನ್ನ ನೋಡಿಕೊಳ್ಳುವವರು ಅವರ ಆಪ್ತ ಕಾರ್ಯದರ್ಶಿಗಳು. ಅವರ ಪ್ರವಾಸಗಳನ್ನ ನಿಗದಿಗೊಳಿಸುವುದು, ಭಾಷಣಕ್ಕೆ ಹೂರಣ ಒದಗಿಸುವುದು, ಪತ್ರಿಕಾಗೋಷ್ಠಿಗೆ ಮಾಹಿತಿ ಸರಬರಾಜು ಮಾಡುವುದು ಎಲ್ಲವೂ ಆಪ್ತ ಕಾರ್ಯದರ್ಶಿಗಳೇ. ಆದರೆ ಇಲ್ಲಿ ರಾಜೇಶ್ವರ ಪ್ರಸಾದ್ ತಮ್ಮ ಅನುಭವವನ್ನ ಬಿಚ್ಚಿಡುವುದನ್ನು ನೋಡಿದರೆ. ಶಾಸ್ತ್ರಿಯವರು ರಾಜೇಶ್ವರ ಪ್ರಸಾದರನ್ನ ಕೇವಲ ತಮ್ಮ ಕಛೇರಿಯಲ್ಲಿ ಕೆಲಸ ಮಾಡುವ ಆಪ್ತ ಕಾರ್ಯದರ್ಶಿಯಾಗಿ ಕಂಡವರಲ್ಲ. ಒಬ್ಬ ಸ್ನೇಹಿತನಂತೆ ನಡೆಸಿಕೊಂಡವರು.
ತಮ್ಮ ಮತ್ತು ಶಾಸ್ತ್ರಿಯವರ ನಡುವೆ ನಡೆದ ಅನೇಕ ಪ್ರಸಂಗಗಳನ್ನು ಬಿಚ್ಚಿಡುತ್ತಾ ಹೋಗುವ ರಾಜೇಶ್ವರ ಪ್ರಸಾದ್ ಶಾಸ್ತ್ರಿಯವರ ಸರಳತೆಯ ಬಗ್ಗೆ ಪ್ರಸಂಶೆ ವ್ಯಕ್ತಪಡಿಸುತ್ತಾರೆ. ರಾಜೇಶ್ವರ್ ಪ್ರಸಾದ್ ಬರೆಯುವುದನ್ನು ನೋಡಿದರೆ ಒಬ್ಬ ಮಂತ್ರಿ ತನ್ನ ಅಧಿಕಾರಿಯನ್ನು ಇಷ್ಟು ಗೌರವಯುತವಾಗಿ ನಡೆಸಿಕೊಳ್ಳಲು ಸಾಧ್ಯವೆ ಎಂದು ಆಶ್ಚರ್ಯ ಮೂಡುತ್ತದೆ. ಈಗಿನ ಮಂತ್ರಿಗಳು ಬಿಡಿ, ತಮ್ಮ ಅಧಿಕಾರಿಗಳನ್ನು ಹೆಸರಿಡಿದೇ ಕರೆಯುವ, ಏಕವಚನದಲ್ಲೇ ಮಾತನಾಡಿಸುವ ಕೆಟ್ಟ ಚಾಳಿಯವರು. ಹುಡುಕಿದರೆ ಎಲ್ಲೋ ಒಬ್ಬಿಬ್ಬರು ಸಜ್ಜನ ಮಂತ್ರಿಗಳೂ ಇಲ್ಲವೆಂದಲ್ಲ. ಆದರೆ ಬಹುತೇಕರು ಮಂತ್ರಿಯಾದೊಡನೆ ಸರ್ವಾಧಿಕಾರಿಯಂತೆ ಮೆರೆಯುವವರೇ. ಮಂತ್ರಿಗಳಷ್ಠೇ ಅಲ್ಲ ಅವರ ಮಕ್ಕಳು, ಕುಟುಂಬದ ಹತ್ತಿರದ ಸಂಭಂದಿಕರು ಕೂಡ ಅಧಿಕಾರಿಗಳನ್ನು ಏಕವಚನಕ್ಕೆ ಎಳೆಯುವವರೇ. ಎಸ್. ಎಂ ಕೃಷ್ಣ ಮುಖ್ಯ ಮಂತ್ರಿಯಾಗಿದ್ದಾಗ ಅವರ ತವರು ನನ್ನ ಊರೇ ಆದ್ದರಿಂದ ಅವರ ಕುಟುಂಬದ ಕೆಲವರನ್ನು ಗಮನಿಸಿದ್ದೇ. ಅದರಲ್ಲಿ ಕೆಲವರಂತೂ ತಾಲೂಕು ಕಛೇರಿಯ ಅಧಿಕಾರಿಯಿಂದ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ವರೆಗೆ ಎಲ್ಲರನ್ನೂ ಏಕವಚನದಲ್ಲೇ ಸಂಭೋದಿಸುತ್ತಿದ್ದರು. ಆ ಅಧಿಕಾರಿಗಳಾದರೂ ಅದಕ್ಕೆ ಪ್ರತಿಭಟಿಸದೆ ತಲೆಯಲ್ಲಾಡಿಸುವ ಅಸಾಮಿಗಳು. ಬಿಡಿ, ಈ ಪಟ್ಟಿಗೆ ಕರ್ನಾಟಕದ ಎಲ್ಲ ಪಕ್ಷದ ಬಹುತೇಕ ರಾಜಕಾರಣಿಗಳು ಮತ್ತವರ ಕುಟುಂಬದವರು ಸೇರುವವರೆ.
ರಾಜೇಶ್ವರ್ ಪ್ರಸಾದ್ ಬರೆಯುತ್ತಾರೆ. ಕೆಲವು ಮಂತ್ರಿಗಳು ತಮ್ಮ ಅಧಿಕಾರಿಗಳಿಗೆ ಹೀಗೆ ಮಾಡಿ, ಹಾಗೆ ಮಾಡಿ ಎಂದು ದರ್ಪದಿಂದ ಹೇಳುತ್ತಾರೆ. ಆದರೆ ಶಾಸ್ತ್ರಿಯವರು ಒಮ್ಮೆಯೂ ಏರುದನಿಯಲ್ಲಿ ನನಗೆ ಏನೊಂದನ್ನೂ ಹೇಳಿದ ನೆನಪಿಲ್ಲ. ಏನಾದರೂ ಹೇಳುವುದಿದ್ದರೂ, ರಾಜೇಶ್ವರ ಪ್ರಸಾದ್ ನಿಮಗೆ ತೊಂದರೆ ಎನಿಸದಿದ್ದರೆ ಬೆಳಿಗ್ಗೆ ಆರು ಗಂಟೆಗೆ ಬಂದು ನನ್ನನ್ನು ಕಾಣಬಹುದೇ? ಪ್ರಸಾದ್ ನಿಮಗೆ ಅಭ್ಯಂತರವಿಲ್ಲದಿದ್ದರೆ ಇವತ್ತು ಕೊಂಚ ಹೊತ್ತಾದರೂ ಆ ಕರಡನ್ನು ಸಿದ್ದಪಡಿಸಿ ಹೋಗಲು ಸಾಧ್ಯವೇ ? ಎಂದು ವಿನಯಪೂರ್ವಕವಾಗಿ ಕೇಳುತ್ತಿದ್ದರು. ನನ್ನ ಇಡೀ ವೃತ್ತಿ ಬದುಕಿನಲ್ಲಿ ಇಷ್ಟು ಗೌರವಯುತವಾಗಿ ನಡೆಸಿಕೊಂಡವರು ನನಗೆ ಮುಂದೆಂದೂ ಸಿಗಲಿಲ್ಲ ಎನ್ನುತ್ತಾರೆ ರಾಜೇಶ್ವರ ಪ್ರಸಾದ್. ಇದನ್ನು ಓದಿದರೆ ಶಾಸ್ತ್ರಿಯವರ ವ್ಯಕ್ತಿತ್ವದ ಘನತೆ ಎಂತಹದು ಎಂದು ಅರ್ಥವಾಗುತ್ತದೆ.
ಇನ್ನು ರಾಜೇಶ್ವರ ಪ್ರಸಾದ್ ಹೇಳುವ ಮಟ್ಟಿಗೆ , ಶಾಸ್ತ್ರಿಯವರ ಮೂರ್ತಿ ಚಿಕ್ಕದಾದರೂ, ಮನೋಬಲ ದೊಡ್ಡದು. ಹಿಡಿದ ಕೆಲಸ ಬಿಡುತ್ತಿರಲಿಲ್ಲ. ಅನೇಕ ವೇಳೆ ಕಚೇರಿಯಲ್ಲೇ ತಡರಾತ್ರಿಯವರೆಗೂ ಇದ್ದೂ ಕೆಲಸ ಮುಗಿಸಿ ಹೋಗಿದ್ದಿದೆ. ಯಾವುದಾದರೂ ಕೆಲಸ ಬಾಕಿ ಉಳಿದಿದ್ದರೆ, ಏನಾದರೂ ಪೂರಕ ಮಾಹಿತಿ ಬೇಕಿದ್ದರೆ ತಾನು ಮಂತ್ರಿ ಎಂಬ ಬಿಗುಮಾನ ತೊರೆದು ಅಧಿಕಾರಿಯ ಮನೆಗೇ ಬಂದು ಮಾಹಿತಿ ಪಡೆದು ಹೋಗುತ್ತಿದ್ದರಂತೆ ಲಾಲ್ ಬಹದ್ದೂರ್. ಅಷ್ಟು ಸರಳ ವ್ಯಕ್ತಿತ್ವ ಅವರದು. ಇನ್ನು ಧಿರಿಸಿನಲ್ಲೂ ಅಷ್ಠೇ. ಮಂತ್ರಿಯಾಗುವ ಮುನ್ನ ಯಾವ ಧೋತಿ ಉಡುತ್ತಿದ್ದರೋ ಅದೇ ಧಿರಿಸು ಮಂತ್ರಿ ಮತ್ತು ಪ್ರಧಾನ ಮಂತ್ರಿಯಾದ ಮೇಲು ತೊಡುತ್ತಿದ್ದರಂತೆ. ಅನೇಕ ವೇಳೆ ಈ ಬಗ್ಗೆ ಪಂಡಿತ್ ನೆಹರು ಶಾಸ್ತ್ರಿಯವರನ್ನು ಹಾಸ್ಯ ಮಾಡುತ್ತಿದ್ದರಂತೆ.
ನಿಮಗೆ ಗೊತ್ತಿರಬಹುದು. ಲಾಲ್ ಬಹದ್ದೂರ್ ಶಾಸ್ತ್ರಿಯವರು ಕಾಂಗ್ರೇಸ್ ನ ಹಿರಿಯ ನಾಯಕರಾದರೂ ಅವರು ರಾಜೀನಾಮೆ ನೀಡಿ ಅಧಿಕಾರದಿಂದ ದೂರ ಉಳಿಯುವ ಪ್ರಸಂಗಗಳೂ ಸೃಷ್ಠಿಯಾಗಿದ್ದವು. ಹೀಗೆ ಒಮ್ಮೆ ಅವರು ಅಧಿಕಾರದಿಂದ ದೂರವಿದ್ದಾಗ, ರಾಜೇಶ್ವರ ಪ್ರಸಾದ್ ಲಂಡನ್ನಿನ್ನಲ್ಲಿ ವ್ಯಾಸಂಗಕ್ಕಾಗಿ ತೆರಳಿರುತ್ತಾರೆ. ಶಾಸ್ತ್ರಿಯವರ ಪ್ರಾಮಾಣಿಕತೆ ಅರಿತಿದ್ದ ಪ್ರಾಸಾದ್ ಅಲ್ಲಿಂದಲೇ ಅವರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ಪತ್ರ ಬರೆಯುತ್ತಾರೆ. ಆಗ ಶಾಸ್ತ್ರಿಯವರು ಉತ್ತರವಾಗಿ ಹೀಗೆ ಬರೆಯುತ್ತಾರೆ ” ಕಷ್ಠಗಳು ಬಂದಾಗ ಮನುಷ್ಯ ಅದಕ್ಕೆ ಹೊಂದಿಕೊಂಡು ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತಾನೆ. ನನಗೆ ಈಗ ಉದ್ಯೋಗವಿಲ್ಲ ನಿಜ ಆದರೆ ನಾನು ಧೃತಿಗೆಡುವ ಪರಿಸ್ಥಿತಿ ಇಲ್ಲ. ನನ್ನ ಮನೆಯನ್ನು ಇನ್ನು ಚಿಕ್ಕದಾದ ಮನೆಗೆ ಬದಲಾಯಿಸುತ್ತೇನೆ. ಬಹುಶಃ ನಮ್ಮ ಊಟದಲ್ಲಿನ ಒಂದು ಪದಾರ್ಥವನ್ನು ಇನ್ನುಮುಂದೆ ಕಡಿತಗೊಳಿಸಿದರೆ ಆಯಿತು. ಇನ್ನು ಅನೇಕ ಖರ್ಚುಗಳಿಗೆ ಕಡಿವಾಣ ಹಾಕಬೇಕಾಗಬಹುದು. ಈಗಾಗಲೇ ನಾನು ಎರಡು ಸಾರಿ ಹಿಂದೆ ಅಧಿಕಾರ ತ್ಯಜಿಸಿದ್ದೆ. ಇದು ಮೂರನೆಯದು. ಈ ಬಾರಿ ಪರಿಸ್ಥಿತಿ ಇನ್ನಷ್ಟು ಸುಧಾರಿಸಿದೆ, ಕಾರಣ ಮಗ ದುಡಿಯುತ್ತಿದ್ದಾನೆ ಮತ್ತು ನನಗೆ ಸಂಸಧೀಯ ಭತ್ಯೆ ಬರುತ್ತದೆ. ದಿನೇ ದಿನೇ ಖರ್ಚು ಹೆಚ್ಚಾಗುತ್ತಿದೆ ನಿಜ, ಆದರೆ ನನಗೆ ನನ್ನ ಧರ್ಮಪತ್ನಿಯ ಪೂರ್ಣ ಸಹಕಾರವಿದೆ ಇಬ್ಬರೂ ಸೇರಿ ಹೇಗೋ ನಿಭಾಯಿಸುತ್ತಿದ್ದೇವೆ” ಎಂದು ಬರೆಯುವ ಶಾಸ್ತ್ರಿಯವರು ಅದಾಗಲೇ ಎರಡು ಬಾರಿ ಕೇಂದ್ರ ಸಚಿವರಾಗಿದ್ದರು ಎಂಬುದು ಗಮನಾರ್ಹ. ಅವರ ಈ ಮಾತುಗಳೇ ಅವರ ಪ್ರಾಮಾಣಿಕತೆಗೆ ಹಿಡಿದ ಕನ್ನಡಿ.
ಹೀಗೆ ಪ್ರಾಮಾಣಿಕತೆ, ಸರಳತೆ ಮತ್ತು ದೇಶದ ಹಿತರಕ್ಷಣೆಯ ಪ್ರಶ್ನೆ ಬಂದಾಗ ಅಷ್ಠೇ ಕಠಿಣತೆ ತೋರುತ್ತಿದ್ದ ಶಾಸ್ತ್ರಿಯವರು ದುರದೃಷ್ಠವಶಾತ್ ಭಾರತದ ಪ್ರಧಾನಿಯಾಗಿ ಹೆಚ್ಚು ಕಾಲ ಭಾರತವನ್ನು ಮುನ್ನಡೆಸಲು ಸಾಧ್ಯವಾಗಲಿಲ್ಲ. ರವೀಂದ್ರನಾಥ ಠಾಗೂರರ ಒಂದು ಪದ್ಯದ ಸಾಲು ಹೀಗೆ ಬರುತ್ತದೆ. ಸೂರ್ಯ ಮುಳುಗುವಾಗ ಜನರೆಲ್ಲಾ ವಿಚಲಿತರಾಗಿ, ಕತ್ತಲಾಗುತ್ತದೆ ಇನ್ನೇನು ಗತಿ ಎಂದು ಬೊಬ್ಬೆಹೊಡೆಯುವಾಗ ಪುಟ್ಟ ದೀಪವೊಂದು ಹೇಳುತ್ತದಂತೆ ” ನನ್ನನ್ನು ಬೆಳಗಿ, ನನಗೆ ಸಾಧ್ಯವಾಗುವಷ್ಟು ಹೊತ್ತು ನಾನು ಉರಿದು ನಿಮಗೆ ಬೆಳಕು ಕೊಡುತ್ತೇನೆ ” ಎಂದು. ಹಾಗೆಯೇ ನೆಹರು ನಂತರ ಯಾರು? ನೆಹರು ನಂತರ ಯಾರು ಭಾರತ ಮುನ್ನಡೆಸಬಲ್ಲರು? ಎಂದು ಎಲ್ಲ ಇತಿಹಾಸಕಾರರು, ರಾಜಕೀಯ ಪಂಡಿತರು, ನೆಹರು ಇಲ್ಲದ ಭಾರತದ ಭವಿಷ್ಯ ಏನು ಎಂದು ಸುಳ್ಳೇ ಬೊಬ್ಬೆಹೊಡೆಯುತ್ತಿದ್ದಾಗ ಪುಟ್ಟದೀಪವಾಗಿ ಕಂಡವರು ಲಾಲ್ ಬಹದ್ದೂರ್ ಶಾಸ್ತ್ರಿ. ಆದರೆ ಆ ಪುಟ್ಟದೀಪ ತೋರಿದ ದಿಟ್ಟತನವಿದೆಯಲ್ಲ ಅದು ಯಾರನ್ನು ಈ ದೇಶ ಸೂರ್ಯ ಎಂದು ಕೊಂಡಾಡಿತೋ ಅವರೂ ತೊರಲಾಗಿರಲಿಲ್ಲ. ಅಂತಹ ಎದೆಗಾರಿಕೆಯನ್ನು ಶಾಸ್ತ್ರೀಜಿ ಪಾಕಿಸ್ತಾನ ಮತ್ತು ಚೀನಾ ಕಾಲುಕೆರೆದು ಜಗಳಕ್ಕೆ ಬಿದ್ದಾಗ ತೋರಿದರು. ದುರದೃಷ್ಠವೆಂದರೆ ಅಂತಹ ಘನ ವ್ಯಕ್ತಿತ್ವದ, ಮಹಾನುಭಾವ ಸಂಶಯಾಸ್ಪದವಾಗಿ ತಾಸ್ಕೆಂಟ್ ನಲ್ಲಿ ಸಾವಿಗೀಡಾದಾಗ ಅವರ ಸಾವಿನ ತನಿಖೆನೆಡೆಸುವ ಎದೆಗಾರಿಕೆಯನ್ನು ಈ ದೇಶ ತೋರಲಿಲ್ಲ.
ನಿಮ್ಮರ್ಧ ಪಂಚೆ ಉಟ್ಟುಕೊಂಡು ಜೀವನ ಮಾಡಬಲ್ಲೆ ಎಂದಿದ್ದರು ಆಕೆ….
’ನಾವು ಬರೆಯುವ ಜೀವನ ಚರಿತ್ರೆಯು ಚೆನ್ನಾಗಿ ಆಗಬೇಕಾದರೆ ಬರೆಯುವ ವ್ಯಕ್ತಿಗೂ ಬರವಣಿಗೆಗೆ ಗುರಿಯಾದ ಮನುಷ್ಯನಿಗೂ ನಿಕಟವಾದ ಪರಿಚಯ ಇರಲೇಬೇಕು. ಕೇವಲ ಪ್ರಾಕ್ ಸಂಶೋಧನೆಗಳಿಂದ ಬರೆಯತಕ್ಕ ಜೀವನ ಚರಿತ್ರೆ, ಒಬ್ಬ ವ್ಯಕ್ತಿಯ ಕೆಲಸಗಳ ’ಕೆಟಲಾಗ್’ ಆದೀತು’ ಎಂದಿದ್ದರು ಕೋಟ ಶಿವರಾಮ ಕಾರಂತರು. ನೀವು ಲೈಬ್ರರಿ ಹೊಕ್ಕು, ಬಯೋಗ್ರಫಿ ಸೆಕ್ಷನ್ನಿನ್ನಲ್ಲಿ ತಡಕಾಡಿದರೆ ಏನಿಲ್ಲವೆಂದರೂ ಗಾಂಧೀಜಿಯವರ ಬಗ್ಗೆ, ನೆಹರು, ಇಂದಿರಾ ಗಾಂಧಿಯವರ ಬಗ್ಗೆ ಇಂತಹ ಹತ್ತಾರು ಕೆಟಲಾಗ್ ಕೃತಿಗಳು ಕೈಗೆ ಎಡತಾಕುತ್ತವೆ. ಇಂದಿರಾ ಗಾಂಧಿಯವರ ಬಗ್ಗೆ ಇರುವ ಇಂತಹ ಎರಡು ಕೃತಿಗಳನ್ನು ಪಕ್ಕದಲ್ಲಿಟ್ಟು ಕೊಂಡು ಓದುತ್ತಾ ಹೋಗಿ, ಎರಡೂ ಬೇರೆ ಬೇರೆ ಲೇಖಕರು ಬರೆದದ್ದು. ಇಬ್ಬರೂ ಲೇಖಕರು ಇಂದಿರಾರನ್ನ ವಿಭಿನ್ನ ನೆಲೆಯಲ್ಲಿ ಗ್ರಹಿಸುತ್ತಾ, ಇನ್ಯಾವುದೋ ಗ್ರಂಥದ ಮಾಹಿತಿ ಹೆಕ್ಕುತ್ತಾ, ತಮ್ಮದೇ ನಿರೂಪಣೆಯಲ್ಲಿ ಪುಟತುಂಬಿಸಿದ ಕೃತಿಗಳಾಗಿರುತ್ತವೆ.
ಅಂತಹ ಹತ್ತು ಕೃತಿಗಳನ್ನು ಓದಿದರೂ ಹೊಸದೆನಿಸುವ, ಕುತೂಹಲವೆನಿಸುವ ಯಾವೊಂದು ವಿಷಯವೂ ಇಂದಿರಾ ಗಾಂಧಿಯವರ ಬಗ್ಗೆ ಸಿಗುವುದು ಅನುಮಾನವೇ.ಇತ್ತೀಚೆಗೆ ಇಂದಿರಾಗೆ ತೀರಾ ಹತ್ತಿರವಿದ್ದ ಪಪುಲ್ ಜಯಕರ್ ಬರೆದ ಇಂದಿರಾ ಜೀವನ ಚರಿತ್ರೆಯ ಪುಟ ತಿರುವಿಹಾಕುವಾಗ ಅನಿಸಿದ್ದೂ ಅದೇ. ಹೊಸತೇನು ಇಲ್ಲ. ಪಪುಲ್ ಜಯಕರ್ ಇಂದಿರಾರನ್ನು ತೀರಾ ಹತ್ತಿರದಿಂದ ಕಂಡವರು, ಇಂದಿರಾ ಸಮಸ್ಯೆಗಳಿಗೆ ಕಿವಿಯಾದವರು, ಸಾಂತ್ವಾನದ ಮಾತುಗಳಾಡಿದವರು. ಆದರೂ ಆ ಆಪ್ತತೆ ಇಂದಿರಾ ವಯುಕ್ತಿಕ ಜೀವನದ ಯಾರಿಗೂ ಗೊತ್ತಿರದ ವಿಷಯವನ್ನೇನು ತೆರೆದಿಡಲು ನೆರವಾಗಲಿಲ್ಲ. ಹಾಗೆಯೇ ಕನ್ನಡದ ಅನೇಕ ಲೇಖಕರ ಬಗ್ಗೆ ಇಂಥ ಕೆಟಲಾಗ್ ಎನಿಸುವ ಪುಸ್ತಕಗಳು ಬಂದಿವೆ. ಅಪರೂಪದ ಕಥೆಗಾರ, ಕಾದಂಬರಿಕಾರ ಮತ್ತು ಅನೇಕ ಕಾರಣಕ್ಕೆ ಕುತೂಹಲ ಉಂಟುಮಾಡುವ ಪೂರ್ಣಚಂದ್ರ ತೇಜಸ್ವಿ ಬಗ್ಗೆ ಅನೇಕರು ಬರೆದಿದ್ದಾರೆ. ಅದನ್ನೆಲ್ಲಾ ಓದಿದರೂ ರಾಜೇಶ್ವರಿಯವರು ತೇಜಸ್ವಿ ಬಗ್ಗೆ ಬರೆಯುತ್ತಿದ್ದಾರೆ ಎಂದಾಗ, ಕಂಡಿತಾ ಇದುವರೆಗೂ ಗೊತ್ತಿಲ್ಲದ ತೇಜಸ್ವಿಯವರ ಯಾವುದಾದರೂ ಗುಣ, ಅಭಿರುಚಿ, ಜೀವನದ ಮಜಲು ರಾಜೇಶ್ವರಿ ತೆರೆದಿಡುತ್ತಾರೆ ಎಂಬ ಆಸೆ ಉಂಟಾಗುತ್ತದೆ.
ಕಾರಣವಿಷ್ಠೇ. ಒಬ್ಬ ವ್ಯಕ್ತಿಯನ್ನ ಅವನ ಹೆಂಡತಿಗಿಂತ ಇನ್ಯಾರು ತಾನೇ ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯ. ಹಗಲು, ರಾತ್ರಿ, ಕಷ್ಠ, ನಷ್ಠ, ಸಂತೋಷ, ಸನ್ಮಾನ, ಅವಮಾನಗಳಲ್ಲಿ ಜೊತೆಗಿರುವವಳು ಹೆಂಡತಿ. ಕೋಪ ಬಂದಾಗ, ಸಂತಸವಾದಾಗ, ಯಾರಾದರೂ ತೆಗಳಿದಾಗ, ಆರೋಗ್ಯ ಕೆಟ್ಟಾಗ, ಬಹುಮಾನ ಬಂದಾಗ ಹೇಗೆಲ್ಲಾ ಇವರ ಭಾವನೆ, ನಡವಳಿಕೆ ಬದಲಾಗುತ್ತಿತ್ತು. ಆ ಸಂದರ್ಭದಲ್ಲಿ ಹೆಂಡತಿಯಾಗಿ ಅವರೊಂದಿಗಿನ ಬದುಕು ಸಹ್ಯವಾಗಿತ್ತಾ ಎಂಬುದನ್ನು ಹೆಂಡತಿ ಮಾತ್ರ ಹೇಳಬಲ್ಲಳು. ಆದ್ದರಿಂದಲೇ ಯಾರ ಬಗ್ಗೆಯಾದರು ಅವರ ಹೆಂಡತಿ ಮಾತಿಗೆ ನಿಲ್ಲುತ್ತಾರೆ, ಪುಸ್ತಕ ಬರೆಯುತ್ತಿದ್ದಾರೆ ಎಂದರೆ ಹೊಸ ನಿರೀಕ್ಷೆ ಮೂಡುತ್ತದೆ. ಅಂತಹ ಮಾತು, ಬರಹ ಆಪ್ತವೆನಿಸುತ್ತದೆ. ಅನೇಕರು ಅನಕೃ ಬಗ್ಗೆ ಪುಟಗಟ್ಟಲೇ ಬರೆದಿದ್ದರೂ ವಸಂತಾದೇವಿ ಅನಾಕೃ ಕೇವಲ ಎರಡು ಪ್ಯಾರದಲ್ಲಿ ತಮ್ಮ ಗಂಡನ ಬಗ್ಗೆ ಬರೆದರೆ ಅದು ಕಟ್ಟಿಕೊಡುವ ಅನಕೃ ವ್ಯಕ್ತಿತ್ವವೇ ಬೇರೆ. ಹೀಗೆ ಅನಕೃ ಬಗ್ಗೆ ಓದುತ್ತಿದ್ದಾಗ ಅನಕೃರ ಮಡದಿ ವಸಂತಾದೇವಿಯವರು ಬರೆದ ಒಂದು ಪುಟ್ಟ ಲೇಖನವೂ ಸಿಕ್ಕಿತು. ವಸಂತಾದೇವಿ ಏನೆನ್ನುತ್ತಾರೋ ನೀವೂ ಓದಿ..
’ಮದುವೆಯ ನಿಶ್ಚಿತಾರ್ಥದ ರಾತ್ರಿ ವಿಶ್ವೇಶ್ವರ ಪುರಂ ಸರ್ಕಲ್ ಬಳಿ ನನ್ನನ್ನು ಬೆಳಗಿನ ಜಾವದವರೆಗೂ ತಮ್ಮ ಮುಂದೆ ಕೂಡಿಸಿಕೊಂಡು, ನನ್ನಿಂದ ಹಾಡು ಹೇಳಿಸಿದ್ದ ಕೃಷ್ಣರಾಯರು ನೋವು ತುಂಬಿದ ದನಿಯಲ್ಲಿ ಕೇಳಿದ್ದರು.’ನಂದು ಏರುಪೇರು ಬದುಕು, ನಾವಿಬ್ಬರೂ ಮುಳ್ಳಿನ ಹಾದಿಲೇ ನಡೀಬೇಕು, ಇದಕ್ಕೆ ನಿನ್ನ ಒಪ್ಪಿಗೆಯಿದೆಯೇ?’ ಅಂತ. ಇಪ್ಪತ್ತನಾಲ್ಕು ವಯಸ್ಸಿನ ಅವರ ಈ ಪ್ರಶ್ನೆ ಸಾಕಷ್ಟು ಪ್ರಬುದ್ದವಾಗೇನೋ ಇತ್ತು. ಆದರೆ ಹದಿನಾಲ್ಕು ವರ್ಷದ ನಾನು ಈ ಪ್ರಶ್ನೆಗೆ ಏನೆಂದು ಉತ್ತರಿಸಬಲ್ಲೆ. ಚೆನ್ನಾಗಿ ಓದಿ ಡಾಕ್ಟರ್ ಆಗಬೇಕು, ತುಂಬಾ ಪುಸ್ತಕಗಳನ್ನ ಓದಿಕೋಬೇಕು ಎಂದು ಕನಸು ಕಟ್ಟಿದ್ದ ನನಗೆ ಕೃಷ್ಣರಾಯರು ಮೋಹಕವಾಗಿ ಕಂಡರು. ” ನೀವು ನಂಗೇನೂ ಕೊಡದಿದ್ದರೂ ಪರವಾಗಿಲ್ಲ, ನಿಮ್ಮರ್ಧ ಪಂಚೆ ಉಟ್ಕೊಂಡು ನಾನು ಜೀವನ ಮಾಡಬಲ್ಲೆ” ಎಂದೆ.
ಇದು ಅವರ ಮದುವೆಯ ಮೊದಲಿನ ಸಂಭಾಷಣೆಯಾದರೆ, ಮದುವೆಯಾಗಿ ಅನೇಕ ವರ್ಷಗಳ ನಂತರ ಅನಾಕೃ ಬದಲಾಗಿದ್ದರು, ಆ ಬಗ್ಗೆ ವಸಂತಾದೇವಿಯವರು ಹೇಳುವುದು, “ಕೊನೆಕೊನೆಗೆ ರಾಯರ ವರ್ತನೆಯೇ ವಿಚಿತ್ರವಾಯಿತು. ಯಾವಾಗಲೂ ಅನುಮಾನ. ಹೆಂಡತಿ ತನ್ನೊಬ್ಬಳಿಗೇ ಸೇರಿದವಳು ಎಂಬ ಭಾವನೆ. ನಾನು ಎಂದಾದರೂ ಚೆನ್ನಾಗಿ ಅಲಂಕಾರ ಮಾಡ್ಕೊಂಡ್ರೆ ಬೇರಾರ ಕಣ್ಣಿಗೂ ಕಾಣಿಸಿಕೊಳ್ಳದೇ ಕೋಣೆಯಲ್ಲೇ ಅವರ ಮುಂದೆ ಕೂತಿರಬೇಕಾದ ದಿನಗಳೂ ಇದ್ದವು. ಮನೆಗೆ ನೆಂಟರಿಷ್ಟರು ಬಂದರೆ ಹೆಂಡತಿಗೆ ತನ್ನ ಮೇಲಿನ ಗಮನ ಕಡಿಮೆಯಾಗುತ್ತದಲ್ಲ ಎನ್ನುವಷ್ಟು ಸ್ವಾರ್ಥಿಯಾಗಿದ್ದರು. ಒಂದು ಹಂತದಲ್ಲಿ ದೇವರ ಪೂಜೆ ಶುರುಮಾಡಿದಾಗ ’ಎಲ್ಲಾ ಬಿಟ್ಟು ದೇವರುಗಳನ್ನ ಪೂಜೆ ಮಾಡೋದನ್ನ ಯಾವಗ ಶುರು ಮಾಡಿದೆ? ಎಂದು ಅಸಮಾಧಾನ ಪಡ್ತಿದ್ರು. ಆದರೆ ಕೊನೆ ಕೊನೆಗೆ ತುಂಬಾ ಸೆಂಟಿಮೆಂಟ್ ಆಗಿಬಿಟ್ರು ’ತಮ್ಮ ಹೊಸ ಕಾದಂಬರಿ ಹಸ್ತಪ್ರತಿಯನ್ನ ದೇವರ ಮುಂದಿಟ್ಟು ಪೂಜೆ ಮಾಡಿಕೊಡು ” ಅಂತ ಹೇಳೋ ಮಟ್ಟಕ್ಕೆ ಬಂದರು.
ನೋಡಿ, ಯಾವೊಬ್ಬ ಲೇಖಕನೂ ಅನಕೃ ಬಗ್ಗೆ ಹೇಳದಿದ್ದದ್ದು ವಂಸತಾದೇವಿಯರು ಅನಕೃ ಬಗ್ಗೆ ಹೇಳ ಹೊರಟಾಗ ಹೇಗೆ ತೆರೆದುಕೊಳ್ಳುತ್ತದೆ. ಕೃಷ್ಣರಾಯರಲ್ಲೂ ಗೊಂದಲ, ತಮ್ಮದೇ ನಿಲುವಿನೊಂದಿಗಿನ ದ್ವಂದ್ವಗಳಿದ್ದವು ಎಂಬುದು ವಸಂತಾದೇವಿಯೊಬ್ಬರು ಮಾತ್ರ ಬಿಚ್ಚಿಡಬಲ್ಲರು. ಒಬ್ಬ ವ್ಯಕ್ತಿಯ ದೌರ್ಬಲ್ಯಗಳು, ಬದುಕಿನ ದ್ವಂದ್ವಗಳು ಡಾಳಾಗಿ ಕಾಣುವುದು ಮೊದಲಿಗೆ ಹೆಂಡತಿಗೆ ಮಾತ್ರ. ವಸಂತಾದೇವಿಯವರು ಅನಕೃರ ಸದ್ಗುಣ, ಪರೋಪಕಾರ, ಕನ್ನಡ ಪ್ರೀತಿ, ಬರವಣಿಗೆಯ ಸಾಮರ್ಥ್ಯ, ದೌರ್ಬಲ್ಯ, ದ್ವಂದ್ವ ಎಲ್ಲವುಗಳ ಬಗ್ಗೆ ಬರೆದದ್ದು ಓದಿ ಮುಗಿಸುವ ಹೊತ್ತಿಗೆ ಅನಕೃ ಮೇಲೆ ಗೌರವ ಹೆಚ್ಚಾಯಿತು, ಆದರೆ ವಸಂತಾದೇವಿಯವರು ಅದಕ್ಕೂ ಮೀರಿದ ಗೌರವ ಗಳಿಸಿಕೊಂಡಿದ್ದರು.
ವ್ಯಕ್ತಿತ್ವ ಓದಿನಿಂದ ಬರುವುದಾಗಿದ್ದರೆ…!
ಕೆಲವರನ್ನು ನೋಡಿದರೇ ಆಶ್ಚರ್ಯ, ಮಾತಿಗೆ ಕಿವಿಯಾದರೆ ದಿಗ್ಭ್ರಮೆ, ಇನ್ನು ನಿರಂತರ ಸಹವಾಸ ಒದಗಿದರಂತೂ ಸಂತೋಷದ ಜೊತೆಗೆ ನಮ್ಮ ಅಜ್ನಾನದ ಬಗ್ಗೆ ನಾಚಿಕೆ, ಅಳುಕು. ಹೌದು ಕೆಲವರು ಇರುವುದೇ ಹಾಗೆ, ಓದು ಹೈಸ್ಕೂಲು ದಾಟಿದ್ದರೆ ಮುಗಿಯಿತು, ಹೆಚ್ಚೆಂದರೆ ಕೆಲವರು ಕಾಲೇಜು ಮೆಟ್ಟಿಲು ಮುಟ್ಟಿ ಬಂದಿರಬಹುದು. ಆದರೆ ಲೋಕಾನುಭವ, ತಿಳುವಳಿಕೆ, ವಾಕ್ಚಾತುರ್ಯ, ವ್ಯವಹಾರ ಜ್ನಾನ, ಸಂಪನ್ನತೆ, ವಿನಯ ಎಲ್ಲವೂ ಓದಿಗಿಂತ ಮಿಗಿಲಾದದ್ದು.
ಬಹುಶಃ ನಿಮಗೂ ಇಂತಹ ಅನೇಕ ಅನುಭವಗಳಾಗಿರಬಹುದು, ಬಸ್ಸಿನಲ್ಲಿ ಸಿಕ್ಕವರು, ರೈಲಿನ ಕಂಪಾರ್ಟಮೆಂಟಿನಲ್ಲಿ ಜೊತೆಯಾದವರು, ಇನ್ನೇಲ್ಲೋ ನೆಡೆದು ಹೋಗುವಾಗ ಜೊತೆಜೊತೆಗೆ ಹೆಜ್ಜೆ ಹಾಕಿದವರು ಒಮ್ಮೆಲೇ ತಮ್ಮ ವಾಕ್ಚಾತುರ್ಯ, ಅಪಾರ ತಿಳುವಳಿಕೆ ಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿಬಿಟ್ಟಿರುತ್ತಾರೆ. ಮಾತು ಸಾಗುತ್ತಿದ್ದರೆ ಕೇವಲ ನಾಚಿ ತೊಪ್ಪೆಯಾಗುವುದೊಂದೆ ನಮಗೆ ಉಳಿದಿರುವ ಮಾರ್ಗವಾಗಿರುತ್ತದೆ. ಓದಿಗೇನೂ ಕಡಿಮೆಯಿರುವುದಿಲ್ಲ, ನಮ್ಮ ಓದು, ಇಂಗ್ಲೀಷು, ಹೆಸರಿನೊಂದಿಗೆ ಬಾಲಂಗೋಚಿಯಾಗುವ ಡಿಗ್ರಿಗಳು ಅವರಿಗಿಂತ ಹೆಚ್ಚಿನದೇ ಇರುತ್ತದೆ. ಆದರೆ ಪ್ರಪಂಚಜ್ನಾನ, ತಿಳುವಳಿಕೆ ಅದು ಯಾರಪ್ಪನ ಸೊತ್ತು, ನಮ್ಮ ಡಿಗ್ರಿಗಳು ಅವುಗಳನ್ನು ನಮಗೆ ಕೊಟ್ಟಿರುವುದಿಲ್ಲ. ಕೆಲಸ, ಸಂಭಳ, ಭಡ್ತಿ, ಬ್ಯಾಂಕ್ ಬ್ಯಾಲೆಂನ್ಸ್ ಇಷ್ಠರ ಲೆಕ್ಕಾಚಾರದಲ್ಲೇ ದಿನ ಕಳೆಯುವವರಿಗೆ ಅದಕ್ಕೂ ಮೀರಿದ ಪ್ರಪಂಚದ ಅರಿವು ಎಲ್ಲಿಂದ?
ನಿನ್ನೇ ಹೀಗೇ, ಇಲ್ಲಿ ಸಿನ್ಸಿನಾಟಿಯ ಫ಼ೌಂಟೈನ್ ಸ್ಕ್ವೇರ್ ಬಳಿಯ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದೆ. ಸಾಮಾನ್ಯವಾಗಿ ಇಲ್ಲಿ ಬಸ್ಸಿಗೆ ಕಾದು ನಿಂತಾಗ ಮಾತನಾಡಿಸಿಕೊಂಡು ಬರುವವರು, ಹಣ ಕೇಳಲು ಬರುತ್ತಾರೆ. ಒಂದು ಡಾಲರ್ ಚಿಲ್ಲರೆ ಇದ್ದರೆ ಕೊಡಿ ಎಂದು ಕೇಳುವ ಮಂದಿ ಇಲ್ಲಿ ಕಮ್ಮಿ ಇಲ್ಲ. ಎಷ್ಠೇ ಶ್ರೀಮಂತ ದೇಶವೆಂದರೂ ಹೀಗೆ ದುಡ್ಡು ಕೇಳುವವರ, ಬೀದಿ ಬೀದಿಯಲ್ಲಿ ’ದಯವಿಟ್ಟು ಸಹಾಯ ಮಾಡಿ’ ಎಂದು ಬೋರ್ಡು ಹಿಡಿದು ನಿಲ್ಲುವವರ ಸಂಖ್ಯೆಗೇನು ಕಡಿಮೆ ಇಲ್ಲ. ಆದ್ದರಿಂದ ಯಾರೇ ಹತ್ತಿರ ಬಂದು ನಿಂತರು, ಮಾತಿಗೆ ತೊಡಗಿಕೊಂಡರೂ ಹಣ ಕೇಳುತ್ತಾರೇನೋ ಎಂಬ ಅನುಮಾನವೇ. ಆದರೆ ಈ ಬಾರಿ ಮಾತಿಗೆ ಜೊತೆಯಾದವನು ಆ ಪೈಕಿಯವನಲ್ಲ, ನಾನು ಭಾರತೀಯ ಎಂದೇ ಅವನು ನನ್ನೊಂದಿಗೆ ಮಾತಿಗೆ ತೊಡಗಿದ್ದ. ಅವನು ಪ್ರಸ್ತಾಪಿಸಿದ ವಿಚಾರಗಳೇ ಮೊದಲಿಗೆ ಅಚ್ಚರಿ ಮೂಡಿಸಿತು. ಅವನಿಗೆ ಇತ್ತೀಚೆಗೆ ಭಾರತದಲ್ಲಿ ಆದ ಎಲ್ಲ ಬೆಳೆವಣಿಗೆಗಳ ಜ್ನಾನ ಇದೆ, ಅಣ್ಣಾ ಉಪವಾಸ ಮಾಡಿದ್ದು, ಅವರನ್ನು ಜೈಲಿಗೆ ತಳ್ಳಿದ್ದು, ಈ ಹಿಂದೆ ನಡೆದ ಕೋಟ್ಯಾಂತರ ರೂಪಾಯಿ ಅವ್ಯವಹಾರ, ಮೊನ್ನೆ ಅಡ್ವಾನಿ ಘೋಷಿಸಿದ ರಥಯಾತ್ರೆ, ದೆಹಲಿ ಬಾಂಬ್ ಸ್ಪೋಟ ಎಲ್ಲವನ್ನೂ ಚರ್ಚಿಸಿದ. ಜೊತೆಗೆ ಬೇರೆ ಬೇರೆ ದೇಶದ ವಿದೇಶಾಂಗ ನೀತಿಯ ಬಗ್ಗೆ ಪ್ರಸ್ತಾಪಿಸಿ ಭಾರತ ಹೇಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ, ಪಾಕಿಸ್ತಾನದ ಕ್ರೂರತೆ ಮತ್ತು ಭಾರತದ ವಿದೇಶಾಂಗ ನೀತಿಯ ಶಂಡತೆಯ ಬಗ್ಗೆ ಮರುಕ ವ್ಯಕ್ತಪಡಿಸಿದ. ಇಷ್ಠೆಲ್ಲಾ ಅವನು ಮಾತನಾಡುತ್ತಿದ್ದರೆ ನಾನು ಮೂಕನಾಗಿದ್ದೆ. ಕೊನೆಗೂ ನನ್ನ ಅಲ್ಪತನ ಪ್ರದರ್ಶಿಸಿ, ನೀವು ಏನು ಓದಿದ್ದೀರ? ಏನು ಕೆಲಸ ಮಾಡುತ್ತೀರ? ನಾನು ಇಲ್ಲಿ ಇಂಜಿನಿಯರ್ ಎಂದು ಪರಿಚಯಿಸಿಕೊಂಡೆ. ಆತ ನಕ್ಕು, ನಾನು ಶಾಲೆಯಲ್ಲಿ ಕಲಿತದ್ದು ಕಮ್ಮಿ, ಇಲ್ಲಿ ಯಾವುದೋ ಸಣ್ಣ ವ್ಯಾಪಾರ ಮಾಡುತ್ತೇನೆ, ನೀವು ಭಾರತೀಯರೆಂದು ಮಾತಿಗೆ ನಿಂತೆ, ಇಂಜಿನಿಯರ್ ಎಂದಲ್ಲ, ನಿಮ್ಮ ವಿದ್ಯಾರ್ಹತೆ ಮತ್ತು ಕೆಲಸದ ಬಗ್ಗೆ ನನಗೆ ಕುತೂಹಲವಿಲ್ಲ ಎಂದು ನಕ್ಕು ಕೈ ಕುಲುಕಿ ಭಾರತ ನಿಜಕ್ಕೂ ಪ್ರಕಾಶಿಸಲಿ ಎಂದು ಹೊರಟ. ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೆ ಸುಮ್ಮನಾದೆ.
ಕೆಲವೊಮ್ಮೆ ಅಂದು ಕೊಂಡಿರುತ್ತೇವೆ. ನನ್ನ ಓದೇ ಶ್ರೇಷ್ಠ. ನಾನು ಎರಡೆರಡು ಡಿಗ್ರಿ ಪಡೆದಿದ್ದೇನೆ, ಯೂನಿವರ್ಸಿಟಿಯಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದೇನೆ ಇತ್ಯಾದಿ ಇತ್ಯಾದಿ. ಆದರೆ ಇಂತವರ್ಯಾರೋ ಎದುರಾದಾಗ, ಮಾತಿಗೆ ಸಿಕ್ಕಾಗ ನಮ್ಮ ಓದು, ಪಡೆದುಕೊಂಡ ಡಿಗ್ರಿ ಎಲ್ಲವನ್ನೂ ಅಂತವರ ಮುಂದೆ ನೀವಾಳಿಸಿ ಎಸೆಯಬೇಕು ಎನಿಸುತ್ತದೆ. ಕೇವಲ ಕಾಡಿದವನು ಇವನೊಬ್ಬನೇ ಅಲ್ಲ. ಅನೇಕರು ಹೀಗೆ ಕಾಡಿದ್ದಿದೆ. ಸಾಹಿತ್ಯದ ಬಗ್ಗೆ ಹೆಚ್ಚು ಒಲವಿರುವುದರಿಂದ ಕನ್ನಡ ಸಾಹಿತ್ಯ ಕ್ಷೇತ್ರದ ಮೂವರು ಪದೇ ಪದೇ ಕಾಡುತ್ತಾರೆ. ಹೌದು ಡಿ.ವಿ.ಜಿ, ಅನಕೃ, ಶಿವಾರಾಮ ಕಾರಂತರು ಯಾರನ್ನು ತಾನೇ ಕಾಡುವುದಿಲ್ಲ. ಅವರ ಕೆಲಸ, ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ, ಸರಳತನ, ಹಾಕಿಕೊಟ್ಟ ಆದರ್ಶ ಎಲ್ಲವೂ ಶ್ರೇಷ್ಠವೇ.
ಹಾಗೆ ನೋಡಿದರೆ ಡಿ.ವಿ.ಜಿ ಏನು ಓದಿದ್ದರು. ಅವರೇ ಹೇಳುವ ಹಾಗೆ ’ ನಾನು ಪಾಸು ಮಾಡಿದ್ದು ಕೇವಲ ಲೋಯರ್ ಸೆಕೆಂಡರಿ, ಮುಳುಬಾಗಿಲು ಆಂಜನೇಯ ಸ್ವಾಮಿಯ ದೇವಾಲಯವೇ ವಿಶ್ವವಿದ್ಯಾಲಯ’ ಆದರೆ ಅವರ ಕೃತಿಗಳು!!!! ಮಂಕುತಿಮ್ಮನ ಕಗ್ಗವೊಂದೇ ಸಾಕು, ಇಡೀ ಜೀವನದ ಸಾರಂಶವನ್ನು ಸಾರಲು. ಇವತ್ತು ಮಂಕುತಿಮ್ಮನ ಕಗ್ಗವನ್ನೇ ವಿಷಯವಾಗಿಸಿಕೊಂಡು ಸಂಶೋಧನೆ ಮಾಡಿದವರು, ಡಾಕ್ಟರೇಟ್ ಪಡೆದವರು ಇದ್ದಾರೆ. ಆದರೆ ಅಂತಹ ಕನ್ನಡದ ಭಗವದ್ಗೀತೆಯನ್ನು ಕೊಟ್ಟ ಮಹಾನುಭಾವ ಡಿ.ವಿ.ಜಿ ಕಲಿತದ್ದು, ಕೇಳಿದ್ದು ಮುಳುಬಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆಯುತ್ತಿದ್ದ ಹರಿಕಥೆ, ಭಾಗವತ ಇತ್ಯಾದಿ ಪ್ರವಚನಗಳನ್ನ.ಅನಕೃ ಕೂಡ ಹಾಗೆಯೇ. ಅವರು ಕೆಲಸ ಮಾಡದಿದ್ದ ಕ್ಷೇತ್ರ ಯಾವುದು? ನಾಟಕ, ಸಂಗೀತ, ಚಿತ್ರಕಲೆ, ಪತ್ರಿಕೋದ್ಯಮ, ಚಲನಚಿತ್ರ, ಕನ್ನಡ ಚಳುವಳಿ ಹೀಗೆ ಅವರ ಆಸಕ್ತಿ ಬಹುಮುಖಿ. ಬರೆದದ್ದು ನೂರಾ ಹನ್ನೆರಡು ಕಾದಂಬರಿಗಳು! ಆದರೆ ಓದಿದ್ದು ಮಾತ್ರ ಎಸ್.ಎಸ್.ಎಲ್.ಸಿ. ಭಾಷಣಕ್ಕೆ ನಿಂತರೆ ಅನಕೃ ರದ್ದು ನಿರಂತರ ವಾಕ್ಜರಿ. ಇನ್ನು ಶಿವರಾಮ ಕಾರಂತರು ಬಿಡಿ, ಓದಿದ್ದು ಕೇವಲ ಇಂಟರ್ ಮೀಡಿಯೇಟ್ ವರೆಗೆ ಮಾತ್ರ. ಆ ಕಾಲದಲ್ಲಿ ಕಾದಂಬರಿಕಾರರಾಗಿ ಮಾತ್ರವಲ್ಲ, ಯಾವ ಒಂದು ವಿಶ್ವ ವಿದ್ಯಾಲಯವೂ ಮಾಡಲಾಗದ ’ಬಾಲ ಪ್ರಪಂಚ’ ’ವಿಜ್ನಾನ ಪ್ರಪಂಚ’ ಗಳಂತ ವಿಶ್ವಕೋಶಗಳನ್ನು ಸಿದ್ದಪಡಿಸಿದವರು ಕಾರಂತರು.ಇವರ ವ್ಯಕ್ತಿತ್ವ, ಸಾಧನೆಯ ಮಾಪನವನ್ನ ಓದಿನ ಮಾನದಂಡ ಹಿಡಿದು ಮಾಡಲು ಸಾಧ್ಯವೇ?
ಓದು ಕೆಲಸಗಿಟ್ಟಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಣಕ್ಕೆ, ಕೆಲಸಕ್ಕೆ, ನೌಕರಿಯ ಭಡ್ತಿಗೆ ಓದು ಮಾನದಂಡ. ಆದರೆ ವ್ಯಕ್ತಿತ್ವಕ್ಕೆ, ಬದುಕಿನ ಸಾಧನೆಗೆ ಅದು ಊರುಗೋಲು ಮಾತ್ರ. ಅಲ್ಲವೇ?


































































